ಓದಿನ ಸಂಗಾತಿ
ಒಂದು ಓದಿನ ಖುಷಿಗೆ……
ನಾಗರಾಜ ಬಿ. ನಾಯ್ಕ
ಒಂದು ಆಪ್ತ ಬರಹ

ಓದು ಒಂದು ಅದ್ಭುತ ಭಾವ. ಅಕ್ಷರಗಳ ಜೊತೆಗೆ ಮನಸ್ಸಿನ ಸಾಂಗತ್ಯ. ಅರಿವಿನ ಆಳದಲ್ಲಿ ಕುಳಿತು ಮಾತನಾಡುವ ಸಹಜತೆ. ಒಂದು ಓದಿನ ಧನ್ಯತೆ ಸಿಗುವುದು ವಿಷಯದ ಅಂತರ್ಗತ ನಿಲುವುಗಳಲ್ಲಿ. ಓದಿನ ಸಾಲಿನ ಪೂರ್ಣತೆ ಇರುವುದು ವಿಷಯ ನಿರೂಪಣೆ ಮತ್ತು ಪ್ರಬುದ್ಧತೆಯ ಅಂತಃಕರಣದಲ್ಲಿ. ವಿಚಾರ ವಿಮರ್ಶೆಯ ಜೊತೆಗೆ ವಿನೀತ ಭಾವವನ್ನು ಇಟ್ಟುಕೊಳ್ಳುವುದು ಅದರ ಇನ್ನೊಂದು ಮುಖ. ಓದು ಆಸಕ್ತಿಯ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತಾ ವಿಶಿಷ್ಟವಾಗುತ್ತಾ ಸಾಗುತ್ತದೆ. ಒಂದು ಪುಸ್ತಕ ಅಥವಾ ಲೇಖನ ಒಂದು ಬೌದ್ಧಿಕ ಸಂಪತ್ತು. ಮತ್ತು ಸೃಜನಶೀಲತೆಯ ಅಭಿವ್ಯಕ್ತಿ. ವೈಚಾರಿಕತೆಯ ಪ್ರಬುದ್ಧ ನಿಲುವು ಅದರ ಸ್ವರೂಪವಾಗಿ ಬಿಂಬಿತವಾಗುತ್ತದೆ. ಓದು ತೋರಿಸುವ ದಾರಿ ಭಿನ್ನ ಮತ್ತು ವಿಶಿಷ್ಟ. ಓದುಗನೊಬ್ಬನ ಭಾವಗಳಲ್ಲಿ ಅದು ಹುಡುಕಿ ಕೊಡುವ ಭಾವವೂ ಬದುಕಿನದ್ದೇ. ಪ್ರತಿ ಓದನ್ನು ನಾವು ಇಷ್ಟೇ ಎಂದು ಗುರುತಿಸಲಾಗದು. ಅದರ ಆಚೆಯ ಯೋಚನೆಯೊಳಗೂ ಬಹುಮುಖದ ಅಭಿವ್ಯಕ್ತಿ ಅದರ ನಿಲುವಾಗುತ್ತದೆ. ಓದು ಒಂದು ಗೆಲುವಿನ ಹೆಜ್ಜೆಯಾಗಬಲ್ಲ ಉಳಿವು. ಜ್ಞಾನಕ್ಕಾಗಿ ಓದುವುದು ಒಂದೆಡೆಯಾದರೆ ಅಂತಃಕರಣಕ್ಕಾಗಿ ಓದುವುದು ಮತ್ತೊಂದು ಕಡೆ. ಸದಾ ಅರಿವಾಗಿ ಉಳಿಯಬಲ್ಲ ನಿಲುವು ಅದರದ್ದು.
ಪ್ರತಿ ಬಾರಿಯ ಓದು ನಮಗೆ ಹೊಸದನ್ನು ಕೊಡುತ್ತಲೇ ಹೋಗುತ್ತದೆ. ವಿಷಯ ಪ್ರಬುದ್ಧತೆಯ ಜೊತೆಗೆ ಅರಿವನ್ನು ಬದುಕಲು ಬೇಕಾದ ಸಂಯಮ ಮತ್ತು ಘನವಂತಿಕೆಯನ್ನು ತಂದುಕೊಡುತ್ತದೆ. ಓದಿದಷ್ಟು ಮನದ ಭಾವನೆಗಳು ಹಗುರ ಎನಿಸುತ್ತದೆ. ಓದುವ ಗುಣ ನಮ್ಮಲ್ಲಿ ಮೌನವನ್ನು, ಆಂತರ್ಯವನ್ನು ಪ್ರೀತಿಸುವಂತೆ ಮಾಡುತ್ತದೆ. ಒಂದು ವಿನಮ್ರ ಗುಣ ಓದಿನಿಂದ ರೂಢಿಯಾಗುತ್ತದೆ. ಮನಸ್ಸಿನ ತಾಕಲಾಟಗಳಿಗೆ ಉತ್ತರ ನೀಡುತ್ತಾ ಉಳಿವಾಗಿ ಉಳಿದುಬಿಡುತ್ತದೆ. ನಾವು ಓದುವ ಓದಿಗೆ ಭಾವವಿದೆ. ಸಂವೇದನೆಗಳ ಸನ್ನಿವೇಶದಲ್ಲಿ ಚಿತ್ರವಾಗುವ ರೂಪಗಳಿವೆ. ಪ್ರಕೃತಿಯ ನಿರೂಪಣೆಗಳಲ್ಲಿ ಮಗುವಾಗುವ ಹಂಬಲವಿದೆ. ಮಣ್ಣ ಅಂತಃಸತ್ವದ ಮಾತಿನಲ್ಲಿ ಹಸಿರಾಗುವ ಕೌತುಕವಿದೆ. ಬೀಸುವ ಗಾಳಿಯ ಹಾಡಿನಲ್ಲಿ ನೆನಪಾಗುವ ಸಾಲುಗಳಿವೆ. ಕುಳಿತ ಸಾಲುಗಳ ಓದುವಿಕೆಯಲ್ಲಿ ನೂರು ಸಾವಿರ ಬದುಕಿನ ಚಿತ್ರಗಳಿವೆ. ಎಲ್ಲದಕ್ಕೂ ಒಂದು ನಿಲುವುಗಳು ಆಧಾರವಾಗುತ್ತಾ ಸಾಗುತ್ತದೆ. ಓದಿದಾಗ ಸಿಗುವ ನಗುವಿಗೆ ನೆಮ್ಮದಿಯ ಗುಣವಿದೆ. ಮನರಂಜನೆಯಾಗಿ ನಿಲ್ಲಬಲ್ಲ ಗುರಿಯಿದೆ. ಯಾವುದೇ ಲೇಖನವಿದ್ದರೂ ಅದು ಹೊಸ ವಿಚಾರ ಭಾವದ ಸಾರಥ್ಯ ಇರುತ್ತದೆ. ಅದನ್ನ ಪ್ರೀತಿಸಬೇಕು. ಪ್ರತಿ ಓದನ್ನು ಆರಾಧಿಸಬೇಕು. ಓದು ಒಂದು ಉಸಿರಿನ ಸಾಂಗತ್ಯ .ಅದು ಬದುಕಿನ ಲಾಲಿತ್ಯವೂ ಹೌದು.
ನಾಗರಾಜ ಬಿ. ನಾಯ್ಕ

ಓದುವುದೇ ಒಂದು ಖುಷಿ.. ಓದುತ್ತಾ ಹೋದಾಗ ಸಿಗುವುದು ಮತ್ತಷ್ಟು ಖುಷಿ.. ಓದು ಮನವ ಕುಣಿಸುವುದು.. ತಣಿಸುವುದು..
ರಾಜ್
ಓದಿನ ಬಗ್ಗೆ ಆತ್ಮೀಯತೆ, ಆಪ್ತತೆ ಇದ್ದಾಗ ಮಾತ್ರ ಇಂತಹ ಸುಂದರ ತರ್ಕ ಸಾಧ್ಯ.. ಚೆನ್ನಾಗಿದೆ ಸರ್..
ನಿಜ ಸರ್ ಓದಿನಿಂದ ಖುಷಿಯೂ ಜ್ಞಾನದ ವಿಕಾಸವೂ
ಚೆನ್ನಾಗಿದೆ ಲೇಖನ.
ಓದಿ ಖುಷಿಯಾಯ್ತು.ಸರ್
….ಶುಭಲಕ್ಷ್ಮಿ ನಾಯಕ್