ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ರಂಗಿನೋಕುಳಿ

ಫಾಲ್ಗುಣ ಮಾಸದ ಶುಕ್ಲ ಹುಣ್ಣಿಮೆಯು
ಪವಿತ್ರ ಹೋಳಿ ಹಬ್ಬದ ಆಚರಣೆಯು
ರಂಗು ರಂಗಿನ ಸುಂದರ ಹೋಳಿಯು
ಮಂಗಳ ವರ್ಣಗಳ ಮಿಲನದ ಓಕುಳಿಯು//೧//

ಆಸುರಿ ಗುಣಗಳ ನಾಶದ ಸಂಕೇತವು
ಪರಮ ಪವಿತ್ರತೆಯ ದ್ಯೋತಕವು
ಜಗವೊಂದು ಬಣ್ಣಗಳ ಲೋಕವು
ಹಸಿರು ಹಳದಿ ಕೆಂಪು ಬಿಳಿ ನೀಲಿಯನಾಕವು//೨//

ಬಣ್ಣದಲಿ ಬೆಸೆದಿದೆ ಬದುಕ ಭಾವನೆ
ವರ್ಣದಲಿ ತುಂಬಿದೆ ಧನ ಋಣದ ಚಿಂತನೆ
ಕಾಮವಳಿಸಿ ಪ್ರೇಮವುಳಿಸುವ ಚಿತ್ತಾರ
ಬೇಧವಳಿಸಿ ಏಕತೆಯುಳಿಸುವ ಸಾಕ್ಷಾತ್ಕಾರ//೩//

ಬಣ್ಣಬಣ್ಣಗಳ ಒಂದಾಗಿಸುವ ಹಬ್ಬ ಹೋಳಿ
ಬಣ್ಣದಲಿ ಬದುಕ ಬೆರೆಸುವ ಚೆಂದದೋಕುಳಿ
ನೂರು ಮತಗಳ ತೂರಿ ಒಂದಾಗಿಸುವ ಹೋಳಿ
ಸರ್ವಸಮತೆಯ ಸಾರುವ ರಂಗಿನೋಕುಳಿ//೪//

ಚದುರಿದ ಸಂಬಂಧಗಳ ಕರೆದು ಒಗ್ಗೂಡಿಸಲಿ
ದುರಿತಗಳ ಕರಗಿಸಿ ಖುಷಿಯ ರಂಗು ಚೆಲ್ಲಲಿ
ಕೃತಕತೆಯು ಅಳಿದು ನೈಸರ್ಗಿಕತೆ ಬೆಳೆಯಲಿ
ಮಿಥ್ಯವಳಿದು ಎಲ್ಲೆಡೆ ಸತ್ಯವನು ತುಂಬಲಿ//೫//


Leave a Reply

Back To Top