ಕಾವ್ಯ ಸಂಗಾತಿ
ರೇವತಿ ಶ್ರೀಕಾಂತ್
ಸಂತನಾಗೂಮ್ಮೆ

ಸಂತನಾಗಿಬಿಡು ಒಮ್ಮೆ
ಸಂತೆಯೊಳಗೆ ಕಳೆದು ಹೋಗುವ ಮುನ್ನ
ಚಿಂತೆ ಬೇಡ
ಸಂತನಿಗೂ ವಸಂತ ಉಂಟು
ಅದು ನಿತ್ಯ ವಸಂತ
ಹೂವಿಹುದಿಲ್ಲಿ, ಹಣ್ಣಿಹುದಿಲ್ಲಿ
ಅದು ನೀನೇ ಆಗಿರುವೆ
ಪ್ರತಿ ಕ್ಷಣವೂ ಚಿಗುರಬಲ್ಲೆ
ಒಣಗಿದೆಲೆಗಳ ಉದುರಿಸಬಲ್ಲೆ
ಕಲ್ಲೇಟು ಸಹಿಸಬಲ್ಲೆ
ಹಣ್ಣು ಕೊಡಬಲ್ಲೆ
ಪ್ರಕೃತಿಯಾಗುವೆ ನೀನು
ವಿಕೃತಿಗಳ ಮೀರಿ
ಬದುಕುವೆ ಬದುಕಿಸುವೆ
ಬರಡ ಕೊನರಿಸುವೆ
ಬರೀಗೈಯ್ಯ ಬಂಟನಾಗುವೆ
ಉಸಿರು ಹೋದರೂ ಹೆಸರನ್ನುಳಿಸಿ ಹೋಗುವೆ
ಸಂತನಾಗೊಮ್ಮೆ ಈ ಸಂತೆಯೊಳಗೆ.
ರೇವತಿ ಶ್ರೀಕಾಂತ್

ತುಂಬಾ ಚೆನ್ನಾಗಿದೆ
ಧನ್ಯವಾದಗಳು