ಭಾಗ್ಯ ಸಕನಾದಗಿ ಅವರ ಕವಿತೆ-“ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?……”

ಸಣ್ಣವರಿದ್ದಾಗ ನಮ್ಮವ್ವ ನಿನ ಮ್ಯಾಲ
ನಮ್ಮ ಬಿಟ್ಟ ಕೂಲಿಗೆ ಹೋಗಾಕಿ
ನಮ್ಮನೆಲ್ಲಾ ನೋಡುತ್ತಾ ನೀ ಕೌದಿಯ
ಹೊಲಿಯಾಕಿ
ಅಜ್ಜಿ ನೀ ಇಸ್ಟ್ಯಾಕ  ಒಳ್ಳೆಯಾಕಿ!?

ಆಟ ಆಡಲು ಹೊರಗಡೆ ಹೋಗಿ
ಬರುವುದು ತಡವಾದಾಗ ಬಡಗಿ
ತಗೊಂಡು ಊರೆಲ್ಲ ಸುತ್ತಿಸಿದಾಕಿ
ಮನೆಗೆ ಕರಕೊಂಡು ಬಂದು ತಿಳುವಳಿಕೆ
ಹೇಳಾಕಿ
ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?

ಸಂಜಿನಾಗ ನೀ ಎಲ್ಲರ ಕರಕೊಂಡು
ಕತೆ ಕವನ ಹೇಳಾಕಿ
ನಮ್ಮ ತೊದಲು ನುಡಿ ಕೇಳಿ
ಮನೆ ಮಂದಿಗೆಲ್ಲಾ ಹೇಳಿ ನಕ್ಕು ನಲಿದಾಕಿ
ಮತ್ತೆ ಸರಿಯಾಗಿ ತಿದ್ದಿ ಹೇಳಿದಾಕಿ
ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?

ಬುತ್ತಿಯ ಕಟಗೊಂಡು ಹೊಲಕ್ಕ
ಕರಕೊಂಡು ಹೋಗಾಕಿ
ಹೊಲದಾಗ ಹಳೆ ಕಥೆ ಹೇಳುತ್ತಾ
ನಮ್ಮನ್ನೆಲ್ಲಾ ಕಸ ತಗಿಯಾಕ ಹಚ್ಚಾಕಿ
ಮಧ್ಯಾಹ್ನ ಊಟಕ್ಕೆ ಮೊಸರನ್ನ ಉಣಿಸಾಕಿ
ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?

ಹೊಲ ಐತಿ ಮೂರು ಹರದಾರಿ
ಸರ್ಯಪಾನ ಕಟಗಿ ಇಂದ
ಮಾಡಿ ಕೊಡುತ್ತಿದ್ದಿ ನೀ ಗಾಡಿ
ಸಂಜಿಕ ಒಂದ ರೂಪಾಯಿ ರೋಕ್ಕ
ಕೊಟ್ಟು ಬೇಕಾದ್ದು ತಿನ್ನು ಅಂದಾಕಿ
ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?

ತಪ್ಪು ಮಾಡಿದಾಗ ಕಪಾಳಿಗೆ
ನಾಕೇಟು ಕೊಟ್ಟು ಬಾಯ ತುಂಬಾ
ಬೈದಾಕಿ ಮತ್ತೆ
ಊಟದ ಸಮಯಕ್ಕೆ ಹತ್ತು ಬಾರಿ
ಕರೆದು ಮುಟುಗಿಯ ಮಾಡಿ ತಿನಿಸುವಾಕಿ
ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?

ಬಿದ್ದಾಗ ಓಡಿ ಬಂದು ಎತ್ತುವಾಕಿ
ಆದ ಗಾಯಕ್ಕೆ ಅರಿಶಿಣ ಹಚ್ಚಿ
ನೋವ ಮರೆಸಾಕಿ
ಗೆದ್ದಾಗ ಊರೆಲ್ಲ ಸಾರಿ
ಸಂತೋಷ ಪಟ್ಟಾಕಿ
ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?

ಹಬ್ಬ ಹರಿದಿನ ಬಂದಾಗ
ಮೊಮ್ಮಕ್ಕಳಿಗೆ ಹೊಸ ಬಟ್ಟೆ ತರುವಾಕಿ
ಬಣ್ಣ ಬಣ್ಣದ ಬಟ್ಟೆ ನೋಡಿ ಹರುಷ ಪಟ್ಟಾಕಿ
ನೀ ಮಾತ್ರ ಹಳೆ ಸೀರೆ ಮೇಲೆ
ಹಬ್ಬ ಮುಗಿಸುವಾಕಿ
ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?

ಪುಟ್ಟ ಗುಡಿಸಿಲಿನಲ್ಲಿ ನಮ್ಮನ್ನೆಲ್ಲಾ
ಬೆಳೆಸಿದಾಕಿ
ತಟ್ಟೆ ರೊಟ್ಟಿ ಮಾಡಿ ಅದ್ಕೆ ಹಸಿಕಾರ
ಪುಂಡಿಪಲ್ಲೆ ಹಚ್ಚಿ ಕೊಟ್ಟಾಕಿ
ನಿನರ ಏನು ಮಾಡಿ ಪಾಪ ಬಡತನದಾಗ ಬೆಂದಾಕಿ
ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?

ನಮಗಾಗಿ ಹಗಲು ರಾತ್ರಿ ಚಿಂತಿಸುವಾಕಿ
ಚಿಗುರುವ ಕುಡಿಗಳಿಗೆ
ತಾಯಿ ಬೇರು ಆದಾಕಿ
ತಿಳಿದಷ್ಟು ಬರದಿನಿ ತಪ್ಪು ತಿಳಿಬ್ಯಾಡ
ನಮಗೆಲ್ಲ ನೀನೇ ಎರಡನೇ ಅವ್ವ ಆದಾಕಿ
ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?

̲—————————————————-

8 thoughts on “ಭಾಗ್ಯ ಸಕನಾದಗಿ ಅವರ ಕವಿತೆ-“ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?……”

  1. ಹಳ್ಳಿಯ ಸೊಗಡಿನ ಭಾಷೆಯಲ್ಲಿ ಅಭಿವ್ಯಕ್ತಗೊಂಡ ಕವನ ಅತ್ಯುತ್ತಮವಾಗಿದೆ

Leave a Reply

Back To Top