“ನಿತ್ಯೋತ್ಸವದ ಕವಿಗೆ ನಿತ್ಯ ನಮನ ಕವಿ ಕೆ.ಎಸ್. ನಿಸಾರ್ ಅಹಮದ್”ವೀಣಾ ಹೇಮಂತ್ ಗೌಡ ಪಾಟೀಲ್

ಹುಟ್ಟಿದ್ದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಲ್ಲಿ ಆದರೂ ಮಲೆನಾಡ ಪ್ರಕೃತಿ ಸೌಂದರ್ಯದ ನಡುವೆ ತಮ್ಮ ಬದುಕನ್ನು ಕಟ್ಟಿಕೊಂಡ ಕವಿ ಕೆ.ಎಸ್. ನಿಸಾರ್ ಅಹಮದ್ ರವರು ಸೌಂದರ್ಯದ ಆರಾಧಕರು. ನಿತ್ಯೋತ್ಸವ ಎಂಬ ಕವನ ಸಂಕಲನದ ಮೂಲಕ ಪ್ರಸಿದ್ಧರಾದ ‘ನಿತ್ಯೋತ್ಸವ ಕವಿ’ ಎಂದೇ ಗುರುತಿಸಲ್ಪಡುವ ನಾಡೋಜ ಡಾಕ್ಟರ್ ಕೆ ಎಸ್ ನಿಸಾರ್ ಅಹಮದ್. ಜೋಗದ ಅದ್ಭುತ ಜಲಧಾರೆಯನ್ನು ನೋಡಿದ ಮೇಲೆ ಬರೆದ ಕವನ ‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತನು ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ’
ಕವನವು ನಿತ್ಯೋತ್ಸವ ಕವನವಾಗಿ ಕನ್ನಡ ನಾಡಿನ ಎಲ್ಲಾ ಸಭೆ ಸಮಾರಂಭಗಳಲ್ಲಿ ಕರ್ನಾಟಕ ರಾಜ್ಯದ ವೈಭವದ ಪ್ರಕೃತಿ ಸಂಪತ್ತನ್ನು ಭೌಗೋಳಿಕ ಹಿನ್ನೆಲೆಗಳನ್ನು ವರ್ಣಿಸುವ ಕವನವಾಗಿ ಹಾಡಲ್ಪಡುತ್ತಿದ್ದು ನಮ್ಮೆಲ್ಲರ ಮೈಮನಗಳನ್ನು ಪುಳಕಿತಗೊಳಿಸುತ್ತದೆ.

ಮನಸು ಗಾಂಧಿ ಬಜಾರು,ಸಂಜೆ ಐದರ ಮೇಲೆ, ಮನದೊಂದಿಗೆ ಮಾತುಕತೆ ಎಂಬ ಕೃತಿಗಳ ಇವರು ನಾಡಿನ ಮನೆಮಾತಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪುಟ್ಟ ಹಳ್ಳಿ ದೇವನಹಳ್ಳಿಯಲ್ಲಿ ಕೊಕ್ಕರೆ ಹೊಸಳ್ಳಿ ಶೇಕ್ ಹೈದರ್ ನಿಸಾರ್ ಅಹಮದ್ ಅವರು 5 ಫೆಬ್ರುವರಿ 1936ರಲ್ಲಿ ಜನಿಸಿದರು. ತಂದೆ ಶೇಖ ಹೈದರ್ ಸರ್ಕಾರಿ ನೌಕರರಾಗಿದ್ದು ಬೆಂಗಳೂರಿನ ದೊಡ್ಡ ಮಾವಳ್ಳಿಗೆ ತಮ್ಮ ಕುಟುಂಬವನ್ನು ಸ್ಥಳಾಂತರಿಸಿ ಅಲ್ಲಿನ ಮುಸ್ಲಿಂ ಕಾಲೋನಿಯೊಂದರಲ್ಲಿ ವಾಸವಾದರೂ ಕೂಡ ತಮ್ಮ ಮಕ್ಕಳು ಸರ್ಕಾರಿ ನೌಕರರಾಗಲಿ ಎಂದು ಹತ್ತಿರದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದರು.
ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಖ್ಯಾತ ಕವಿಗಳಾಗಿದ್ದ
ಎಂ ವಿ ಸೀತಾರಾಮಯ್ಯ ಮತ್ತು ಜಿ.ಪಿ. ರಾಜರತ್ನಂ ಅವರು ನಿಸಾರ್ ಅವರಿಗೆ ಗುರುಗಳಾಗಿದ್ದು ಅವರ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದರು.

ಮುಂದೆ ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿಸಾರ್ ಅವರು ‘ಮೈಸೂರು ಮೈನ್ಸ್ ಅಂಡ್ ಜಿಯಾಲಜಿ’ ಯ ಮೈಸೂರು ಮತ್ತು ಗುಲ್ಬರ್ಗಗಳಲ್ಲಿ ಸಹಾಯಕ ಭೂಗರ್ಭ ಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸಿದರು.
1959 ರಲ್ಲಿ ನಡೆದ ದಸರಾ ಹಬ್ಬದ ಕವಿಗಳ ಸಮ್ಮೇಳನದಲ್ಲಿ ಕುವೆಂಪು ಅವರ ಸಂಪರ್ಕಕ್ಕೆ ಬಂದ
ನಿಸಾರ್ ಅವರು ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ವಹಿಸಿದರು.

ನಂತರ ಉಪನ್ಯಾಸಕರಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜು, ಚಿತ್ರದುರ್ಗ,ಹಾಸನದ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ಅಂತಿಮವಾಗಿ ಶಿವಮೊಗ್ಗದ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೆಲೆ ನಿಂತರು.
ನಿಸಾರ್ ಅವರು ಮಲೆನಾಡಿನ ಪ್ರಕೃತಿ ಸೌಂದರ್ಯದಿಂದ ಆಕರ್ಷಿತರಾಗಿ ಈಗಾಗಲೇ ಸಾಕಷ್ಟು ಕವನಗಳನ್ನು ಬರೆದಿದ್ದರು. 1978 ರಲ್ಲಿ ಅವರ ಕವನ ಸಂಕಲನ ‘ನಿತ್ಯೋತ್ಸವ’ ಬಿಡುಗಡೆಯಾಗಿ ಕನ್ನಡಿಗರ ಮನ ಮೆಚ್ಚುಗೆಗೆ ಪಾತ್ರವಾಗಿದ್ದು ಇದರ 13 ಆಡಿಯೋ ಆಲ್ಬಮ್ಗಳು ಬಿಡುಗಡೆಯಾದವು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಇವರು ಮೂರು ವರ್ಷಗಳ ಕಾಲ 1984 ರಿಂದ 87ರ ಅವಧಿಯಲ್ಲಿ ಕಾರ್ಯನಿರ್ವಹಿಸಿದರು.

ನನ್ನ ನುಡಿ, ನಿತ್ಯೋತ್ಸವ, ಮನಸು ಗಾಂಧಿ ಬಜಾರು,
ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಸಂಜೆ ಐದರ ಮೇಲೆ, ನಾನೆಂಬ ಪರಕೀಯ, ನಿಮ್ಮೊಡನಿದ್ದೂ ನಿಮ್ಮಂತಾಗದೆ, ಕುರಿಗಳು ಸಾರ್ ಕುರಿಗಳು, ರಾಮನ್ ಸತ್ತ ಮೇಲೆ, ಅನಾಥರು, ಸವತಿಯ ಮಕ್ಕಳ ಹಗೆ, ಶಿಲುಬೆಗೇರಿದ ಮೇಲೆ ಕನ್ನಡದ ಕುವರಿಗೆ ನೆನೆದವರ ಮನದಲ್ಲಿ ಮುಂತಾದ ಕವನ ಸಂಕಲನಗಳು ಅವರವಾಗಿದ್ದವು.
ನಾನೆಂಬ ಪರಕೀಯ ಮತ್ತು ನಿಮ್ಮೊಡನಿದ್ದು ನಿಮ್ಮಂತಾಗದೆ ಎಂಬ ಕವನ ಸಂಕಲನಗಳು 60ರ ದಶಕದಲ್ಲಿ ಕನ್ನಡದ ಕವಿಗಳ ಮಧ್ಯೆ ಇದ್ದ ಅನಾರೋಗ್ಯಕರ ಸ್ಪರ್ಧೆ ಮತ್ತು ಜಾತಿವಾದಗಳ ಕುರಿತ ಅವರ ಆಕ್ರೋಶಗಳನ್ನು ಹೊರಹಾಕಿತ್ತು.

ಸವತಿಯ ಮಕ್ಕಳು ಕವನ ಸಂಕಲನವಂತೂ ಭಾರತ ಮಾತೆಗೆ ಮುಸಲ್ಮಾನ ಜನತೆಯನ್ನು ಸವತಿಯ ಮಕ್ಕಳಂತೆ ನಡೆಸಿಕೊಳ್ಳಬಾರದು ಎಂದು ಕೋರಿಕೊಳ್ಳುವ ಮತ್ತು ಹಾದಿ ತಪ್ಪಿದ ಮುಸಲ್ಮಾನರನ್ನು ಕ್ಷಮಿಸುವ ಕುರಿತು ಬರೆದ ಕವನಗಳನ್ನು ಹೊಂದಿತ್ತು.

ಅಮೆರಿಕ ಅಮೆರಿಕ ಕವನದಲ್ಲಿ ಅಮೆರಿಕ ದೇಶದ ಮೇಲರಿಮೆಯನ್ನು ಒಪ್ಪಿಕೊಳ್ಳುವ ಜಗತ್ತಿನ ಉಳಿದೆಲ್ಲ ದೇಶಗಳ ಕೀಳರಿಮೆಯ ಮನೋಭಾವದ ಕುರಿತಾಗಿತ್ತು

ಬೆಣ್ಣೆ ಕದ್ದ ಕೃಷ್ಣನ ಕುರಿತ ಪದ್ಯ ಮತ್ತು ‘ರಂಗೋಲಿ ಮತ್ತು ನನ್ನ ಮಗ’, ಅಮ್ಮ ಆಚಾರ ಮತ್ತು ನಾನು, ಅಮ್ಮನ ಬುರ್ಖ, ನವೋಲ್ಲಾಸ ಮತ್ತು ಸುಮುಹೂರ್ತ ಮುಂತಾದ ಅವರ ಕವನ ಸಂಕಲನಗಳು ಜನಪ್ರಿಯವಾಗಿದ್ದವು.
ಪ್ರಖ್ಯಾತ ಇಂಗ್ಲಿಷ್ ಸಾಹಿತ್ಯದ ಸೃಷ್ಟಿಕರ್ತ ಶೇಕ್ಸ ಪಿಯರ್ ನ ಮರ್ಚೆಂಟ್ ಆಫ್ ವೆನಿಸ್, ಕಿಂಗ್ ಲಿಯರ್ ಮತ್ತು ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ ಗಳನ್ನು ಇವರು ಅನುವಾದಿಸಿದ್ದರು.

2007 ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು ಕರ್ನಾಟಕ ಘನ ಸರ್ಕಾರದ ವಿನಂತಿಯ ಮೇರೆಗೆ 2017ರಲ್ಲಿ ಮೈಸೂರು ದಸರಾ ಉತ್ಸವವನ್ನು ಚಾಮುಂಡಿ ಬೆಟ್ಟದಲ್ಲಿ ಉದ್ಘಾಟಿಸಿದರು. ಕನ್ನಡ ಸಾಹಿತ್ಯದಲ್ಲಿ ಇವರು ಬರೆದ ಕವನ ಸಂಕಲನಗಳು ಕೃತಿಗಳು ಮತ್ತು ವಿಮರ್ಶೆಗೆ ಇವರು ಬೆಂಗಳೂರು, ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾಗಿದ್ದರು.
1981 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಇವರು 2006ರಲ್ಲಿ ಮಾಸ್ತಿ ಪ್ರಶಸ್ತಿ, ಗೋರೂರು ಪ್ರಶಸ್ತಿ ಮತ್ತು ಪ್ರತಿಷ್ಠಿತ ಸೋವಿಯೆಟ್ ಲ್ಯಾಂಡ್ ಪ್ರಶಸ್ತಿ ಪುರಸ್ಕಾರ ಪಡೆದರು. 2008ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಮತ್ತು 2017ರಲ್ಲಿ ಪಂಪ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದರು. ಹಂಪಿ ವಿಶ್ವವಿದ್ಯಾಲಯವು ಕೊಡ ಮಾಡುವ 2003 ನೇ ಸಾಲಿನ ನಾಡೋಜ ಪ್ರಶಸ್ತಿಯೂ ಕೂಡ ಇವರ ಗೌರವಾರ್ಹ ಕಿರೀಟಕ್ಕೆ ಗರಿಯಾಗಿ ಸೇರಿತ್ತು.

ಇವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಇವರ ಪತ್ನಿ
ಶಹ ನವಾಜ್ ಬೇಗಂ ಅವರ ಸಹಕಾರ, ಬೆಂಬಲಗಳು ಇವರಿಗೆ ದೊರೆತಿದ್ದು ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದರು. 83ರ ಇಳಿ ವಯಸ್ಸಿನಲ್ಲಿ 2019ರಲ್ಲಿ ಪತ್ನಿಯನ್ನು ಕಳೆದುಕೊಂಡರು. 2020ರಲ್ಲಿ ಅಮೆರಿಕದಲ್ಲಿ ವಾಸವಾಗಿದ್ದ ಓರ್ವ ಪುತ್ರನನ್ನು ಕಳೆದುಕೊಂಡ
ಕೆಲವೇ ದಿನಗಳಲ್ಲಿ 2020 ಮೇ 3 ರಂದು ವಯೋಸಹಜ ತೊಂದರೆಗಳಿಂದ ತಮ್ಮ 84ನೇ ವಯಸ್ಸಿನಲ್ಲಿ ವಿಧಿವಶರಾದರು.

ಕನ್ನಡ ಸಾಹಿತ್ಯದಲ್ಲಿ ನವ್ಯಕಾವ್ಯದ ಹರಿಕಾರರಾದ ‘ನಿತ್ಯೋತ್ಸವದ ಕವಿ’ ಎಂದು ಹೆಸರಾದ ಕೆ ಎಸ್ ನಿಸಾರ್ ಅಹ್ಮದ್ ಅವರ ಕವನಗಳು ತಮ್ಮ ಅದ್ಭುತ ಕಾವ್ಯ ಶಕ್ತಿಯಿಂದ ಓದುಗರನ್ನು ಆಕರ್ಷಿಸುತ್ತವೆ.
ಅಂತಹ ಸೂಕ್ತವಾದ ಒಳನೋಟಗಳನ್ನು ಹೊಂದಿದ ನಿತ್ಯೋತ್ಸವದ ಕವಿಮನಕ್ಕೆ ಇದೋ ನನ್ನ ನಮನ.


Leave a Reply

Back To Top