ಸತೀಶ್ ಬಿಳಿಯೂರು ಅವರ ಕವಿತೆ-ವಿಸ್ಮಯ

ನಭದೆಲ್ಲೆಡೆ ಚುಕ್ಕಿಗಳ ತನನ
ಹಲವಾರೂ ಗ್ರಹಗಳ ಸಮ್ಮಿಲನ
ಮೆಲ್ಲ ಮೆಲ್ಲನೆ ಚಂದಿರನ ಆಗಮನ
ಹೊತ್ತು ಕಳೆದಂತೆ ಮುಗಿಯಿತು ಯಾನ

ಹುಣ್ಣಿಮೆ ಚಂದಿರ ಬಾನಿಗೆ ಬಟ್ಟಲು
ಹಾಲ್ಬೆಳಕಲಿ ತೂಗುವ ತೊಟ್ಟಿಲು
ಬೆಂಕಿ ಕಾರುವ ಧ್ರುವನಕ್ಷತ್ರಗಳ ಸಾಲು
ಉಲ್ಕೆಪಾತಗಳು ಅತ್ತಿತ್ತ ಸುಳಿಯಲು

ಇರುಳು ನಭ ಬಲೂ ವಿಸ್ಮಯದ ತಾಣ
ಕಣ್ಣಿಗೆ ಗೋಚರಿಸುವುದು ಚುಕ್ಕಿಗಳ ಬಾಣ
ದೊಡ್ಡ ತಾರೆಗಳ ನಡುವೆ ಪುಟ್ಟ ತಾರೆ
ಬಾನಿನೆಲ್ಲೆಡೆ ಮಿಂಚುತ ನಗುತಿರೆ

ಎಲ್ಲೆಡೆ ಕಣ್ಣು ಹಾಯಿಸುತ ನೋಡಿದರೆ
ಎಷ್ಟೋ ವಿಚಿತ್ರ ಬಾನಲ್ಲಿ ಕಾಣುತಿರೆ
ಇದೆಲ್ಲ ಕಣ್ಣಿಗೆ ಕೌತುಕದ ಗೂಡು
ಈ ಬ್ರಹ್ಮಾಂಡವೆ ವಿಸ್ಮಯ ನೋಡು

Leave a Reply

Back To Top