ಅದೊಂದು ನಿರ್ಜನ ಪ್ರದೇಶ. ಹೊಲದಿಂದ ತನ್ನ ಮನೆಯ ಕಡೆ ಹೊರಟಿದ್ದ ಫ್ಲೆಮಿಂಗ್ ಎಂಬ ರೈತನಿಗೆ ಯಾರೋ ಒಬ್ಬ ಬಾಲಕ ಜೋರಾಗಿ ಆರ್ತನಾದ ಮಾಡುತ್ತಿರುವಂತೆ ತೋರಿಸು. ಕೂಡಲೇ ಶಬ್ದ ಕೇಳಿದತ್ತ ಓಡಿದ ಆತನ ಕಣ್ಣಿಗೆ ಬಿದ್ದದ್ದು ಓರ್ವ ಬಾಲಕ ಕೆಸರಿನ ಮಡುವಿನಲ್ಲಿ ಹೂತು ಹೋಗುತ್ತಿರುವುದನ್ನು. ಏನಾದರೂ ಮಾಡಿ ಆ ಬಾಲಕನನ್ನು ರಕ್ಷಿಸಲೇಬೇಕೆಂದು ಅತ್ತಿತ್ತ ನೋಡಿದ ರೈತ ಫ್ಲೆಮಿಂಗ್ ಅಲ್ಲಿಯೇ ಇದ್ದ ಮರದ ಒಣಗಿದ ಗಟ್ಟಿಯಾದ ಕೊಲ್ಲಿಯೊಂದನ್ನು ಎಳೆದು ತಂದು ಆ ಬಾಲಕನ ಕೈಗೆ ಸಿಗುವಂತೆ ಚಾಚಿದ. ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆಯಂತೆ ದೊಡ್ಡದೊಂದು ಮರದ ಕೊಲ್ಲಿಯೇ ದೊರೆತು ಅದನ್ನು ಆ ಬಾಲಕ ಗಟ್ಟಿಯಾಗಿ ಹಿಡಿದುಕೊಂಡಾಗ ಆತನನ್ನು ಹುರಿದುಂಬಿಸುತ್ತ ಫ್ಲೆಮಿಂಗ್ ಕೊಲ್ಲಿಯನ್ನು ತನ್ನತ್ತಎಳೆಯಲಾರಂಭಿಸಿದ. ಬಹಳಷ್ಟು ಪ್ರಯತ್ನದ ನಂತರ ತನ್ನ ಜೀವದ ಹಂಗು ತೊರೆದು ಆ ಬಾಲಕನನ್ನು ಉಳಿಸುವಲ್ಲಿ ಫ್ಲೆಮಿಂಗ್ ಯಶಸ್ವಿಯಾದನು.

ಕೆಸರಿನಿಂದ ಹೊರಬಂದ ಬಾಲಕನ ಬಟ್ಟೆಗಳೆಲ್ಲವೂ ಕೆಸರಾಗಿದ್ದು ಹತ್ತಿರದಲ್ಲಿ ಇದ್ದ ತನ್ನ ಮನೆಗೆ ಆ ಬಾಲಕನನ್ನು ಕರೆದೊಯ್ದ ರೈತ ಫ್ಲೆಮಿಂಗ್ ಆತನಿಗೆ ಬಿಸಿ ನೀರನ್ನು ಒದಗಿಸಿ ಸ್ನಾನ ಮಾಡಲು ಹೇಳಿದ.
ಸ್ನಾನ ಮಾಡಿ ಬಂದ ಆ ಬಾಲಕನಿಗೆ ತನ್ನ ಮಗನ ಇದ್ದುದರಲ್ಲಿಯೇ ಒಳ್ಳೆಯ ಬಟ್ಟೆಗಳನ್ನು ನೀಡಿ ತೊಟ್ಟುಕೊಳ್ಳಲು ಹೇಳಿ ಊಟವನ್ನು ಮಾಡಿಸಿ ಬೀಳ್ಕೊಂಡನು.

ಮರುದಿನ ಮುಂಜಾನೆ ಫ್ಲೆಮಿಂಗ್ ಏಳುವ ಹೊತ್ತಿಗಾಗಲೇ ಆತನ ಮನೆಯ ಮುಂದೆ ಅತ್ಯಂತ ಬೆಲೆ ಬಾಳುವ ಕಾರಿನಲ್ಲಿ ವ್ಯಕ್ತಿಯೊಬ್ಬ ಆಗಮಿಸಿ ಫ್ಲೆಮಿಂಗ್ ನನ್ನು ಉದ್ದೇಶಿಸಿ ನೆನ್ನೆಯ ದಿನ ನೀನು ನನ್ನ ಮಗನನ್ನು ಉಳಿಸಿ ನನಗೆ ಮಹದುಪಕಾರವನ್ನು ಮಾಡಿರುವೆ. ನಿನಗೆ ನಾನು ಸದಾ ಋಣಿಯಾಗಿರುವೆ, ನಿನಗೇನು ಬೇಕು ಕೇಳು? ನಾನು ಕೊಡುತ್ತೇನೆ ಎಂದು ಒತ್ತಾಯಿಸಿದ. ಧನಿಕನ ಮಾತಿಗೆ ಕಿರುನಕ್ಕ ರೈತ ಫ್ಲೆಮಿಂಗ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂಬ ಮಾನವೀಯ ಪ್ರಜ್ಞೆಯಿಂದ ನಾನು ಬಾಲಕನನ್ನು ರಕ್ಷಿಸಿದ್ದೇನೆ ಹೊರತು ಇನ್ನಾವುದೇ ಆಸೆ, ಆಕಾಂಕ್ಷೆಗಳಿಂದ ಅಲ್ಲ. ನನಗೇನೂ ಬೇಡ ಎಂದು ಧನಿಕನಿಗೆ ಕೈಮುಗಿದು ಹೇಳಿದ.

ರೈತನ ಅಂತಃಕರಣದ ಮಾತುಗಳಿಗೆ ತಲೆದೂಗಿದ ಆ ಧನಿಕ ಅಲ್ಲಿಗೆ ಬಂದ ರೈತನ ಮಗನನ್ನು ಕಂಡು ಪ್ರೀತಿಯಿಂದ ಬಳಿ ಕರೆದು ಮಾತನಾಡಿಸಿದ.ಪುಟ್ಟ ಬಾಲಕನನ್ನು ತನ್ನೊಂದಿಗೆ ಕಳುಹಿಸಿ ಕೊಡುವಂತೆಯೂ ಆತನ ವಿದ್ಯಾಭ್ಯಾಸದ ಎಲ್ಲಾ ಖರ್ಚುಗಳನ್ನು ತಾನೇ ಹೊರುವುದಾಗಿಯೂ ಧನಿಕ ವ್ಯಕ್ತಿ ಕೇಳಿದನು.

ತನ್ನ ಅಸಹಾಯಕ ಪರಿಸ್ಥಿತಿಯಲ್ಲಿ ಮಗನಿಗೆ ಓದಿಸಲು ಸಾಧ್ಯವಿಲ್ಲದೆ ಇರುವ ಕಾರಣ ಧನಿಕನ ಮಾತಿಗೆ ಒಪ್ಪಿದ ರೈತ ಫ್ಲೆಮಿಂಗ್ ತನ್ನ ಮಗನನ್ನು ಅವರೊಂದಿಗೆ ಕಳುಹಿಸಲು ಒಪ್ಪಿಕೊಂಡ. ಹಾಗೆ ಫ್ಲೆಮಿಂಗನ ಮಗ ಅಲೆಕ್ಸಾಂಡರನನ್ನು ಕರೆತಂದ ಆ ಧನಿಕ ಆತನನ್ನು ನಗರದ ಅತ್ಯುನ್ನತ ಶಾಲೆಗೆ ಭರ್ತಿ ಮಾಡಿ ಆತನ ಎಲ್ಲಾ ಖರ್ಚು ವೆಚ್ಚಗಳನ್ನು ತಾನೇ ನೋಡಿಕೊಂಡನು. ಉನ್ನತ ವಿದ್ಯಾಭ್ಯಾಸದ ಮೂಲಕ ವೈದ್ಯಕೀಯ ಪದವಿಯನ್ನು ಗಳಿಸಿದ ಅಲೆಕ್ಸಾಂಡರ್ ತನ್ನ ಕ್ಷೇತ್ರದಲ್ಲಿ ಅತ್ಯುನ್ನತವಾದ ಸಾಧನೆಯನ್ನು ಮಾಡಿ ಸೋಂಕು ನಿರೋಧಕ ಮತ್ತು ಜೀವ ರಕ್ಷಕವಾದ ಪೆನ್ಸಿಲಿನ್ ಔಷಧಿಯನ್ನು ಕಂಡುಹಿಡಿದನು.

ಅದು ಎರಡನೇ ವಿಶ್ವಯುದ್ಧದ ಸಮಯ. ಒಂದು ದಿನ ಅಲೆಕ್ಸಾಂಡರ್ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ
ನ್ಯೂಮೋನಿಯ ಕಾಯಿಲೆಯಿಂದ ಬಳಲುತ್ತಿದ್ದ, ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು
ಕರೆತರಲಾಯಿತು. ವೈದ್ಯ ಅಲೆಕ್ಸಾಂಡರ್ ಆಗ ತಾನೇ ತನ್ನ ಹೊಸ ಆವಿಷ್ಕಾರಕ್ಕೆ ಪರವಾನಿಗೆಯನ್ನು ಪಡೆದಿದ್ದು ಈ ರೋಗಿಗೆ ಪೆನ್ಸಿಲಿನ್ ಚುಚ್ಚುಮದ್ದನ್ನು ನೀಡುವ ಮೂಲಕ ಗುಣಪಡಿಸಿದ. ಆ ರೋಗಿ ಮತ್ತಾರು ಅಲ್ಲದೆ ಈ ಹಿಂದೆ ಅಲೆಕ್ಸಾಂಡರ್ ನ ತಂದೆ ಫ್ಲೆಮಿಂಗ್ ಬದುಕಿಸಿದ ಪುಟ್ಟ ಬಾಲಕನೆ ಆಗಿದ್ದ. ಆ ಪುಟ್ಟ ಬಾಲಕನೇ ಮುಂದೆ ಅಮೆರಿಕದ ವಾರ್ ಟೈಮ್ ಪ್ರೈಮ್ ಮಿನಿಸ್ಟರ್ ವಿನ್ಸ್ ಟನ್ ಚರ್ಚಿಲ್ ಆಗಿದ್ದರು ಎಂಬ ಈ ಕಥೆ ನಿಜವೆ ಸುಳ್ಳೇ ಎಂಬುದು ಇಂದಿಗೂ ವಿವಾದಕ್ಕೆ ಆಸ್ಪದವಾಗಿದ್ದರೂ ಈ ಕಥೆಯ ಹಿಂದಿನ ತಾತ್ಪರ್ಯ ಮನ ಮುಟ್ಟುವಂತಹದ್ದು.

ಯಾವುದೇ ರೀತಿಯ ಪ್ರಲೋಭನೆರಹಿತವಾದ ಸಹಾಯವನ್ನು ನೀನು ಮಾಡಿದಾಗ ನಿನಗೂ ಕೂಡ ಅಂತಹದ್ದೇ ಸಹಾಯ ಖಂಡಿತವಾಗಿಯೂ ದೊರೆಯುತ್ತದೆ. ಒಳ್ಳೆಯತನ ಮತ್ತು ಒಳ್ಳೆಯ ಮೌಲ್ಯಗಳಿಗೆ ಈ ಜಗತ್ತು ಎಂದಿಗೂ ತಲೆಬಾಗುತ್ತದೆ. ಧನಾತ್ಮಕ ಚಿಂತನೆಗಳು ಒಳ್ಳೆಯ ಬದುಕನ್ನು ಹೊತ್ತು ತರುತ್ತವೆ ಎಂಬ ಸಂದೇಶವನ್ನು ಸಾರುವ ಈ ಕಥೆಯ ಸತ್ಯ ಮಿಥ್ಯಗಳ ಗೊಡವೆಯನ್ನು ಬಿಟ್ಟು ನೋಡಿದರೆ ಬದುಕಿಗೆ ಅತ್ಯವಶ್ಯಕವಾದ ಪಾಠವನ್ನು ನಾವು ಕಲಿಯಬಹುದು.
ಏನಂತೀರಾ ಸ್ನೇಹಿತರೇ?


Leave a Reply

Back To Top