
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ನನಗೇನು ಬೇಕು ಗೊತ್ತೇ ಅಪ್ಪ?

ತನ್ನ ಕೆಲಸದಲ್ಲಿ ಮಗ್ನನಾಗಿದ್ದ ತಂದೆಗೆ “ಅಪ್ಪ, ನಾನು ನಿನಗೊಂದು ಪ್ರಶ್ನೆ ಕೇಳಲೇ?” ಎಂದು ಮಗ ಕೇಳಲು ಆಯ್ತು ಕೇಳು ಎಂದು ತಲೆ ಎತ್ತದೆ ಅಪ್ಪ ಹೇಳಿದ.
“ಅಪ್ಪ, ನೀನು ಒಂದು ಗಂಟೆಗೆ ಎಷ್ಟು ಹಣ ಸಂಪಾದಿಸುವೆ?” ಎಂದು ಮಗ ಕೇಳಿದ.
ಅಚ್ಚರಿಯಿಂದ ತಲೆಯೆತ್ತಿದ ಅಪ್ಪ “ನಿನಗೇಕೆ ಬೇಕು ಅದೆಲ್ಲ? ಎಂದು ತುಸು ಮುನಿಸಿನಿಂದ ಕೇಳಿದ.
“ಹೇಳು ಅಪ್ಪ, ಸುಮ್ಮನೆ ಕೇಳಿದೆ” ಎಂದು ಮಗ ಹಠ ಹಿಡಿದ.
ಬೇಸರವಾದರೂ ತೋರಿಸಿಕೊಳ್ಳದೆ ಅಪ್ಪ “ನಾನು ಒಂದು ಘಂಟೆಗೆ 1 ಸಾವಿರ ರೂಗಳನ್ನು ಗಳಿಸುತ್ತೇನೆ.”
ಹೌದೇ? ಎಂದು ಮುಖ ಸಪ್ಪೆ ಮಾಡಿದ ಮಗು ಮುಂದೆ ಕೆಲವೇ ಕ್ಷಣಗಳಲ್ಲಿ “ಅಪ್ಪ, ನನಗೆ ನೀನು ಐನೂರು ರೂ ಕೊಡುತ್ತೀಯಾ” ಎಂದು ಕೇಳಿದ. ಅಪ್ಪನ ಕೋಪ ಹೆಚ್ಚಾಯಿತು.
“ಐನೂರು ರೂ ನಿನಗೇಕೆ ಬೇಕು” ಎಂದು ತುಸು ಗಡಸು ಧ್ವನಿಯಲ್ಲಿ ಹೇಳಿದ.
ಮತ್ತೆ ಅಷ್ಟಕ್ಕೆ ಸುಮ್ಮನಾಗದೆ… “ಈಗಾಗಲೇ ಮನೆ ತುಂಬಾ ಸಾಕಷ್ಟು ಆಟಿಕೆಗಳಿವೆ, ಸಣ್ಣಪುಟ್ಟ ಸಾಮಾನುಗಳನ್ನು ಖರೀದಿಸಿ ಮನೆ ತುಂಬಾ ಹರಡುವುದು ಬೇಡ. ಸುಮ್ಮನೆ ನಿನ್ನ ರೂಮಿಗೆ ಹೋಗಿ ಓದಿಕೋ. ನಾನು ಅಷ್ಟು ಕಷ್ಟಪಟ್ಟು ಕೆಲಸ ಮಾಡುವುದು ನೀವೆಲ್ಲ ಚೆನ್ನಾಗಿ ಓದಲಿ,ಸುಖವಾಗಿರಲಿ ಎಂದೇ ಹೊರತು ಈ ರೀತಿ ಆಟವಾಡಿಕೊಂಡಿರಲು ಅಲ್ಲ” ಎಂದು ಜೋರಾಗಿ ಹೇಳಿದ.
ಅಪ್ಪನ ಜೋರು ಮಾತಿಗೆ ಪುಟ್ಟ ಹುಡುಗ ತಣ್ಣಗೆ ಎದ್ದು ತನ್ನ ಕೋಣೆಗೆ ತೆರಳಿ ಬಾಗಿಲನ್ನು ಹಾಕಿಕೊಂಡ.
ಇದೀಗ ಅಪ್ಪ ಸುಮ್ಮನೇ ಕುಳಿತು ಮಗ ಹಾಗೇಕೇ ಕೇಳಿದ, ಹಾಗೆ ಹಣ ಕೇಳಲು ಆತನಿಗೆ ಅದೆಷ್ಟು ಧೈರ್ಯ ಎಂದೂ ಕೋಪಗೊಂಡ.
ಒಂದು ಗಂಟೆಯ ನಂತರ ತುಸು ತಣ್ಣಗಾದ ಮನಸ್ಥಿತಿಯಲ್ಲಿ ಅಪ್ಪ ಮತ್ತೆ ಯೋಚಿಸಿದ. ಮಗ ಎಂದೂ ಕೇಳದ ಮಗ ಇಂದು 500 ರೂ ಕೇಳುತ್ತಿದ್ದಾನೆ ಎಂದರೆ ಆತನಿಗೆ ನಿಜವಾಗಿಯೂ ಹಣದ ಅಗತ್ಯ ಇದೆಯೇ? ಎಂದು. ಮತ್ತೆ ಯೋಚಿಸಿದಾಗ ಈ ಮೊದಲು ಎಂದೂ ಮಗ ಹಣ ಕೇಳಿಲ್ಲ ಎಂದು ಆತನಿಗೆ ನೆನಪಾಯಿತು.
ಕೂಡಲೇ ಎದ್ದು ಮಗನ ಕೋಣೆಯೆಡೆ ನಡೆದ ಆತ ಬಾಗಿಲನ್ನು ತಟ್ಟಿ ‘ಮಗು ಮಲಗಿರುವೆಯಾ?’ ಎಂದು ಕೇಳಿದ.
ಕೋಣೆಯ ಒಳಗಿಂದ “ಇಲ್ಲ ಅಪ್ಪ, ನಾನು ಮಲಗಿಲ್ಲ” ಎಂದು ಉತ್ತರಿಸಿದ ಮಗ ಕೋಣೆಯ ಬಾಗಿಲು ತೆರೆದ.

“ಸಾರಿ ಪುಟ್ಟ, ನಾನು ನಿನ್ನ ಮೇಲೆ ಕೂಗಾಡಿದೆ. ಇಂದು ಮುಂಜಾನೆಯಿಂದ ಕೆಲಸದ ಒತ್ತಡದಿಂದ ಬಳಲುತ್ತಿದ್ದ ನಾನು ನನ್ನೆಲ್ಲಾ ಸಿಟ್ಟನ್ನು ನಿನ್ನ ಮೇಲೆ ಹಾಕಿದೆ. ತೆಗೆದುಕೋ ಈ 500ರೂ. ಆದರೆ ಅದಕ್ಕೂ ಮುನ್ನ ನಿನಗೆ ಈ ಹಣ ಏಕೆ ಬೇಕು ಎಂಬುದನ್ನು ನನಗೆ ಹೇಳು?” ಎಂದು ಮೆಲುವಾಗಿ ಕೇಳಿದ.
ನೇರವಾಗಿ ಕುಳಿತು ನಗುಮುಖದಿಂದ “ಥ್ಯಾಂಕ್ ಯು ಅಪ್ಪ” ಎಂದ ಮಗನ ಮುಖದ ಸಂತೋಷವನ್ನು ನೋಡಿ
ಆತನ ತಲೆ ನೇವರಿಸಿದ ಅಪ್ಪ “ಹಾಗಾದರೆ ಹೇಳು… ನಿನಗೇಕೆ ಹಣ ಬೇಕು?” ಎಂದು ಕೇಳಿದ.
ಕೂಡಲೇ ತನ್ನ ಹಾಸಿಗೆಯ ಮೇಲಿರುವ ದಿಂಬಿನ ಕೆಳಗೆಕೈ ಹಾಕಿದ ಆ ಬಾಲಕ ತುಸು ಹಣವನ್ನು ತಂದು ಅಪ್ಪನ ಕೈಯಲ್ಲಿ ಇಟ್ಟ. ಈಗಾಗಲೇ ಮಗನ ಬಳಿ ಹಣ ಇರುವುದನ್ನು ಕಂಡು ಅಪ್ಪನ ಕೋಪ ಇನ್ನೇನು ಹೆಚ್ಚಾಗಬೇಕು ಅನ್ನುವಷ್ಟರಲ್ಲಿ ಮಾತಿಗೆ ಆರಂಭಿಸಿದ ಮಗ ‘ಅಪ್ಪ ನನ್ನ ಬಳಿ 500ರೂ ಹಣ ಮಾತ್ರ ಇದೆ… ನನಗೆ ಸಾವಿರ ರೂ ಬೇಕಾಗಿತ್ತು ಅದಕ್ಕೆ ನಿನ್ನನ್ನು ಕೇಳಿದೆ.
” ಈಗಾಗಲೇ 500 ರೂ ಇದ್ದರೂ ಮತ್ತೆ 500 ರೂ ಕೊಡು ಎಂದು ಕೇಳಲು ಕಾರಣವೇನು? “ಎಂದು ತುಸು ಹಲ್ಲು ಮಸೆದು ಅಪ್ಪ ಕೇಳಲು ಮಗ ಆತುರದಿಂದ ಅಪ್ಪ ನನ್ನ ಬಳಿ ನೀನು ಕೊಟ್ಟ ಹಣ ಸೇರಿದರೆ ಸಾವಿರ ರೂ ಆಗುತ್ತದೆ. ಅದನ್ನು ನಾನು ನಿನಗೆ ಕೊಡುತ್ತೇನೆ. ನಾಳೆಯ ದಿನ ನಿನ್ನ ಒಂದು ಗಂಟೆ ಸಮಯಯನ್ನು ನೀನು ನನಗೆ ಕೊಡು. ನಾಳೆ ಸಾಯಂಕಾಲ ತುಸು ಬೇಗ ನೀನು ಬಂದು ನಮ್ಮೊಂದಿಗೆ ಊಟ ಮಾಡುತ್ತೀಯಾ ಎಂದು ಅಪ್ಪನ ಉತ್ತರಕ್ಕಾಗಿ ಕಾತರದಿಂದ ನೋಡಿದ.
ಮಗನ ಕೋರಿಕೆಯನ್ನು ಕೇಳಿ ತಣ್ಣಗಾದ ತಂದೆ. ಏನು ಹೇಳಬೇಕೆಂದು ಆತನಿಗೆ ತೋಚಲಿಲ್ಲ. ಮಗನನ್ನು ತನ್ನೆರಡು ಕೈಗಳಿಂದ ತಬ್ಬಿ ಹಿಡಿದು ನನ್ನನ್ನು ಕ್ಷಮಿಸಿ ಬಿಡು ಪುಟ್ಟ, ನಾನು ನಿಮಗಾಗಿ ದುಡಿಯುತ್ತಿರುವೆ ಎಂಬ ಅಹಮ್ಮಿನ ಪೊರೆ ನನ್ನನ್ನು ಆವರಿಸಿತ್ತು, ಆದರೆ ನನ್ನ ಸಂಪಾದನೆ ಮಾತ್ರವಲ್ಲ ನಾನು ಕೂಡ ನಿಮ್ಮೊಂದಿಗೆ ಕಾಲ ಕಳೆಯಬೇಕು ಎಂಬ ಆಸೆಯನ್ನು ತೀರಿಸದಷ್ಟು ನನ್ನ ಕೆಲಸದಲ್ಲಿ ನಿರತನಾಗುವುದು ತಪ್ಪು ಎಂದು ನೀನು ನನ್ನ ಕಣ್ಣು ತೆರೆಸಿರುವೆ ಎಂದು ಹೇಳಿ ಮಗನನ್ನು ತಬ್ಬಿದ ಆತ. ಸ್ವಲ್ಪ ಹೊತ್ತಿನ ಮೌನದ ನಂತರ ಕಣ್ಣೊರೆಸಿಕೊಂಡು “ಇನ್ನು ಮುಂದೆ ನನ್ನೆಲ್ಲ ಕೆಲಸಗಳನ್ನು ಬೇಗನೇ ಪೂರೈಸಿ ನಾನು ಮನೆಗೆ ಬಂದು ನಿಮ್ಮೊಂದಿಗೆ ಕಾಲ ಕಳೆಯುತ್ತೇನೆ, ಪ್ರಾಮಿಸ್” ಎಂದು ಹೇಳಿದಾಗ ಮಗುವಿನ ಮುಖದಲ್ಲಿ ಬೆಳದಿಂಗಳ ಕಾಂತಿ ಹೊರಹೊಮ್ಮಿತು.

ಮುಖ ಪುಸ್ತಕದಲ್ಲಿ ಓದಿದ ಈ ಕಥೆ ನಮ್ಮ ನಿಮ್ಮಂತವರಿಗೆ ಪಾಠ ಆಗಲೇಬೇಕು. ನಮ್ಮ ಕುಟುಂಬದ ಆರ್ಥಿಕ ಅನುಕೂಲತೆಗಳನ್ನು ಹೆಚ್ಚಿಸಿಕೊಳ್ಳಲು ನಾವು ಕಷ್ಟಪಟ್ಟು ದುಡಿಯುತ್ತೇವೆ ನಿಜ, ಆದರೆ ನಮ್ಮ ಕುಟುಂಬಕ್ಕೆ ಕೇವಲ ನಾವು ಗಳಿಸುವ ಹಣದ ಅವಶ್ಯಕತೆ ಮಾತ್ರ ಇರುವುದಿಲ್ಲ, ಬದಲಾಗಿ ಪ್ರೀತಿ, ವಿಶ್ವಾಸ, ಮಮತೆಯನ್ನು ಕೂಡ ಮಕ್ಕಳು ನಮ್ಮಿಂದ ಬಯಸುತ್ತವೆ. ಅವರ ಮಾತುಗಳಿಗೆ ಕಿವಿಯಾಗಲಿ, ಅವರ ಆಸೆ ಆಕಾಂಕ್ಷೆಗಳಿಗೆ ಓಗೊಡಲಿ, ಅವರ ಆಟ ಪಾಠಗಳಿಗೆ ವೀಕ್ಷಕರಾಗಲಿ ಎಂದು ಮಕ್ಕಳು ಬಯಸುತ್ತಾರೆ.
ಕಾಲ ಎಂಬುದು ಕೈಯಲ್ಲಿ ಹಿಡಿದ ಉಸುಕಿನಂತೆ…. ಒಮ್ಮೆ ಸೋರಿ ಹೋದರೆ ಮತ್ತೆ ಹಿಡಿಯಲು ಬಾರದು.
ಕಂಪನಿಯೊಂದರಲ್ಲಿ ದುಡಿಯುವ ಓರ್ವ ವ್ಯಕ್ತಿ ಸತ್ತು ಹೋದರೆ ಶೋಕ ವ್ಯಕ್ತಪಡಿಸುವ ಕಂಪನಿ ಮರುದಿನವೇ ಮತ್ತೊಬ್ಬ ವ್ಯಕ್ತಿಯನ್ನು ಆತನ ಜಾಗದಲ್ಲಿ ಕೂರಿಸುತ್ತದೆ. ಆದರೆ ನಮ್ಮ ಕುಟುಂಬಕ್ಕೆ ನಮ್ಮ ಇರುವಿಕೆಯೇ ಮುಖ್ಯ. ಅವರ ಬದುಕಿನಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುವ ನಾವು, ನಾವಿಲ್ಲದ ಬದುಕನ್ನು ಅವರು ಕಲ್ಪಿಸುವುದೂ ಅಸಾಧ್ಯ ಎಂಬ ಸತ್ಯವನ್ನು ಅರಿತರೆ ಐಹಿಕ ಸುಖ ಭೋಗಗಳಿಗಿಂತ ಪ್ರೀತಿ, ಮಮತೆ, ವಿಶ್ವಾಸಗಳಿಗೆ, ಕೌಟುಂಬಿಕ ಬಂಧನಕ್ಕೆ ಹೆಚ್ಚು ಸಮಯವನ್ನು ನೀಡಲೇಬೇಕು.
ಏನಂತೀರಾ ಸ್ನೇಹಿತರೇ?
ವೀಣಾ ಹೇಮಂತ್ ಗೌಡ ಪಾಟೀಲ್
