ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
ಮಹಿಳೆಗೆ ನಮನ

ಮಮತೆ ವಾತ್ಸಲ್ಯದಲಿ ಬೆಳೆಸಿ
ಸರಿ ತಪ್ಪುಗಳನು ತಿದ್ದಿ ತಿಳಿಸಿ
ಸಂಸ್ಕಾರ ಸಂಸ್ಕೃತಿಯ ಕಲಿಸಿ
ಗುರುವಾದ ಮಾತೆಗೆ ನಮನ
ಪತಿಯ ಜೊತೆ ಗೆಳತಿಯಾಗಿ
ಕಷ್ಟ ಸುಖದಲಿ ಭಾಗಿಯಾಗಿ
ಸಂಸಾರದ ಜೋಕಾಲಿ ತೂಗಿ
ಮಡದಿಯಾದ ಸ್ತ್ರೀಗೆ ನಮನ
ಅಮ್ಮಳಂತೆ ಪ್ರೀತಿ ತೋರಿದ
ಸಮಸ್ಯೆಗಳಿಗೆ ಸಲಹೆ ನೀಡಿದ
ಬಾಳಲ್ಲಿ ಭರವಸೆ ಮೂಡಿಸಿದ
ಅಕ್ಕರೆಯ ಅಕ್ಕಳಿಗೆ ನಮನ
ಶಿಕ್ಷಕಿ ಸಾಹಿತಿ ಸಂಘಟಿಕಳಾಗಿ
ವೈದ್ಯ ವಕೀಲ ಗಗನಸಖಿಯಾಗಿ
ಬೆಳೆದು ಸಮಾಜಮುಖಿಯಾಗಿ
ಸಾಧಕಿಯಾದ ಹೆಣ್ಣಿಗೆ ನಮನ
ಕಷ್ಟಗಳಿಗೆ ತೋರದೆ ಭಯವ
ತಾಳ್ಮೆಯಿಂದ ಸಹಿಸುತ ಎಲ್ಲವ
ಛಲದಿ ಮುಂದೆ ಹೆಜ್ಜೆಯಿಡುವ
ವೀರ ಮಹಿಳೆಗೆ ನನ್ನ ನಮನ
ಜಯಶ್ರೀ ಎಸ್ ಪಾಟೀಲ ಧಾರವಾಡ

ʼ