ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರ ಕವಿತೆ-ನನ್ನೂರಿನಲ್ಲಿ

ಹುಟ್ಟುವ ಮೊದಲೇ
ಕೂಸಿಗೆ ಕ್ಯಾನ್ಸರ್
ಅವನ ಕೆಮ್ಮುವ ಧ್ವನಿ
ಗರ್ಭದಿಂದಲೇ ಕೇಳುತ್ತಿದೆ,
ಬೀಸುವ ಗಾಳಿ
ಸುಡುವ ಸೂರ್ಯ
ಎರಡೂ ಜೀವಕ್ಕೆ ಮಾರಕ
ಧರೆಗಿಳಿದ ಮಳೆಯಂತು
ಬಿಚ್ಚಿಟ್ಟಿದೆ ನಮ್ಮೂರ ಜಾತಕ.

ದಶಕಗಳಿಂದಿಚೆಗೆ ನೆಟ್ಟ
ಪ್ರಗತಿಯ ಸಸಿ
ಇಗಂತೂ ಆಳವಾಗಿ ಬೇರೂರಿದೆ,
ತನ್ನ ಸೊಂಡಿಲು ಚಾಚಲು
ಹುನ್ನಾರವಂತೂ ನಡದೆ ಇದೆ.
ಸತ್ತವರ ಸಂಖ್ಯೆಯ ಮೇಲೆ.

ಊರು ಬಿಟ್ಟು ಹೋದವರು
ನೂರು ವರ್ಷದ ನಂತರವೂ
ಜೋಡಿಯಾಗಿಯೇ ಬಂದಿದ್ದಾರೆ ಜಾತ್ರಗೆ.
ಇದ್ದವರ ಪೈಕಿ ವಿಧುರ ವಿದುವೆಯರ ಸಂಖ್ಯೆಯೆ
ಹೆಚ್ಚು ಮತದಾರರ ಪಟ್ಟಿಯಲಿ.

ಕೆಮ್ಮುತ್ತಾ ಬಂದ ಗಂಡನಿಗೆ
ಔಷಧಿ ಕೊಡಲು ಹೆಂಡತಿ ಇಲ್ಲ
ಅಳುವ ಮಕ್ಕಳ ಹೆಂಡತಿಯ
ಕಣ್ಣೀರ ವರೆಸಲು ಗಂಡನಿಲ್ಲ
ಹಗಲೆಲ್ಲ ಬದುಕಿಗೆ
ಗುದ್ದಾಟವಾದರೆ
ರಾತ್ರಿ ಸಾವಿನ ಜೊತೆ ನರಳಾಟ.

ಈಗಂತೂ ನನ್ನೂರಲ್ಲಿ
ವಾಸದ ಮನೆಗಳ ಸಂಖೆಗಿಂತ
ಗೋರಿಗಳ ಸಂಖೆಯೇ ಹೆಚ್ಚು,
ಆದರೂ
ಅಲ್ಲೋಬ್ಬ ರಾಜಕಾರಣಿ
ನನ್ನೂರಿನ ಕೈಗಾರಿಕರಣದ
ಪ್ರಗತಿಯ ಬಗ್ಗೆ ಭಾಷಣ
ಮಾಡುತ್ತಲೇ ಇದ್ದಾನೆ.


Leave a Reply

Back To Top