ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲ್
ಪ್ರವಾಸದ ಬಟ್ಟಲು

ಪ್ರವಾಸದ ಬಟ್ಟಲಿನಲ್ಲಿ ಅದೆಷ್ಟು ನೆನಪುಗಳು
ಉಂಡಷ್ಟು ಹಸಿವು ತಣಿಯದ
ಮೃಷ್ಟಾನ್ನ ಭೋಜನದಂತೆ
ರಸನಿಮಿಷಗಳ ಭಾವ
ಆಹಾ.. ಅದೆಷ್ಟು ಸುಂದರ ಸುಮಧುರ
ಹಾರುವ ಹಕ್ಕಿಯಾಗಿ
ಈಜುವ ಮೀನಾಗಿ
ತೇಲುವ ಕೆಂದಾವರೆಯಾಗಿ
ಮನ ಗಾಳಿಪಟವಾಗಿ ಹಾರುತ್ತಾ
ಸಂತಸದ ಸೂತ್ರವ ಹಿಡಿದಿತ್ತು ಹೃದಯ

ಇತಿಹಾಸದ ಒಳಹೊಕ್ಕು
ಕೆತ್ತನೆಗಳ ಚಿತ್ತಾರದಿ
ಬಿತ್ತರವಾಗುವ ಸವಿಸ್ತಾರ
ಪುರಾಣ ಕಥೆಗೆ ಸಾಕ್ಷ್ಯವೆಂಬಂತೆ
ಮಂದಿರಗಳ ಸುಂದರ ಸೊಬಗು
ಅಯೋಧ್ಯೆ ಶ್ರೀರಾಮ ಮಂದಿರ
ಹಿಂದೂ ಭಕ್ತರ ಸುಂದರ ತಾಣ
ಸಂಕಟ ವಿಮುಕ್ತಿಗೆ
ಅದೆಷ್ಟು ಶಿರಚ್ಛೇದನದಿ
ದಹನವಾಯಿತು ಬದುಕಿನ ಕ್ಲೇಶ
ಪಾಪ ಪುಣ್ಯಗಳ ಹೊರೆ ಹೊತ್ತ
ಕಾಶಿಯ ಸುಂದರ ದೇವಮಂದಿರ
ನದಿನೀರ ಸೊಬಗ ನಾಚಿಸಿ
ಬೆರಗಾಗಿಸಿದ ಸುಂದರ ತಾಣ
ಕೆತ್ತನೆಗಳ ಆಗರ
ಸ್ವರ್ಗವೇ ಧರೆಗಿಳಿದು
ಅಮೃತಪಾನದಿ ಮಿಂದೆದ್ದು
ನವರಾಗ ಮಿಡಿದ ಮನ ಪ್ರಫುಲ್ಲವಾಗಿಹುದು
ನೋವುಗಳ ಕಾಶಿಯಲ್ಲಿ ಕಳಚಿ
ಗಂಗಾರತಿಯ ದಿವ್ಯ ದೀವಿಗೆ ಬೆಳಕಲ್ಲಿ
ಮನದ ಕತ್ತಲೆಗೆ ಸ್ಫುರಣ ಹಚ್ಚಿ
ಹೊತ್ತು ಸಾಗಿಸುವ ಮಧುರ ನೆನಪುಗಳ
ಮೌನದಿ ಮಲಗಿದ
ನಂದಿನಿ ಕಿವಿಯಲ್ಲಿ ಪಿಸುಗುಟ್ಟಿದ ಮಾತಿಗೆ
ಅದೆಷ್ಟು ನಗುವ ಸೂಸಿ
ನಮ್ಮ ಬೇನೆಗೆ ಬಿಕ್ಕಿಹಳು
ಅರಿಯಲಾರೆವು ನಾವು
ನನಸಾಗಿಸುವಳೆಂಬ ಭರವಸೆಯ
ಬುತ್ತಿ ಹೊತ್ತು ಮನಸ ಹಗುರವಾಗಿಸುವ
ಪ್ರವಾಸ ತಾಣ ಮೈಮನ ಪ್ರಫುಲ್ಲವಾಗಿಸಿರೆ
ಹೃದಯದಿ ನಲಿವಿನ ನವಚೈತನ್ಯಕ್ಕೆ
ಬುನಾದಿಯಾದ ಮನಗಳೆಷ್ಟು..
ಒಡಹುಟ್ಟಿ ಬೆಳೆಯಲಿಲ್ಲ
ಬಾಲ್ಯದ ಸ್ನೇಹಿತರಲ್ಲ ಜಾತಿ ಭೇದ
ವಯಸಿನಂತರ ಬದಿಗಿಟ್ಟು
ಮನ ಬೆರೆತು ಸಂತಸದ ಕ್ಷಣ ಉಣಿಸಿ
ಹಗುರವಾಗಿಸಿತು ಮನದ ಬಟ್ಟಲ
ನವಬದುಕಿನ ಬಿತ್ತನೆಗೆ ಹದಗೊಳಿಸಿತು
ಸಂತಸದ ಸಾರ ಅನುಭಗಳ ಅನುಭಾವದಿಂದ…

ವಿಮಲಾರುಣ ಪಡ್ಡoಬೈಲ್