ಮಹಿಳಾ ಸಂಗಾತಿ
ಡಾ.ಯಲ್ಲಮ್ಮ ಕೆ.
ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಅಸ್ಮಿತೆ :
ಲಲಿತ ಪ್ರಬಂಧ

‘ಯತ್ರ ನಾರ್ಯಸ್ತು ಪೂಜ್ಯಂತೆ
ರಮಂತೇ ತತ್ರ ದೇವತಾ: |
ಯತ್ರತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ |
ಸನಾತನ ಧರ್ಮವಾದ ಹಿಂದು ಧರ್ಮದಲ್ಲಿ, ಭಾರತೀಯ ಸಮಾಜದಲ್ಲಿ ಸ್ತ್ರೀಯರಿಗೆ ಅತ್ಯುನ್ನತ ಸ್ಥಾನಮಾನವಿದೆ. ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿ, ನೆಲೆಸುತ್ತಾರೆ, ಸ್ತ್ರೀಯರನ್ನು ಎಲ್ಲಿ ಅವಮಾನ/ಅಪಮಾನ ಗೊಳಿಸಲಾಗುತ್ತದೋ ಅಲ್ಲಿ ನಾವು ಮಾಡಿದ ಎಲ್ಲ ಕಾರ್ಯಗಳು ವ್ಯರ್ಥವಾಗುತ್ತವೆ’ ಎಂದು ಮನು ತನ್ನ ಸ್ಮೃತಿಯಲ್ಲಿ ತಿಳಿಸಿದ್ದಾನೆ. ಸ್ತ್ರೀ ಎಂದರೆ..? ‘ವಿಚಿತ್ರ ಭಾವನಾಕಲಾಪಗಳ ಒಟ್ಟು ಗೂಡಿಸಿದ ಮೊತ್ತವೇ ಸ್ತ್ರೀ ಎಂದು ಹೇಳಬಹುದು. ಅಂತಲೇ ಋಷಿ ಮೂಲ, ನದೀ ಮೂಲ, ಹೆಣ್ಣಿನ ಮೂಲವನ್ನರಸಿ ಹೋಗಬಾರದು ಎಂಬುದು ಜನಪ್ರಿಯ ಗಾದೆಮಾತು.
ಹೆಣ್ಣೆಂದರೆ..? ಆದಿಶಕ್ತಿಯ ಅವತಾರ ರೂಪಿಣಿ, ನಮ್ಮನ್ನೆಲ್ಲ ಹೊತ್ತು, ಪೂರೆಯುವವಳು, ತ್ಯಾಗಮೂರ್ತಿ, ಸಹನೆ ಶೀಲೆ, ಸಂಯಮೆ, ಪ್ರೀತಿ, ಮಮತೆ, ವಾತ್ಸಲ್ಯಮಯಿ, ತಾಳ್ಮೆಯ ಪ್ರತಿರೂಪವೆಂದೇ ಭೂದೇವಿಗೆ ಹೋಲಿಸಲಾಗಿದೆ. ಅಂತಲೇ-‘ಭಾರತ ಜನನಿಯ ತನುಜಾತೆ ಜಯ ಹೇ ಕರ್ಣಾಟಕ ಮಾತೆ’ (ಭಾರತಾಂಬೆಯ ಹೆಮ್ಮೆಯ ಪುತ್ರಿ ಕರ್ಣಾಟಕ ಮಾತೆ, ತಾಯಿ ಭುವನೇಶ್ವರಿ ಎಂದು ರಾಷ್ಟ್ರಕವಿ ಕೆ.ವಿ. ಪುಟ್ಟಪ್ಪನವರು ದೇಶ/ನಾಡ ಪ್ರೇಮವನ್ನು, ಅದರಲ್ಲಿಯೂ ಮುಖ್ಯವಾಗಿ ಕನ್ನಡ ನಾಡು-ನುಡಿಯ, ರಸ-ಋಷಿ, ಮುನಿವರ್ಯರು, ಜೀವನದಿಗಳ ಬಗ್ಗೆ, ಈ ಮಂಣಿನ ಕಣ ಕಣದಲ್ಲೂ ಹೆಣ್ಣಿನ ಮೇಲಿನ ಪ್ರೀತಿ, ವಿಶ್ವಾಸ, ಆದರಾತಿಥ್ಯವಿರುವುದನ್ನು ನಮ್ಮ ಸಂಸ್ಕೃತಿಯ ಪ್ರತೀಕವಾಗಿ ನಾಡಗೀತೆಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.
‘ಭರತ ಬುವಿಯಲ್ಲಿಂದು ಸರ್ವಶಕ್ತರಾದ ಮುಕ್ಕೋಟಿ ದೇವತೆಗಳು ಇಂದು ದೇವಸ್ಥಾನಗಳ ಗರ್ಭಗುಡಿಯಲ್ಲಿ ಬಂಧಿಯಾಗಿರುವುದು ವಿಧಿ ವಿಪರ್ಯಾಸ’ ಎಂಬಂತೆ ಹೆಣ್ಣು ಪೂಜ್ಯಳು, ಗೌರವಿಸಬೇಕು ಎಂದ್ಹೇಳಿದ ಮನುವೇ ಮತ್ತೊಂದೆಡೆ ತನ್ನ ಸ್ಮೃತಿಯಲ್ಲಿ ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಉಲ್ಲೇಖಿಸಿದ್ದಾನೆ, ಸ್ತ್ರೀಯು ಸ್ವಾತಂತ್ರ್ಯಕ್ಕೆ ಅನರ್ಹಳು ಎಂದು ಹೆಣ್ಣು ಎಳೆತನದಲ್ಲಿ ತಂದೆ-ತಾಯಿಗಳ, ಯೌವನದಲ್ಲಿ ಗಂಡನ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿರಬೇಕು ಎಂದು ಸೂಚಿಸುತ್ತಾನೆ. ಆ ಮೂಲಕ ಹೆಣ್ಣನ್ನು ಗೃಹ ಬಂಧನದಲ್ಲಿಡಲಾಗಿದೆ ಮನು ಸ್ತ್ರೀ ವಿರೋಧಿ ಎನ್ನುವುದಕ್ಕಿಂತ; ‘ಆರ್ಥಿಕ ಸ್ವಾತಂತ್ರ್ಯ ಎಂಬುದು ಹೆಣ್ಣಿಗೆ ಅತಿ ಮುಖ್ಯ ಅಂಶಗಳಲ್ಲೊಂದು ಮತ್ತು ಅದು ಅಷ್ಟೇ ಅಪಾಯಕಾರಿಯಾದದ್ದು’ ಎಂದು ಸೂಚ್ಯವಾಗಿ ನೀಡಿದ್ದಾನೆ ಎಂದು ಭಾವಿಸಬಹುದು.
‘ಹೆಣ್ಣಿಗಾಗಿ ಸತ್ತವರು ಕೋಟಿ
ಮಣ್ಣಿಗಾಗಿ ಸತ್ತವರು ಕೋಟಿ
ಹೊನ್ನಿಗಾಗಿ ಸತ್ತವರು ಕೋಟಿ ಗುಹೇಶ್ವರಾ..|
ನಿಮಗಾಗಿ ಸತ್ತವರನಾರನೂ ಕಾಣೆ’
ಎಂದು ಅಲ್ಲಮಪ್ರಭುದೇವರು ತಮ್ಮ ಬೆಡಗಿನ ವಚನವೊಂದರಲ್ಲಿ ಹೇಳುತ್ತಾರೆ. ಹೆಣ್ಣನ್ನು ಈ ಬುವಿಗೆ ಹೋಲಿಸಲಾಗಿದೆ, ಬುವಿಯ ಒಡಲಲ್ಲಿ ಹೊನ್ನು, ಮಣ್ಣು, ಏನೆಲ್ಲವೂ ಅಡಗಿದೆ. ಈ ಕಾರಣವಾಗಿಯೇ ರಾಮಾಯಣ, ಮಹಾಭಾರತ ನಡೆದದ್ದು, ನಮ್ಮನ್ನಾಳಿದ ಆಳರಸರೆಲ್ಲರೂ ಕೂಡ ರಾಜ್ಯಾಧಿಕಾರ, ಧನಕನಕಾದಿಗಳಿಗಾಗಿ, ‘ ಹೆಣ್ಣನ್ನು ಕೂಡ ಒಂದು ಭೋಗದ ಸಂಪತ್ತು ಎಂದು ಬಗೆದು’ ಅವುಗಳಿಗಾಗಿ ಹೋರಾಡಿ ಮಣ್ಣುಗೂಡಿ ಇತಿಹಾಸ ಸೇರಿದ್ದನ್ನು ನಾವು ನೋಡ ಬಹುದಾಗಿದೆ.
ಬೇರೆಯವರ ಮೇಲೆ ಅವಲಂಬಿತವಾಗಿರದೇ ತನ್ನ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ಮಹಿಳೆ ಇಂದು ಸಾಹಸವನ್ನು ಪಡುತ್ತಿದ್ದಾಳೆ. ಹೀಗಾಗಿ ಇಂತಹ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ಸಮಾಜ ನಮ್ಮದಾಗಬೇಕು. ಹೆಣ್ಣಾಗಿ ಹುಟ್ಟಿರುವುದೇ ಒಂದು ಮಹಾಸೌಭಾಗ್ಯ ಮತ್ತು ಮಹಾಶಕ್ತಿ. ಹೀಗಾಗಿ ಅದನ್ನು ನಾವು ಸಂತಸದಿಂದ ನಾವು ಸಂಭ್ರಮಿಸೋಣ. ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
ಡಾ.ಯಲ್ಲಮ್ಮ ಕೆ
