ಮಹಿಳಾ ದಿನ – ಶಾರು

ಮುಳ್ಳು ಗಿಡಗಂಟಿಗಳಲಿ ಬರಿ ಪ್ರಶ್ನೆಗಳ ಜಾಡು/
ಮುಗಿಯದ ದಾರಿಯಲಿ ಉತ್ತರ ಗೊಂದಲಗಳ ಗೂಡು/

ಪಾಚಿ ಗಟ್ಟಿದ ನೆಲಕೆ ಆರದ ಅರಿವಿರದ ನೋವು/
ಜಾರುತಿರುವ ಸಂಬಂಧಗಳಲಿ ಅವಯವಗಳ ಸಾವು/

ಅಂತರಂಗಕಿದು ಆಳದ ಅರಿವಿರದ ತಾರುಮಾರು/
ಬರಿ ಹೂಳು ತುಂಬಿದೆ ಆಳದೆಲ್ಲೆಲ್ಲ ನೋವಿನ ಕಾರುಬಾರು/

ಬೆಚ್ಚಗಿನ ನೆನಪಿಗು ಚಳಿಯ ಜಾಡಲಿ ಸಿಗದ ಉತ್ತರ ನೂರು/
ಸದ್ದಿಲದೆ ಮುರಿಯುತಿದೆ ಮನದಲಿ ಪ್ರಶ್ನೆಯ ಎಲುಬು ಚೂರು ಚೂರು/

ತರ ತರದ ಪ್ರಶ್ನೆಗೆ ಮುಚ್ಚಿದೆ ನಂಬಿಕೆ ಮುಖವಾಡ/
ಬಿಂಕದಲಿ ಬೀಗುತಿದೆ ಪ್ರಶ್ನೆ ಸಿಗದ ಉತ್ತರದ ದಡ/

ಹೂಳ ತೆಗೆಯದ ಹೊರತು ಕಾಣದು ಉತ್ತರದ ಬಿಂಬ/
ತಿಳಿಯದು ಅಂತರಾಳದಲಿ ಪ್ರಶ್ನೆಗಳ ಪ್ರತಿಬಿಂಬ/

ಅರಿಯಲಾರದ ಪ್ರಶ್ನೆಗಳ ಸತ್ಯ ಹುಚ್ಚು ಸಂಕಲ್ಪ/
ಅರಿತ ಮೇಲು ಮರುಳು ಉತ್ತರ ಹೆಚ್ಚು ವಿಕಲ್ಪ/

ಒಂಟಿ ಪಯಣಕಿದೆ ನೂರೆಂಟು ಪ್ರಶ್ನೆಗಳ ಅಂಟು/
ದುಃಸ್ಪಪ್ನದಲು ಎಚ್ಚರವಿರದ ಇರುಳ ಉತ್ತರದ ನಂಟು/

ನೋವ ಹೊಳೆಗೆ ಹೆಚ್ಚು ಪ್ರಶ್ನೆಗಳ ಹರಿವು/
ಉತ್ತರ ಸಿಗದ ಏಕಾಂಗಿ ಮನಕದು ಬರಿ ನೋವು/

ಅರಿವಿರದ ಉತ್ತರಗಳಿಗೆಲ್ಲ ಪ್ರಶ್ನೆಗಳ ಬಸಿರ ಮಾಸು/
ಸಿಗಬಹುದೇನೋ ಹಡೆಯುವಿಕೆಯಲಿ
ಸಾಂತ್ವಾನದ ಕೂಸು?/


Leave a Reply

Back To Top