ಹೆಣ್ಣನ್ನು ಗೌರವಿಸಿ

ಹೆಣ್ಣನ್ನು ಪೂಜಿಸಿ ಗೌರವಿಸಿದರೆ
ದೇವತೆಗಳು ನೆಲೆಸುವರಂತೆ
ಸಂಸ್ಕೃತ ಶ್ಲೋಕವು ಎಂದಿಗೂ ಪ್ರಸ್ತುತವಲ್ಲವೆ
ಕಾರ್ಯೆಷು ದಾಸಿ ಎನುವರು
ಸಕಲ ಕಾರ್ಯ ಮಾಡುವಳು
ದಾಸಿಯಂತೆ ಪತಿಯ ಬೆಂಗಾವ ಲಾಗಿರುವಳು
ಅವಳಿಗೂ ಒಂದಿಷ್ಟು ಕರುಣೆ ತೋರಿಸಿ
ಕರುಣೇಷು ಮಂತ್ರಿಯಾಗುವಳು
ವ್ಯವಹಾರದಲ್ಲಿ ಸಲಹೆ ನೀಡುವಳು
ಧೈರ್ಯ ಗುಂದದೆ ಹುರಿದುಂಬಿಸುವಳು
ಅವಳಿಗೂ ಒಂದಿಷ್ಟು ಸಾಂತ್ವನ ತೋರಿಸಿ
ರೂಪೇಷು ಲಕ್ಷ್ಮಿ ಎನುವರು
ಮಹಾಲಕ್ಷ್ಮೀಯಾಗಿ ಮನೆ ಮನ ಬೆಳಗುವಳು
ಸಿರಿ ಸಮೃದ್ಧಿಯ ಉಕ್ಕಿಸುವಳು
ಅವಳಿಗೂ ಒಂದಿಷ್ಟು ಕರುಣೆ ತೋರಿಸಿ
ಶಯನೇಶು ರಂಭ ಎನುವರು
ಅವನ ಕಾಮತೃಷೆ ತಣಿಸುವಳು
ಮೋಹವನ್ನು ಮರೆಸುವಳು
ಕೊಡಿ ಅವಳಿಗೂ ಒಂದಿಷ್ಟು ಪ್ರೀತಿಯನು
ಭೋಜ್ಯೇಷು ಮಾತ ಎನುವರು
ಅನ್ನಪೂರ್ಣೇ ಆಗಿ ಹಸಿವು ನೀಗಿಸುವಳು
ಹೊತ್ತು ಹೊತ್ತಿಗೆ ತುತ್ತನು ಮಾಡುವಳು
ಅವಳನೂ ಒಂದಿಷ್ಟು ವಿಚಾರಿಸಿ ಕ್ಷೇಮವನ್ನು
ಕ್ಷಮಯಾಧರಿತ್ರಿಯಾಗಿರುವಳು
ಎಲ್ಲರ ಪಾಪ ಕರ್ಮದ ಮೂಟೆ ಹೊರುವಳು
ಎಲ್ಲವನ್ನೂ ಸಹಿಸುವಳು
ಅವಳಿಗೂ ಒಂದಿಷ್ಟು ಸಹಾನುಭೂತಿ ತೋರಿಸಿ
ಡಾ. ಲೀಲಾ ಗುರುರಾಜ್