ಸ್ತ್ರೀ ಎಂದರೆ ಅಷ್ಟೇ ಸಾಕೇ

ಆಕಾಶವಾಣಿಯಲ್ಲಿ ಅಶ್ವಥ್ ರವರ ಮಧುರ ಕಂಠದಿಂದ “ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಎಂದರೆ ಅಷ್ಟೇ ಸಾಕೇ”
ಎಂಬ ಭಾವಗೀತೆ ಭಾವ ತುಂಬಿ ಹೊರಹೊಮ್ಮುತ್ತಿತ್ತು. ಹೌದಲ್ಲವೇ,…ಇಳೆಯಷ್ಟು ಭಾರ ಹೊತ್ತಿರುವ ಮಹಿಳೆಗೆ ಹತ್ತಾರು ಹೆಸರುಗಳು! ಅವಳ ಹೆಸರು ಮಾನಿನಿ ಅರಿತು ನಡೆವಳು ಎಲ್ಲರ ಒಳದನಿ
ಮತ್ತೊಂದು ಹೆಸರು ವನಿತೆ
ನೋವ ನುಂಗಿ ನಗುವ ದೇವತೆ.
ಕಾರ್ಯೇಶು ದಾಸಿ
ಕರುಣೇಶು ಮಂತ್ರಿ
ಭೋಜೇಶು ಮಾತ
ರೂಪೇಶು ಲಕ್ಷ್ಮಿ
ಶಯನೇಶು ರಂಭಾ
ಕ್ಷಮೆಯಾ ಧರಿತ್ರಿ
ಎಂಬ ಬೆಲೆಕಟ್ಟಲಾಗದ ನುಡಿಗಳು ನೂರಕ್ಕೆ ನೂರು ಸತ್ಯವಾದ ಮಾತುಗಳು.
ಹೆಣ್ಣೊಂದು ಹುಟ್ಟಿದರೆ ಮನೆ ತಣ್ಣಗಿರುತ್ತದೆ ಎಂಬ ಮಾತಿನಂತೆ, ಹೆಣ್ಣು
ಹುಟ್ಟಿದoದಿನಿಂದಲೇ ಆ ಮನೆಯ ನಂದಾದೀಪವಾಗುತ್ತಾಳೆ. ಹೆಣ್ಣಿಗೆ ಪಾಲನೆ, ಪೋಷಣೆ,
ಆರೈಕೆ, ಕರುಣೆ ಎಲ್ಲವೂ ದೈವೀ ದತ್ತವಾಗಿ ಸಮ್ಮಿಳಿತವಾಗಿರುವಂತೆ ಮನೆಯಲ್ಲಿರುವ ಒಂದೆರಡು ವರ್ಷದ ಪುಟ್ಟ ಮಗುವಿನ ಚಟುವಟಿಕೆಗಳನ್ನು ಗಮನಿಸಿದಾಗ ಗೋಚರಿಸುತ್ತದೆ.ಆ ಮಗು ತನ್ನ ಬಳಿ ಇರುವ ಪುಟ್ಟ ಬೊಂಬೆಯನ್ನು ತಟ್ಟಿ ಮಲಗಿಸುವುದು, ತುತ್ತಿಡಲು ಪ್ರಯತ್ನಿಸುವುದು, ಅದಕ್ಕೆ ಸ್ನಾನ ಮಾಡಿಸುವುದು ಬಟ್ಟೆ ಹಾಕುವುದು ಅದನ್ನು ಮುದ್ದಿಸುವುದು ಹೀಗೆ ಅನೇಕ ಕೆಲಸಗಳಲ್ಲಿ ನಿರತಳಾಗಿ ತನ್ನ ಪಾಡಿಗೆ ತಾನು ಆಟವಾಡುತ್ತಿರುತ್ತದೆ. ಮಗಳು ತಾಯಿಗೆ ತಾಯಿ, ಮಮತಾಮಯಿ,
ಹೆಣ್ಣಿರದ ಮನೆ
ಏನಿದ್ದರೂ ಕಡಿಮೆನೇ…
ಹೆಣ್ಣೆಂದರೆ ಬೆಳದಿಂಗಳ ಮುಗಿಲು
ತುಂಬುವಳು ತಾಯಿಯ ಮಡಿಲು
ಅವಳಿರಲು ಇರಲಾರದು ದಿಗಿಲು
ಅಪ್ಪನಿಗೂ ಆಗುವಳು ಹೆಗಲು.
ಹೆಣ್ಣೊಂದು ಮಗಳಾಗಿ, ಸಹೋದರಿಯಾಗಿ, ಅತ್ತಿಗೆ ,ನಾದಿನಿಯಾಗಿ, ತಾಯಿಯಾಗಿ ಅತ್ತೆಯಾಗಿ ,ಅಜ್ಜಿಯಾಗಿ ಅನೇಕ ಪಾತ್ರಗಳನ್ನು ವಹಿಸುವ ತಾಳ್ಮೆಯ ಪ್ರತೀಕವೇ ಆಗಿರುತ್ತಾಳೆ. ಹಿಂದೆಂದಿಗಿಂತಲೂ ಇಂದು
ಸ್ತ್ರೀ ತನ್ನನ್ನು ಎಲ್ಲ ರಂಗದಲ್ಲೂ ಗುರುತಿಸಿಕೊಂಡಿದ್ದಾಳೆ.ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ.
ಹುಟ್ಟಿದ ಹೆಣ್ಣೊಂದು
ಬಟ್ಟ ಬಯಲಲಿ ಬೆಳೆದು
ಬೆಟ್ಟದಷ್ಟು ಕಷ್ಟವ ತಡೆದು
ಮೆಟ್ಟಿದ ಮನೆಯ ಪೊರೆದು
ಬದುಕ ಹಸನಾಗಿಸುವುದು.
ಹೆಣ್ಣಿಗೆ ಸಿಗುವ ಸ್ಥಾನಮಾನ ಗೌರವ ಪ್ರೀತ್ಯಾಧಾರಗಳು ಮಹಿಳಾ ದಿನದ ಆಚರಣೆಗಳಿಗೆ ಸೀಮಿತವಾಗದೆ ನಿರಂತರವಾಗಿರಲಿ.
ಹೆಣ್ಣೆಂದರೆ ಚೇತನ
ಈ ಜಗಕೆಲ್ಲ ಪ್ರೇರಣ
ನೀನೊಂದು ಪ್ರಶಾಂತ ನಂದಾದೀಪ
ಈ ಜಗವ ಪೊರೆವ ದೇವತಾ ಸ್ವರೂಪ
ನೀನೆಂದಿಗೂ ಅಲ್ಲ ಅಬಲೆ
ಸದಾ ಸಬಲೆ ಪ್ರಬಲೆ
ಅಸಹಾಯಕಳಲ್ಲ ಈ ತರುಣಿ
ಅಸಮಾನ್ಯ ಕರ್ಮಣಿ
ಕೊಡವಿ ನಿತ್ಯದ ಗೊಡವೆ
ಸದಾ ಕಾರ್ಯೋನ್ಮುಖಳಾಗಿ ದುಡಿವೆ
ನಿನ್ನಲ್ಲಡಗಿಹುದು ಅದ್ಭುತ ಶಕ್ತಿ
ಕಣ ಕಣವೂ ನಿನ್ನದೇ ಸ್ಪೂರ್ತಿ
ನೀ ಕಲಿತರೆ ನಾಲ್ಕಕ್ಷರ
ನಿನ್ನವರಾಗುವರು ಸಾಕ್ಷರ
ಸೃಷ್ಟಿ ದೃಷ್ಟಿ ಸಮಷ್ಟಿ ನೀ ಮಹಿಳೆ
ಅದಕ್ಕೆಂದೇ ನಿನ್ನ ಹೆಸರು ಪ್ರಕೃತಿ ಇಳೆ
ತರುಣಿ ನೀನಾಗಿರುವೆ ಎಲ್ಲರ ಕಣ್ಮಣಿ
ಈ ಜಗವೇ ಎಂದೆಂದೂ ನಿನಗೆ ಚಿರಋಣಿ.
ಶೋಭಾ ಮಲ್ಲಿಕಾರ್ಜುನ್