ಸಮಾಜ ಸಂಗಾತಿ
ರಾಜು ಪವಾರ್
“ರಸ್ತೆಯಲ್ಲಿ ಚಲ್ಲುವ ಕಾಂಕ್ರೀಟ್ ಗೆ ಪರಿಹಾರ”

ರಸ್ತೆಗಳ ಗುಣಮಟ್ಟ ಸುಧಾರಿಸುವಲ್ಲಿ ನಾವಿನ್ನೂ ಕಲಿಯುತ್ತಿರುವಾಗ ಇರುವ ರಸ್ತೆಗಳನ್ನು ಕಾಪಾಡಿಕೊಂಡು ಹೋಗುವುದು ಮುಖ್ಯವಾಗುತ್ತದೆ. ರಾಷ್ಟ್ರೀಯ,ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವಿಶಿಷ್ಟ ಸಾಧನೆಗೆ ಬೆಂಗಳೂರಿನ ಹೆಸರು ಕೇಳಿಬರುವಂತೆ, ವಾಹನಗಳ ಟ್ರಾಫಿಕ್ ಜಾಮ್ ನಿಂದ ಕೂಡ ಹೆಸರು ಕೇಳಿ ಬರುತ್ತದೆ. ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ರಸ್ತೆಯ ಅನುಪಾತದ ಅಸಂಬಂಧ ಕಾರಣಗಳಿಂದ ಟ್ರಾಫಿಕ್ ಜಾಮ್ ಆದರೆ ರಸ್ತೆಯ ಗುಣಮಟ್ಟ ಕೂಡ ಈ ಜಾಮ್ ಗಳಿಗೆ ಕಾರಣವಾಗುತ್ತದೆ. ಅವೈಜ್ಞಾನಿಕ ರಸ್ತೆಯ ಅಗೆತ, ಅಗೆದ ರಸ್ತೆಯ ಮರು ದುರಸ್ತಿಯ ದುರಾವಸ್ಥೆಯಿಂದ ರಸ್ತೆಗಳು ಇಕ್ಕಟ್ಟಾಗಿ ವಾಹನ ಸವಾರರ ಪ್ರಾಣ ಹಿಂಡುತ್ತಿವೆ. ರಸ್ತೆಗಳ ದುರವಸ್ಥೆಗಳ ಜೊತೆ ವಾಹನ ಸವಾರರ ಬೇಜವಾಬ್ದಾರಿ ಚಾಲನೆ ಕೂಡ ರಸ್ತೆಗಳ ಗುಣಮಟ್ಟ ಕುಸಿತ ಹಾಗೂ ಟ್ರಾಫಿಕ್ ಜಾಮ್ ಗಳಿಗೆ ಇತರ ಕಾರಣಗಳಾಗಿವೆ. ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನ ಓಡಿಸುವುದು, ಸುಖಾ ಸುಮ್ಮನೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು ಹೀಗೆ ಹಲವು ಬೆಜವಾಬ್ದಾರೀಗಳು.
ಬೆಂಗಳೂರಿನ ರಸ್ತೆ ಗುಂಡಿಗಳ ಗಂಡಾಂತರ ಕೇಳುವರಿಲ್ಲ. ವಾಹನ ಸವಾರರು ಇವುಗಳ ಜೊತೆ ಸವಾರಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ ಎನ್ನಬಹುದೇನೋ.!? ಈ ತರ ರಸ್ತೆ ಗುಂಡಿಗಳ ಗಂಡಾಂತರ ಬೆಂಗಳೂರು ಮಾತ್ರವಲ್ಲ ರಾಜ್ಯದ,ದೇಶದ ಇತರ ನಗರ,ಊರುಗಳಲ್ಲಿಯೂ ಇದೆ. ಇಲ್ಲಿನ ಸವಾರರ ಗೋಳು ಕೂಡ ಇದೇ ತರದ್ದು. ರಸ್ತೆಗಳಲ್ಲಿ ವೇಗನಿಯಂತ್ರಿಸಲು ರಸ್ತೆ ಉಬ್ಬುಗಳನ್ನು ನಿರ್ಮಿಸಿದರೆ ಅದಕ್ಕೆ ಸರಿಯಾದ, ವೈಜ್ಞಾನಿಕವಾಗಿ ಬಣ್ಣ ಬಳಿಯದಿರುವುದು ಅಪಘಾತಕ್ಕೆ ಕಾರಣಗಳಾಗಿವೆ. ಆಕಸ್ಮಿಕವಾಗಿ ಎದುರಾಗುವ ಈ ರಸ್ತೆ ಉಬ್ಬುಗಳು ಸವಾರರನ್ನು ವಿಚಲಿತಗೊಳಿಸಿ ಅಪಘಾತಕ್ಕೆ ಎಡೆಮಾಡಿಕೊಡುತ್ತವೆ. ಇವೆಲ್ಲ ರಸ್ತೆ ನಿರ್ಮಾಣದಲ್ಲಿ ಆಗುವ ಆಚಾತುರ್ಯಗಳದರೆ, ಜನರ ಬೆಜವಾಬ್ದಾರಿತನಗಳು ಕರ್ತವ್ಯಗಳ ಪಾಲನೆಯಲ್ಲಿ ಲೋಪಗಳು ರಸ್ತೆಯ ಗುಣಮಟ್ಟ ಹದಗೆಡಲು ಕಾರಣವಾಗುತ್ತವೆ. ಎಲ್ಲೆಂದರಲ್ಲಿ ಎಸೆಯುವ ಕಸ, ಕಲ್ಲು, ಇನ್ನಿತರ ವಸ್ತುಗಳು, ಸರಕು ಸಾಗಣಿಕೆಯ ವಾಹನಗಳಿಂದ ಸೋರಿಕೆಯಾಗುವ ವಸ್ತುಗಳು ರಸ್ತೆಯನ್ನು ವಿಕಾರಗೊಳಿಸುತ್ತವೆ. ಕಟ್ಟಡ ಸಮಗ್ರಿಗಳ ಸಾಗಣಿಕೆಯಲ್ಲಿ ಮಿತಿಮೀರಿ ಹೇರುವ ಮರಳು,ಜಲ್ಲಿ ಕಲ್ಲು, ಇತರ ವಸ್ತುಗಳು ರಸ್ತೆಯ ಮಧ್ಯದಲ್ಲೇ ನೋಡದಂತೆ ಹೋಗುವ ಚಾಲಕರು ತಮ್ಮ ಜವಾಬ್ದಾರಿ ಮರೆಯುತ್ತಾರೆ. ಬೇರೆಯವರು ಮಾಡುವ ಅಚಾತುರ್ಯಗಳಿಗೆ ಕಣ್ಣು ಮತ್ತು ಕಿವಿಗಳನ್ನು ಮುಚ್ಚಿಕೊಳ್ಳುತ್ತೇವೆ.
ಕಟ್ಟಡ ನಿರ್ಮಾಣಗಳಲ್ಲಿನ ಸಂಶೋಧನೆಗಳಿಂದ ಯಂತ್ರಗಳ ಸಹಾಯದಿಂದ ಕಾಂಕ್ರೀಟ್ ಮಿಶ್ರಣ ಸಾಧ್ಯವಾಗಿ ಮಾನವ ಶ್ರಮ ಕಾಡಿತಗೊಳಿಸಿದಂತೂ ನಿಜ. ಶ್ರಮ ಕಾಡಿತಗೊಳಿಸುವದರ ಜೊತೆ ವೇಗ ಕೂಡ ಹೆಚ್ಚಾಗಿ ನಿರ್ಮಾಣಗಳು ವೇಗ ಪಡೆಯುತ್ತಿವೆ. ಈ ಕಾಂಕ್ರೀಟ್ ಮಿಶ್ರಣ ಯಂತ್ರಗಳು ಅಗಾಧ ಪ್ರಮಾಣದಲ್ಲಿ ಮಿಶ್ರಣ ಮಾಡಿ ಮಾನವ ಶ್ರಮದ ದಿನಗಟ್ಟಲೆಯ ಕೆಲಸ ಕೆಲ ತಾಸುಗಳಲ್ಲಿ ಮುಗಿಸುತ್ತವೆ. ಈ ಯಂತ್ರಗಳು ರಸ್ತೆಯಲ್ಲಿ ಹೋಗುವಾಗ ಅಳಿದುಳಿದ ಕಾಂಕ್ರೀಟ್ ಮಿಶ್ರಣ ಚೆಲ್ಲಿ ರಸ್ತೆಯ ಅಂಡಗೆಡಿಸುವುದರ ಜೊತೆಗೆ ರಸ್ತೆ ಉಬ್ಬುಗಳಾಗಿ ಪರಿವರ್ತನೆಯಾಗುತ್ತದೆ. ಹಸಿಯಾದ ಈ ಮಿಶ್ರಣ ರಸ್ತೆ ಉಬ್ಬುಗಳಾದರೆ ಒಣಗಿದ ಮಿಶ್ರಣ ರಸ್ತೆ ತುಂಬೆಲ್ಲ ಜೆಲ್ಲಿ ಕಲ್ಲುಗಳ ರಾಶಿಯಾಗಿ ಧೂಳು ಜನರಿಗೆ ತೊಂದರೆಕೊಡಲು ಶುರುಮಾಡುತ್ತವೆ. ಇದು ದ್ವಿಚಕ್ರ ವಾಹನ ಸವಾರರಿಗೆ ಬಹು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಈ ಮಿಶ್ರಣ ಚೆಲ್ಲಿ ನೈಸರ್ಗಿಕ ಸಂಪನ್ಮೂಲದ ಅಪವ್ಯಯ ಆಗಿ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗುತ್ತದೆ. ಈ ಅಪವ್ಯಯ ರಸ್ತೆಯ ಅಂದ ಹಾಗೂ ವಾಹನ ಸವಾರರ ಸುರಕ್ಷತೆಗೆ ಯಾರೂ ಕೂಡ ಪರಿಹಾರ ಹೂಡುವ ಗೋಜಿಗೆ ಹೋಗಿಲ್ಲ ಎನ್ನುವುದು ವಿಪರ್ಯಾಸ.
ಇದಕ್ಕೆ ಸರಳಾದ ಪರಿಹಾರ ಕೂಡ ಇದೆ. ಇದನ್ನು ಅಳವಡಿಸಿಕೊಳ್ಳುವ ಮನಸ್ಸು ಅಲ್ಲ, ದೊಡ್ಡ ಮನಸ್ಸು ಇರಬೇಕಷ್ಟೆ. ಕಾಂಕ್ರೀಟ್ ಮಿಶ್ರಣ ಹೊರ ಸುರಿಯುವ ಅರ್ಧ ಕತ್ತರಿಸಿದ ಕೊಳವೆಯಾಕಾರದ ತುದಿಗೆ ಒಂದು ಡಬ್ಬ ಇಲ್ಲವೇ ಬಕೇಟ್ ನ್ನು ಕಟ್ಟುವುದರಿಂದ ರಸ್ತೆಯಲ್ಲಿ ಸುರಿಯುವ ಕಾಂಕ್ರೀಟ್ ದಬ್ಬಕ್ಕೆ ಸುರಿಯುತ್ತದೆ. ನಂತರ ಇದನ್ನು ಮರು ಬಳಕೆ ಮಾಡಿ ಸಮಾಪನ್ಮೂಲದ ಅಪವ್ಯಯ ತಡೆಯುವುದರ ಜೊತೆಗೆ ರಸ್ತೆಯ ಅಂದ, ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸಬಹುದು. ಈ ಸರಳ ಉಪಾಯ ಅಳವಡಿಸಿಕೊಂಡಿ ತಮ್ಮ ಜವಾಬ್ದಾರಿಯನ್ನು ಈ ಯಂತ್ರಗಳ ಚಾಲಕರು ಹಾಗೂ ಮಾಲೀಕರು ತೋರಬೇಕು. ಸಂವಿಧಾನ ಬದ್ಧ ಹಕ್ಕುಗಳನ್ನು ಪ್ರಶ್ನಿಸುವ ನಾವುಗಳು ನಮ್ಮ ಕರ್ತವ್ಯಗಳನ್ನು ಮರೆಯುತ್ತೇವೆ. ಮಾನವೀಯ ಮೌಲ್ಯಗಳನ್ನು ಮರೆತಾಗ ಕಾನೂನಿನ ಮೂಲಕ ಅವುಗಳನ್ನು ಮರುಸ್ಥಾಪಿಸಬೇಕಾಗುತ್ತದೆ. ಈ ಬಗ್ಗೆ ಸಂಬಂಧ ಪಟ್ಟವರು ಯೋಚಿಸಿ ಈ ಪರಿಹಾರ ಅಳವಡಿಸಿದರೆ ಉಪಕರವಾದೀತು; ಈ ಲೇಖನದ ಆಶಯ ಕೂಡ ಸಾರ್ಥಕವಾದೀತು. ಮನಸ್ಸು ಮಾಡಬೇಕಷ್ಟೆ.
ರಾಜು ಪವಾರ್

ತುಂಬಾ ಒಳ್ಳೆಯ ಸಲಹೆ.