ಸಮಾಜ ಸಂಗಾತಿ
ಹನಿ ಬಿಂದು
“ಪರನಿಂದಕರ ನಿರ್ಲಕ್ಷಿಸಿ ನಡೆಯುತ್ತಿರಿ”

ಸಮಾಜವೇ ಹೀಗೆ, ನಮ್ಮ ಪರಿಚಯ ಇರಲಿ, ಇಲ್ಲದೆ ಇರಲಿ, ಇಲ್ಲಿ ಎಲ್ಲರನ್ನೂ ಕೆಳಗಿನ ದೃಷ್ಟಿಯಲ್ಲಿ ನೋಡುತ್ತಾ, ಅಣಕವಾಡಿ ನಮ್ಮ ಮಾನಸಿಕ ಶಾಂತಿ ಕದಡುವವರು ಇದ್ದೇ ಇದ್ದಾರೆ. ಅವರಿಗೆ ಬೇರೆಯವರನ್ನು ಹಗುರ ಮಾಡಿ ಮಾತನಾಡಿದಾಗ ಮಾತ್ರ ನೆಮ್ಮದಿ ಸಿಗುತ್ತದೆ ಇರಬೇಕು. ಕುಟುಂಬ, ಸಂಬಂಧದ ಒಳಗೆ ಇರುವ ಜನ ಡಿಗ್ರೇಡ್ ಮಾಡುವುದು ಸರ್ವೇ ಸಾಮಾನ್ಯ ಬಿಡಿ. ಪರಿಚಯವೇ ಇಲ್ಲದ ಕೆಲವರು ಅದಕ್ಕoತ ಹುಟ್ಟಿರುವವರೂ ಇದ್ದಾರೆ. ಅವರು ಎಷ್ಟೇ ದೊಡ್ಡ ವ್ಯಕ್ತಿತ್ವದ ಜನರನ್ನೂ ಹೀಯಾಳಿಸುವುದು ಬಿಟ್ಟಿಲ್ಲ. ಇಂತಹ ಮಾನಸಿಕ ಯೋಚನೆಗಳು ಮಾನಸಿಕ ಅಸ್ವಸ್ಥರಿಗೆ ಮಾತ್ರ ಬರುವುದೋ ಏನೋ. ಅಂಥವರನ್ನು ಅತೃಪ್ತ ಆತ್ಮಗಳು ಎನ್ನಬಹುದೇ?
ಭಾರತದಲ್ಲಂತೂ ಇಂತಹ ಅತೃಪ್ತ ಆತ್ಮಗಳು ಕೋಟಿ ಸಂಖ್ಯೆಯಲ್ಲಿ ಇವೆ. ಹೊನ್ನಿಗಾಗಿ, ಹೆಣ್ಣಿಗಾಗಿ, ಪ್ರೀತಿಗಾಗಿ, ಧನಕ್ಕಾಗಿ, ಚಿನ್ನಕ್ಕಾಗಿ, ಸೀರೆಗಾಗಿ, ತಿನ್ನಲಿಕ್ಕಾಗಿ, ಮಾತನಾಡಲು, ಇತರರ ಜೊತೆ ತಮ್ಮ ನೋವು ಕಕ್ಕಿಕೊಳ್ಳಲು, ಪರರನ್ನು ಹಗುರ ಮಾಡಿ ಮಾತನಾಡಲು ಇವರು ಕಾಯ್ತಾ ಇರ್ತಾರೆ.
ಸಾಧನೆ ಮಾಡಲು ಹೊರಟವನ ಮುಂದೆ ಗುರಿ ಇರುವಾಗ ಅಡೆತಡೆಗಳು ಸರ್ವೇ ಸಾಮಾನ್ಯ. ಅಂತಹ ಸಮಯದಲ್ಲಿ ಇವೆಲ್ಲ , ಇವರನ್ನೆಲ್ಲಾ ದಾರಿಯಲ್ಲಿ ಇರುವ ಮುಳ್ಳು ಅಂದುಕೊಂಡು ಎತ್ತಿ ಬದಿಗೆ ಬಿಸಾಕಿ ಮುನ್ನಡೆದರೆ ಮಾತ್ರ ಬದುಕಿನ ಗುರಿ ತಲುಪಲು ಸಾಧ್ಯ. ಹೀಗೆ ಮಾಡಿದರಲ್ಲ ಎಂದು ಚಿಂತೆ ಮಾಡಿ ಕುಳಿತರೆ ನಮ್ಮನ್ನು ಗುರಿಯ ಬದಲು ಇವರು ಚಿತೆಗೆ ತಳ್ಳಿ ಬಿಡುತ್ತಾರೆ.
ಕ್ಯಾರೆ ಮಾಡದೆ ಬದುಕಲು ರಾಜಕಾರಿಣಿ, ಸಿನೆಮಾ ನಟರು, ಸೆಲೆಬ್ರಿಟಿಗಳು ಅನ್ನಿಸಿಕೊಂಡವರು ಇವರನ್ನು ನೋಡಿ ನಾವು ಕಲಿಯಬೇಕಾದ್ದು ಬಹಳ ಇದೆ. ಜೈಲಿಗೆ ಹೋಗಿ ಬಂದರೂ, ಸಮಾಜದ ಸಾಮಾಜಿಕ ಜಾಲ ಮಾಧ್ಯಮಗಳು ತಮ್ಮ ಬಗ್ಗೆ ಏನು ಬಿತ್ತರಿಸಿದರೂ, ಪತ್ರಿಕೆಗಳು ಏನೇ ಬರೆದುಕೊಂಡರೂ ಅವರು ಅದನ್ನು ನೋಡಿಯೂ ನೋಡದ ಹಾಗೆ ತಮ್ಮದೇ ಲೋಕದಲ್ಲಿ ಇರುತ್ತಾರೆ. ಇಂತವರ ಬಗ್ಗೆ ಇಂತಹ ಕೇರ್ಲೆಸ್ ಬದುಕು ಇದ್ದರೆ ಮಾತ್ರ ಬದುಕಿನ ಗುರಿ ತಲುಪಬಹುದು. ನೀರನ್ನು ಫಿಲ್ಟರ್ ಮಾಡಿ ಕುಡಿಯುವ ಹಾಗೆ, ಹಣ್ಣು ತರಕಾರಿಗಳನ್ನು ಉಪ್ಪು ನೀರಿನಲ್ಲಿ ತೊಳೆದು ಶುಚಿಗೊಳಿಸುವ ಹಾಗೆ ಇವರನ್ನು ಆಚೆ ಬಿಸಾಕಿ ನಮ್ಮನ್ನು ನಾವು ಶುಚಿಗೊಳಿಸಿಕೊಂಡು ಮುಂದೆ ಹೋಗಬೇಕು ಅಷ್ಟೇ. ಇದಕ್ಕೆಲ್ಲ ತಲೆಕೆಡಿಸಿಕೊಂಡರೆ ನಮ್ಮ ತಲೆಗೆ ನಾವೇ ಚಪ್ಪಡಿ ಕಲ್ಲು ಹಾಕಿಕೊಂಡ ಹಾಗೆ ಆಗುತ್ತದೆ ಅಷ್ಟೇ.

ಅಂದ ಹಾಗೆ ಈ ರೀತಿಯ ಜನ ನಮ್ಮ ಮುಂದೆ ಇರಲ್ಲ, ನಮ್ಮ ಬೆನ್ನ ಹಿಂದೆ ನಮ್ಮ ಬಗ್ಗೆ ಮಾತನಾಡುತ್ತಾ, ಗಾಸಿಪ್ ಹರಡುತ್ತಾ ಇರುತ್ತಾರೆ ಎನ್ನುವುದು ಸತ್ಯ. ಏಕೆಂದರೆ ಅವರು ನಮ್ಮಿಂದ ಮುಂದೆ ಹೋಗಲು ಸಾಧ್ಯ ಇಲ್ಲ ಆದ ಕಾರಣ ಹಿಂದಿನಿಂದ ಮಾತು ಅಷ್ಟೇ. ಮುಂದೆ ಸಾಗಿದವ, ಸಾಗಬೇಕು ಎಂಬ ಹಠ ಇದ್ದವ ಪರರ ಬಗ್ಗೆ ಆಲೋಚನೆ ಮಾಡದೆ ತನ್ನ ದಾರಿಯಲ್ಲೇ ಮುನ್ನಡೆಯುತ್ತಾ ಮತ್ತೇನೋ ಹೊಸ ಸಾಧನೆಗೆ ಅಡಿ ಇಟ್ಟಿರುತ್ತಾನೆ, ಅಷ್ಟೇ!
ನಾವು ಸಾಧಕರಾಗಬೇಕೋ, ಇತರರ ಸಾಧನೆಯ ಹಿಂದೆ ನಿಂತು ಅವರ ಪ್ರೇರಕರಾಗಬೇಕೋ, ಅಥವಾ ಅವರ ಬೆನ್ನ ಹಿಂದೆ ನಿಂತು ಏನೂ ಮಾಡಲು ಸಾಧ್ಯ ಆಗದೆ ಬೊಗಳುವ ನಾಯಿಗಳಾಗಬೇಕೋ ಅದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಬೇಕಾದವರು ನಾವೇ. ನಮ್ಮ ಬದುಕು ನಮ್ಮ ಕೈಯಲ್ಲಿದೆ. ಒಳ್ಳೆಯದು ಕೆಟ್ಟದು ಎರಡೂ ನಮ್ಮ ಆಲೋಚನೆ , ಕಾರ್ಯ ಮತ್ತು ನಮ್ಮ ನಾಲಗೆಯಲ್ಲಿ ಇವೆ. ಬಳಸಿಕೊಳ್ಳುವವರು, ಬೆಳೆಸುವವರು, ಕುಲಗೆಡಿಸುವವರು ಪರರಲ್ಲ, ನಾವೇ. ನಮ್ಮ ಬದುಕಿನ ಸೂತ್ರ ಅಪ್ಪ ಮಾಡಿಟ್ಟ ಆಸ್ತಿಯಲ್ಲಿ ಅಲ್ಲ, ನಮ್ಮ ದುಡಿಮೆಯಲ್ಲಿ ಸಿಗುವ ಖುಷಿಯಲ್ಲಿ ಇದೆ ಅಲ್ಲವೇ? ನೀವೇನಂತೀರಿ?
ಹನಿ ಬಿಂದು
