ನಾಟಕ ವಿಮರ್ಶೆ,ಮೊಬೈಲ್ ಅವಾಂತರಗಳ ವಿಡಂಬನಾ ನಾಟಕ-ಗೊರೂರು ಅನಂತರಾಜು,

ನಾಟಕದಲ್ಲೇ ಹುಟ್ಟಿ ನಾಟಕದಲ್ಲಿ ಬೆಳೆದು ನಾಟಕವೇ ಜೀವನವಾಗಿರುವಾಗ ನನಗೆ ನಾಟಕ ಬೀದಿಗಿಳಿಯಿತೇ..? ಎಂದು ಸಂಕಟವಾಯ್ತು ನಿಜ. ಆದರೆ ಹೆಜ್ಜೆ ಗೆಜ್ಜೆಯ ಬೀದಿ ನಾಟಕ ವೀಕ್ಷಿಸಿದಾಗ ಇದೊಂದು ಬಯಸದೇ ಬಂದ ಭಾಗ್ಯ ಎನಿಸಿತು. ಜನಮನ ರಂಜಿಸಲು ಭವ್ಯ ರಂಗಸಜ್ಜಿಕೆ ಬೇಡ ಕೇವಲ ಬೀದಿಯೇ ಸಾಕು ಎಂಬುದನ್ನು ಮೈಸೂರು ರಮಾನಂದ್ ದೃಡಪಡಿಸಿದ್ದಾರೆ … ಈ ಮಾತುಗಳನ್ನು ಬಹಳ ಹಿಂದೆಯೇ ವರನಟ ಡಾ. ರಾಜಕುಮಾರ್ ನುಡಿದಿದ್ದಾರೆ.
ಪ್ರಭಾಕರ ಜೋಶಿ ಸಂಪಾದಕತ್ವದಲ್ಲಿ ಮೈಸೂರು ರಮಾನಂದ್ ಅಭಿನಂದನ ಗ್ರಂಥ ರಂಗಾನ0ದದಲ್ಲಿ ಈ ನುಡಿಗಳನ್ನು ನಟ, ನಾಟಕಕಾರರಾದ ಶ್ರೀಕಂಠ ಗುಂಡಪ್ಪ ದಾಖಲಿಸಿದ್ದಾರೆ. ಮೈಸೂರು ರಮಾನಂದ್ ಅವರ ತಂಡ ಬೆಂಗಳೂರು ಮಲ್ಲೇಶ್ವರಂನ ಸೇವಾ ಸದನದಲ್ಲಿ ಪ್ರದರ್ಶಿಸಿದ ಮೊಬೈಲಾಯಣ ನಾಟಕ ವೀಕ್ಷಿಸಿದಾಗ ರಮಾನಂದ್ ಈ ನಾಟಕವನ್ನು ಜನಜಾಗೃತಿಯ ಬೀದಿ ನಾಟಕಕ್ಕಾಗಿಯೇ ಬರೆದಿದ್ದಾರೆ ಎನಿಸಿತು. ಮೊಬೈಲ್ ಕ್ರಾಂತಿಯಿ೦ದ ಅನುಕೂಲವಾಗಿರುವಂತೆ ಕಿರಿಕಿರಿಯೂ ವಿಪರೀತವಾಗಿದೆ.  ಬೀದಿಯಲ್ಲಿ ನಡೆವಾಗಲೂ ವಾಹನ ಚಲಾವಣೆ ಮಾಡುವಾಗಲೂ ಮೊಬೈಲ್‌ಯನ್ನು  ಕಿವಿಗೆ ಹಿಡಿದು ಯಮಲೋಕದ ಹಾದಿಯನ್ನು ಹಿಡಿಯುವವರ ಕುರಿತಾದ  ನಾಟಕದ ಕಥೆಯು ಹಾಸ್ಯ ವಿಡಂಬನಾತ್ಮಕವಾಗಿ ರೂಪು ತೆಳೆದಿದೆ.


ಸತ್ತು ಯಮಲೋಕ ಸೇರಿದವರ ವಿಚಾರಣೆ ಯಮನ ಆಸ್ಥಾನದಲ್ಲಿ ಪ್ರಾರಂಭವಾಗುಲ್ಲಿ೦ದ ನಾಟಕ ಹಾಸ್ಯದ ಧಾಟಿಯಲ್ಲೇ ಆರಂಭವಾಗುತ್ತದೆ. ಚಿತ್ರಗುಪ್ತನ ದಾಖಲೆಯಂತೆ ವಿಚಾರಣೆಗೆ ಒಳಪಡುವವರು ಮೊಬೈಲ್ ಮತ್ತು ಶೆಲ್ಫಿ ಸನ್ನಿಯಿಂದ ನಿಧನರಾದವರು.  ನಾವು ದಿನನಿತ್ಯ ಪತ್ರಿಕೆಗಳಲ್ಲಿ ಓದುವ ಸುದ್ದಿಯೇ ನಾಟಕಕ್ಕೆ ಸರಕ್ಕಾಗಿದೆ. ಇಂದಿನ ದಿನಮಾನಗಳಲ್ಲಿ ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡಿಕೊಂಡು  ಅಪಘಾತಗಳಿಗೆ ತುತ್ತಾಗುತ್ತಿರುವ ಘಟನೆಗಳು ಸರ್ವೆಸಾಮಾನ್ಯವಾಗಿದೆ ಮನುಷ್ಯ ಸಂಬಂಧವನ್ನು ಹೆಚ್ಚಿಸುವಲ್ಲಿ ಮೊಬೈಲ್ ಸಹಕಾರಿಯಾಗಿರುವುದನ್ನು ಮರೆಯಲಾಗುವುದಿಲ್ಲ. ನಾಟಕದಲ್ಲಿ ಇಬ್ಬರು ವ್ಯಕ್ತಿಗಳು ಸ್ವರ್ಗ ಮತ್ತು ನರಕದಲ್ಲಿ ಟಾಕ್ ಟೈಮ್ ಪರಿಭಾಷೆಯಲ್ಲಿ ತಮ್ಮ ಸಾವಿನ ಕುರಿತಂತೆ ಮಾತನಾಡಿಕೊಳ್ಳುವುದು ವಿಪರ‍್ಯಾಸವಾಗಿದೆ. ಯಮಲೋಕದಲ್ಲಿ ಚಿತ್ರಗುಪ್ತನ ಬಳಿಯಲ್ಲೂ ಮೊಬೈಲ್ ಇರುವುದನ್ನು ಕಂಡು ಸ್ವಯಂ ಯಮನೇ ಬೆರಗಾಗುತ್ತಾನೆ.  ಯಮಲೋಕದಲ್ಲಿ ನಿಂತು  ಭೂಲೋಕವನ್ನು ವೀಕ್ಷಿಸುತ್ತಾ  ವಾಹನ ಓಡಿಸುವಾಗ ಮೊಬೈಲ್‌ನಲ್ಲಿ ಮಾತಾಡಿಕೊಂಡು ಅಪಘಾತಕ್ಕೆ ತುತ್ತಾಗುವವರು ಸೆಲ್ಪಿ ತೆಗೆಯುತ್ತಾ ಬೆಟ್ಟದಿಂದ ಜಾರಿಬಿದ್ದು ಸಾಯುವವರನ್ನು  ಕಂಡು ಯಮ ವಿಕಟ ನಗೆ ನಗುತ್ತಾನೆ.  ಮುಂದೆ ಕಥೆ ಯಮಲೋಕದಿಂದ  ಭೂಲೋಕಕ್ಕೆ ಶಿಪ್ಟ್ ಆಗುತ್ತದೆ. ಇಲ್ಲಿಯ ಒಂದು ಒಟ್ಟು ಕುಟುಂಬವೊಂದರಲ್ಲಿ ಅಜ್ಜ, ಅಪ್ಪ ಮತ್ತು ಮಗ ಈ ಮೂರು ತಲೆಮಾರಿನ ಕೊಂಡಿಯ ನಡುವೆ  ಮೊಬೈಲ್ ವಸ್ತು ವಿಷಯವೇ ಪ್ರಧಾನವಾಗಿದೆ. ನಾಟಕದಲ್ಲಿ ಘಟಿಸುವ ದೃಶ್ಯಾವಳಿಗಳು  ನಮ್ಮ ಬೆನ್ನನ್ನು ನಾವೇ ತಿರುಗಿ ನೋಡಿಕೊಳ್ಳುವಂತಿದೆ.  ಮಾತಿನಲ್ಲಿ ಲವಲವಿಕೆ ಇದೆ. ತಾತನಿಗೆ ಆಪರೇಷನ್ ಮಾಡುತ್ತಲೇ  ಮೊಬೈಲ್  ಅಟೆಂಡ್ ಮಾಡುವ  ವೈದ್ಯರು ಮಾಡಿದ ಅವಾಂತರ  ನನ್ನ (ಗೊರೂರು ಅನಂತರಾಜು) ಒಂದು ಹನಿಗವನ ನೆನಪಿಸುತ್ತದೆ.

ಆಪರೇಷನ್ ಮಾಡಿ
ಹೊಲಿಯುವಾಗ ಹೊಟ್ಟೆಯಲ್ಲಿ
ಸೂಜಿ ಮರೆತಿದ್ದ ವೈದ್ಯರು
ಸೂಜಿ ತೆಗೆಯುವಾಗ ಕತ್ತರಿ ಮರೆತಿದ್ದರು

ಅಂತೆಯೇ ನಾಟಕದಲ್ಲಿ ವೈದ್ಯರು ವೈಬ್ರೇಷನ್ ಮೋಡ್ನಲ್ಲಿ ಮೊಬೈಲ್‌ನ್ನು ತಾತನ ಹೊಟ್ಟೆಯಲ್ಲೇ ಇಟ್ಟು ಹೊಲಿದುಬಿಡುವ ದೃಶ್ಯ ರಂಜನೀಯವಾಗಿದೆ. ಇದೊಂದು ಜನಜಾಗೃತಿಯ ನಾಟಕ. ಹಾಗೆಂದು ಇದು ಯಾವುದೋ  ಮೊಬೈಲ್ ಕಂಪನಿಯ ಜಾಹೀರಾತಲ್ಲ. ಆದರೂ  ಬೀದಿ ನಾಟಕವಾಗಿ ಪ್ರದರ್ಶಿಸಬಹುದಾದ ಈ ನಾಟಕ ರಮಾನಂದ್‌ರ ಇನ್ನಿತರೇ ರಚನೆಗಳಾದ  ಕುಡಿತಾಯಣ, ಪರಿಸರಾಯಣ, ಟ್ರಾಪಿಕಾಯಣ, ಎಚ್ಚರ ತಪ್ಪಿದರೆ..? ಈ ಮಾದರಿಯದೇ ಆಗಿದೆ.  ಮೊಬೈಲ್ ಬಳಸುವಾಗ ಎಚ್ಚರ ತಪ್ಪಿದರೆ ಪರಲೋಕ ಯಾತ್ರೆ ಎಂಬುದನ್ನು ಸೂಚ್ಯವಾಗಿ ಹಾಸ್ಯದ ಭಾಷೆಯಲ್ಲೇ ತಿಳಿಸುತ್ತದೆ. ಅಂತೆಯೇ  ಥಿಯೇಟರ್‌ನಲ್ಲಿ ಪ್ರದರ್ಶಿಸುವಾಗ ಮೇಕಪ್, ರಂಗಸಜ್ಜಿಕೆ, ವಸ್ತ್ರಾಲಂಕಾರ, ಸಂಗೀತ ಇತ್ಯಾದಿ ಎಲ್ಲಾ ಅಂಶಗಳಿಗೂ ಪ್ರಾಮುಖ್ಯತೆ ನೀಡಿ ಪ್ರದರ್ಶನಗೊಂಡ  ನಾಟಕ ಪ್ರೇಕ್ಷಕರಿಗೆ  ಮನರಂಜನೆ ನೀಡುವಲ್ಲಿ ಸಾಫಲ್ಯ ಸಾಧಿಸಿದೆ.


Leave a Reply

Back To Top