ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
ನಿರ್ಲಿಪ್ತದೊಳಗೆ ಮುಕ್ತಿಕಂಡಿತು ನೆನಪು…..

ನೆನಪುಗಳೇಕೋ ನೆನಪಾಗುತಿದೇ…
ಮತ್ತೆ ಮತ್ತೆ ನೆನಪಾದಾಗ….
ದಿನ ಕಳೆದಂತೆಲ್ಲ ನೆನಪಾಗುತಿದೆ
ಅರ್ಧ ಆಯುಷ್ಯದಲ್ಲಿ ಮರೆಯಾಗಿಹೋದ
ಪದಗಳಿಗೂ ನಿಲುಕದ ಕ್ಷಣಗಳು…
ಬಾಳ ಪಯಣದ ವಿಶ್ರಾಂತಿತೋಟದಲ್ಲಿ
ಮತ್ತೆ ಮತ್ತೆ ಬಂದು ಅಪ್ಪಳಿಸುತ್ತಿದೆ
ಭೋರ್ಗರೆವ ಕಡಲ ನಡುವೆ
ನಿರ್ಲಿಪ್ತವಾಗಿ ಸ್ಪರ್ಶಿಸುವ ಅಲೆಗಳಂತೆ……
ಬೆಳದಿಂಗಳಿಲ್ಲದ ರಾತ್ರಿಯ ನಡುವೆ
ಮಿಂಚಿ ಮರೆಯಾಗುತ್ತಿದೆ ನಕ್ಷತ್ರದಂತೆ…
ಬದುಕಿನ ಏಳು ಬೀಳುಗಳ ನಡುವೆ
ಹಾದು ಹೋಗಿದೆ ರಹದಾರಿ
ಮತ್ತೆ ಮತ್ತೆ ಒಂದಾನೊಂದು ಕಾಲಕ್ಕೆ ಜಾರಿ
ಮೆಲುಕು ಹಾಕುತಲಿದೆ
ಕೊಟ್ಟಿಗೆಯಲ್ಲಿ ಮಲಗಿಹ ಹಸುವಿನಂತೆ……
ಹೆದ್ದಾರಿಯೋ ಕಾಲುದಾರಿಯೋ
ಪಯಣಿಸಿತು ಬದುಕು ತನ್ನಿಷ್ಟದಂತೆ
ತನ್ನಿಚ್ಚೆಯೋ… ಪರರಿಷ್ಟವೋ
ಅರಿಯದ ಮನವು ಕಾಣುತಲಿತ್ತು
ಕಾಲಚಕ್ರದ ಅಡಿಗೆ ಹುದುಗಿ ಕುಳಿತು
ಮುಂಗಾರಿನ ಹನಿಗಳಿಗೆ ಮೊಳಕೆಯೊಡೆದು
ಅರಳಿ ನಿಲ್ಲುವ ಡೇರೆ ಹೂವಿನಂತೆ……
ಸಂಭ್ರಮದ ದಿನಗಳ ನಡುವೆ
ಕರಗಿತು ವಯಸ್ಸು ಮೇಣದ ಕೆಳಗೆ
ದಿನವದು ಉರುಳಿತು ಸದ್ದಿಲ್ಲದಂತೆ
ಕೈ ತುತ್ತು ನೀಡಿ, ಕೈ ಹಿಡಿದು ನಡೆಸಿದಾತ
ಜೊತೆಯಾಗಿ ಕೈ ಹಿಡಿದ ಸಾಂಗಿತ್ಯದ ಒಡನಾಟ
ಎಲ್ಲವೂ ಜಾರಿ ಹೋಗುತಿರುವುದೇನೋ
ಮುಂಜಾನೆಯ ಇಬ್ಬನಿ ರವಿಕಂಡು ಮರೆಯಾದಂತೆ….
ಬಲು ದೂರ ಸಾಗಿದ ಬಾಳ ಪಯಣದ ಹಾದಿ
ನೆನಪುಗಳ ಮೆಲುಕಿನೊಳಗೆ ಹೊಸದಿಗಂತಕ್ಕೆ ನಾಂದಿ
ಅದೆಷ್ಟೋ ಸುಂದರವಾದರೂ ನೆನಪು
ರವಿಕಾಣದೆ ಧರೆಗುರುಳಿರುವ
ಬಾನಚಂದ್ರಗೆ ತಲೆಬಾಗಿ ನಮಿಸಿ
ಇಳಿ ಸಂಜೆಯ ಸುಂದರಿಯಾಗಿ ಉರುಳುವ
ಪರಿಜಾತದಂತೆ……..
ಬಾಳ ಸಂಜೆಯ ಈ ತಂಪು ತೀರದಲಿ
ಕಂಪ ಸುಸೂತಲಿದೆ ಸಂಜೆ ಮಲ್ಲಿಗೆ ಇಂದು
ಮತ್ತೆ ನೆನಪುಗಳ ಮಲ್ಲಿಗೆಯ ಪೋಣಿಸಿ
ಮುಡಿಗೆ ಸಿಂಗರಿಸುವಾಸೆ ಇಂದು…
ಮುಪ್ಪಿನೆದುರು ನಿಂತ ಬದುಕು
ನೆನಪಿಸುತಲಿದೆ ಮರಳಿ ಹೂವಿನ ತೇರಿನಲಿ
ತಿರುವಿರದ ದಾರಿಯಲ್ಲಿ ಸಾಗುವ ಬಹುದೂರದ
ನೆನಪು…………..
ಅಕ್ಷತಾ ಜಗದೀಶ.
Beautiful