“ನಮ್ಮಪ್ಪಯ್ಯ… ಚಂದಾವರ ಪೇಸ್ತು…”ಪ್ರೇಮಾ ಟಿ ಎಂ ಆರ್ ಅವರ ನೆನಪುಗಳ ಯಾತ್ರೆ

 ಸಣ್ಣಣ್ಣ ಕರೆ ಮಾಡಿದ್ದ. ನಾನು ಪುಟ್ಟ ಪೇಟಿಕೋಟಿನ ಹುಡುಗಿಯಂತೆ ಒಳಗೊಳಗೇ  ಹಿಗ್ಗುತ್ತ, “ನಿಂಗೊತ್ತಾ ನಾನು ಹೊಸ ವರ್ಷ ಹಾಗೂ ಕ್ರಿಸ್ಮಸ್ ಆಚರಣೆಯ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಹೋಗ್ತಿದ್ದೇನೆ” ಅಂದೆ. ನಾ ಹೇಳಿದ ರೀತಿ ಹೇಗಿತ್ತು ಅಂದ್ರೆ, “ನೋಡೋ ನನ್ಕೈಲಿ ಎಟ್ಟೊಂದು ಪೆಪ್ಪರ್ಮಿಠಾಯಿ” ಅಂದಂಗಿತ್ತು  “ಅರೇ…ಹೌದೇನೆ ಮಗ್ವೆ? ಗ್ರೇಟಲ್ಲೆ, ಹೋಗ್ಬಾ” ಎಂದ ನನಗಿಂತ ಹೆಚ್ಚು ಖುಷಿಯಲ್ಲಿ, ನನ್ನದೇ ಭಾಷೆಯಲ್ಲಿ..  ತವರಿನಲ್ಲಿ ನಿಸ್ವಾರ್ಥವಾಗಿ ಅಮ್ಮನಷ್ಟೇ ವಾತ್ಸಲ್ಯ ತೋರುವ ಜೀವ. ಅವನಲ್ಲಿ ಏನಾದ್ರು ಹಂಚ್ಕೊಳ್ತ್ತೇನೆ ಅಂದ್ರೆ ಅಮ್ಮನ್ಜೊತೆ ಹಚ್ಚಿಕೊಂಡಷ್ಟು ಖುಷಿ..  ಮಾತಾಡ್ತಾ ಕ್ಷಣ ಮೌನವಾದ ಅಣ್ಣ.. “ಎಂತ ಆಯ್ತಾ? ಸುಮ್ಮನಾಗ್ಬಿಟ್ಯಲ್ಲಾ ನೀನು.. ಚಂದಾರ ಪೇಸ್ತು ನೆನ್ಪಾಯ್ತಾ?” ಅಂದೆ.. “ಹಾಂ, ನಿಂಗ್ ನೆನ್ಪದ್ಯಾ? ಪೇಸ್ತಿನ ದಿನ ನಮ್ಮ ಶಾಲೆಗೆ ರಜಾ ಕೊಡ್ತಾ ಇದ್ರು…” ಅಂದ. “ಹೌದಲ್ವಾ? ನಾನು ಮರ್ತೇ ಬಿಟ್ಟಿದ್ದೆ ಮಾರಾಯ…” ಅಂದೆ. ಚಂದಾವರ ಪೇಸ್ತಿನ ದಿನ ಕುಮ್ಟಾ ಟು ಚಂದಾವರ್ ರೂಟಲ್ಲಿ ಇರುವೆ ಹರಿದಂತೆ ಕಾರುಗಳ ಸಾಲು.. ಗೋವಾ ಬೊಂಬೈ ಮಂಗ್ಳೂರು ಕೇರಳಾ ಹೀಗೆ ಸರಿ ಸುಮಾರು ದೇಶವ್ಯಾಪಿಯಾಗಿ ಜನ ಚಂದಾವರದ ಕಡೆ ಮೊಖ ಮಾಡುತ್ತಿದ್ದ ದಿನ  ಡಿಸೆಂಬರ್ ಮೂರು.. ಚಂದಾವರಕ್ಕೆ ಅಂಟಿಕೊಂಡೇ ಇರುವ ನಮ್ಮೂರು ಕೂಜಳ್ಳಿ.. ಪೇಸ್ತಗೆಂದು ಎಲ್ಲಿಂದಲೇ ಜನ ಬರಲಿ, ನಮ್ಮೂರನ್ನು ದಾಟಿಕೊಂಡೇ ಹೋಗಬೇಕು.. ರಸ್ತೆಯಂಚಿಗಿನ ಶಾಲೆಗೆ ಹೋಗಿ ಬರುವ ಮಕ್ಕಳ ಸುರಕ್ಷತೆಗಾಗಿ ಕೊಡುತ್ತಿದ್ದ ರಜ. ನಮಗೆ ಸಿಕ್ಕಾಪಟ್ಟಿ ಖುಷಿ.. ಸುತ್ತಮುತ್ತಲೂರು ಕೊನಳ್ಳಿ ವಾಲಗಳ್ಳಿ ಕೆಕ್ಕಾರ ಮಾಡಗೇರಿ ಎಲ್ಲ ಕಡೆ ತೇರು ಜಾತ್ರೆ ಬಂಡಿಹಬ್ಬಗಳು ನಡೆಯುತ್ತಿದ್ದವು.. ಛೇ, ಅಷ್ಟು ದೊಡ್ಡ ಊರು ಕೂಜಳ್ಳಿಯಲ್ಲಿ ಇಂತದ್ದೇನಾದ್ರೂ ಒಂದಾದ್ರೂ ಇರೂದ್ ಬೇಡಗವಾ? ನಮ್ಮೆದೆಯ ಕೊರಗು,ಒಂಥರಾ ಬೆಜಾರು. ಅಷ್ಟೇ ಅಲ್ಲ , ಆ ದಿನಗಳಿಗೆಂದು ಕಾದಿಡುವ ರಜವೂ ತಪ್ಪಿ ಹೋಗಿ ಬಿಡುತ್ತದಲ್ಲ ಅನ್ನೋ ಚಿಂತೆ ಬೇರೆ. ಈ ಕೊರತೆಯನ್ನು ಒಂದು ಮಟ್ಟಿಗೆ ನೀಗಿಸಿದ್ದ ಚಂದಾವರ ಪೇಸ್ತು…‌ ಇದೇ ಕಾರಣಕ್ಕೆ ಇರ್ಬಹುದು  ನಮ್ಮಪ್ಪಯ್ಯ ತಪ್ಪದೇ ತನ್ನ ಮಕ್ಳನ್ನು  ಪೇಸ್ತಗೆ ಕರ್ಕೊಂಡು ಹೋಗ್ತಾ ಇದ್ದುದು …
      ಇಬ್ರೂ ನೆನಪಿನ ಕೇಲ್ಬಾನಿ ಕಲಕಿದೆವು…ಒಂದಷ್ಟು ಗಟ್ಟಿ ಅಗಳಿನಂತ ನೆನಪುಗಳು ಮೊಗೆಮೊಗೆದು ನೆನಪಿಗೆ ನುಗ್ಗಿದವು.. ಹಾಂ ದೊಡ್ಮನೆ ಘಟ್ಟದಂಚಿನ ಹಚ್ಚ ಹಸುರಿನ ದಟ್ಟ ಕಾನನದೊಳಗೆ ಹಾಸಿಕೊಂಡ,  ಕುಚಿನಾಡ ಮೂವತ್ತು ಹಳ್ಳಿಯಲ್ಲಿ ಒಂದಾದ, ಕಲ್ವೆ ಚಿಮ್ಮಳ್ಳಿಯೆಂಬ ದೂರದೂರಲ್ಲಿ ಗದ್ದೆ ಬಿಡಾರ ಮಾಡ್ಕೊಂಡು ರೈತಾಬಿಯಾಗಿದ್ದ ಅಪ್ಪ, ಚಂದಾವರದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ನ  ಫೆಸ್ತ್ ದಿವ್ಸ್ , ಐದು ಗಂಟೆಗೆ ಎದ್ದು, ನಸುಗತ್ತಲೆಯಲ್ಲೇ ಕಲ್ವೆ ಚಿಮ್ಮಳ್ಳಿಯಿಂದ ಹೊರಟು, ಸರಿಸುಮಾರು ಐದು ಕಿಲೋ ಮೀಟರು ಕಾಲ್ನಡಿಗೆಯಲ್ಲಿ  ಅಘನಾಶಿನಿಯ ರಭಸದ ಹರಿವಿಗೆ ಕಟ್ಟಿದ ಎರಡೆಳೆಯ ಕಾಲ್ಸಂಕವನ್ನು ಸರ್ಕಸ್ಸು ಮಾಡುತ್ತಲೇ ದಾಟಿ, ಕಾಲ್ದಾರಿಯಂಚಿನ ಮರದಲ್ಲಿ ಬಲಿತ ನೆಲ್ಲಿಕಾಯಿ ಒಂದಷ್ಟು ಹರಿದು ಚೀಲಕ್ಕೆ ತುಂಬಿಕೊಂಡು, ನನ್ಮಗ್ಳಗೆ ನೆಲ್ಲಿಕಾಯೆಂದ್ರೆ ಜೀಂವ ಎಂದು ಮರಗಳೊಂದಿಗೆ ಮಾತಾಡಿ, ಬೆಳಗಿನ ಮೈಚುಚ್ಚುವ ಚಳಿ ತಡೆಯಲು ಹಾರು ನಡಿಗೆಯಲ್ಲಿ ಬೆಳ್ಳನೆಯ ತಿಳಿಮಂಜಿನ ಬಿಳಿಸೆರಗು ಹೊದ್ದ ಹಚ್ಚ ಹಸುರಿನ ಪೃಕೃರ್ತಿಯ ಸೊಬಗಿಗೆ ಮುದಗೊಂಡು, ಬಾಯಿಗೆ ಬಂದ ಯಕ್ಷಗಾನದ ಪದ ಗುನುಗುತ್ತ ,ಅರ್ಧ ಗಂಟೆ ಮೊದಲು  ಬಾಸೊಳ್ಳಿಗೆ ಬಂದು ತಲುಪುತ್ತಿದ್ದ.. ಬಸ್ಟೆಂಡು ಆಥರ ಏನೂ ಇರ್ಲಿಲ್ಲ.. ಬಾಸೊಳ್ಳಿಯ ಕಟ್ಟೆಮನೆ ಸೇಮವ್ವಿಯ ಅಂಗಡಿ ಎದುರಿಗೆ ಬಡಾಳ ಹಾಲ್ಟಿಂಗ್ ಬಸ್ಸು ಬರೋಬ್ಬರಿ ಏಳೂವರೆಗೆ ಬಂದು ಮುಟ್ಟುತ್ತಿದ್ದ ಕಾಲ.. ಮಕ್ಕಳನ್ನು ಒಮ್ಮೆ ಎದೆಗೊತ್ತಿಕೊಳ್ಳುವ ಆತುರದಲ್ಲೇ ಬಸ್ಸು ಹತ್ತುವ ಅಪ್ಪನಿಗೆ ಅಲ್ಲಿ ಬಸ್ಸಲ್ಲಿ ಇರುವವರೆಲ್ಲ ದೋಸ್ತರೇ. “ದೆಪಣ್ಣ ಕೆಳ್ಗ ಹೋತ್ಯೇನಾ…?” ಎಂದು ಮಾತಾಡ್ಸುವ ಎಲ್ಲರಿಗೂ ಒಂದೇ ಉತ್ತರ “ಹೌದಾ, ತುಂಬಾ ದಿನ ಆಯ್ತು, ಮಕ್ಳ ಮೊಖ ನೋಡಿ. ಮಕ್ಳ ನೋಡ್ಕಂಡಿ ಒಂದ್ಗಳ್ಗೆ ಪೇಸ್ತ್ ಗೆ ಕರ್ಕೊಂಡ್ಹೋಗಿ ತಿರ್ಗಾಡ್ಸಕಂಡಿ ಬತ್ತೆ… ಬಸ್ಸಲ್ಲಿರುವ ಹೆಚ್ಚಿನ ಜನ ಪೇಸ್ತ ತಿರ್ಗಾಡ್ಕೊಂಡು, ರಾತ್ರಿಗೆ ಅಮೃತೇಶ್ವರಿ ಮೇಳದ ಆಟ ನೋಡ್ಕೊಂಡು, ಮತ್ತೆ ಮಾರ್ನೇದಿನ ಬೆಳ್ಗಾನ ಬಸ್ಗೆ ಮೇಲಿನ ಊರಿಗೆ ಹೊರಡುವವರೇ. “ಆಟ ನೋಡುಕೆ ಉಳಿತ್ಯೆನಾ?” ಎಂಬ ಪ್ರಶ್ನೆಗೆ “ಎಲ್ಲವಾ ಕುತ್ರಿ ಬಿಚ್ವದು ಅದೆ. ಬಡ್ದ ಹುಲ್ಲು ಪೂರಾ ಕಟ್ಟಾಗ್ಲೆಲ್ಲ. ಇವತ್ಗೆ ಗಾಡಿ ರಜಿ ಆಯ್ತು. ನಾಳಿಗೂ ಹೋಗ್ದಿದ್ರೆ ಹೆಂಗೆ?. ” ಅಪ್ಪನ ಮಾತಿನ ದಾಟಿ ಹೀಗೇ ಸಾಗುತ್ತಿತ್ತು. ಅಪ್ಪನಿಗೆ ಯಕ್ಷಗಾನ ಅಂದ್ರೆ ಪಂಚಪ್ರಾಣ. ಹಾಗಂತ ತನ್ನ ವೃತ್ತಿಗೆ ಧೋಕಾ ಮಾಡಿ  ಶೋಕಿಗೆ ಸಮಯ ಹಾಳು ಮಾಡುವ ಜೀವ ಅಲ್ಲ..
        ಕೂಜಳ್ಳಿ ಕತ್ರಿಯಲ್ಲಿ ಬಸ್  ಇಳಿಯುವ ಅಪ್ಪಯ್ಯ ” ಅರೇ, ದೆಪ ಈಗ ಬಂದ್ಯೆನಾ?” ಎನ್ನುವ ಸರೀಕರೊಡನೆ ಹಾಂ ಹೂಂ ನಲ್ಲೇ ಮಾತು ಮುಗಿಸಿ  ಯಾರೊಡನೆಯೂ ಹೆಚ್ಚು ಮಾತಿಗೆ ನಿಲ್ಲದೇ ಗಣಪ್ತಿ ಭಟ್ರ ಅಂಗ್ಡಿ ಹೊಕ್ಕಿ ಎರಡು ಗೆರೆ ಸಾಬು ತಕಂಡಿ ದಾಪುಗಾಲು ಹಾಕುತ್ತ  ಮನೆಕಡೆ ಸಾಗುತ್ತಾನೆ.. ಅಪ್ಪಯ್ಯ ಬಂದ ಎಂದು ಬೊಬ್ಬೆ ಹೊಡೆಯುತ್ತ ಬಂದು ಗೋತುಕೊಳ್ಳುವ ನಮ್ಮ ತಲೆ ಮೈ ಬೆನ್ನು ತಡವಿ ತನ್ನ ಕಕ್ಕುಲಾತಿ ಹರಿಸಿ, ಹತ್ತಿರ ಕೂಡ್ರಿಸಿಕೊಂಡು  ಅಮ್ಮ ಬಾಳೆಲೆಯಲ್ಲಿ ಕಟ್ಟಿ ಕಳಿಸಿದ ಮೆಂತೆ ಉದ್ದು ಸೇರಿಸಿ ಮಾಡಿದ ಈಗಿನ ಬನ್ಸ ತರ ಉಬ್ಬಿದ ದೋಸೆ ಚಟ್ನಿ ಬಿಚ್ಚಿ ಹಂಚಿಕೊಡುತ್ತಾನೆ. ಮತ್ತೆ ನಿಲ್ಲದೇ ನಮ್ಮ ಬಟ್ಟೆಗಳನ್ನೆಲ್ಲ ರಾಶಿ ಹಾಕಿಕೊಂಡು ಐನೂರೊಂದು ಸಾಬು ಹಾಕಿ ಚೊಕ್ಕವಾಗಿ ತೊಳೆದು ಗಟ್ಟಿ  ಹಿಂಡಿ ಕಾದ ಕಲ್ಲರೆಯ ಮೇಲೆ ಹರವುತ್ತಾನೆ. ದಂಡಿಗೆ ಬಾವಿಯಿಂದ ನೀರು ಸೇದಿ ಅಡ್ಕಲಿಗೆ ಸುರಿದು, ಒಂದಷ್ಟು ಮಡ್ಲು ಸೋಗೆ ಕಾಯಿಸಿಪ್ಪೆ ಹೆಕ್ಕಿತಂದು ನೀರೊಲೆಗೆ ಬೆಂಕಿ ಹಚ್ಚಿ, ನೀರುಕಾಸಿ, ಬೇಗ್ಬೆಗ್ ಮಿಂದ್ಕಣಿ ಮಗ್ನೆ, ಪೇಸ್ತಗೆ ಹೋಗ್ವನಿ ಎಂದು ಗಡಬಡಿಸುತ್ತಾನೆ. ಈಗಿನಂತೆ ತರಹೇವಾರಿ ಬ್ಯೂಟಿ ಸೋಪುಗಳು, ಲಿಕ್ವಿಡ್ ಸೋಪುಗಳ ಹಾವಳಿಯ ಕಾಲವಲ್ಲ. ಸ್ನಾನಕ್ಕೆ ಜಜ್ಜಿದ  ಅಂಟವಾಳದ ಜಡಕು, ಅದಿಲ್ಲದಿದ್ರೆ ಅದೇ ಬಟ್ಟೆ ಒಗೆಯುವ ಐನೂರೊಂದರ ಒಂದುಗೆರೆ ಸೋಪು.. ಅ ದಿನಗಳಲ್ಲಿ ಬಟ್ಟೆ ಸೋಪನ್ನು ಗೆರೆ ಲೆಕ್ಕದಲ್ಲಿ ಮಾರುತ್ತಿದ್ದುದು. ಉಳ್ಳವರು ಹಮಾಮು ಸೋಪು ಕೊಳ್ಳತ್ತಿದ್ದರು. ಅದೂ ಒಂದು ಸೋಪು ಇಷ್ಟೇ ದಿನ ಬರ್ಬೇಕು ಅನ್ನುವ ಕರಾರಿನೊಂದಿಗೆ. ಆ ಕಾಲಕ್ಕೆ ಹಮಾಮು ಸೋಪಿನ ಪರಿಮಳವೆಂದರೆ ಸ್ವರ್ಗ ಸುಖ… ನಮ್ಮಂತವರ ಕೈಗೆಟಕುತ್ತಿರಲಿಲ್ಲ..  ಮಕ್ಕಳು ಮಿಂದು ಮಡಿಯಾಗುವಷ್ಟರಲ್ಲಿ ಅಪ್ಪಯ್ಯನ ಅಡಿಗೆ ರೆಡಿ. ನಿತ್ಯ  ಕಾಯಿ ಮೆಣಸಿನ ತಂಬ್ಳಿಯಲ್ಲೋ, ಇಲ್ಲಾಂದ್ರೆ ಉಳಿಗೆಂಡೆ ಕುದಿಸಿದ ಸಾರಿನಲ್ಲೋ ಹೇಸ್ತಾಹೇಸ್ತಾನೇ ಉಂಡೇಳುತ್ತಿದ್ದ ನಾವು ಅಪ್ಪ ಮಾಡಿದ ಮೀನು ಸಾರಿನಲ್ಲಿ ಮೂಗಿಗೆ ಬರೋತನ್ಕ ಉಂಡು ಬಿಡುತ್ತಿದ್ದೆವು.. ನಾವು ತೃಪ್ತಿಯಾಗುವಷ್ಟು ಉಂಡು ಎದ್ದ ಮೇಲೆ ಅಪ್ಪ ಬಡಿಸಿಕೊಳ್ಳುತ್ತಿದ್ದ.. ಒಂದಷ್ಟು ಉಂಡ ಅಪ್ಪ ಸುಮ್ಮನೆ ಕೂತ್ಕಂಬಂಗಿಲ್ಲ.. ಡಿಸೆಂಬರ್ ತಿಂಗಳಲ್ಲಿ ದಟ್ಟವಾಗುವ ಚಳಿಗೆ ಮಕ್ಳು ಸ್ನಾನ ತಪ್ಪಿಸಿಕೊಂಡು ತರುಗಾಡಿಬಿಟ್ಟರೆ ಅನ್ನೋ ಚಿಂತೆಯಲ್ಲಿ ಇಡೀ ತೋಟ ತಿರುಗಿ ಒಂದಷ್ಟು ಹೆಡಪಂಟಿ ಮಡ್ಲು ಸೋಗೆ ಕಾಯ್ಸಿಪ್ಪೆ ಕೂಳ್ಸಿಪ್ಪೆ ಅಂತ ಒಂದಷ್ಟು ಅಡ್ಕಲ ಒಲೆ ಒಟ್ಟುವ ಸರಕುಗಳನ್ನು ಬಚ್ಲಕೊಟ್ಗೆ ಹೊರ್ಗಿನ ಕಲ್ಲರೆಯ ಮೇಲೆ ರಾಶಿ ಹಾಕುತ್ತಾನೆ.. ಒಂದಷ್ಟು ಕಿಬ್ಬಳ ಗುಡಿಸಿ ಚೊಕ್ಕ ಮಾಡುತ್ತಾನೆ.. ಅಯ್ಓ ಅಪ್ಪಯ್ಯ ಎಷ್ಟೊತ್ತಿಗೆ ಹೊರಡುವದು ಎಂಬ ಉಮ್ಮಳದಲ್ಲಿಯೇ ನಿಂತಲ್ಲಿ ನಿಲ್ಲದೇ ಕೂತಲ್ಲಿ ಕೂರದೇ ಅಪ್ಪನ ಹಿಂದೆ ಮುಂದೆ ಸುತ್ತುವ ನಮ್ಮನ್ನು ಕಂಡು ಒಳಗೊಳಗೇ ನಗುವ ಅಪ್ಪನಿಗೆ ನಮ್ಮ ಮನಸ್ಥಿತಿ ಪೂರ್ಣ ವೇದ್ಯ..  
        ಬಿರುಬಿಸಿಲಲ್ಲಿ ದುಡಿದ ಅಪ್ಪ ನಾಕ್ ಕೊಡಪಾನ ನೀರು ಬೊಸಬೊಸ ಹೊಯ್ಕೊಂಡು ತೊಳೆದ ಬಟ್ಟೆ ಉಟ್ಟು ತಯಾರಾಗಿ ಹೊರಟರೆ, ಕೆಂಪುಬಿಳಿ ಮೈಬಣ್ಣದ, ಗುಂಗುರು ದಟ್ಟ ಕೂದಲಿನ, ಎತ್ತರದ ಆಳು ಅಪ್ಪನ ಆಚೀಚೆಯ ಕೈಹಿಡಿದು ಹೊರಡುವ ನಾವು ಚಕ್ರಾಧಿಪತಿಯ ಉತ್ತರಾಧಿಕಾರಿಗಳಂತೆ  ಬೀಗುತ್ತಿದ್ದೆವು..
        ನೋಡಿದ್ರಾ? ಪೇಸ್ತಿನ ವಿಷಯ  ಹೇಳೋಕೆ ಅಂತ ಬಂದೆ.. ಆದ್ರೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ್ರೂ ಹೇಳ್ಬೇಕಾದದ್ದು ಮಾತ್ರ ಅಲ್ಲೇ ಉಳ್ದು ಹೋಯ್ತು. ಹೊಟ್ಟೆಯಲ್ಲಿ ಹೊತ್ತ ಅಮ್ಮ, ಹೆಗಲೇರಿಸಿಕೊಂಡು ತಿರುಗಿದ ಅಪ್ಪ , ಜೀವಸತ್ವವ ಎರೆದ ಹುಟ್ಟೂರ ಮಣ್ಣು  ಈ ಮೂರು ವಿಷಯಕ್ಕೆ ಬಂದಾಗೆಲ್ಲ ಈ ಮನ ಭಾವುಕವಾಗುತ್ತದೆ. ವಿಷಯಾಂತರವಾಗುತ್ತದೆ. ಅದರ ಜೊತೆಗೆ ಒಂದಷ್ಟು ನನ್ನ ನೆಲದ ಗಾಂವ್ಟಿಯ ಹಸುಕು ನೀವು  ಅರ್ಥ ಮಾಡ್ಕೊಂತೀರಿ ಅಂದ್ಕೊಳ್ಲಾ? ಯಾಕೆ ಅದೇ ಪದಗಳನ್ನು ಬಳಸುತ್ತೇನೆ ಗೊತ್ತಾ? ಈಗಾಗ್ಲೇ ಬೇಂಗ್ಳೂರು ಕನ್ನಡ, ದಕ್ಷಿಣ ಕನ್ನಡದ ಕನ್ನಡ, ಕಾರವಾರ ಕನ್ನಡ  ಅದೂ ಇದೂ ಅಂತ ಮಿಸಳ್ ಬಾಜಿಯಾದ ನನ್ನೆದೆಯೊಳಗಿನ ಭಾಷೆಯ ಗಿಮಿಕ್ ನಲ್ಲಿ ನನ್ನದೇ ಕೂಜಳ್ಳಿಯ ಕೆಮ್ಮಣ್ಣಿನ ಕೆಂಡಸಂಪಿಗೆಯ ಕಂಪಿನಂತಹ  ಕನ್ನಡ ಇನ್ನೇನು ಕಳ್ದೇ ಹೋಯ್ತು ಅನ್ನೋ ಕನವರಿಕೆ.. ಕ್ಷಮಿಸ್ತೀರಿ ಅಲ್ವಾ? ಮತ್ತಷ್ಟು ಪೇಸ್ತಿನ  ನೆನಪುಗಳೊಂದಿಗೆ ಮುಂದಿನವಾರ ನಿಮ್ಮೆದುರಿಗಿರುತ್ತೇನೆ…. ಬರ್ಲಾ…….? (ಮುಂದುವರಯುವುದು)


Leave a Reply

Back To Top