ರಕ್ತರಾತ್ರಿ – ರಂಗ ನೇಪಥ್ಯದ ಕನವರಿಕೆಗಳು : ವಿಶ್ಲೇಷಣಾತ್ಮಕ ಲೇಖನ ಡಾ. ಯಲ್ಲಮ್ಮ ಕೆ

 ಕೆಲವೊಂದು ಸಂಬಂಧಗಳು ಬಾಡಿಗೆ ಮನೆ ಇದ್ದ ಹಾಗೆ ಎಷ್ಟೇ ಶೃಂಗರಿಸಿದರೂ ನಮ್ಮದಾಗು ವುದೇ ಇಲ್ಲ..! ಎನ್ನುವ ಅನಾಮಿಕನೊಬ್ಬನ ಮಾತು ರಂಗಭೂಮಿ ಎಂದಾಗಲೆಲ್ಲ ನೆನಪಾಗುತ್ತದೆ. ಅಖಂಡ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳು ರಂಗಕಲಾಸಿರಿಯ ತವರೂರು ಎಂದ್ಹೇಳಬಹುದೇನೋ.., ಎಳವೆಯಿಂದಲೂ ನನ್ನಲ್ಲಿ ರಂಗಾಸಕ್ತಿ ಒಡಮೂಡಿದ್ದು ನನ್ನ ತಂದೆಯವರಿಂದ. ಅವರು ಬಳ್ಳಾರಿ ಜಿಲ್ಲೆಯ ಕೊಳಗಲ್ಲುನವರು. ಹೊಸಪೇಟೆಯ ಹಳೆಮಲಪನಗುಡಿಗೆ ಬಂದು ಕೆರೆಯಂಗಳದಿ ನೆಲೆಯೂರಿದ್ದು . ನನ್ನ ತಂದೆಯವರಿಗೆ ನಾಟಕ ನೋಡುವುದೇ ಒಂದು ಹುಚ್ಚು ಎನ್ನಬಹುದು. ತಾವು ನಾಟಕ ನೋಡಲು ಹೋಗುವಾಗಲೆಲ್ಲ ನನ್ನನ್ನು ಕರೆದೊಯ್ಯುವುದು ವಾಡಿಕೆ. ಯಾಕಂದರೆ ನಾನು ಎಷ್ಟೇ ಆದರೂ ಅಪ್ಪನ ಮುದ್ದಿನ ಮಗಳಲ್ಲವೇ..? ಹಾಗೆಂದು ಅಮ್ಮ ಎಷ್ಟೋಸಾರಿ ನನಗೆ ಗದರಿಸಿದ್ದು ಈಗಲೂ ನೆನಪಿದೆ. ಅರಿಯದ ವಯಸ್ಸಿನಲ್ಲಿಯೇ ದಪ್ಪಿನಾಟ ದೊಡ್ಡಾಡ-ಸಣ್ಣಾಟಗಳನ್ನು ನೋಡಿಕೊಂಡು ಬೆಳೆದವಳು. ಅದು ನನ್ನ ಕಾಲೇಜು ಶಿಕ್ಷಣ ಹಂತದಲ್ಲಿ ಚಿಗುರೊಡೆದದ್ದು, ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಿ ಏಕಾಂಕ ನಾಟಕದಿ ನನ್ನದು ಅಜ್ಜಿಯ ಪಾತ್ರ. ಅಜ್ಜಿ ಅಂದರೆ ಅಂತಿಂತ ಅಜ್ಜಿಯಲ್ಲ. ಗಟ್ಟಿಗಿತ್ತಿ ಅಜ್ಜಿಯ ಪಾತ್ರ, ಆ ಪಾತ್ರಕ್ಕೆ ನೀನೆ ಸೈ ಎಂದು ನಮ್ಮ ಗುರುಗಳು ಅಭಿನಯಿಸುವಂತೆ ಒತ್ತಾಯಪಡಿಸಿದ್ದರು. ತಮ್ಮ ನಿರೀಕ್ಷೆಗೂ ಮೀರಿ ಆ ಪಾತ್ರಾಭಿಯ ಮೂಡಿಬಂದಿತ್ತೆಂದು ಆಗಾಗ ಗುರುಗಳು ಸ್ಮರಿಸಕೊಳ್ಳುವುದುಂಟು, ಯಾವ ಜನ್ಮದಾಗ ಏನು ಪಾಪ ಮಾಡಿದ್ವೋ ಏನು ಈ ಜನ್ಮಾದಗ ಥೇಟ್ ಅತ್ತಿತರ ಕಾಡತಿಯಲ್ಲೇ ಅಂತ ನನ್ನ ಗೆಳತಿಯರು ಆಗಾಗ ನನ್ನನ್ನು ಛೇಡಿಸಿದ್ದುಂಟು. ಅಲ್ಲಿಗೆ ಉನ್ನತ ವ್ಯಾಸಾಂಗದ ಕಡೆ ಮನಸ್ಸು ಹರಿದು, ಎಂ.ಎ, ಪಿ.ಹೆಚ್.ಡಿ, ನೆಟ್-ಸೆಟ್‌ನೊಂದಿಗೆ ಹುದ್ದೆಹಿಡಿಯುವಲ್ಲಿ ತನಕ ಮತ್ತೆ ರಂಗ ಭೂಮಿಯೆಡೆಗೆ ಹೊರಳಲಿಲ್ಲ. ಸಹಜ ಓದಿನ ಸಾಹಿತ್ಯಾಸಕ್ತಿಯ ಫಲವಾಗಿ ಅದಕ್ಕೆ ಇಂಬು ನೀಡುವಂತೆ ನನ್ನ ಗೆಳತಿಯೊಬ್ಬಳ ಮನದಿಚ್ಛೆಯಂತೆ ಕರ್ನಾಟಕದ ಷೇಕ್ಸ್ಪಿಯರ್ ಎಂದೇ ಖ್ಯಾತನಾಮರಾದ ಹನುಮಂತರಾವ್ ಭೀಮರಾವ್ ಕಂದಗಲ್ಲರ ಕುರಿತಾಗಿ ಸಮಗ್ರ ನಾಟಕಗಳ ಸಂಪುಟ-ಸಂಶೋಧನಾ ಗ್ರಂಥವನ್ನು ಹೊರತರುವ ಪ್ರಯತ್ನದಿ ಹಲವಾರು ರಂಗಕರ್ಮಿಗಳ ಒಡನಾಟ ದಕ್ಕಿದ್ದು ಅವಿಸ್ಮರಣಿಯ ಸಂಗತಿ.


ಈ ನಿಟ್ಟಿನಲ್ಲಿ ನಾವು ಕಂದಗಲ್ಲರ ನಾಟಕ ಕೃತಿಗಳನ್ನು ಸಂಗ್ರಹಿಸಲು ಪಟ್ಟ ಪಾಡು ಹೇಳತೀರದು, ಜೊತೆಗೆ ಖ್ಯಾತ ಜನಪದ ತಜ್ಞ ಶ್ರೀರಾಮ ಇಟ್ಟಣ್ಣನವರು,  ರಂಗ ಕರ್ಮಿ ಶ್ರೀಗುಡಿಹಳ್ಳಿ ನಾಗರಾಜ,  ತಬಾಲ ಮತ್ತು ಹರ‍್ಮೋನಿಯಂ ಮಾಸ್ಟರ್ ಮದಿರೆ ಮರಿಸ್ವಾಮಿ  ಕವಿಗವಾಯಿಗಳಾದ ಚಿದಾನಂದಪ್ಪ ರಾರಾವಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗ ಕರ್ಮಿಗಳಾದ ಶ್ರೀ ತಿಮ್ಮನಗೌಡ ಗೆಣಕಿಹಾಳು. ಶ್ರೀ ಶಿವಪ್ರಸಾದ ಬ್ಯಾಳಿ ಕೂಡ್ಲಿಗಿ, ಹೆಚ್.ಬಿ.ಸರೋಜಾದೇವಿ, ವೀಣಾ ಆದೋನಿ, ನಾಗರತ್ನಂ ಸೋಗಿ, ಅಸಂಖ್ಯ ಕಲಾವಿದರ ಒಡನಾಟಕ್ಕೆ ಬಿದ್ದೆ. ಅಂದು ತಾವರಗೇರಾದಲ್ಲಿ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ರಕ್ತರಾತ್ರಿ ಅರ್ಥಾತ್ ವೀರಶ್ವತ್ಥಾಮನ್ ಎಂಬ ಪೌರಾಣಿಕ ನಾಟಕವನ್ನು ಶ್ರೀಎಲಿವಾಳ ಸಿದ್ಧಯ್ಯಸ್ವಾಮಿ ಕಲಾ ಬಳಗ, ಗೆಣಕಿಹಾಳು, ಕುರುಗೋಡು ತಾಲ್ಲೂಕು ಬಳ್ಳಾರಿ ಜಿಲ್ಲಾ ತಂಡದವರು ಅಭಿನಯಿಸ ಲ್ಪಡುವ ಸುದ್ಧಿ ತಿಳಿದು ಕಲಿಯುಗದ ಕೃಷ್ಣರೆಂದೇ ಖ್ಯಾತನಾಮರಾದ ರಾರಾವಿಯವರ ಮೊಬೈಲ್ ಸಂಪರ್ಕ ಸಾಧಿಸಿ ಅವರನ್ನು ಸಂದರ್ಶಿಸುವುದರೊAದಿಗೆ ಅಂದಿನ ಪ್ರಯೋಗವನ್ನು ಇಡೀ ರಾತ್ರಿ ನಿದ್ದೆಕಟ್ಟಿ ನೋಡಿದಂದಿನಿAದ ರಂಗಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಯ್ತು.
ರಕ್ತರಾತ್ರಿ ನಾಟಕ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಸುಮಾರು ಎರಡ್ಮೂರು ಸಾವಿರ ಪ್ರಯೋಗಗಳನ್ನು ಕಂಡಿರಬೇಕು, ಚಿದಾನಂದಪ್ಪ ರಾರಾವಿ ಹೇಳಿದಂತೆ ಅಂದಿನದು ಅವರದ್ದು ಅದೇ ಅದೇ ಶ್ರೀಕೃಷ್ಣನ ಪಾತ್ರಧಾರಿಯಾಗಿ ೫೦೧ ನೆಯ ಪ್ರಯೋಗವಾಗಿತ್ತು. ತಿಮ್ಮನಗೌಡ ಗೆಣಕಿಹಾಳು ಅವರದ್ದು ವೀರ ಅಶ್ವತ್ಥಾಮನ್ ಪತ್ರಾಧಾರಿಯಾಗಿ ಅಭಿನಯಿಸಿದ್ದು ೯೬೪ ನೆಯ ಪ್ರಯೋಗ ಎಂದರೆ ಸಾಮಾನ್ಯವೇ..? ಅದು ರಕ್ತರಾತ್ರಿ ನಾಟಕದ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಅಂತಹ ಅಂತಸತ್ವವುಳ್ಳ ಬರಹ ರಾಯರದ್ದು.
ಕಲಾವಿದರು ರಂಗದ ಮುಂಭಾಗಂದಿ ಪ್ರೇಕ್ಷರಿಗೆ ರಸದೌತಣ ಒದಗಿಸಿದರೆ.., ಹಿಂದಣದ ಬದುಕು ರೌರವ ನರಕ ಯಾತನೆ..! ಅಂದು ರಾರಾವಿ ಸಂದರ್ಶನದಿ ಮಧ್ಯೆ ಅವರ ಮೊಬೈಲ್ ರಿಂಗಣಿಸಿತು, ಅಲ್ಲಿ ಭೀಮನ ಪಾತ್ರಧಾರಿಯಾಗಿ ಅಭಿನಯಿಸಬೇಕಿದ್ದ ಕಲಾವಿದನ ಅತ್ತೆ ತೀರಿಕೊಂಡಳೆAಬ ಸುದ್ದಿ ಬಂದಿತ್ತು, ಇನ್ನು ನಾಲ್ಕಾರು ತಾಸು ಕಳೆದರೆ ನಾಟಕ ಪ್ರಾರಂಭಿಸಿಬೇಕಿದೆ, ಮರುಕ್ಷಣವೇ ಮತ್ತೊಬ್ಬರನ್ನು ಕರೆಯಿಸುವ ವ್ಯವಸ್ಥೆ ಮಾಡಲಾಯಿತು. ನನ್ನಲ್ಲಿ ಕೌತುಕ ಮನೆ ಮಾಡಿತ್ತು..! ನಾವು ಒಂದು ಗಂಟೆಯ ಪಾಠ-ಪ್ರವಚನಕ್ಕೆ ತಯಾರಿ ಇಲ್ಲದೇ ಹೋದಾಗ ಮಕ್ಕಳೆದಿರು ತಡವರಿಸಿದ್ದು, ಗಡಬಡಿಸಿದ್ದು ನೆನೆದು, ದೀಢಿರನೆ ಬಂದ ಕಲಾವಿದ ಭೀಮನಂಥ ಮುಖ್ಯಪಾತ್ರವನ್ನು ನಿಭಾಯಿಸುತ್ತಾನಾ..? ಅಥವಾ ನಾಟಕ ರಂಗೇರುವುದಿಲ್ಲ ಎನ್ನುವ ಆತಂಕ ಮನೆ ಮಾಡಿತ್ತು.
ಅಂತೆಯೇ ಸರಿ ಸಮಯವೇ ನಾಟಕ ಪ್ರಾರಂಭವಾಯ್ತು ರಾರಾವಿಯವರ ದೇವರ ಸ್ತುತಿ ಗೀತೆ – ನಾಂದಿಯೊAದಿಗೆ. ಭೀಮನ ಪಾತ್ರಧಾರಿ ಒಂದು ಪ್ರವೇಶ ಮುಗಿಸಿಕೊಂಡ ಮೇಲೆ ನಾನು ರಂಗದ ಹಿಂದೆ ಅವರನ್ನು ಮಾತಿಗೆಳೆದೆ.., ಇಲ್ಲ ಮೇಡಂ  ಗೌಡರು ಪೋನ್ ಮಾಡಿ ಸುದ್ಧಿ ಮುಟ್ಟಿಸಿದರು ನಾನು ಹೊಲದಲ್ಲಿ ಗದ್ದೆಗೆ  ನೀರು ಹಾಯಿಸೋಕೆ ಹೋಗಿದ್ದೆ ಎಲ್ಲ ಕೆಲಸ ಬಿಟ್ಟದ್ದು ಬಿಟ್ಟಂತೆ ಹೊರಟು ಬಂದೆ ಅಂದರು.., ಅಂದು ಅವರ ಅಭಿನಯ ಅಮೋಘವಾಗಿತ್ತು ಎಂದು ಬೇರೆ ಹೇಳಬೇಕೇ..? ರಂಗಕಲೆ ಅವರಿಗೆ ರಕ್ತದಲ್ಲಿ ಬೆರೆತಿರುವಾಗ ನಿದ್ದೆಗಣ್ಣಲ್ಲಿ ಎಚ್ಚರಿಸಿ ಕೇಳಿದರೂ ಅವರು ಪಟಪಟನೆ ಆಯಾ ನಾಟಕದ ಎಲ್ಲ ಮಾತುಗಳನ್ನು ತಪ್ಪಿಲ್ಲದಂತೆ ಸ್ಫುಟವಾಗಿ ಉಚ್ಛರಿಸುವಲ್ಲಿ ನಿಸ್ಸೀಮರು.
ಉತ್ತರೆ ಪಾತ್ರ ಮಾಡಿದ ಹೆಚ್.ಬಿ.ಸರೋಜಮ್ಮದೇವಿ ೬೦ ರಿಂದ ೬೫ ಆಸುಪಾಸು ವಯೋವೃದ್ಧರು, ತಮ್ಮ ಈ ಇಳಿವಯಸ್ಸಿನಲ್ಲೂ ಪಾತ್ರಾಭಿನಯ ಹುಮ್ಮಸ್ಸು ಕಡಿಮೆಯಾಗಿಲ್ಲ, ಬಡತನದ ಕುಲುಮೆಯಲ್ಲಿ ನೊಂದು-ಬೆAದ ಜೀವವದು. ಸುಮ್ಮ ಕುಂತರೆ ಬದುಕು ನಡೀತದೇನಮ್ಮ ಹಳ್ಳಿಗಳಲ್ಲಿ ಹವ್ಯಾಸಿ ಕಲಾವಿದರು ಹಬ್ಬ ಹರಿದಿನ ಅಂತ್ಹೇಳಿ ನಾಟಕ ಕಲ್ತು ಆಡಿಸ್ತಾರೆ, ನಮ್ಮಂತ ಕಲಾವಿದರನ್ನು ಕರೆಸುತ್ತಾರೆ ಹೀಗೆ ನಡೆದಿದೆ ಹೊಟ್ಟೆಪಾಡು ಅಂತ ತಮ್ಮ ಮನದಾಳದ ಮಾತನ್ನು ತೋಡಿಕೊಂಡರು. ಅಯ್ಯೋ ಪಾಪ ಎನಿಸಿತ್ತು.., ಅಷ್ಟರಲ್ಲೇ ನನ್ನ ಪ್ರವೇಶವಿದೆ ಎಂದು ಪರದೆಯ ಕಡೆ ನಡೆದರು.., ಅಲ್ಲಿ ತನ್ನ ಗಂಡನಾದ ವೀರ ಅಭಿಮನ್ಯುವನ್ನು ಕಳೆದುಕೊಂಡು, ವಿರಹದಿ ತಾ ನೊಂದ ಉತ್ತರೆಯ ಮನದಾಳದ ಮಾತುಗಳು ಕಲ್ಲು ಮನಸ್ಸನ್ನು ಕರಗಿಸುವಂತಿದ್ದವು. ದುಃಖ ಭರಿತ ಸನ್ನಿವೇಷದಿ ವಿರಹದ, ಗಂಡನ ಕಳೆದುಕೊಂಡ ಹೆಣ್ಣಿನ ಪರಿತಾಪವನ್ನು ಒಳಗೊಂಡ ಹಾಡನ್ನು ಹಾಡುತ್ತಿದ್ದಾಳೆ, ನಾನು ಬಹುಸೂಕ್ಷವಾಗಿ ಅವಲೋಕಿಸಿದ ನಂತರ ತಿಳಿತು, ತೆರೆಯ ಹಿಂದೆ ನಾಗರತ್ನಮ್ಮ ಸೋಗಿಯವರು ಹಾಡು ಹಾಡುತ್ತಿದ್ದದ್ದು ಕಂಡು ಬೆರಗಾದೆ, ಸರೋಜಮ್ಮ ಸಿನಿಮಾ ನಟ-ನಟಿಯರಂತೆ ತುಟಿಯನ್ನು ಅದಿರುಸುತ್ತಿದ್ದಾರೆ.
ಹಾಡು ಮುಗಿದು ವಿರಾಮದ ವೇಳೆಗೆ ನಾನು ನಾಗರತ್ನಂ ಸೋಗಿಯವರನ್ನು ಮಾತಿಗೆಳೆದೆ ಅಲ್ಲಮ್ಮ ನೀವು ಮಾಡ್ತಾ ಇರೋದು ದ್ರೌಪದಿಯ ಪಾತ್ರ ಅದ್ಹೇಗೆ ಉತ್ತರೆಯ ಹಾಡುಗಳನ್ನು ಹಾಡಿದಿರಿ..? ಎಂದು ಅಚ್ಚರಿಯಿಂದ ಕೇಳಿದೆ. ಅದಕ್ಕವಳು ಅಷ್ಟೇ ಸಮಾಧಾನಿಯಾಗಿ ಹೇಳಿದರು. ಇಲ್ಲಿರುವ ಹಾಸ್ಯ ಕಲಾವಿದರಿಂದ್ಹಿಡಿದು ಮುಖ್ಯಪಾತ್ರದವರು ಕೂಡ ಎಲ್ಲರ ಮಾತುಗಳನ್ನು ಎಲ್ಲರೂ ಹೇಳುತ್ತಾರೆ. ಯಾರೇ ಅಕಸ್ಮಾತ ಮಾತು ತಪ್ಪಿದರೆ ಹಿಂದಿದ್ದವರು ಎತ್ತಿಕೊಡುತ್ತಾರೆ. (ಹೀಗೆ ಮಾತು ತಪ್ಪಿದಾಗ ಮಾತು ಎತ್ತಿಕೊಡಲೆಂದೇ ಇರುವವರನ್ನು ಕಥಾಸಂಚಾಲಕರು ಎಂದು ಕರೆಯುತ್ತಾರೆ) ಮುಂದಿನ ಪಾತ್ರಪ್ರವೇಶಕ್ಕೆ ಅಣಿಗೊಳ್ಳಲು ಅಂದರೆ ಬಟ್ಟೆ ಬದಲಿಸಲು ಒಳ ನಡೆದರು. ನನಗಚ್ಚರಿ ಎಂದರೆ..? ಅವರೇ ಅಭಿನಯಿಸುತ್ತ ಹಾಡುವುದು ಅವರಿಗೆ ನೀರು ಕುಡಿದಷ್ಟೇ ಸರಳ, ಆದರೆ ಅಲ್ಲಿ ಪಾತ್ರಾಭಿನಯ ಮಾಡುವವರೊಬ್ಬರು ಇಲ್ಲಿ ತೆರೆಯ ಹಿಂದೆ ಹಾಡುವವರು ಮಗದೊಬ್ಬರು..!  ಸಿನೆಮಾ ಕಥೆನೇ ಬೇರೆ ಬಿಡಿ, ಇಲ್ಲಿ ಏಕಕಾಲಕ್ಕೆ ಹಾಡಿನ ತೀವ್ರತೆಯನ್ನು ಅನುಭವಿಸಿ ಇವಳು ಹಾಡಬೇಕು, ಅವಳು ನಟಿಸಬೇಕು ಅಂದರೆ ಸುಲಭದ ಮಾತಲ್ಲ, ಸ್ವಲ್ಪವೂ ದೋಷವಿಲ್ಲದಂತೆ ಸರಿದೂಗಿಸಿದ್ದು ಒಂದು ವಿಸ್ಮಯವೇ ಸರಿ.
ಇನ್ನು ಶ್ರೀಕೃಷ್ಣ ಪಾತ್ರಧಾರಿ ತಮ್ಮ ಗವಾಯಿತನದ ಮೋಡಿಯಲ್ಲಿ ಜನಮನಸೂರೆಗೊಂಡು ಪಾತ್ರ ಪೋಷಣೆಗೈದು ಒಳನಡೆದರು ನಾನು ಅವರನ್ನು ಮಾತಿಗೆಳೆಲು ಒಳನಡೆದೆ.., ಹೋಗಿ ನೋಡುವಷ್ಟರಲ್ಲಿ ಅವರು ತಮ್ಮ ರತ್ನ ಖಚಿತ ಕಿರೀಟವನ್ನು ತೆಗೆದು ಬದಿಗಿರಿಸಿ, ಮತ್ತೊಬ್ಬ ಕಲಾವಿದನ ಮುಖಕ್ಕೆ ಬಣ್ಣ ಬಳೆಯುತ್ತಿದ್ದಾರೆ. ಅರೇ ಇದೇನಿದು..? ನೀವು ಕೂಡ ಬಣ್ಣ ಬಳಿಯುತ್ತೀರಾ..? ಕೇಳಿದೆ ಅದಕ್ಕವರು ಬಣ್ಣ ಹಚ್ಚಿಕೊಂಡು ಪಾತ್ರಾಭಿನಯ ಮಾಡಬಯಸುವವರು ಕಲಿಯಬೇಕಾದ ಮೊದಲ ಪಾಠವೇ ಬಣ್ಣ ಬಳಿಯುವುದು. ಆಯಾ ಪಾತ್ರಕ್ಕೆ ತಕ್ಕಂತೆ ಬಣ್ಣ ಬಳೆಯುವುದು ಒಂದು ಕಲೆ, ಯಶಸ್ವಿ ಕಲಾವಿದನೆನಿಸಬೇಕಾದರೆ ಆ ಕಲೆ ಸಿದ್ಧಿಸಿಕೊಂಡಿರಬೇಕು ಎಂದ್ಹೇಳಿದ ಮಾತು ಎಷ್ಟೊಂದು ಅರ್ಥ ಪೂರ್ಣವಲ್ಲವೇ. ರಂಗಕಲೆ-ಪ್ರಯೋಗ ಯಶಸ್ವಿಯಾಗಬೇಕಾದರೆ ಆಯಾ ತಂಡದ ಸದಸ್ಯರೆಲ್ಲರೂ ಸ್ವಪ್ರತಿಷ್ಠೆ ಮರೆತು ಒಳಗೊಳ್ಳಬೇಕು ಎಂಬುದು ಅವರ ಮಾತಿನ ಇಂಗಿತವಾರಬೇಕು.
ಅAತೆಯೇ ವೀರಶ್ವತ್ಥಾಮನ ಪಾತ್ರಧಾರಿ ತಿಮ್ಮನಗೌಡ್ರು ಕಲಾ ತಂಡದ ಮಾಲೀಕರು ಎನ್ನುವುದಕ್ಕಿಂತ ಮನೆ ಮುನ್ನಡೆಸುವ ಯಜಮಾನನಂತೆ ಎಲ್ಲರ ಬೇಕು ಬೇಡಗಳನ್ನು ನೋಡಿ ಕೊಳ್ಳುತ್ತ ರಂಗಪ್ರಯೋಗ ಯಶಸ್ಸಿನ ಭಾರವನ್ನು  ತನ್ಹೆಗಲಮೇಲೆ ಹೊತ್ತು ತಿರುಗುವ ಆಸಾಮಿ. ತಮ್ಮ ೬೩ ರ ಇಳಿ ಪ್ರಾಯದಲ್ಲೂ ಪಾತ್ರಾಭಿನಯದಲ್ಲಿ ತಮ್ಮನ್ನು ತಾವೇ ಮರೆತು ಬಿಡುವಂಥ ತಲ್ಲೀನತೆ, ಮಾತಿನ ಗಡಸುತನಕ್ಕೆ ತಕ್ಕಂತೆ ಹಾವಭಾವ, ಬಿಲ್ಲು-ಬಾಣಗಳನ್ನು ಹಿಡಿದು ಪುಟಿದೇಳುವ ಹುಮ್ಮಸ್ಸು ತೋಳ್ಬಲದ ನರನಾಡಿಗಳ ಮಿಂಚು ಯುವಕರನ್ನು ದಂಗುಬಡಿಸುವAತಿತ್ತು. ರೌದ್ರಾವೇಶವನ್ನು ಕಂಡು ನಾ ಅವರನ್ನು ಮಾತಿಗೆಳೆಲೇ ಇಲ್ಲ.
ಅವರೊಂದಿಗೆ ಮತ್ತೆ ಭೇಟಿಯಾಗುವ ಸಮಯಕ್ಕೆ ಕಾಯ್ತಾ ಇದ್ದೆ, ಅವರನ್ನು ಸಂದರ್ಶನ ಮಾಡಬೇಕು ಎನ್ನುವ ತುಡಿತ ಇತ್ತು, ಈ ಕರೋನಾ ಅಬ್ಬರ ಅದಕ್ಕೆ ಅವಕಾಶ ನೀಡಲಿಲ್ಲ, ಮೊನ್ನೆ ಕಳೆದ ಮಾರ್ಚ ತಿಂಗಳು ಕಾರಟಗಿ ತಾಲ್ಲೂಕಿನ ಯರಡೋಣಾ ಗ್ರಾಮದಲ್ಲಿ ಮೃಡ ಬಸವೇಶ್ವರ ಜಾತ್ರಾ ಮಹೋತ್ಸವಹದ ಅಂಗವಾಗಿ ರಕ್ತರಾತ್ರಿ ಪ್ರಯೋಗವನ್ನು ನೋಡುವ ಅವಕಾಶ ಒದಗಿಬಂದದ್ದು, ಸ್ವತಃ ತಿಮ್ಮನಗೌಡ್ರೆ ಕರೆ ಮಾಡಿ ಈ ಪ್ರಯೋಗ ನೋಡಿಲಿಕ್ಕೆ ಬರಬೇಕು ಅಂತ ಕೇಳಿಕೊಂಡದ್ದರಿAದ. ಹೋಗುವುದಕ್ಕೆ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ವಿ ಅಂದೇ ನನ್ನ ಕರ‍್ಯಕ್ಷೇತ್ರವಾದ ತಾವರಗೇರಾದಲ್ಲಿ  ಕರೋನಾ ಪಾಸಿಟಿವ್ ಸಂಖ್ಯೆಗಳು ಹೆಚ್ಚಾದದ್ದು ಸುದ್ದಿಯಾಗಿತ್ತು, ಹೋಗ್ಲಾ ಬೇಡ್ವಾ.., ಎಂಬ ದ್ವಂದ್ವಕ್ಕೆ ಸಿಲುಕಿ ಕೊನೆಗೂ ಹಿರಿಯರ ಆಮಂತ್ರಣಕ್ಕೆ ಬೆಲೆತೆತ್ತು ಹೊರಟೆ. ರಾತ್ರಿ ಎಂಟು ಮುಕ್ಕಾಲು ಸಮಯ ಯರಡೋಣಾ ಗ್ರಾಮವನ್ನು ತಲುಪಿದಾಗ ಅಲ್ಲಿ ಎಲ್ಲರೂ ಅಪರಿಚಿತರೆ, ಹೊಸ ಊರು ಹೊಸ ಜಾಗ, ತಡರಾತ್ರಿ-ಇಡೀರಾತ್ರಿ ನಾಟಕ ನೋಡುವ ಹುಚ್ಚಿನಿಂದ ಹೋದದ್ದು ನನ್ನ ಹುಂಬುತನವೆAದುಕೊಂಡೆ.
ಸುಂದರವಾದ ಭವ್ಯರಂಗಸಜ್ಜಿಕೆ, ಧ್ವನಿವರ್ಧಕಗಳ ಭರಾಟೆಗೆ ಕರೋನಾ ಹೇಳದೇ ಕೇಳದೇ ಓಡಿಹೋಗಿರಬೇಕು ಎಂದುಕೊಂಡೆ.., ಎಲೆ ಉತ್ತರೆ..! ದಿನ ಮೂರು ಕಳೆವುದರೊಳಗಾಗಿ ಈ ಪೃಥ್ವಿ ನಿಃಪಾಂಡವ ಪೃಥ್ವಿ, ನಿನ್ನ ಗರ್ಭಸ್ಥ ಪಿಂಡಕ್ಕೂ ಪ್ರಳಯ..!  ಎನ್ನುವ ಮಾತು ಕೇಳುತ್ತಿದ್ದಂತೆ ತಿಮ್ಮನಗೌಡ್ರು ನೆನಪಾದರು ಕಾಲ್ ಮಾಡಿದೆ ಅವರೇ ಹೊರ ಬಂದು ಬಾ ಮಗಳೇ ಎಂದು ಪ್ರೀತಿಯಿಂದ ಬರಮಾಡಿಕೊಂಡು ರಂಗ ನೇಪಥ್ಯದಿ ಕರೆದುಕೊಂಡು ಹೋದರು, ನಾನು ನನ್ನ ತವರು ಮನಗೆ ಬಂದಿದ್ದೇನೋ ಅನ್ನಿಸಿತು, ಕೈತೊಳಿಲಿಕ್ಕೆ ನೀರುಕೊಟ್ಟು, ನಮ್ಮ ಬದುಕು ಹೀಗಿದೆ ನೋಡು ಮಗಳೇ ಎಲ್ಲ ಕಂಪನಿ ನಾಟಕದ ಥರ ಊಟದ ವ್ಯವಸ್ಥೆ ಇಲ್ಲಿಯೇ ಮಾಡಿಬಿಟ್ಟಿದ್ದೇವೆ ಎಂದು ಊಟಕ್ಕೆ ಕುಳಿತುಕೊಳ್ಳಲು ಸಿಂಹಾಸನದತ್ತ ಕೈ ತೋರಿದರು ಮದುವೆಯಲ್ಲಿ ವಧು-ವರರು ಕೂಡವ ಸಿಂಹಾಸನವದು, ದುರ್ಯೋಧನನ ತನ್ನ ದರಬಾರ್ ಸೀನ್‌ನಲ್ಲಿ ಆ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ದೃಶ್ಯಕ್ಕೆಂದು ತಂದಿರಿಸಟ್ಟಿದ್ದರು.  ನಾನು ಅದರ ಮೇಲೆ ಕುಳಿತುಕೊಳ್ಳಲು ಹಿಂಜರಿದೆ, ಆಗ ಮಗಳೇ ತೆರೆಯ ಹಿಂದೆ ಇದು ಖಾಲಿ ಕುರ್ಚಿ, ತೆರೆಯ ಮುಂದೆ ಅದು ರಾಜ ಸಿಂಹಾಸನ, ಹೆದರಬೇಡ ಕುಳಿತುಕೋ ಎಂದು ಹೇಳಿದ್ದು ಕೇಳಿ ಇವರೇನಾ ಆ ವೀರಅಶ್ವತ್ಥಾಮ ಎಂದು ಅನುಮಾನಿಸಿದೆ, ನಿಜ್ಜಕ್ಕೂ ಮೃದು ಸ್ವಭಾವದ, ಸರಳ ಸಜ್ಜನಿಕೆಯ ಕೃಷಿಕ ಕಲಾವಿದ. ಅಲ್ಲಿ ಪರಕಾಯ ಪ್ರವೇಶ ಮಾಡಿದಾಗ ರೌದ್ರಾವೇಶವೆಲ್ಲವೂ ಬಂದು ನಾಟಕ ಕಳೆಗಟ್ಟುತ್ತದೆ ಎಂದAದರು.
ಹಳ್ಳಿಗರ ಪಾಲಿಗೆ ನಾಟಕದ ಕಲಾವಿದರು ಎಂದರೆ ಎಲ್ಲಿಲ್ಲದ ಪ್ರೀತಿ. ತೆರೆಯ ಹಿಂದೆ ಅವರಿವರ ಪರಿಚಯ ಹೇಳಿಕೊಂಡು ಬಂದು ಕಲಾವಿದರೊಡನೆ ಸೆಲ್ಫಿ ತೆಗೆದುಕೊಳ್ಳುವುದು, ಅವರುಗಳ ಕಾಲುಮುಟ್ಟಿ ನಮಸ್ಕರಿಸುವುದು ಗ್ರಾಮಜೀವನದ ಹಿರಿ-ಕಿರಿಯರು ಎಂಬ ಗೌರವದ ಬಂಧುತ್ವದ ಪ್ರತೀಕವೆನಿಸಿತ್ತು. ಯಾವ ಸಿನಿಮಾ ನಟ-ನಟಿಯರಿಗೆ, ಸೆಲೆಬ್ರಿಟಿಗಳಿಗೆ ಕಮ್ಮಿ ಇಲ್ಲ ಕಲಾವಿದರು ಎಂಬ ಅಭಿಮಾನ ಇಮ್ಮಡಿಸಿತ್ತು. ಇನ್ನು ಶಕುನಿ ಪಾತ್ರಧಾರಿ ಜವಳಗೇರಾ ಸ್ವಾಮಿ ಹೆಸರು ನೆನಪಿಗೆ ರ‍್ತಾ ಇಲ್ಲ, ಮಹಾಭಾರತದ ಪಾತ್ರಗಳು: ಭೀಮಾ, ಅರ್ಜುನ, ಧರ್ಮರಾಯ ಅವರು ಎಂತಿದ್ದರೂ, ಹೇಗಿದ್ದರೂ..? ಯಾರಿಗೂ ನಿಖರವಾಗಿ ತಿಳಿಯದು, ಸಾಹಿತಿಗಳು, ಕವಿ, ಕಲಾವಿದರು ಕಟ್ಟಿಕೊಟ್ಟ ಕಲ್ಪನೆ ಇದೆಯಲ್ಲ ರಮ್ಯ ಹಾಗೂ ಅತ್ಯದ್ಭುತ, ಶಕುನಿ ಮಾವನನ್ನು ಮಾತಿಗೆಳೆದೆ ಪಾತ್ರಕ್ಕೆ ತಕ್ಕಂತೆ ವೇಷಭೂಷಣ, ಕೆನ್ನೆಯ ಮೇಲೊಂದು ನರಲಿ ದೃಷ್ಟಿಬೊಟ್ಟು ತರದಿ, ಬಣ್ಣ-ಭಾವಾವೇಶದಿ ಎಡಗೈನ್ನು ಬೆನ್ನಿಂದೆ ನಡುಪಟ್ಟಿಗೆ ಇಟ್ಟುಕೊಂಡು, ಒಂದು ಕಾಲನ್ನು ಮೀಟುತ್ತ ಮೀಟುತ್ತ ಓರೆನೋಟದಿ ಪ್ರೇಕ್ಷಕರನ್ನು ನೋಡುತ್ತ (ನಗುತ್ತ ಪ್ರವೇಶಿಸಿ) ಈ ಶಕುನಿಯ ಎದೆಹುತ್ತದೊಳಡಗಿದ ಭೇದ-ನೀತಿ ಎಂಬ ನಾಗಿಣಿಯ ಪೂತ್ಕಾರಕ್ಕೆ.., ಜಾತಿ ಝಳ ಹೊಡೆದು ಕಮರುವವು ಕೋಮಲ ಕರುಳ ಸೌಹಾರ್ದ ಸೂತ್ರಗಳು, ಮನುಷ್ಯತ್ವ ಮಣ್ಣು ಗೂಡಿ, ಸುರಶಿಲ್ಪಿ ವಿಶ್ವಕರ್ಮನ ಕೈಯಕುಂಚ ಕಠೋರ ಕುಠಾರಿ ಯಾಗುವುದು ಜಾತಿ ಜಗಳದ ಗರ್ಜನೆಯಲಿ.., ಎಂಬು ಮಾತು ಹೊರಬರುತ್ತಿರುವಂತೆ ಪ್ರೇಕ್ಷಕರಿಂದ ಕೇಕೆ-ಸೀಟಿಗಳ ಸುರಿಮಳೆ, ಇದನ್ನಲ್ಲವೇ ಪಾತ್ರದ ಜೀವಂತಿಕೆ ಎನ್ನುವುದು.
ಭಿಮನ ಪಾತ್ರಧಾರಿ ಅದೇ ತಾನೇ ತೆರೆಯ ಮುಂದೆ ಘರ್ಜಿಸುತ್ತ ಒಳನಡೆದು ಬಂದ ಅರೆಗಳಿಗೆ ಅವರು ಇಹಲೋಕದ ಸಂಬಂಧವನ್ನು ಕಡೆದುಕೊಂಡು ಬಿಟ್ಟಿರುತ್ತಾರೆ. ಯಾವುದೋ ಒಂದು ಭೂತಾತ್ಮ- ಪ್ರೇತಾತ್ಮವೋ  ಮೆಟ್ಟಿದಂತೆ ಆಯಾ ಪಾತ್ರದೊಳಗೆ ಪ್ರವೇಶ ಮಾಡಿಬಿಟ್ಟಿರುತ್ತಾರೆ. ಅಲ್ಲಿ ತಾನೇ ಭೀಮ, ತಾನೇ ಶ್ರೀಕೃಷ್ಣಪರಮಾತ್ಮ, ತಾನೇ ದುರ್ಯೋಧನ ನಾಗಿ ಯಾರಲ್ಲಿ..? ಎಂದು ಆಜ್ಞಾಪಿಸಿ ವೀರಾವೇ಼ಷದಿ ಒಳನಡೆದಾಗ, ಗಂಟಲು ಹಾರಿ ನೀರು ಬೇಕೆಂದರೂ ತಾವೇ ತೆಗೆದುಕೊಂಡು ಕುಡಿಬೇಕೆಂಬುದು ಅರಿವಾದಾಗ ಇಹಕ್ಕೆ ಕಾಲಿರಿಸಿರುತ್ತಾರೆ. ಹೀಗೆ ತೆರೆಯ ಹಿಂದಣ–ರಂಗ ನೇಪಥ್ಯವೆಂಬುದು ವಾಸ್ತವ ಬದುಕಿನ ರಣಾಂಗಣವಾಗಿರುತ್ತದೆ. ಅವರಿಗೂ ನಮ್ಮಂತೆ ಸಾಕಷ್ಟು ನೋವು-ನಲಿವುಗಳಿರುತ್ತವೆ. ನೂರಾರು ಅಭಿಮಾನಿಗಳು ಹಾರ-ತುರಾಯಿ ನೀಡಿ ಸನ್ಮಾನಿಸುತ್ತಾರೆ, ಅಭಿನಂದಿಸುತ್ತಾರೆ ಆ ಕ್ಷಣ ಜನ್ಮ ಸಾರ್ಥಕವೆನಿಸಿಬಿಡುತ್ತದೆ, ವಾಸ್ತವ ಜಗತ್ತಿಗೆ ಮರಳಿದಾಗ ಇಡೀ ರಾತ್ರಿ ನಿದ್ದೆಕಟ್ಟಿ ದುಡಿದು ಗಳಿಸಿದ ಬಾಬತ್ತಿನ ಲೆಕ್ಕಚಾರ ಒಂದಡೆ, ಮತ್ತೊಂಡೆ ಆಯ-ವ್ಯಯದ ಗುಣಾಕಾರ ಕೂಡಿ ಕಳೆದು ಕೈಗೆ ಬಂದ ದುಡ್ಡು ನೆನೆದರೆ ಮನದಲ್ಲಿ ಹಾಹಾಕಾರ..! ನಾಟಕಕ್ಕೆ ನಿರೀಕ್ಷಿತ ಜನ ಸೇರಿಲ್ಲ ಅಂದ್ರೆ ಕಲಾವಿದರಿಗೆ ಮನೆ ಮುಟ್ಟಲು ದುಡ್ಡಿಗಾಗಿ ಪರದಾಡುವಂಥ ಸ್ಥಿತಿ, ಯಾರನ್ನು ಕೇಳುವಂತಿಲ್ಲ ಸ್ವಾಭಿಮಾನದ ಪ್ರಶ್ನೆ, ಅಡ್ಡಕತ್ತರಿಯಲ್ಲಿ ಅಡಿಕೆ ಸಿಕ್ಕಿಕೊಂಡಂತೆ ಯಾತನೆಯನ್ನು ಅನುಭವಿಸುತ್ತ ನಮ್ಮೆಲ್ಲರನ್ನೂ ರಂಜಿಸುತ್ತ ಸಾಗುವ ಕಲಾವಿದರ ಬಾಳು ನಿಜಕ್ಕೂ ಗೋಳು..! ಕೇಳುವರ‍್ಯಾರು..?

One thought on “ರಕ್ತರಾತ್ರಿ – ರಂಗ ನೇಪಥ್ಯದ ಕನವರಿಕೆಗಳು : ವಿಶ್ಲೇಷಣಾತ್ಮಕ ಲೇಖನ ಡಾ. ಯಲ್ಲಮ್ಮ ಕೆ

Leave a Reply

Back To Top