ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಕಲಿಯುತಿರುವೆ

ಆ ಸಮಯದಿ ತೀರಾ ಬಳಲಿ ಹೋಗಿದ್ದೆ
ಅಸಹಾಯಕಳಾಗಿ ಬಿಕ್ಕುತ ನಿಂತಿದ್ದೆ
ಯಾರೊಂದಿಗೂ ನನ್ನ ಯುದ್ದವಿರಲಿಲ್ಲ
ಯಾರೆಂದರೇ ಯಾರೂ ವೈರಿಗಳಿರಲಿಲ್ಲ
ನನ್ನೊಡನೆಯೇ ನನ್ನ ಕಾದಾಟ
ನನ್ನ ನಾ ಅರಿಯಲು ಪರದಾಟ
ನಾ ಎಡವಿದ್ದೆಲ್ಲಿ? ತಿಳಿಯಲಿಲ್ಲ
ನಾ ಮಾಡುವುದೇನಿಗ ? ಹೊಳೆಯಲಿಲ್ಲ
ಮನದ ಮನೆಯಲಿ ನೀರವ ಮೌನ
ಎದೆಯ ಬಡಿತದಲಿ ನೋವಿನ ತನನ
ನಗುವಿನ ಮುಖವಾಡ ಹಗಲು ಧರಿಸತೊಡಗಿತು
ಇರುಳು ಕಂಬನಿಯಲಿ ಮಗ್ಗಲು ಬದಲಿಸತೊಡಗಿತು
ನನ್ನ ನಾ ಕಳೆದುಕೊಳ್ಳುವ ಭಯ ಕಾಡುತಿತ್ತು
ಯೋಚನೆಯು ಕೊನೆಮೊದಲಿಲ್ಲದೆ ಸಾಗುತಿತ್ತು
ಹಗುರಾಗಲು ನಿತ್ಯ ನಿರಂತರ ಹೋರಾಡುತಿದ್ದೆ
ನನ್ನನೇ ನಾ ಇರಿದಿರಿದು ಘಾಸಿಗೊಳ್ಳುತ್ತಿದ್ದೆ
ಕೈ ಮುಗಿದು ಕೈ ಹಿಡಿಯಲು ದೇವರ ಬೇಡುತಿದ್ದೆ
ಆದರೆ ,ನನ್ನೊಳಗಿನ ನೋವಿಗೆ ಧ್ವನಿಯನು ನೀಡಲಿಲ್ಲ
ಸೋಲಿಗೆ ನಾ ಹೆದರಿ ಸೋತು ಹೋಗಲಿಲ್ಲ
ನನ್ನೊಂದಿಗೆ ಶಿವನಿದ್ದರೇ ಸಾಕೆನಿಸಿತು
ಜಗದ ಜಂಜಾಟವೇ ಬೇಡೆನಿಸಿತು
ಈಗ ನನ್ನ ಕೈಯ ನಾನೇ ಹಿಡಿದು ,
ನನ್ನ ಕಂಬನಿ ನಾನೇ ಒರೆಸಿ ,
ನನ್ನ ನಾ ಸಂತೈಸುವುದ ಕಲಿಯುತಿರುವೆ
ನನ್ನ ನಾ ಸಂತಸಗೊಳಿಸುವುದ ಕಲಿಯುತಿರುವೆ
ವಾಣಿ ಯಡಹಳ್ಳಿಮಠ
