ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
ನಗುವಿನ ಹೂ ತೋಟವೆ

ಒಲವನ್ನು ಒಂಟಿ ಮಾಡಿದೆ
ನನ್ನ ನಡುದಾರಿಯಲ್ಲೆ ಬಿಟ್ಟು ಹೊರಟೆ
ಛಲವನ್ನು ಬರಿದು ಮಾಡಿದೆ
ನನಗೆ ಬರಿ ಶೋಕವನ್ನೆ ಇಟ್ಟು ಹೊರಟೆ
ಎದೆಯ ಮಿಡಿತ ಅರಿಯದೆ
ನನ್ನ ಕನಸುಗಳ ಗೋಪುರ ಮುರಿಯಿತು
ಮನಸ್ಸಿನ ತುಡಿತ ತಿಳಿಯದೆ
ಭಾವನೆಗಳ ಚೈತನ್ಯ ಸೋತು ಸೊರಗಿತು
ಬದುಕಿನ ಭವಿಷ್ಯ ನೋಡದೆ
ನನ್ನ ಹಾಡುಗಳ ರಾಗ ಮಣ್ಣುಗೂಡಿತು
ಆಯಸ್ಸಿನ ಅಳಿವು ಕಾಣದೆ
ಸಂಬಂಧಗಳ ಸೇತುವೆ ಛಿದ್ರವಾಯಿತು

ನಗುವಿನ ಹೂ ತೋಟವೆ
ನಿನ್ನ ನಂಬಿ ಬಳಿ ಬಂದು ಒಲವ ಬೇಡಿದೆ
ಮಧುರ ಗಾನ ಲಹರಿಯೆ
ತಾಳ ಲಯ ತಪ್ಪಿ ಜೀವನ ಬೆಂಗಾಡಾಗಿದೆ
ಪ್ರೀತಿಯ ಸಾಂಗತ್ಯ ಕನಸಿದೆ
ತಿರಸ್ಕಾರದ ಬೆಂಕಿ ತಾಗಿ ನೋವ ನುಂಗಿದೆ
ಬಾಳ ಬಾಂಧವ್ಯ ಬಯಸಿದೆ
ಅಪಮಾನದ ಶಂಕೆ ಸೋಕಿ ಕುದ್ದು ಕುಸಿದೆ
ಟಿ.ಪಿ.ಉಮೇಶ್
