ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ನಾನೇನಾಗಿದ್ದೇನೆ…?

ಅವ್ವ ಕಂದಾಽ ಎಂದಾಗ
ಮಾತೃ ಹೃದಯಕೆ ಕರಗಿ
ಮುಗ್ಧ ಮಗುವಾದೆ…
ಅಪ್ಪ ಮಗಳೇಽ ಎಂದಾಗ
ಮಮತೆಯ ದನಿಗೆ ಸೋತು
ಪ್ರೀತಿಯ ಮುಗುಳಾದೆ…
ತಂಗಿ ಅಕ್ಕಾಽ ಎಂದಾಗ
ಹಿರಿತನಕೆ ಹಿರಿ ಹಿರಿ ಹಿಗ್ಗಿ
ಎದೆಯುಬ್ಬಿಸಿ ಹಿರಿಯವಳಾದೆ…
ಗೆಳತಿಯರ ಸ್ನೇಹ ಬಂಧಕೆ
ಸ್ಫೂರ್ತಿಯ ಚಿಲುಮೆ ಉಕ್ಕಿಸಿ
ಮಹಾಪೂರವಾದೆ…
ನಲ್ಲನ ಒಲುಮೆ – ನಂಬುಗೆಗೆ
ನನ್ನನ್ನೇ ಸಮರ್ಪಿಸಿ
ಕೃತಾರ್ಥಳಾದೆ..
ಮಕ್ಕಳಿಗೆ ನನ್ನೊಡಲ
ರಕ್ತ -ಮಾಂಸ ಕೊಟ್ಟು
ತ್ಯಾಗದ ತಾಯಿಯಾದೆ…
ಆದರೆ..
ನನಗಾಗಿ
ನಾನೇನಾಗಿದ್ದೇನೆ….?
ಹಮೀದಾಬೇಗಂ ದೇಸಾಯಿ.ಸಂಕೇಶ್ವರ.

ಕವನದ ಕೊನೆಯ ಪ್ರಶ್ನೆ ಸ್ವಾರಸ್ಯವಾಗಿರುವುದೇನೋ ಹೌದು.ಆದರೆ ಉತ್ತರವಿದೆ ಹೀಗೆ.
ಕವನದ ಪ್ರತಿ ಛೇದದಲ್ಲು ತನ್ನನ್ನು “ಹೆಣ್ಣು” ಎಂದು ಸಂಕೇತಿಸಿಕೊಂಡ ಹಿನ್ನೆಲೆಯಲ್ಲಿ, ನೀವು ಆದರ್ಶಮಯಿ,ತ್ಯಾಗಮಯಿ,ಹಾಗೂ ನಿಮಗಾಗಿ(ಸ್ವಾರ್ಥಕ್ಕೆ) ಏನೂ ಆಗದಿರುವುದನ್ನೇ ಸಂಪಾದಿಸಿದ್ದೀರಿ-ಎನ್ನಬಹುದೇನೋ!
ಅರ್ಥಪೂರ್ಣ ಸ್ಪಂದನೆಗೆ ಧನ್ಯವಾದ ತಮಗೆ
ಹಮೀದಾಬೇಗಂ ದೇಸಾಯಿ.ಸಂಕೇಶ್ವರ.
ತುಂಬಾ ಚೆನ್ನಾಗಿ ಬರೆದಿದ್ದೀರಾ ಮೇಡಂ. ಒಮ್ಮೆ ನಾನು ಹಾಗೆ ಯೋಚಿಸುವಂತೆ ಮಾಡಿತು ನಿಮ್ಮ ಕವಿತೆ
ಧನ್ಯವಾದ ತಮಗೆ ಓದಿ ಮೆಚ್ಚಿದ್ದಕ್ಕೆ..