ಪಿ.ವೆಂಕಟಾಚಲಯ್ಯ ಅವರವಿಡಂಬನಾತ್ಮಕ ಕವಿತೆ “ನಮ್ಮ ಸುಂದರ”

 ನಮ್ಮ ಸುಂದರ.

(ಕೆಲವು  ವರ್ಷಗಳ ಹಿಂದಿನ ನೈಜ ಘಟನೆ ಯನ್ನು ಆಧರಿಸಿ)

ನಮ್ಮ ಸುಂದರ, ತಾನೊಬ್ಬನೇ ಸುಂದರ,
ಅಂದುಕೊಂಡದರಲಿ ಅವನ  ತಪ್ಪೇನಿಲ್ಲ.
ಸುಂದರಿಯೊಬ್ಬಳು, ಅವನನ್ನು ಪ್ರೇಮಿಸಿಬಿಟ್ಟಳು,
ಕಾರಣ,ಅವಳನ್ನಾರು ಪ್ರೇಮಿಸಿರಲಿಲ್ಲ.


ಮಾಡಲು ಕೆಲಸವಿಲ್ಲ, ವೆಚ್ಚಕ್ಕೆ ಕಾಸಿಲ್ಲ.
ಅವನ ಮಾತಿನ ಮೋಡಿಗಂತು‌ ಬರವಿಲ್ಲ.
ಏನೊ ಸುಂದರ, ಹೇಗೆ ಬದುಕುವೆ?
ಅಂದರು,ಹೆಣ್ಣಿನ ಮಾತಾ ಪಿತೃಗಳು.
ಕೂಲಿ ಮಾಡುವೆ,ಮೂಟೆ ಹೊರುವೆ,
ಮರದಡಿಯಲ್ಲಿ ಬದುಕ ಸಾಗಿಸುವೆ.
ಸುಂದರಿ ಇಲ್ಲದಿರೆ,ನನಗಂತು ಸಾವೆ.
ಅಂದುಬಿಡುವುದೆ!
ಆ ಸಾವಿಗೆ ಕಾರಣ ನೀವೆ.

ಬೇಡವೊ ಸುಂದರ, ನೀ ಸಾಯಲೇಕೆ?
ನಿನ್ನಾ ಸುಂದರಿ ಮದುವೆ ಆದಂತೆಯೆ ಸಾಕೆ.
ಮದುಮಗನಾದ ಸುಂದರ, ಲಗುಬಗೆಯಿಂದ,
ಮದುವೆ ಮುಗಿಯಿತು ವಿಜೃಂಭಣೆಯಿಂದ,
ಗಂಡಹೆಂಡಿರು, ಸುಂದರ ಸುಂದರಿ ಯರು.
ಅತ್ತೆಯ ಮನೆಯಲೇ ಸಂಸಾರವ ಹೂಡಿದರು.


 ನಮ್ಮ ಸುಂದರ, ಸಕಲವನು ಬಲ್ಲವ.
ಕಪ್ಪನ್ನು ಬಳಿಪೆಂದು,ಬಿಳಿಪನ್ನು ಕಪ್ಪೆಂದು, ಸಾಧಿಸುವ,
ಸಂಪಾದಿಸೊ,ಬೇರೆ ಸಂಸಾರ ಮಾಡೊ ಸುಂದರ ಅಂದರೆ,
ಆ ಕಾಲವಿನ್ನೂ ಕೂಡಿ ಬರಲಿಲ್ಲ ಎಂದು ಬಿಡುವುದೇ.

ಮದುವೆಯಾಗಿ ವಾರವಿನ್ನು ಕಳೆದಿರಲಿಲ್ಲ.
ಅತ್ತೆಯ ಮನೆಯಲ್ಲಿ ಸುಖಕೇನು ಬರವಿಲ್ಲ.
ಅಂದು ಬೆಳಿಗ್ಗೆ ಬಿಸಿಲೇರಿದ ಹೊತ್ತಿಗೆ ಸುಂದರ ಎದ್ದ.
ಅತ್ತೆ ಆದರಿದಿ ಕೊಟ್ಟ ಕಾಫಿಯ ಕುಡಿದ.
ಮನೆಯಂಗಳದಿ ನಿಲ್ಲಿಸಿದ್ದ ಯಾರದೊ ಬೈಕು.
ಸೂಜಿಗಲ್ಲಿನಂತೆ ಸುಂದರನ ಮನಸ್ಸನ್ನು ಸೆಳೆಯಿತು.
ಹೇಗೋ, ಏನೋ, ಬೈಕಿನ ಒಡೆಯನ ಪುಸಲಾಯಿಸಿದ.
ಸವಾರಿ ಮಾಡಿ ಬರುವೆನೆಂದು ಬೈಕನು ಹೊರತೆಗೆದ.

ಸಂದುಗೊಂದುಗಳಲಿ ಸರಾಗವಾಗಿ ಓಡಿತು ಬೈಕು.
ರಸ್ತೆಗೆ ಬಂದಂತೆ ಅದರ ವೇಗ ಹೆಚ್ಚಾಯಿತು.
ಯಾರದೊ ಗಾಡಿ, ಮೇಲೆ ಸುಂದರನ ಸವಾರಿ.
ಕನ‌ಸಿನ ಊಹಾಲೋಕದಿ ತೇಲುತ್ತಾ ಹಾರಿ.
“ಹಿಂದಿನ ಸೀಟಲಿ ಸುಂದರಿ ಕುಂತು,
ರಸ್ತೆಯ ಬದಿಯಲಿ ಜನಗಳು ನಿಂತು,
ತನ್ನನು ಮೆಚ್ಚುವ, ಬೆರಗಾಗಿ ನೋಡುವ,
ಮೈನವಿರೇಳಿಸುವ,ಮನಪುಳಕಿಸುವ”
ದೃಶ್ಯವ ಮನದಲಿ ಕಾಣುತ ಸುಂದರ,
ಅಪರಿಮಿತ ವೇಗದಿ ಗಾಡಿ ಓಡಿಸಿದ.

ರಸ್ತೆಯ ಇಕ್ಕೆಲಗಳಲಿ ಮಣ್ಣಿನ ದಿಬ್ಬವು.
ಮುಂದಿದೆ ರೈಲು ಹಳಿಗಳ ಸಂಕವು.
ವೇಗದಿ ಸಾಗಿದೆ ಸುಂದರನ ಗಾಡಿ ಸವಾರಿ.
ಸಂಕದ ಕೆಳಗಡೆ ಬರುತಿಹದೊಂದು ಲಾರಿ.
ರಸ್ತೆಯ ‌.ಬಲತಿರುವಿನಲಿ ಗಾಡಿ ತಿರುಗಿಸಿ.
ನೋಡಿದ ಸುಂದರ,ತಲೆಯನ್ನು ಕೊಂಕಿಸಿ.
ಯಮಪುರಿ ಹಾದಿಯಲಿ, ತಾ ಸಾಗುವುದನ್ನು.
ರಾಕ್ಷಸಿ ಲಾರಿಯು ವೇಗದಿ ಎದುರಾಗುವುದನ್ನು.
ಬೆವರಿತು ಮೈಯಿ, ನಡಗಿದವು ಕೈಗಳು.
ಛಿದ್ರವಾದವು, ಮೈಮರೆತು ಕಂಡ ಕನಸುಗಳು.
ಕ್ಷಣದಲಿ ಬೈಕನು ಎಡಕ್ಕೆ ತಿರುಗಿಸಿದ.
ಪಕ್ಕದ ಮಣ್ಣಿನ ದಿಬ್ಬಕೆ ಗುದ್ದಿದ.

ಸ್ಟಾರ್ಟಾಗದು ಗಾಡಿ,ರಕ್ತಮಯ ಸುಂದರನ ಮುಸುಡಿ.
ಕನಸಿನ ಲೋಕದಿ ತೇಲುತಾ ಬಂದ ಸವಾರಿ.
ಏದುತಾ, ಕುಂಟುತಾ, ಹಿಡಿಯಿತು ಮನೆಯ ದಾರಿ.
ಏನೋ ಸುಂದರ,ಏನಿದು ನಿನ್ನವತಾರ!
ಎನ್ನುತ್ತಾ ಬಂದು ಬಿಗಿದಪ್ಪಿದಳು ಸುಂದರಿ.
ಸುಂದರ ಬಿದ್ದಿದ್ದು ಮಾರಮ್ಮನ ಗುಡಿ ಬಳಿ.
ಮದುವೆ ನಂತರ,ಅಮ್ಮಗೆ ನೀಡಿಲ್ಲ ಕೋಳಿ ಕುರಿ ಬಲಿ.
ಅಮ್ಮಗೆ ಕೋಪ ಬಂದರೆ ಸುಮ್ಮನಿರುವಳೆ ಮತ್ತೆ,?
ಎಂದು ದೃಷ್ಟಿ ತೆಗೆದು, ಹರಕೆ ಹೊತ್ತಳು ಅತ್ತೆ.
ವೈದ್ಯರಿಂದ ಸುಂದರನಿಗೆ ಚಿಕಿತ್ಸೆಯ ಕೊಡಿಸಿ.
ಆರಾಮವಾಗಿ ಮಲಗಿಸಿದರು ಹಾಸಿಗೆಯ ಬಿಡಿಸಿ.

—————————-

Leave a Reply

Back To Top