ʼಮೇಡಂ ಕೊಟ್ಟ ಶಿಕ್ಷೆʼಭಾಗ-2 ಹಾಸ್ಯ ಲೇಖನ ಎಚ್‌ ಗೋಪಾಲಕೃಷ್ಣ ಅವರಿಂದ

ಮಾನ್ಯರೇ,

ನಮಸ್ಕಾರ. ಹಿಂದೆ ಅರ್ಧಕ್ಕೆ ನಿಂತಿದ್ದ ಹಾಸ್ಯ ಬರಹದ ಮುಂದಿನ ಭಾಗ.. ಇದೋ 

ಮೇಡಂ ಕೊಟ್ಟ ಶಿಕ್ಷೆ….. ೨
ಎಚ್.ಗೋಪಾಲಕೃಷ್ಣ
ಹೋದಸಲ ರಾಮಜ್ಜ ಕತೆಯನ್ನ ಅರ್ಧಕ್ಕೇ ನಿಲ್ಲಿಸಿ ಹೋದನಲ್ಲಾ ಆ ಎಪಿಸೋಡ್ ಹೀಗೆ ಮುಗಿದಿತ್ತು..
ಅಜ್ಜಾ ಕತೆ ಫಿನಿಶ್ ಮಾಡು, ಆಮೇಲೆ ವಿಸರ್ಜನೆ….”ಅಂತ ತಡೆದೆವು. ಮುಠ್ಠಾಳ ಮುಂಡೆ ವ,ನಿಮಗಂತೂ ಕೆಲಸ ಇಲ್ಲ ಅಂದರೆ ನನಗೆ ಇಲ್ಲೇನ್ರೋ…. ಅಂತ ಚಪ್ಪಲಿ ಗೂಡಿನ ಕಡೆ ಹೆಜ್ಜೆ ಹಾಕಿದ.
“ಅಜ್ಜಾ ಅಜ್ಜಾ ಹೀಗೆ ಸಸ್ಪೆನ್ಸ್ ನಲ್ಲಿ ಹಾಕಿ ಹೋಗ್ಬೇಡ…”ಅಂತ ಬೇಡಿಕೊಂಡೆವು.
“ಮುಂದಿನ ಸಲ ಸಿಕ್ಕಿದಾಗ ಕತೆ ಕಂಟಿನ್ಯೂ ಅಂತ ಹೊರಟೆ ಬಿಟ್ಟ.
ಕತೆ ಈ ಘಟ್ಟಕ್ಕೆ ಬಂದು ನಿಂತಿದ್ದಕ್ಕೆ ನನಗೂ ತುಂಬಾ ಬೇಸರ ಇವರೇ…
ಆದಷ್ಟೂ ಬೇಗ ಕುತೂಹಲ ತಣಿಸುತ್ತೇನೆ!
ಈಗ ಮುಂದೆ…
ಗರ ಬಡಿದ ಹಾಗೆ ನಾವೆಲ್ಲ ಕೂತಿದ್ದೆವು. ರಾಮಜ್ಜ ಎದ್ದು ಹೋದ ಅಂತ ಅಲ್ಲ ಬೇಸರ, ಕತೆ ಅರ್ಧಕ್ಕೆ ಬಿಟ್ಟು ಹೋದನಲ್ಲ.. ಅನ್ನೋದು.
“ನಾಳೇನೇ ರಾಮಜ್ಜ ನ ಎಳೆದುಕೊಂಡು ಬಂದು ಕೂಡಿಸಿ ಕತೆ ಮುಗಿಸಿದರೆ ಮಾತ್ರ ಇಲ್ಲಿಂದ ಆಚೆ ಬಿಡೋದು…”ಅಂತ ಹೇಳಿದರೆ ಹೇಗೆ…”ಅನಂತು ಐಡಿಯಾ ಕೊಟ್ಟ.
“ಅದು ಸರಿ ಹೋಗದು…”ಅಂತ ವೀಟೋ ಆಯ್ತು. ಒಂದು ಗಂಟೆ ಅಲ್ಲೇ ಕೂತು ಒಂದು ಹತ್ತು ಸೇರು ಕಾಫಿ ಆರ್ಕೇಜಿ ಖಾರಾ ಅವಲಕ್ಕಿ ಮುಗಿಸಿದೇವಾ…?
ಪ್ರಭಕ್ಕ ಕೂಡ ಬಂದು ಕೂತು ಅವಳ ಪ್ರಾರಬ್ಧ ಅವಳೇ ತಿನ್ತಾ ಕೂತಿದ್ದಳು.
” ಅವಲಕ್ಕಿಗೆ ಖಾರ ಇನ್ನೂ ಬೀಳಬೇಕಿತ್ತು, ಕಾಫಿ ಇನ್ನೂ ಬಿಸಿ ಇರಬೇಕಿತ್ತು…”ಅಂತ ಅವಳ ಪ್ರಾರಬ್ಧ ಬಿಚ್ಚುತ್ತಾ ಇದ್ದಳು. ಪ್ರಭ್ಯಕ್ಕ ನಿಗೇ ಈ ಪ್ರಾರಬ್ಧ ಮೊದಲಿಂದ ಅಂಟಿದೆ!
ಇದ್ದಕ್ಕಿದ್ದ ಹಾಗೇ” ಹೋ ಹೋಹೋ ಹೋಳಿತು ಹೋಳಿತು ಹೋಳಿತು ಏಳಿರೋ ಏಳಿರೋ….”ಶಬ್ದ ಕಿವಿಗೆ ರಾಚಿತಾ?
ದನಿ ಬಂದ ಕಡೆ ನೋಡಿದರೆ ನಮ್ಮ ಇನ್ನೊಂದು ಕಜಿನ್ನು ಗೋಪಾಲಿ ಎದ್ದು ನಿಂತು “ಹೋ ಹೋಹೋ ಹೋಳಿತು ಹೋಳಿತು ಹೋಳಿತು ಏಳಿರೋ ಏಳಿರೋ….”ಅಂತ ಕೋರಸ್ ಅರಚುತ್ತಾ ಇದ್ದಾನೆ!
ಅವನನ್ನ ಸಮಾಧಾನ ಮಾಡಿ ದೆವಾ?
“ಏನು ನಿನ್ನ ಪ್ಲಾನು ಗೋಪಾಳಿ….”ಅಂತ ಕ್ವೆಸ್ ಚ ನ್ ಎಸೆದೋ..
“ಎಲ್ಲಾ ಎದ್ದೇಳಿ. ರಾಮಜ್ಜನ ಮನೆಗೇ ಹೋಗ್ ಬಿಡಾನ. ಇಷ್ಟೊಂದು ಜನ ಕಸಿನ್ಸು ಮನೆಗೆ ನುಗ್ಗಿದರೆ ಕನಕಜ್ಜಿ ಅವನ ತಲೆ ಬುಲ್ಡೆಗೆ ಬಿಸಿ ಬಿಸಿ ನೀರು ಬಿಡ್ತಾಳೆ, ಮುಚ್ಕೊಂಡು ಅವನು ಕತೆ ಹೇಳಲೇ ಬೇಕು ಹಂಗೇ ಪ್ರೆಶರ್ ಕ್ರಿಯೇಟ್ ಮಾಡಾಣ….”ಅಂದ.
ಎಲ್ಲಾರಿಗೂ ಈ ಐಡಿಯಾ ಸರಿ ಅನಿಸ್ತಾ..
“ಎಲ್ಲರೂ ಹೀಗೆ ಒಟ್ಟಿಗೆ ಅವರ ಮನೆಗೆ ನುಗ್ಗಿದರೆ ರಾಮಜ್ಜ ಮನೆ ಬಿಟ್ಟು ಓಡಿಬಿಡ್ತಾನೆ, ಕನಕನ ಬಾಯಿಗೆ ಹೆದರಿ.. ಹಂಗೇ ಮಾಡೋದು ಬೇಡ…..”
“ಮತ್ತೆ ಏನು ಮಾಡೋದು ಅಂತಿಯ..”
“ಕನಕಜ್ಜಿ ಗೆ ಅದರ ಗಂಡ ಹಿಂಗೇ ಕತೆ ಅರ್ಧದಲ್ಲೇ ನಿಲ್ಸಿ ನಮ್ಮೆಲ್ಲರ ನಿದ್ದೆ ಕದ್ಧಿದಾನೆ, ಎಲ್ರೂ ನಿಮ್ಮನೆಗೆ ಬರ್ತಾ ಇದೀವಿ ಅಂತ ಮೆಸೇಜು ಮಾಡಾಣ…”
ಎಲ್ರೂ ಇದಕ್ಕೆ ಗೋಣು ಆಡಿಸಿದೇವಾ.. ಪ್ರಭಕ್ಕ ನೇ ಮೆಸೇಜ್ ಮಾಡ್ಲಿ…. ಅಂದರು…
ಪ್ರಭಕ್ಕ ಒಳಗೆ ಹೋದಳು. ಅದೇನೋ ಫೋನಲ್ಲಿ ಸುಮಾರು ಹೊತ್ತು ಮಾತು ಕೇಳಿಸ್ತು. ಆಚೆ ತಲೆ ಹಾಕಿ ಮೆಸೇಜ್ ಹೋಗಿದೆ ಅಂದಳು….
ಮೆಸೇಜ್ ಎಫೆಕ್ಟ್ ಕಾಯುತ್ತಾ ಮತ್ತೆ ಹತ್ತು ಸೇರು ಕಾಫಿ ಖಾರಾ ಅವಲಕ್ಕಿ ಖಾಲಿ ಮಾಡಿದೆವು.
ಹೊರ ಬಾಗಿಲ ಗಂಟೆ ಆಯಿತು.
ಕನಕಜ್ಜಿ ಒಳಗೆ ಬಂದಳು, ಅವಳ ಹಿಂದೆ ರಾಮಜ್ಜ!
ರಾಮಜ್ಜನ ಕೈಲಿ ಒಂದು ಜತೆ ದೊಡ್ಡ ಗೋಣಿ ಬ್ಯಾಗ್, ನೋಡಿದರೆ ಭಾರ ಇದೆ ಅನಿಸಬೇಕು..
ಅಜ್ಜಾ ಅಜ್ಜೀ ಕಮ್ ಕಮ್ ಕಮ್ ಅಂತ ಆದರದಿಂದ ಕೂಡಿಸಿದೇವ.
ಕನಕಜ್ಜಿ ಪ್ರಭಕ್ಕ ಕಣ್ಣಿನಲ್ಲೇ ಅದೇನೋ ಮಾತಾಡಿ ಕೊಂಡವು. ಇಬ್ಬರೂ ಒಳಕ್ಕೆ ನಡೆದರು.
ರಾಮಜ್ಜ  ಸೋಫಾದ ಮಧ್ಯೆ ಕೂತ. ನಾವೆಲ್ಲ ಅವನ ಸುತ್ತ ಸೋಫಾ ಕುರ್ಚಿ, ಸ್ಟೂಲ್, ಟೀ ಪಾಯಿ ಇವುಗಳ ಮೇಲೆ ಕುಕ್ಕರಿಸಿಕೊಂಡೆವಾ.. ಎದುರಿಗೇ ಟೀ ಪಾಯಿ ಇತ್ತಲ್ಲ ಅದನ್ನ ನೋಡಿದ ಅಜ್ಜ,
“ಹೇಯ್ ಇದನ್ನ ಸಲ್ಪ ಕ್ಲೀನ್ ಮಾಡ್ರೋ” ಅಂದ. ಅದರ ಮೇಲಿದ್ದ ಪೇಪರು,ಪುಸ್ತಕ, ಪೆನ್ನು ನೊಟ್ಬುಕ್ಕೂ ಎಲ್ಲಾ ತೆಗೆದು ಮೂಲೆಲಿ ರಾಶಿ ಹಾಕಿದ ಅನಂತು.
“ಲೇ ಇವಳೇ…..”ಅಂತ ಅಜ್ಜ ಕೂಗಿದ.
“ಇರಿ ಬಂದೇ..”ಅಂತ  ಕೂಗ್ತಾ  ಲೇ ಇವಳೇ  ಹಿಂದೇನೆ ಬಂದಳು. ಲೇ ಇವಳೇ ಅಂದರೆ ಕನಕಜ್ಜಿ, ಅವಳ ಹಿಂದೆ ಪ್ರಭಕ್ಕ ಅವಳ ಕೈಯಲ್ಲಿ ಎರಡು ದೊಡ್ಡ ಮಂಕರಿ….!
ಟೀ ಪಾಯಿಖಾಲಿ ಆಗಿತ್ತಲ್ಲ ಅದರ ಮೇಲೆ ಮಂಕರಿ ಇಟ್ಟಳು, ಅದರ ಪಕ್ಕ ನೆಲದ ಮೇಲೆ ಇನ್ನೊಂದು ಮಂಕರಿ ಇಟ್ಟಳು. ಗೋಣಿ ಬ್ಯಾಗ್ ತೆಗೆದು ಅದರಿಂದ ಮತ್ತೊಂದು ಬ್ಯಾಗ್ ಆಚೆ ತೆಗೆದು ಟೀ ಪಾಯಿ ಮೇಲಿನ ಮಂಕರಿಗೆ ಸುರಿದಳು…! ಅದೇನು ಸುರಿದಳು ಅಂತ ನಿಮಗೆ ಕುತೂಹಲ ತಾನೇ? ಇರಿ ಹೇಳ್ತೀನಿ..
ಕಡ್ಲೇಕಾಯಿ ಇವರೇ.. ಬೇಯಿಸಿದ ಕಡಲೆಕಾಯಿ. ಇನ್ನೂ ಹಬೆ ಆಡ್ತಾ ಇದೆ. ಕಡ್ಲೇಕಾಯಿ ಅಂದರೆ ಇಡೀ ನಮ್ಮ ಕಸಿನ್ಸ್ ವಂಶಕ್ಕೇ ಮೈಯೆಲ್ಲಾ ಬಾಯಿ ಅಂದರೆ ಬಾಯಿ. ನಮ್ಮ ತಾತ, ಅವನ ತಾತ, ಅವನ ತಾತ.. ಎಲ್ಲರೂ ಕಡ್ಲೇಕಾಯಿ ಬೆಳೀತಾ ಇದ್ದೋರು, ಅದರಿಂದ ಕಡ್ಲೇಕಾಯಿ ಅನ್ನೋದು ನಮ್ಮ ಜೀನ್ಸ್ ನಲ್ಲಿ ತುಂಬಾ ಇಷ್ಠದ್ದು! ಅದರಲ್ಲೂ ಬೇಯಿಸಿದ್ದೂ, ಗರಮ ಗರಾಮ ಹುರಿದದ್ದು, ಕಾಂಗ್ರೆಸ್, ಉಪ್ಪು ಹಾಕಿದ್ದು…ಹೀಗೆ ಯಾವುದೇ ರೂಪದ ಕಡ್ಲೇಕಾಯಿ ಅಂದರೆ ನಮಗೆ ಮೈಯೆಲ್ಲಾ ಬಾಯಿ ಅಂತ ಹೊರಗಡೆಯಿಂದ ಬಂದಿರೋ ಸೊಸೆರು ಹೇಳೋದು ವಾಡಿಕೆ. ಸಲ್ಪ ದಿನ ಆದಮೇಲೆ ಅವರೂ ಅಂದರೆ ಸೋಸೇರು ಸಹ ನಂಹಾಗೆ….!
ಒಂದು ಬ್ಯಾಗ್ ಖಾಲಿ ಆಯ್ತು ಸರಿ, ಇನ್ನೊಂದು ಬ್ಯಾಗ್ ನಲ್ಲಿ ಏನು ತಂದ ಅಜ್ಜ ಅನ್ನುವ ಕುತೂಹಲ ಅಲ್ವಾ. ಕನಕಜ್ಜಿ ದೊಡ್ಡ ಹಿತ್ತಾಳೆ ತಟ್ಟೆ ಹೊತ್ತು ತಂದಳು, ಅದರಲ್ಲಿ ಚೂರು ಚೂರು ಮಾಡಿರೋ ಮುದ್ದೆ ಬೆಲ್ಲ. ಕಡ್ಲೇಕಾಯಿ ಅದೂ ಬೇಯಿಸಿದ್ದು, ಅದರ ಜತೆಗೆ ಬೆಲ್ಲ… ಅದೇನು ಕಾಂಬಿನೇಶನ್ ಅಂತೀರಿ? ಅದರ ಸುಖ ಉಂಡವರಿಗೆ ಮಾತ್ರ ಗೊತ್ತು.
ರಾಮಜ್ಜ ನ ಕತೆ ಹಾಳಾಗಲಿ ಮೊದಲು ಇದು ಮುಗಿಸೋಣ ಎನ್ನುವ ಕಾತರ ಬಲವಾಗಿ ಗಟ್ಟಿಯಾಗಿ ತಲೆಯಲ್ಲಿ ಕೂರ ಬೇಕು.. ಅಷ್ಟರಲ್ಲಿ ಪ್ರಭಕ್ಕ ಬಾಯ್ ಬಿಡ್ತು.
“ಕಡ್ಲೇಕಾಯಿ ಸಿಪ್ಪೆ ಕೆಳಗಡೆ ಮಂಕರಿಲಿ ಹಾಕಬೇಕು, ಊರೆಲ್ಲಾ ಹರಡಬೇಡಿ…”
ತಲೆ ಆಡಿಸಿ ಮಂಕರಿಗೆ ಕೈ ಹಾಕಿ ಒಂದೊಂದು ಹಿಡಿ ಕೈಗೆ ತಗೊಂಡೆವು ತಾನೇ?
ರಾಮಜ್ಜ ಕೆಮ್ಮಿ ಒಮ್ಮೆ ಸುತ್ತೂ ನೋಡಿದ, ಸಿಕ್ಸರ್ ಬಾರಿಸುವ ಮುನ್ನ ಕೊಹ್ಲಿ ಫೀಲ್ಡರ್ ನೋಡುವ ಹಾಗೆ.. “ಅಜ್ಜ, ಸ್ಟಾರ್ಟ್……’ ಅಂದೆವು
ಅಜ್ಜ, ಸ್ಟಾರ್ಟ್ ಮಾಡಿದ
“ಏನು ಹೇಳಿದ್ದೆ.. ಮೂರೂ ಜನ ಸಿಸ್ಟರ್ಸು ಇವನಿಗೆ, ಕಳ್ಳೆಪುರಿ ಗೆ ಪನಿಶ್ಮೆಂಟ್ ಮೇಲೆ ಪನಿಶ್ಮೆಂಟ್ ಅನ್ನುವ  ಟಾರ್ ಚರ್ ಕೊಟ್ಟಿದ್ದರು. ಇವನು ಅಳುತ್ತಾ ನನ್ನ ಕಾಲು ಹಿಡಕೊಂಡು ಏನಾದರೂ ಪ್ಲಾನ್ ಮಾಡು, ನನ್ನ ಕಾಪಾಡು ಅಂತ ಕೇಳಿದ್ದ ಅಂತ ಹೇಳಿದ್ದೆ ಅಲ್ವಾ.ನನ್ನ ಹತ್ರ ಹತ್ತು ಪ್ಲಾನ್ ಇದೆ, ನಿನ್ನನ್ನ ಈ  ಕಷ್ಟ ದಿಂದ ಪಾರು ಮಾಡೋಕ್ಕೆ….. ಅಂತ ಹೇಳಿದ್ದೆ ಅಂತ ಅಲ್ಲಿಗೇ ತಾನೇ ನಿಲ್ಲಿಸಿದ್ದು…?”
“ಹೌದಜ್ಜಾ… ಕೋರೆಕ್ಟ್, ಯು ಆರ್ ಕೋರೆಕ್ಟ್….”ಅಂತ ಒಟ್ಟಾಗಿ ಕೂಗಿದೋ.
ಅಜ್ಜ ಕತೆ ಕಂಟಿನ್ಯೂ ಮಾಡಿದ
“ಪಾಪ ಅವನನ್ನು ನೋಡಿ ನನ್ನ ಕಣ್ಣಲ್ಲೇ ನೀರು ಬಂದಿತ್ತು ಕಣ್ರಪ್ಪಾ… ನಾನು ಹೋದಾಗ ಆ ದಪ್ಪನೆ ಪುಸ್ತಕ ಕಾಪಿ ಮಾಡ್ತಾ ಇದ್ದ. ಹತ್ತು ಸಲ ಅಂತ ಇಂಪೋಸಿಶನ್, ಇವನು ನಾಲ್ಕನೆಯದು ಬರೀತಾ ಇದ್ದದ್ದು……’
“ಹೌದೌದು….”
*.  *.  *
ಒಳಗಡೆ ಪ್ರಭಕ್ಕ ಕನಕಜ್ಜಿ ಮಾತಾಡ್ತಾ ಇದ್ದರು
“ಇವೆಲ್ಲಾ ನಮ್ಮನೆಗೆ ಬರೋ ಪ್ಲಾನ್ ಮಾಡಿವೆ ಅಂತ ನೀನು ಪೋನು ಮಾಡಿದೆ ನೋಡು, ಇದು ಮಾಡಿ ಮೇಲೆ ಅದರ ರೂಮಲ್ಲಿ ಮಂಚದ ಮೇಲೆ ಹೊಾ ಶಿವಾ ಅಂತ ಬಿದ್ದಿತ್ತು… ಕೆಳಗಡೆ ಎಳ್ಕೊಂಡು ಬಂದೆ. ನಿನ್ನ ವಂಶದ ಕೋತಿಗಳು ಇಲ್ಲಿಗೆ ಬರುತ್ವಂತೆ ಪ್ರಭೀ ಪೋನ್ ಮಾಡಿದ್ಲು. ಹತ್ತು ಕೇಜಿ ಅವರೇ ಕಾಯಿ ತಗೊಂಡು ಬಂದು ಅದನ್ನ ಬಿಡಿಸು, ನಾಲ್ಕು ತೆಂಗಿನಕಾಯಿ ತುರಿದುಕೊಡೂ, ಅಂಗಡಿಯಿಂದ ಮೂರು ಕೇಜಿ ರವೆ, ಐದು ಕೇಜಿ ಆಲೂಗೆಡ್ಡೆ….. ತಗೊಂಡ ಬಾ….. ಅಂದೆ.
ಯಾಕೆ ಅದೆಲ್ಲಾ? ಏನು ಸಮಾರಾಧನೆ… ಅಂತೂ.. ಆಲ್ಲಿ ಹೋಗಿ ತಂಬಿಟ್ಟು ಚಕ್ಕಲಿ ಕೋಡುಬಳೆ ತೆಂಗೋಲ್ ಎಲ್ಲಾ ಮುಕ್ಕಿದ್ದಿ, ಗಡವ ಕೋತಿಗಳು ಇಲ್ಲಿಗೆ ಬಂದಾಗ ಅವುಕ್ಕೆ ಮಾಡಿ ಬಡಿ ಬೇಕಲ್ಲಾ.. ಅಂತ ರೇಗಿದೆ. ನಾನೇ ಎಲ್ಲಾ ತಂದು ಮಾಡ್ತೀನಿ ಅಂದರೆ ಖುಷಿಯಾಗಿ ಮಾಡು ಮಾಡು ಅಂತ ಬಿದ್ದಿರೋದು. ಅದಕ್ಕೇ ಕೆಲಸ ಬಿತ್ತಲ್ಲಾ, ನನ್ನೂ ಕರ್ಕೊಂಡು ಮಾರ್ಕೆಟ್ ಗೆ ಬಂತು. ಆಲ್ಲಿ ಇದನ್ನೆಲ್ಲಾ ತಗೊಂಡು ಅವರ ಮನೆಗೆ ಹೋಗೋಣ ಅಂತ ಹೊಸ ಐಡಿಯಾ ಹುಟ್ಟುಹಾಕಿದೆ ಅದರ ತಲೆಯಲ್ಲಿ…ಆಲ್ಲಿ ಇದೆಲ್ಲಾ ಕೊಂಡು ಕೊಂಡು ಇಲ್ಲಿ ಬಂದ್ವು….”
“ಅಯ್ಯೋ ನೀನ್ಯಾಕೆ ಇಷ್ಟೊಂದು…..”
“ತೆಪ್ಪಗಿರೇ ಪ್ರಭಿ ಇವು ಚಾನ್ಸ್ ಸಿಕ್ಕಿದ್ರೆ ಹುರಿದು ಮುಕ್ಕುತ್ತವೆ… ನಗಬೇಡ ಕೋಪ ಬರುತ್ತೆ ನನಗೆ….
ಹಾಗೇ ನಮ್ಮದಕ್ಕೂ ವಾರ್ನ್ ಮಾಡಿದೀನಿ. ಕತೆ ಕೇಳುತ್ತವೆ ಅಂತ ಅವರನ್ನೆಲ್ಲ ಗುಡ್ಡೆ ಹಾಕ್ಕೊಂಡು ಹರಿಕತೆ ಮಾಡೋದೂ ಮೊದಲು ನಿಲ್ಸು…… ಅಂತ
ಮಾರಾಯ್ತಿ ನಕ್ಕು ಹೊಟ್ಟೆ ಉರಿಸ್ಬೇಡ ನೀನು….”
***
ಇತ್ತ ರಾಮಜ್ಜ ಮುಂದುವರೆಸಿದ್ದ
“….ಇವನು ನಾಲ್ಕನೆಯದು ಬರೀತಾ ಇದ್ದದ್ದು…… ಆಗ ನನ್ನ ಎಂಟ್ರಿ ಆಗಿದ್ದು. ನನ್ನ ಎದೆಗೆ ಒರಗಿದ್ದ. ಕಣ್ಣಲ್ಲಿ ನೀರು ಹರಿತಾ ಇತ್ತು. ಮೂಗಲ್ಲಿ ಗೊನ್ನೆ…
ಅವನಿಗೆ ಪಾಪ ಈ ಇಂಪೋಸಿಸ್ಹಾನ್ ಜೀವನ ಸಾಕಾಗಿತ್ತು.
“ಏನ್ಮಾಡ್ಲಿ ಈಗ? ಅಂತ ಮೂಗು ಒರೆಸಿಕೊಂಡ. ಬಸ್ ಸ್ಟ್ಯಾಂಡ್ ನಾಗೆ ಶಾಮಿನ ಕೂಡಿಸಿ ಬಂದಿದೀನಿ. ಅವನ್ನ ಕೂಗ್ತೀನಿ.. ಅಂತ ಹೇಳಿದೆ ಶಾಮಿಗೆ ಬಾರ್ಲಾ ಅಂತ ಪೋನ್ ಮಾಡಿದೆ.ಶಾಮಿ ಬಂದ. ಅವನನ್ನ ಮೂಲೆ ಲೀ ಕೂಡಿಸಿ ಕಂಪೋಸಿಷನ್ ಬರೆಯಕ್ಕೆ ಕೂಡಿಸಿದೆ. ಅವನು ನಾನು ಬರೆಯಲ್ಲ ಅಂತ ಒಂದೇ ವರಾತ. ಎರಡು ಸೇರು ಗೋಡಂಬಿ ಬರೆದು ಮುಗಿಸಿದ ಮೇಲೆ, ಬರಿ ಬೇಕಾದರೆ ಮುಗಿಸೊಗಂಟಾ ಅರ್ಧರ್ಧ ಕೇಜಿ ಪಿಸ್ತಾ ಸಪ್ಲೈ ಇರ್ತದೆ ಅಂತ ಪ್ರಾಮಿಸ್ ಮಾಡಿ ಬರೆಯಕ್ಕೆ ಒಪ್ಪಿಸಿ ಆಯ್ತಾ…
ಅವನು ಇನ್ನೊಬ್ಬ ಕಳ್ಳೆಪುರಿ ಚಿಗಪ್ಪ ನ ಮೊಮ್ಮಗ ಪಿಯುಸಿ ನಾಲ್ಕು ಸಲ ಫೇಲ್ ಆಗಿದ್ದು, ಮನೇಲೇ ಪೋಲಿ ಕೂತಿದ್ದಾನಲ್ಲ ಹೂಂ ಅವನೇ ತಿಪ್ಪು ಅವನನ್ನ ಕೆಲಸ ಕೊಡ್ತೀವಿ ಬಾ ಅಂತ ಕರೆಸಿದೆ.ತಿಪ್ಪು ಕಳ್ಳೆಪುರಿ ಪಿಎ ಅದ್ನಾ. ಅವನ ಪರ್ಮಿಷನ್ ಇಲ್ಲದೇ ಯಾರಿಗೂ ರೂಮಿಗೆ ಬರಾಕ್ಕೆ ಆಗಬಾರದು ಹಂಗೇ ತಾಕೀತು….
ಬೇಕೂಫ ಮುಂಡೇವಾ ಹಾಗೆ ಜೋರಾಗಿ ನಗಬೇಡ್ರೋ.. ಊರ್ ಗೆಲ್ಲಾ ಈ ಸುದ್ದಿ ಡಾಣಾ ಡಂಗೂರ ಆಗಬಾರದು..
“ಒಂದು ವಾರ ಅಲ್ಲೇ ಇದ್ದು ಎಲ್ಲಾ ಸರಾಗ ಆಗದೆ ಅಂತ ಅನಿಸಿದ ಮೇಲೆ ಅಲ್ಲಿಂದ ಹೊರಟಿದ್ದು……”ಅಂತ ರಾಮಜ್ಜ ಮಾತು ನಿಲ್ಲಿಸಿದ.
ಹಾಗೋ ಸರಿ. ಈಗೇನು ಕಳ್ಳೆಪುರಿ ಪ್ರಾಬ್ಲಂ ಇಲ್ವಲ್ಲಾ…”
“ಕಳ್ಳೆಪುರಿ ಪ್ರಾಬ್ಲಂ ಸಾಲ್ವ್ ಆಯ್ತು…..”ಅಂತ ಮಾತು ಅರ್ಧದಲ್ಲೇ ತಡೆದ. ಏನೋ ಹೇಳಬೇಕೋ ಬೇಡವೋ ಎನ್ನುವ to be or not to be ದ್ವಂದ್ವ ಅವನ ತಲೇಲಿ ಇದೆ ಅನಿಸಿತು.
“ರಾಮಜ್ಜ ಏನೋ ಹೇಳಬೇಕುಂತ ಇದೆ ನಿನ್ನ ಮನಸ್ಸಲ್ಲಿ. ಅದೇನು ಹೇಳು, ಹೃದಯ ಹಗುರಾಗುತ್ತೆ….”ಅಂತ ಜಾಕ್ ಹಾಕಿದೆವು ಜಾಕ್ ಹಾಕೋದು ಅಂದರೆ ಹುರಿದುಂಬಿಸಿ ಬಿಡೋದು ಅಂತ ನಮ್ಮ ಕಸಿನ್ಸ್ ಭಾಷೇಲಿ..
ರಾಮಜ್ಜ ಒಂದು ಬೊಗಸೆ ಕಡ್ಲೇಕಾಯಿ ಎದುರು ಹಾಕೊಂಡ, ಅದರ ಜತೆಗೆ ಎರಡು ಬೊಗಸೆ ಬೆಲ್ಲ ಅವನ ಪಕ್ಕ ಹಾಕಿದೆವು. ಒಂದರ ನಂತರ ಒಂದು ಮುಕ್ತಾ ಮುಕ್ತಾ ಮಾತಿಗೆ ಬಂದ..
“ಕಳ್ಳೆಪುರಿ ಪ್ರಾಬ್ಲಂ ಸಾಲ್ವ್ ಆಯ್ತು ಅಂತ ಹೇಳಿದೆ ಅಲ್ವಾ. ಹೊಸಾ ಪ್ರಾಬ್ಲಂ ಒಂದು ಶುರು ಆಗಿ ಬಿಡ್ತು ಕಣ್ರಯ್ಯ…”ಅಂದ ರಾಮಜ್ಜ.
ಕುತೂಹಲ ಕೆರಳಲು ಇಷ್ಟು ಸಾಕು ತಾನೇ..?
“ಅಜ್ಜಾ ಅದೇನು ಹೊಸಾ ಸಮಸ್ಯೆ…..”ಅಂತ ಮುಗಿಬಿದ್ದೆವು.
“ಕಳ್ಳೆಪುರಿ ಕೊನೆ ನಾದಿನಿ ಅದೇ ಕಾಲೇಜು ಮೇಡಮ್…..”ಅಂತ ಹೇಳಿ ಮಾತು ನಿಲ್ಲಿಸಿದ.
“ಅಜ್ಜಾ, ಹೀಗೆ ಅರ್ಧರ್ಧ ನಿಲ್ಸಿ ನಮ್ಮ ಟೆನ್ಶನ್ ಏರಿಸ್ಬೇಡ…”ಅಂತ ಕೋರಿಕೊಂಡೆವು.
“ಹೂಂ ಸರಿ ನೀವು ಹೇಳೋದು ಸರೀನೇ….”ಅಂತ ಸುತ್ತು ಮುತ್ತು ನೋಡಿದ. ಪ್ರಭಕ್ಕ, ಕನಕಜ್ಜಿ ಇಬ್ಬರೂ ಒಳಗಿದ್ದರಾ?
“ಅವರಿಬ್ಬರೂ ಒಳಗೇ ಇದಾರ ನೋಡಿ…..”ಅಂದ. ಅನಂತು ಆಚೆ ಹೋಗಿ ನೋಡಿಕೊಂಡು ಬಂದ. “ಹಿತ್ತಲಲ್ಲಿ ನುಗ್ಗೆ ಸೊಪ್ಪು ಕೀಳುತ್ತಾ ಅವ್ರೆ…” ಅಂದ
“ಒಳಗೆ ಬಂದು ಬಾಗಿಲು ಮುಚ್ಚಿ. ಅಡ್ಡಕ್ಕೆ ಒಬ್ಬ ಕುರ್ಚಿ ಬಡಕೊಂಡು ಕುಕ್ಕರ್ಸ್ಕೋ…. ಇದು ತುಂಬಾ ಸೀಕ್ರೆಟ್. ಯಾರಿಗೂ ಬಾಯಿ ಬಿಡಬಾರದು……”ಅಂದ!
ಯಾವುದೋ ಹೊಸಾ ಸಮಸ್ಯೆ ಹುಟ್ಟಿದೆ ಅನಿಸ್ತಾ..
“ಅಜ್ಜಾ ಅದೇನು ಹೇಳು. ನಮ್ಮನೆ ದೇವ್ರು ಭಕ್ತರಹಳ್ಳಿ ನರಸಿಂಹ , ಜಿರಳ ಗುಂಟೆ ಆಂಜನೇಯ ಸ್ವಾಮಿ ಆಣೆಗೂ ಯಾರಿಗೂ ಬಾಯಿ ಬಿಡೋಲ್ಲ…..”ಅಂತ ಕೈಚಾಚಿ ಪ್ರಾಮಿಸ್ ಮಾಡಿದೋ..
ಅಜ್ಜ ಸ್ವಲ್ಪ ರಿಲ್ಯಾಕ್ಸ್ ಆದ
“ಕಳ್ಳೆಪುರಿ ಕೊನೆ ನಾದಿನಿ ಅದೇ ಕಾಲೇಜು ಮೇಡಮ್, ಅದು ನಮ್ಮ ತಿಪ್ಪು ನ ಲವ್ ಮಾಡಕ್ಕೆ ಶುರು ಮಾಡಿದಾಳರಪ್ಪಾ……”ಅಂದ. ಇದು ಮಿಕ್ಕವರಿಗೆ ಶಾಕ್… ಎರಡು ನಿಮಿಷ ಉಸಿರು ಎಳೆದುಕೊಂಡು ಮುಂದುವರೆಸಿದ.
“ಕಳ್ಳೆಪುರಿ ಹೆಂಡತಿ ಈ ವಿಷಯ ಹೇಳಿ ತಿಪ್ಪುನ ಒಪ್ಸಿ ಅಂತ ಕೇಳಿಕೊಂಡಳು……”
“ತಿಪ್ಪ ಏನಂದ..?”ಅಂತ ಕೋರಸ್ ಬಂತು.
“ತಿಪ್ಪುಗೆ ಈ ಸಂಗತಿ ಇನ್ನೂ ಗೊತ್ತಿಲ್ಲ. ಮುಂಡೆ ಗಂಡ ಪಿಯುಸಿ ನಲ್ಲಿ ಐದು ಸಲ ಫೇಲು. ಕಾಲೇಜು ಡ್ರಾಪ್ ಔಟ್ ಅಂತ ಅವಳ ಅಕ್ಕನಿಗೆ ಹೇಳಿದೆ.ಪ್ರಪಂಚದಲ್ಲಿ ಎಲ್ರೂ ಪಿಯೂಷಿ ಪಾಸಾಗಿರ್ತಾರ ಅಂತ ಅಕ್ಕ ತಂಗಿ ಲಾಜಿಕ್ ಹಾಕ್ತಾರೆ…..”
“ತಿಪ್ಪ ಲಕ್ಕಿ ನನ್ಮಗ. ಏನಂದ ಅವನು…”
“ಅವನಿಗಿನ್ನೂ ಇದು ಗೊತ್ತಿಲ್ಲ  ಕಣ್ರಯ್ಯ … ಅವನಿಗೂ ಗೊತ್ತಿಲ್ಲ.ಅವನಮ್ಮನಿಗೂ ತಿಳಿಯದು . ಗೊತ್ತಾದರೆ ಅವರಮ್ಮ ಭೂಮಿ ಆಕಾಶ ಒಂದು ಮಾಡ್ತಾಳೆ….”
“ಮತ್ತೆ ಮುಂದೆ…..”ನಮ್ಮ ಕುತೂಹಲ ನಮಗೆ.
“ಸ್ವಲ್ಪ ದಿವಸ ಈ ವಿಷಯ ಯಾರಿಗೂ ಹೇಳೋದು ಬೇಡ.. ಮುಂದಿನ ತಿಂಗಳು ಬರ್ತೀನಿ, ಆಗ ಒಂದು ಪರಿಹಾರ ಹುಡುಕಿರ್ತೀನಿ ಅಂತ ಬಂದಿದ್ದೀನಿ….”ಅಂದ ಅಜ್ಜ.
“ಏನಾದರೂ ಪ್ಲಾನ್ ಮಾಡಿದ್ದೀಯಾಜ್ಜಾ…..”
ಅಜ್ಜ ಅಂಗೈ ಅಡ್ಡ ಹಿಡಿದ. ಬಾಗಿಲು ಧಬ್ ಧಬ್ ಅಂತ ಬಡಿದ ಶಬ್ದ ಕೇಳಿಸಿತು.
“ಮುಂದಿನ ಕತೆ ಮುಂದೆ ಸಿಕ್ಕಿದಾಗ.. ಎಲ್ಲರೂ ಸದ್ಯಕ್ಕೆ ಚುಪ್ ಅಂದ. ಬಾಗಿಲು ಓಪನ್ ಮಾಡು….” ಅಂದ. ಪ್ರಭಕ್ಕ ಕನಕಜ್ಜಿ “ಅದೇನು ಬಾಗಿಲು ಹಾಕ್ಕೊಂಡು ಅದೇನು ಮಾಡ್ತಿದ್ದೀರಿ…..”ಅಂತ ಒಳಗೆ ಬಂದರು .
ಕತೆ ಮುಂದಕ್ಕೆ ಹೋಯ್ತು!


2 thoughts on “ʼಮೇಡಂ ಕೊಟ್ಟ ಶಿಕ್ಷೆʼಭಾಗ-2 ಹಾಸ್ಯ ಲೇಖನ ಎಚ್‌ ಗೋಪಾಲಕೃಷ್ಣ ಅವರಿಂದ

  1. ಸಕತ್ತಾಗಿದೆ. ಮುಂದಿನ ಕತೆಗೆ ಕಾಯ್ತಿದೀನಿ.

  2. ಧನ್ಯವಾದಗಳು, ಇವ್ರೆ. ನಿಮ್ಮ ಹೆಸರು ಕ್ಷಮಿಸಿ, ಗೊತ್ತಾಗಲಿಲ್ಲ!

Leave a Reply

Back To Top