ಸಾವಿರದ ಶರಣು ….ಗಾನಯೋಗಿ ಗುರುವಿಗೆ (ಪಂಡಿತ ಪುಟ್ಟರಾಜ ಗವಾಯಿಗಳ  ಜನ್ಮದಿನದ ನಿಮಿತ್ತ ಮಾರ್ಚ್ 3)

ಈ ಸನ್ಯಾಸಿಗಳಿಗೆ ಸಂಸಾರವಿಲ್ಲ, ಮಕ್ಕಳಿಲ್ಲ ಮರಿ ಇಲ್ಲ ಎಂಬುದು ಅವರನ್ನು ನೋಡಿದರೆ ಅನ್ನಿಸುತ್ತಿರಲಿಲ್ಲ. ಅವರ ಬಳಿ ಬಂದ ಎಲ್ಲ ಅನಾಥ ಅಂಧ ಮತ್ತು ಬಡ ಮಕ್ಕಳಿಗೆ ತಾಯಿಯ ಆಸರೆ ಅವರದು.ಸದಾ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ತುಡಿಯುತ್ತಾ ತಾವು ಸ್ವತಃ ಅಂಧರಾಗಿದ್ದು ಕೂಡ ಅಂಧ, ಅನಾಥ ಮಕ್ಕಳ ಕುರಿತು ಚಿಂತಿಸುತ್ತಾ ಅವರಲ್ಲಿ ಸಂಗೀತದ ಮೂಲಕ, ಶಿಕ್ಷಣದ ಮೂಲಕ ಶಕ್ತಿಯನ್ನು ತುಂಬುತ್ತಾ ಅನ್ನ, ಆಸರೆ ನೀಡಿದವರು ನಮ್ಮೆಲ್ಲರ ಪ್ರೀತಿಯ ಪುಟ್ಟಯ್ಯಜ್ಜನವರು.

ತಮ್ಮ ದೈಹಿಕ ನ್ಯೂನತೆಯಿಂದಾಗಿ ರಸ್ತೆ ಬದಿಯಲ್ಲಿ ರೈಲ್ವೆ ಸ್ಟೇಷನ್ ನಲ್ಲಿ, ವರ್ತುಲ ರಸ್ತೆಗಳಲ್ಲಿ, ಬೀದಿ ಬದಿಯಲ್ಲಿ ತಳ್ಳಲ್ಪಟ್ಟ ಸಾವಿರಾರು ಮಕ್ಕಳು ಇಂದು ತಮ್ಮದೇ ಕಾಲ ಮೇಲೆ ನಿಂತು ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳು. ಇಂದಿಗೂ ಉತ್ತರ ಕರ್ನಾಟಕದ ಬಡತನದ ಹಿನ್ನೆಲೆಯ ಮನೆಗಳ ಪಾಲಕರ ಕಟ್ಟಕಡೆಯ ಭರವಸೆಯಾಗಿ ಅಚಲವಾಗಿ ನಿಂತಿದ್ದವರು ಪುಟ್ಟರಾಜ ಗವಾಯಿಗಳು.

ಇಂದಿನ ಹಾವೇರಿ ತಾಲೂಕಿನ ದೇವಗಿರಿ ಗ್ರಾಮ ಪುಟ್ಟರಾಜ ಗವಾಯಿಗಳ ಹುಟ್ಟೂರು. ತಂದೆ ತಾಯಿಯರನ್ನು ಚಿಕ್ಕಂದಿನಲ್ಲೇ ಕಳೆದುಕೊಂಡು ಅನಾಥರಾದ ಪುಟ್ಟಯ್ಯನವರನ್ನು ಸೋದರ ಮಾವ ಚಂದ್ರಶೇಖರಯ್ಯನವರು ಪಂಚಾಕ್ಷರ ಗವಾಯಿಗಳಿಗೆ ಒಪ್ಪಿಸಿದರು. ತಮ್ಮಂತೆ ಅಂಧನಾದ ಪುಟ್ಟ ಮಗುವಿನ ಮೇಲೆ ವಿಶೇಷ ಮಮತೆ ಹೊಂದಿದ ಪಂಚಾಕ್ಷರ ಗವಾಯಿಗಳು ಮಗುವಿಗೆ ಅವಶ್ಯಕವಾದ ವಿದ್ಯಾಭ್ಯಾಸದ ಜೊತೆ ಜೊತೆಗೆ  ಕರ್ನಾಟಕ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಕೊಡಿಸಿದರು. ಹಾರ್ಮೋನಿಯಂ, ಪಿಟೀಲು,ಸಾರಂಗ ಮತ್ತು ಶಹನಾಯಿ ವಾದನದಲ್ಲೂ ಪುಟ್ಟಯ್ಯನವರು ಪರಿಣತರಾದರು. ಅಂಧರಿಗೆ ವರದಾನವಾಗಿದ್ದ ಬ್ರೈಲ್ ಲಿಪಿಯಲ್ಲಿ ಪರಿಣತರಾಗಿದ್ದರು ಪುಟ್ಟರಾಜರು.

ಗುರುಗಳ ಪ್ರೀತಿ, ನಂಬಿಕೆ, ವಿಶ್ವಾಸ ಮತ್ತು ನಿಷ್ಠೆಯನ್ನು ಗಳಿಸಿಕೊಂಡ ಪುಟ್ಟಯ್ಯನವರು 1944 ರಲ್ಲಿ ವೀರೇಶ್ವರ ಪುಣ್ಯಾಶ್ರಮದ  ಪೀಠಾಧಿಪತಿಯಾಗಿ ಕಾರ್ಯನಿರ್ವಹಿಸಲಾರಂಭಿಸಿದರು.
ದಿನದ ಎರಡು ಹೊತ್ತು ಇಷ್ಟಲಿಂಗ ಪೂಜಾ ನಿರತರಾಗುತ್ತಿದ್ದ ಪುಟ್ಟಯ್ಯನವರು ಮಕ್ಕಳಿಗೆ ಪ್ರತಿದಿನ ನಾಲ್ಕು ಗಂಟೆಯಷ್ಟು ಕಾಲ ಸಂಗೀತ ಪಾಠದ ರಿಯಾಜ್ ಜೊತೆಗೆ ಅವರ ಆಟ-ಪಾಠ, ಲಾಲನೆ-ಪಾಲನೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು.

ಪ್ರವಚನಗಳಲ್ಲಿ ಸಂಗೀತವನ್ನು ಮೇಳವಿಸಿ ಹಿಂದುಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸಬಲ್ಲ
ಏಕಮೇವಾದ್ವಿತೀಯರಾದ ಪುಟ್ಟಯ್ಯಜ್ಜನವರು
ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲದಲ್ಲಿಯೇ ನುಡಿಸಿ ನೋಡುಗರಲ್ಲಿ, ಕೇಳುಗರಲ್ಲಿ ಬೆರಗನ್ನು ಹುಟ್ಟಿಸುತ್ತಿದ್ದರು. ಉಭಯ ಗಾಯನ ವಿಶಾರದ ಮತ್ತು ಸಕಲ ವಾದ್ಯ ಕಂಠೀರವ ಎಂಬ ಬಿರುದನ್ನು ಹೊಂದಿದ್ದರು. 35ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ ಪಂಡಿತ ಪುಟ್ಟರಾಜ ಗವಾಯಿಗಳು ತಮ್ಮ ಗುರುಗಳ ಹೆಸರಿನಲ್ಲಿ ಪಂಚಾಕ್ಷರವಾಣಿ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದ್ದರು.

ಪುಟ್ಟರಾಜ ಗವಾಯಿಗಳ ಇಷ್ಟ ಲಿಂಗ ಪೂಜಾ ವಿಧಾನ ಕುರಿತು ಜನಜನಿತವಾಗಿದ್ದ ವಿಷಯಗಳಿಂದ, ಸುದ್ದಿಗಳಿಂದ
 ಪ್ರೇರಿತರಾದ ವರ ನಟ ಡಾಕ್ಟರ್ ರಾಜಕುಮಾರ್ ಅವರು ಪುಟ್ಟಯ್ಯಜ್ಜನವರ ಪೂಜಾ ವಿಧಾನವನ್ನು ನೋಡಲು ಬಯಸಿದರು. ಆದರೆ ಇಷ್ಟ ಲಿಂಗ ದೀಕ್ಷೆ ಪಡೆದು ಲಿಂಗಧಾರಣೆ ಮಾಡಿಕೊಂಡವರಿಗೆ ಮಾತ್ರ ಪುಟ್ಟಯ್ಯಜ್ಜನವರ ಪೂಜಾ ವಿಧಾನವನ್ನು ನೋಡಲು ಸಾಧ್ಯ ಎಂಬ ಅರಿವಿನಿಂದ ತಾವು ಕೂಡ ಪುಟ್ಟಯ್ಶಜ್ಜನವರಿಂದ ಲಿಂಗ ದೀಕ್ಷೆ ಪಡೆದರು. ಸುಮಾರು ಮೂರು ತಿಂಗಳ ಕಾಲ ವೀರೇಶ್ವರ ಪುಣ್ಯಾಶ್ರಮದಲ್ಲಿ ವಾಸವಾಗಿದ್ದ ವರ ನಟ ಡಾ. ರಾಜ್ ‘ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿ’ ಚಲನಚಿತ್ರಕ್ಕೆ ಸಾವಿರದ ಶರಣು ಗಾನಯೋಗಿ ಗುರುವೇ ಎಂಬ ಗೀತೆಯನ್ನು ಹಾಡಿ ಧನ್ಯತೆಯನ್ನು ಅನುಭವಿಸಿದರಲ್ಲದೇ, ಗಾನಯೋಗಿ ಗುರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾದರು.

ಪುಟ್ಟರಾಜರು ತುಲಾಭಾರಗಳ ಚಕ್ರವರ್ತಿ. ರಾಜ್ಯ ಹಾಗು ಹೊರ ರಾಜ್ಯ ಮತ್ತು ಉತ್ತರ ಕರ್ನಾಟಕದ ಬಹುತೇಕ ಗ್ರಾಮಮಗಳ ಎಲ್ಲಾ ವರ್ಗದ ಭಕ್ತಸಮೂಹ ಒಟ್ಟು 2280ಕ್ಕೂ ಅಧಿಕ ತುಲಾಭಾರಗಳು ನಡೆದಿದ್ದು, ಆ ಮೂಲಕ ಬಂದ ಹಣವನೆಲ್ಲ ಅಂಧ, ಅನಾಥ, ಅಂಗವಿಕಲ ವಿದ್ಯಾರ್ಥಿಗಳ ವಸತಿ, ಊಟ ಮತ್ತಿತರ ಸೌಲಭ್ಯಕ್ಕಾಗಿ ವ್ಯಯಿಸಿರುವುದು ವಿಶೇಷ. ಮೂರ್ತಿ ಪೂಜೆ, ಅಡ್ಡ ಪಲ್ಲಕ್ಕಿ ಉತ್ಸವ, ತುಲಾಭಾರಗಳನ್ನು ವಿರೋಧಿಸುವ ಸೋಕಾಲ್ಡ್ ಬುದ್ಧಿಜೀವಿಗಳು ಕೂಡ ಪುಟ್ಟರಾಜರ ತುಲಾಭಾರವನ್ನು ಒಪ್ಪುತ್ತಿದ್ದದ್ದಕ್ಕೆ ಕಾರಣ ತುಲಾಭಾರದ ಹಿಂದಿರುವ ಘನ ಉದ್ದೇಶ ಎಂಬುದು ಸ್ಪಷ್ಟ. ಪುಟ್ಟರಾಜರಿಗೆ ಸಂದ ತುಲಾಭಾರಗಳು  ಗಿನ್ನೆಸ್ ಪುಸ್ತಕ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ  ದಾಖಲಾಗಿದೆ.

ಪುಟ್ಟರಾಜ ಗವಾಯಿಗಳ ಸಾಧನೆ ಹಾಗು ಸಲ್ಲಿಸಿದ ಸೇವೆಗಾಗಿ ಅವರಿಗೆ ಸಂದಿರುವ ಪುರಸ್ಕಾರಗಳು ಅನೇಕ. •

1959ರಲ್ಲಿ ಸುತ್ತೂರು ಮಠದಿಂದ “ಸಾಹಿತ್ಯ ಸಂಗೀತ ಕಲಾಪ್ರವೀಣ” ಪ್ರಶಸ್ತಿ,

1965ರಲ್ಲಿ ಬನವಾಸಿ ವಿರಕ್ತ ಮಠದಿಂದ “ಸಮಾಜ ಸೇವಾ ಧುರೀಣ” ಪ್ರಶಸ್ತಿ •

1970ರಲ್ಲಿ ಶ್ರೀ ಮ.ನಿ.ಪ್ರ. ನೀಲಲೋಚನ ಸ್ವಾಮಿಗಳಿಂದ “ತ್ರಿಭಾಷಾ ಕವಿರತ್ನ ಪ್ರಶಸ್ತಿ”

1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ •

1976 ರಲ್ಲಿ ಮೂರುಸಾವಿರ ಮಠ, ಹುಬ್ಬಳ್ಳಿ ಇವರಿಂದ “ಸಾಹಿತ್ಯ ಸಂಗೀತ ಕಲಾಚಕ್ರವರ್ತಿ” ಪ್ರಶಸ್ತಿ •

 1981ರಲ್ಲಿ ಮುರುಘಾಮಠ,ಧಾರವಾಡ ಇವರಿಂದ “ಧರ್ಮಭೂಷಣ” ಪ್ರಶಸ್ತಿ •

1989ರಲ್ಲಿ ಶ್ರೀ ಶಾಂತಲಿಂಗೇಶ್ವರ ಸಂಸ್ಥಾನಮಠ, ಆಷ್ಟಗಿ ಇವರಿಂದ “ಕಲಾಜನಕ” ಪ್ರಶಸ್ತಿ.

ಇಡೀ ಜಗತ್ತಿನಲ್ಲಿ ಪುಟ್ಟರಾಜ ಗವಾಯಿಯರಂತಹ ಗುರುಗಳು ಇನ್ನೊಬ್ಬರಿಲ್ಲ. ತಮ್ಮ ಶಿಷ್ಯ ಕೋಟಿಯನ್ನು ಸಲಹಲು ಹಲವೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡಲು ಒಪ್ಪಿಕೊಳ್ಳುತ್ತಿದ್ದ ಪುಟ್ಟರಾಜ ಗವಾಯಿಗಳು ಎಂದೂ
ವೈಭವೂಪೇತ ಕಾರಿನಲ್ಲಿ ಓಡಾಡಲಿಲ್ಲ… ಬದಲಾಗಿ ಸಂಗೀತ ಪರಿಕರಗಳನ್ನು ಜೊತೆಗಿಟ್ಟುಕೊಂಡು ತಮ್ಮ ಶಿಷ್ಯ ಕೋಟಿ ಯೊಂದಿಗೆ ಮೆಟಡೋರ್ ವಾಹನದಲ್ಲಿ ಯಾವುದೇ ಹಮ್ಮಿಲ್ಲದೆ ಪ್ರಯಾಣಿಸುತ್ತಿದ್ದರು.

ಸಂಗೀತದ ಕುರಿತು ಪುಟ್ಟರಾಜ ಗವಾಯಿಗಳ ಮಾತು ….ಸಂಗೀತ ಒಂದು ಹರಿಯುತ್ತಿರುವ ಹೊಳೆಯಂತೆ, ವಾಟಗ ಒಯ್ದವ ವಾಟಗ ತುಂಬಿಕೊಳ್ಳುತ್ತಾನೆ, ತಂಬಿಗಿ ಒಯ್ದವನು ತಂಬಿಗೆ ತುಂಬಿಕೊಳ್ಳುತ್ತಾನೆ ಕೊಡ ಒಯ್ದವನು ಕೊಡವನ್ನು ತುಂಬಿಕೊಳ್ಳುತ್ತಾನೆ ಅಂದರೆ ಯಾರ್ಯಾರು ಎಷ್ಟೆಷ್ಟು ಪರಿಶ್ರಮವನ್ನು ಹಾಕಿ ವಿದ್ಯೆಯನ್ನು ಕಲಿಯುತ್ತಾರೋ ಅಷ್ಟಷ್ಟು ಅವರಿಗೆ ಸಂಗೀತ ವಿದ್ಯೆ ಒಲಿಯುತ್ತದೆ ಎಂಬುದು ಅವರ ಅಂಬೋಣವಾಗಿತ್ತು.

ಹಲವಾರು ವರ್ಷಗಳ ಕಾಲ ಸಂಗೀತ ಪಾಠ, ನಾಟಕಗಳ ರಚನೆ, ಆಶ್ರಮದ ಮೇಲ್ವಿಚಾರಣೆ ನಿಭಾಯಿಸುತ್ತಾ ಪೀಠಾಧಿಕಾರಿಯಾಗಿದ್ದ ಪುಟ್ಟಯ್ಯಜ್ಜನವರು ತಮ್ಮ ಜೀವಿತದ ಕೊನೆಯ ಸಮಯದಲ್ಲಿ ಕಿಡ್ನಿ ವೈಫಲ್ಯದ ಕಾರಣದಿಂದ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆದರಾದರೂ ವಯೋಸಹಜ ನಿಃಶಕ್ತಿಯ ಕಾರಣದಿಂದಾಗಿ ಮತ್ತು ಆಶ್ರಮದಲ್ಲಿಯೇ ತಮ್ಮ ಕೊನೆಯ ದಿನಗಳನ್ನು ಕಳೆಯಬೇಕೆಂಬ ಆಶಯದಿಂದ ಆಶ್ರಮಕ್ಕೆ ಮರಳಿದರು. ಮುಂದೆ ಸತತ ಐದು ದಿನಗಳ ಕಾಲ ಭಕ್ತರಿಗೆ ದರ್ಶನ ನೀಡುತ್ತಾ ಸೆಪ್ಟೆಂಬರ್ 17 2010 ರಂದು ಲಿಂಗೈಕ್ಯರಾದರು. ಉತ್ತರ ಕರ್ನಾಟಕದ ಮನೆ ಮನೆಯಲ್ಲಿ ಸೂತಕದ ಛಾಯೆ… ತಮ್ಮ ಮನೆಯ ಸದಸ್ಯನೇ ಎಂದೂ ಬಾರದ ಲೋಕಕ್ಕೆ ಹೋಗಿರುವನೇನೂ ಎಂಬಂತಹ ವಾತಾವರಣ. ಅಂತಿಮ ದರ್ಶನಕ್ಕೆ ರಾಜ್ಯದ ಹಲವೆಡೆಗಳಿಂದ ಲಕ್ಷಾಂತರ ಜನರ ಆಗಮನ. ಆಗಮಿಸಿದ ಸರ್ವರಿಗೂ ಗದುಗಿನ ಜನತೆ ಸ್ವಯಂಪ್ರೇರಿತರಾಗಿ ಆಹಾರ ನೀರು ಮತ್ತು ಸಾರಿಗೆಯ ವ್ಯವಸ್ಥೆಯನ್ನು ಮಾಡಿ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ಗದುಗಿನ ಮುಖ್ಯ ವೃತ್ತವೊಂದರಲ್ಲಿ ಪುಟ್ಟರಾಜ ಗವಾಯಿಗಳ ಬೃಹತ್ ಪ್ರತಿಮೆಯೊಂದನ್ನು ಸ್ಥಾಪಿಸಲಾಗಿದೆ. ಪುಟ್ಟರಾಜ ಗವಾಯಿಗಳ ಮೂಲ ಸ್ಥಳ ದೇವಗಿರಿಯಲ್ಲಿ ಪತ್ರಿ ಬನವನ್ನು ಸ್ಥಾಪಿಸಲಾಗಿದೆ. ಇಂದಿಗೂ ಉತ್ತರ ಕರ್ನಾಟಕದ ವಿಶೇಷವಾಗಿ ಗದುಗಿನ ಜನ ನಡೆದಾಡುವ ದೇವರು ಎಂದೆ ಹೆಸರಾದ ಪುಟ್ಟರಾಜ ಗವಾಯಿಗಳನ್ನು ಭಾವುಕತೆಯಿಂದ ಭಕ್ತಿಯಿಂದ ಸ್ಮರಿಸುತ್ತಾರೆ.
ಇಂಥವರ ಸಂತತಿ ಸಾವಿರ ಸಾವಿರವಾಗಲಿ…

 ಮತ್ತೆ ಗದುಗಿನ ಪುಣ್ಯಭೂಮಿಯಲ್ಲಿ ಪುಟ್ಟಯ್ಯಜ್ಜನವರು ಹುಟ್ಟಿ ಬರಲಿ ಎಂದು ಆಶಿಸುತ್ತಾ


Leave a Reply

Back To Top