ಅವಳು ನೆನಪಾದಾಗ
ಎಂ.ಜಿ.ತಿಲೋತ್ತಮೆ
ಹೀಗೆ ಕಾಡುವುದಾದರೆ ನಿತ್ಯ
ನಿನ್ನ ಸ್ವರಗಳು ಮೊದಲು
ನನ್ನ ಎದೆಗೆ ಇಳಿದ ದಿನದ ಕ್ಷಣದಾಚೆ
ಪರಿಪೂರ್ಣವಾಗಿದ್ದು
ಪರಿತಪಿಸುತ್ತಿದ್ದ ಸಂಗಾತಿ ನಿನ್ನ ಬಿಂಬ
ಬಿಗಿದ ತಂತಿಗೆ ಬೆರಳು
ಗಮನಿಸದೆ ತಗುಲಿ ನುಡಿಸಿದ ರಾಗಕ್ಕೆ
ಯಾವ ಭಾಯಾನದ ಹೋಲಿಕೆ?
ಸಾಟಿಯಿಲ್ಲದ ಹಂಬಲವು ಹೆಮ್ಮರವಾಗಿ
ನುಗ್ಗುವ ಪರಿಗೆ ಕೊನೆಯೆಲ್ಲಿ?
ಅಧೃಶ್ಯವಾದ ನಿನ್ನ ಚಿತ್ತಾರ
ಹುಡುಕುತ್ತಾ ಹೊರಟ ನಯನದ ಹಟಕ್ಕೆ
ಕಡಿವಾಣವೇ ಬೇಡ
ಮರಳೇ ಸೂಸಿ ಹಾಸಿರಲಿ
ವರುಣನು ನಿನ್ನ ಹೆಜ್ಜೆಗೆ ಸುತ್ತುಗಟ್ಟಲಿ
ಪಾದ ಮೂಡಿದಲೆಲ್ಲಾ ನಾ ಓಡಿ ಬರುವೆ
ನಿನ್ನಲಿ ಸೆರೆಯಾಗುವೆ ಎಂದರೆ
ಹುಸಿಯಾಗಿ ನಗುವುದು ಹೂ ಗಿಡ ಬಳ್ಳಿ
ಮುಖಾಮುಖಿಯಾದರೆ ನಿನ್ನ ನೆರಳು ನಾನು
ನನ್ನ ಕಣ್ಣೊಳಗೆ ನಿನ್ನ ಬಂಧಿಸಿ ಕೇಳುವೆ
ನನ್ನ ಪ್ರೀತಿ ಹೊರತು ಇಹದಲ್ಲೊಂದು ಸುಖ
ನಿನಗೆ ಸಿಕ್ಕಿದಂತಾದರೆ ಪುನಃ
ತೊರೆದು ಮರು ಕ್ಷಣದಾಚೆಗೆ ನಾ ಅಪೂರ್ಣ ನಾಗುವೆ.
********