ಸಾವಿಲ್ಲದ ಶರಣರು ಮಾಲಿಕೆ…ಮನುಮುನಿ ಗುಮ್ಮಟದೇವ-ಡಾ ಶಶಿಕಾಂತ ಪಟ್ಟಣ ರಾಮದುರ್ಗಅವರ ಬರಹ

ಮನುಮುನಿ ಗುಮ್ಮಟದೇವ

ಜನ್ಮ ಸ್ಥಳ -ವಿವರ ಲಭ್ಯವಾಗಿಲ್ಲ
ಒಟ್ಟು ವಚನಗಳು -99
ಅಂಕಿತ: ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ
ಕಾಯಕ: ಮೀಮಾಂಸಕ
ಈತ ಮೂಲತ: ಜೈನಧರ್ಮೀಯನಾಗಿದ್ದು, ಅನಂತರ ಶರಣಧರ್ಮ ಸ್ವೀಕರಿಸಿದಂತೆ ತಿಳಿದುಬರುತ್ತದೆ.
ಕಾಲ- ಹನ್ನೆರಡನೆಯ ಶತಮಾನ ಬಸವ ಸಮಕಾಲೀನ
ಐಕ್ಯ ಸ್ಥಳ -ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುನೇನಕೊಪ್ಪ (ಮುಳ್ಳೂರು )

 ‘ಗೂಡಿನ ಗುಮ್ಮಟನೊಡೆಯ ಆಗಮ್ಯೇಶ್ವರಲಿಂಗ’ ಅಂಕಿತದಲ್ಲಿ ೯೯ ವಚನಗಳು ದೊರೆತಿವೇ . ಇವುಗಳನ್ನು ಎಲ್ಲ ಪುರಾನತರ ವಚನಕಟ್ಟುಗಳಲ್ಲಿ ಆತ್ಮನರಿವು ಭಾವಸ್ಥಲ, ಆತ್ಮ ಐಕ್ಯನಸ್ಥಲ, ಪಿಂಡಜ್ಞಾನ ಸಂಬಂಧ ಎಂಬ ಸ್ಥಲಗಳ ಅಡಿಯಲ್ಲಿ ಸಂಕಲಿಸಲಾಗಿದೆ . ಆರಂಭದಲ್ಲಿ ಗದ್ಯವ ಭಾಗವನ್ನು  ಜೋಡಿಸಲಾಗಿದೆ. ಈತನ ವಚನಗಳಲ್ಲಿ ಭಕ್ತಿ ಸ್ಥಳ ಐಕ್ಯಸ್ಥಲಗಳಿಗೆ ಸಂಬಂಧಿಸಿದ ವಿವೇಚನೆ ಚಿಂತನೆ ಹೆಚ್ಚಾಗಿ ಕಂಡು ಬರುತ್ತದೆ. ಜೊತೆಗೆ ದಯವೇ ಧರ್ಮದ ಮೂಲ    ಷಟ್ಸ್ಥಲ ತತ್ವ, ಏಕದೇವೋಪಾಸನೆ, ಪರಮತ ದೂಷಣೆ, ಜೀವದಯಾಭಾವ ಇವುಗಳಲ್ಲಿ ವಿಶೇಷವಾಗಿ ನಿರೂಪಿತವಾಗಿದೆ. ಬೆಡಗಿನ ಪರಿಭಾಷೆಯಿದ್ದರೂ  ಎಲ್ಲಾ  ವಚನಗಳು ಸುಂದರವಾಗಿ ನಿರೂಪಣೆಗೊಂಡಿವೆ. ತಾನು ಹೇಳಬೇಕಾದ ವಿಷಯವನ್ನು ಹಲವಾರು ನಿದರ್ಶನಗಳ ಮೂಲಕ  ವಿಶಧಿಕರಿಸುತ್ತಾನೆ.ಸುಂದರವಾದ ಧ್ವನಿಪೂರ್ಣವಾದ ಬೆಡಗಿನ  ವಚನಗಳನ್ನು ನಾವು ಕಾಣುತ್ತೇವೆ.  

ಬಿಜ್ಜಳನಿಗೆ ಧರ್ಮ ಬೋಧಿಸಿದ ಮೀಮಾಂಸಕನೆಂದೂ, ಜಿನನೇಮ ಗುಣನಾಮ ಬೋಧಿಸಿದ ಬೌದ್ಧ ಅವತಾರಕ್ಕೆ ಮುಖ್ಯ ಆಚಾರ್ಯನೆಂದೂ ತನ್ನನ್ನು ತಾನು ಕರೆದುಕೊಂಡಿರುವುದು ವಿಶೇಷ. ಈತನ ವಚನಗಳಲ್ಲಿ ಭಕ್ತಿಸ್ಥಲ ಐಕ್ಯಸ್ಥಲಗಳಿಗೆ ಸಂಬಂಧಿಸಿದ ವಿವೇಚನೆಯೇ ಹೆಚ್ಚಾಗಿ ಕಂಡು ಬರುತ್ತದೆ. ದಯವೇ ಧರ್ಮದ ಮೂಲ, ಏಕದೇವೋಪಾಸನೆ, ಪರಮತ ದೂಷಣೆಯಂಥ ಸಂಗತಿಗಳನ್ನೂ ಇಲ್ಲಿ ವಿವರಿಸಲಾಗಿದೆ.

ಅಂಬುಧಿಯಲ್ಲಿ ಅಂಬಿಗ ಮನೆಯ ಮಾಡಿ,
ಕುಂಭಿನಿಯಲ್ಲಿ ಇರಲೊಲ್ಲದೆ,
ಹರುಗೋಲ ಬೆಂಬಳಿಯಲ್ಲಿ ಬದುಕಿಹೆನೆಂದು [ಹೋದಡೆ]
ಹರುಗೋಲು ತುಂಬಿ, ಮಂದಿ ಸಂದಣಿಸಿತ್ತು.
[ಗ]ಣಿಯ ಹಿಡಿದು ಒತ್ತುವುದಕ್ಕೆ ಠಾವಿಲ್ಲದೆ, ಅಂಬಿಗ ಹಿಂಗಿದ.
ಹೆರೆಸಾರಿ ಹರುಗೋಲು ಅಂಬುಧಿಯಲ್ಲಿ ಮುಳುಗಿತ್ತು,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿಯದೆ

ಸಮುದ್ರದಲ್ಲಿ ಅಂಬಿಗನು  ಬದುಕು ಕಟ್ಟಿಕೊಂಡು ಮನೆಯ ಮಾಡಿ ,ಅಲ್ಲಿನ ಕುಂಭಿನಿಯಲ್ಲಿ ಇರಲೊಲ್ಲದೆ ,ಹರಿಯುವ ಚಲಿಸುವ ಹರಿಗೋಲಿನಲ್ಲಿ ಬದುಕಿದೆನೆಂದು ಹೋದರೆ ,ಹರಗೋಲದಲ್ಲಿ ಆಸೆ ಆಮಿಷ ಬಯಕೆ ಬವಣೆ  ವಿಷಯಾದಿಗಳಿಂದ ಹರಗೋಲು ತುಂಬಿತ್ತು ,ಅನೇಕ ಅರಿಷಡವರ್ಗಗಳು ಬಂದು ಹರಗೋಲದಲ್ಲಿ ನೆಲೆಸಿದರು ,ಹುಟ್ಟು ಹಿಡಿದು ನೀರು ಒತ್ತುವದಕ್ಕೆ  ಹರಿಗೋಲಿನಲ್ಲಿ ಸ್ಥಳವಿಲ್ಲ,ಅಂಬಿಗ ಮರುಗಿದ ಚಿಂತೆಗೆ ಒಳಗಾದ ಹರಗೋಲು ಸಮುದ್ರದಲ್ಲಿ ಮುಳುಗಿತ್ತು ,ಕಾರಣ ಗುಡಿಯೊಡೆಯ ಗುಮ್ಮಟನಾಥನೆಂಬ ಜಂಗಮ  ಅಗಮ್ಯೇಶ್ವರಲಿಂಗವನರಿಯದೆ ತನ್ನ ಆಸನಕ್ಕೆ ವ್ಯಸನಕ್ಕೆ ಬಳಲಿದ ಅಂಬಿಗನ ಪಾಡು ಅರ್ಥಪೂರ್ಣವಾಗಿ ಕಟ್ಟಿ ಕೊಡುತ್ತಾನೆ. ಕಾಯವೆಂಬ ಹರಿಗೋಲ ಸಂಸಾರವೆಂಬ ಕಡಲು.    

ಭಕ್ತನಾದಲ್ಲಿ ಭಕ್ತಿಸ್ಥಲ ಅಳವಟ್ಟು.
ಮಾಹೇಶ್ವರನಾದಲ್ಲಿ ಆ ಸ್ಥಲ ಅಳವಟ್ಟು.
ಪ್ರಸಾದಿಯಾದಲ್ಲಿ ಆ ಸ್ಥಲ ಅಳವಟ್ಟು.
ಪ್ರಾಣಲಿಂಗಿಯಾದಲ್ಲಿ ಆ ಸ್ಥಲ ಅಳವಟ್ಟು.
ಶರಣನಾದಲ್ಲಿ ಆ ಸ್ಥಲ ಅಳವಟ್ಟು.
ಐಕ್ಯನಾದಲ್ಲಿ ಆ ಸ್ಥಲ ಅಳವಟ್ಟು.
ಆರು ಲೇಪವಾಗಿ, ಮೂರು ಮುಗ್ಧವಾಗಿ,
ಒಂದೆಂಬುದಕ್ಕೆ ಸಂದಿಲ್ಲದೆ,
ಲಿಂಗವೆ ಅಂಗವಾಗಿಪ್ಪ ಶರಣನ ಇರವು,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ
ತಾನು ತಾನಾದ ಶರಣ

ಶರಣ ಪದವಿಯನ್ನು ಹೇಗೆ ಸಾಧಿಸಬೇಕು ಎನ್ನುವ ಅರ್ಥಪೂರ್ಣ ಚಿಂತನೆಯನ್ನು ಮಾಡಿದ್ದಾನೆ. ಭಕ್ತನಾಗಿದ್ದಲ್ಲಿ ಅವನಿಗೆ ಭಕ್ತಸ್ಥಲ ಅಳವಡುತ್ತದೆ, ಅದೇ ರೀತಿ  ಮಾಹೇಶ್ವರನಾದಲ್ಲಿ ಆ ಸ್ಥಲ ಅಳವಡುವುದು , ಭಕ್ತ ಸಾಧಕ ಪ್ರಸಾದಿಯಾದಲ್ಲಿ ಆ ಸ್ಥಲ ಅಳವಡಿಸಿಕೊಳ್ಳುತ್ತಾನೆ. ಭಕ್ತ ಪ್ರಾಣಲಿಂಗಿಯಾದಲ್ಲಿ ಆ ಸ್ಥಲವನ್ನು ಅಳವಡಿಸಿಕೊಳ್ಳುತ್ತಾನೆ,ಭಕ್ತ ಶರಣನಾದಲ್ಲಿ ಆ ಸ್ಥಲವನ್ನು ಅರಿಯುತ್ತಾನೆ, ಐಕ್ಯನಾದಲ್ಲಿ ಆ ಸ್ಥಲವನ್ನು ಇಂಬುಗೊಳ್ಳುವ ,ಷಟಸ್ಥಲ ಸಂಪನ್ನನಾದ ಭಕ್ತ ತನ್ನ ತನು ಮನ ಪ್ರಾಣದಲ್ಲಿ ಬೆರೆಸಿ ,ಅವು ಒಂದಕ್ಕೊಂದು ಸಂದಿಲ್ಲದೆ,ಲಿಂಗವೇ ಅಂಗವೆಂದು ತಿಳಿವುದು ಶರಣನ ಇರುವು.  
    ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೇ  ತಾನು ಎಂದು ತಿಳಿದುಕೊಂಡವ ಮಾತ್ರ  ತಾನಾದ ಶರಣ  ಎಂದು ಷಟಸ್ಥಲ ಇದು ಕಾಯಗುಣ ಸಾಧಕನು ತನ್ನೊಳಗೆ ದೈವತ್ವವನ್ನು ಕಾಣಬೇಕೆನ್ನುವ ಉದಾತ್ತ ಮನೋಭಾವವನ್ನು ಮನುಮುನಿ ಗುಮ್ಮಟದೇವ
ಹೊಂದಿದ್ದಾನೆ.

     ಮನುಮುನಿ ಗುಮ್ಮಟದೇವ ಐಕ್ಯ ಸ್ಥಳದ ಶೋಧ
—————————————————————–
ಕಲ್ಯಾಣ ಕ್ರಾಂತಿಯ ಕೊನೆಯ ಹೆಜ್ಜೆ ಗುರುತುಗಳು ಎಂಬ ನನ್ನ ಸಂಶೋಧನಾ ಲೇಖನ  ಸಿದ್ಧ ಪಡಿಸುವಲ್ಲಿ ಮತ್ತು ಕ್ಷೇತ್ರ ಕಾರ್ಯ ಮಾಡುವಲ್ಲಿ ಹಲವಾರು ಶರಣರ ಸಮಾಧಿ ಕುರುಹುಗಳನ್ನು ಗುರುತಿಸಲು ಸಹಾಯಕವಾದದ್ದು ಜನರ ನಂಬಿಕೆ ,ಜನಪದಿಗರ ಹೇಳಿಕೆ ,
ಸಮಾಧಿಗಳನ್ನು ಪತ್ತೆ ಹಚ್ಚುವಲ್ಲಿ   ಸಾಧ್ಯವಾಯಿತು.  ಬಸವಣ್ಣನವರು ಕಲ್ಯಾಣವನ್ನು ತೊರೆದ ಮೇಲೆ ಸೋಮಿದೇವ ಶರಣರ ಹತ್ಯೆಗೆ ಆದೇಶಿಸುತ್ತಾನೆ. ಬಸವಣ್ಣನವರ ಗಡಿಪಾರಿನ ನಂತರ   ಕಲ್ಯಾಣ ಕ್ರಾಂತಿಯ ರಕ್ತ ಸಿಕ್ತ ಹೋರಾಟದಲ್ಲಿ ಚೆನ್ನ ಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವರು ಶರಣ ಸೇನೆಯನ್ನು ಹುರುದುಂಬಿಸಿ ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ  ಸೋವಿದೇವನ ಸೈನಿಕರಿಗೆ ಪ್ರತಿರೋಧ ತೋರಿಸುತ್ತಾ. ಮಾದನ ಹಿಪ್ಪರಗಿ, ಬೆಳಗಾವಿ ,ಕಾದ್ರೊಳ್ಳಿ  , ಹುಣಶೀಕಟ್ಟಿ ,  ಮೂಗಬಸವ ,ಮುರಗೋಡ ,ತಲ್ಲೂರು ,ಕಾರಿಮನಿ ,ಕಟಕೋಳ ,ಚಂದರಗಿ, ಗೊಡಚಿಗೆ ಬಂದು ಮಾಚಿದೇವರು ಐಕ್ಯರಾಗುತ್ತಾರೆ. ಮುದಿ ವೀರಣ್ಣನ ಗುಡಿ ಶರಣ ಮಡಿವಾಳ ಮಾಚಿದೇವರ ಐಕ್ಯಸ್ಥಳ. ಮುದಿ ವೀರಣ್ಣನ ಕೈಯಲ್ಲಿ ಖಡ್ಗ ಮತ್ತು ಎದೆಯ ಮೇಲೆ ಇಷ್ಟಲಿಂಗದ ಕರಡಗಿ  ಇದೆ.ಮಡಿವಾಳ ಮಾಚಿದೇವನನ್ನು ಪುರಾಣಗಳಲ್ಲಿ ವೀರಭದ್ರನ ಅವತಾರವೆಂದು ಬಿಂಬಿಸುತ್ತಾರೆ. ಹೀಗಾಗಿ ಜಾನಪದ ಸಾಹಿತಿಗಳು ಅನೇಕ ಸಂಶೋಧಕರು ,ತಜ್ಞರು ಮಡಿವಾಳ ಮಾಚಿದೇವನ ಐಕ್ಯ ಸ್ಥಳವನ್ನು ಗೊಡಚಿಯ ಮುದಿ ವೀರಣ್ಣನ ಗುಡಿಯೆಂದು ಅಭಿಮತಕ್ಕೆ ಬರುತ್ತಾರೆ.
ಒಂದು ತಂಡ ತೊರಗಲ್ಲ ಮುನವಳ್ಳಿ ಸವದತ್ತಿ ಧಾರವಾಡ ಉಳವಿಗೆ ಹೋಯಿತು  ಇನ್ನೊಂದು ತಂಡ  ಉಣಕಲ್ ಹುಬ್ಬಳ್ಳಿ ಎಣ್ಣೆ ಹೊಳೆ ನುಲೇನೂರು    ಮುಂತಾದ ಪ್ರದೇಶಕ್ಕೆ ಚದುರಿದರು.  ‘ಕಲ್ಯಾಣ ಕ್ರಾಂತಿ’ಯ ಸಂದರ್ಭದಲ್ಲಿ ಶರಣರ  ‘ಜವಾಬ್ಧಾರಿ’ ಗುರುತರವಾದುದು. ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು , ಚನ್ನ ಬಸವಣ್ಣ , ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮನುಮುನಿ ಗುಮ್ಮಟದೇವ  ಶರಣ ಸಮೂಹದ ‘ಭೀಮ ರಕ್ಷೆಯಾಗಿ’ ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ,ತಡ ಕೋಡ, ಮೂಗ ಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ಕೊಟ್ಟವರು   ಸಾಹಸಿ ಶರಣರ  ಕಾರ್ಯ ದೊಡ್ಡದು.
  ಗೋಡಚಿಯಲ್ಲಿ ಮಡಿವಾಳ ಮಾಚಿದೇವರ ಸಮಾಧಿ ಮತ್ತು  8 ವರುಷ ಹಿಂದೆ  ನರಗುಂದ ತಾಲೂಕಿನ ಕೊನೆಯ ಹಳ್ಳಿ ಬೆಳ್ಳೇರಿಯಲ್ಲಿ ಕಂಡು ಹಿಡಿದ ಬಳ್ಳೇಶ ಮಲ್ಲಯ್ಯನ ಸಮಾಧಿ  ( ಜೈನ ಶರಣ )  ,ಐದು ವರುಷದ ಹಿಂದೆ ರಾಮದುರ್ಗ ತಾಲೂಕಿನ ಕಲ್ಲೂರಿಗೆ ಹೋದಾಗ ಅಲ್ಲಿ ಕಲ್ಲಿನ ಬಂಡೆಯ ಸಂಧುವಿನಲ್ಲಿ ಬರುವ ಜಲ ಅಲ್ಲಿರುವ ಕಲ್ಯಾಣ ಬಸವೇಶ್ವರ ದೇವಸ್ಥಾನ ,ಜನರ ನಂಬಿಕೆ ಹೇಳಿಕೆ ಕಲ್ಯಾಣ ಕ್ರಾಂತಿಯ ನಂತರ ಶರಣರು ಕಲ್ಲೂರಿನಲ್ಲಿ ಇದ್ದು ಹೋಗಿದ್ದಾರೆಂದು ಕೇಳಿ ತಿಳಿದು ಕೊಂಡೆ. ಮುಳ್ಳೂರಿನಲ್ಲಿ ನಮ್ಮ ಜಾಮೀನು ಹೊಲ ಇದ್ದು ಬಾಲ್ಯದಿಂದಲೂ  ಮೇಲಿಂದ ಮೇಲೆ ಹೊಲಕ್ಕೆ ಹೋಗುವಾಗ ಬರುವಾಗ ,ಮುನೇನಕೊಪ್ಪ(ಮುದೇನಕೊಪ್ಪ ) ಎಂಬ ಪುಟ್ಟ ಗ್ರಾಮದಲ್ಲಿ ಒಂದು ಬಸವೇಶ್ವರ ದೇವಸ್ಥಾನ ,ಒಳಗೆ ಗದ್ದುಗೆ ,ಗುಡಿಯ ಆವರಣದಲ್ಲಿಯೇ ಒಂದು ಬಾವಿ , ಇಲ್ಲೊಬ್ಬ ಶರಣರು ಐಕ್ಯ ಆಗಿರಬಹುದೆಂದು ಶೋಧ ಆರಂಭಿಸಿದೆ, ಆ ಊರಿನ ಗ್ರಾಮಸ್ಥರಲ್ಲಿ ವಿಚಾರಿಸಿದೆ ಒಂದೆರಡು ಕುಲಕರ್ಣಿ ಮನೆತನ ಬಿಟ್ಟರೆ ಊರು ತುಂಬೆಲ್ಲ ಕುರುಬರು ಮತ್ತು ದಲಿತ ಸಮುದಾಯದವರು. ಅಲ್ಲೊಬ್ಬ ಅತ್ಯಂತ ಹಿರಿಯ ವಯಸ್ಸಿನ ಅಂದಾಜು 89 ವರುಷದ ವ್ಯಕ್ತಿಯನ್ನು ಈ ಗುಡಿ ಮತ್ತು ಮುನಿಯನಕೊಪ್ಪ ನಾಮ ವಿಶೇಷಣದ ಬಗ್ಗೆ ಕೇಳ ಹತ್ತಿದೆ.   ಅವನಿಗೆ  ಈ ಊರಿನ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವಿತ್ತು, ಮುನಿಯ ಅಂದರೆ ಒಬ್ಬ ಜೈನ ಸನ್ಯಾಸಿ ಈ ಊರಲ್ಲಿ ಇದ್ದ ಕರಣ ಇದನ್ನು ಮುನೇನಕೊಪ್ಪ ಅಥವಾ ಮುನಿಯನ ಕೊಪ್ಪ ಎಂದು ಕರೆಯುತ್ತಿದ್ದರು ಎಂದು ಹೇಳಿದ ಸಂಗತಿ  ರೋಚಕವೆನಿಸಿತು. ನನ್ನ ಕೂತುಹಲಕ್ಕೆ ರೆಕ್ಕೆ ಪುಕ್ಕ ಬಂದವು ಆಗ ನಾನು ಅವನನ್ನು   ಗುಡಿಯೊಳಗೆ ಒಂದು ಆಳವಾದ ಬಾವಿ ಇರುವುದರ ಬಗ್ಗೆ ಕೇಳಿದೆ, ಆಗ ಅವನು  ಜೈನ ಮುನಿಯು   ನೀರಡಿಕೆ ಬಳಲಿಕೆ ಇದ್ದವರಿಗೆ  ನೀರನ್ನು ಕೊಡುತ್ತಿದ್ದನು ಎಂದನು. ಆಗ ನನಗೆ ಮನುಮುನಿ ಗೊಮ್ಮಟದೇವ ಅರವಟ್ಟಿಗೆ ಸೇವೆ ಮಾಡುತ್ತಿರಬಹುದು ಎಂದೆನಿಸಿತು, ಇತ್ತೀಚಿಗೆ ಹೋದಾಗ ಗುಡಿಯ ಆವರಣದೊಳಗಿನ ಬಾವಿಯನ್ನು ಮುಚ್ಚಿದ್ದಾರೆ. ಅದು ಒಳಗೆ ಗದ್ದುಗೆ ಇದ್ದ ಕರಣ ಮತ್ತು ಜನರ ಹೇಳಿಕೆ ನಂಬಿಕೆ ಮತ್ತು ಸುತ್ತಲೂ ಶರಣರ ಸಾಮಧಿಗಳು ಕಂಡ ಕಾರಣ ,ಇದು ಮನುಮುನಿ ಗೊಮ್ಮಟನ ಸಮಾಧಿ ಇರುವ ಖಚಿತತೆಯನ್ನು ಹೊಂದಿದೆನು.

4 thoughts on “ಸಾವಿಲ್ಲದ ಶರಣರು ಮಾಲಿಕೆ…ಮನುಮುನಿ ಗುಮ್ಮಟದೇವ-ಡಾ ಶಶಿಕಾಂತ ಪಟ್ಟಣ ರಾಮದುರ್ಗಅವರ ಬರಹ

  1. ತಮ್ಮ ಕ್ಷೇತ್ರ ಕಾರ್ಯದ ಅಗಾಧತೆ … ಸಂಶೋಧನೆ…ಪ್ರಬುದ್ಧವಾದ ವೈಚಾರಿಕ ನಿಲುವುಗಳಿಂದ ಮೂಡಿ ಬಂದ ಲೇಖನ ನಮ್ಮಂಥವರಿಗೆ ಜ್ಞಾನದ ಕಣಜ ಸರ್

    ಸುತೇಜ

Leave a Reply

Back To Top