ಗುರು ತನ್ನ ವಿನೋದಕ್ಕೆ ಗುರುವಾದ ಗುರು
ತನ್ನ ವಿನೋದಕ್ಕೆ ಲಿಂಗವಾದ ಗುರು
ತನ್ನ ವಿನೋದಕ್ಕೆ ಜಂಗಮವಾದ ಗುರು
ತನ್ನ ವಿನೋದಕ್ಕೆ ಪಾದೋದಕವಾದ ಗುರು
ತನ್ನ ವಿನೋದಕ್ಕೆ ಪ್ರಸಾದವಾದ ಗುರು
ತನ್ನ ವಿನೋದಕ್ಕೆ ವಿಭೂತಿಯಾದ ಗುರು
ತನ್ನ ವಿನೋದಕ್ಕೆ ರುದ್ರಾಕ್ಷಿಯಾದ ಗುರು

ತನ್ನ ವಿನೋದಕ್ಕೆ ಮಹಾಮಂತ್ರವಾದ ಇಂತೀ ಭೇದವನರಿಯದೆ ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ
ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಲಾರದು ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ ಅಂಗೈಯಲ್ಲಿರ್ದ ಲಿಂಗವು ಜಾರಿತ್ತು ಮಾಡಿದ ಪೂಜೆಗೆ ಕಿಂಚಿತು ಫಲಪದವಿಯ ಕೊಟ್ಟು ಭವಹೇತುಗಳ ಮಾಡುವನಯ್ಯಾ ಇಷ್ಟ ಲಿಂಗದಲ್ಲಿ ನಿಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದ ವಿರಕ್ತನಾದನಯ್ಯಾ ಗುರು ಚೆನ್ನಮಲ್ಲಿಕಾರ್ಜುನ

ಇಲ್ಲಿ ಗುರು ಎಂದರೆ ಅರಿವು ಎಂದರ್ಥ. ಅಕ್ಕ ತನ್ನ ಅರಿವಿನ ಮುಖಾಂತರವಾಗಿ ಅಂದರೆ ತನ್ನೆಲ್ಲ ಆಗು ಹೋಗುಗಳಿಗೆ ತನ್ನ ಅರಿವಿನ ಜ್ಞಾನಿಯಾದ ಚೆನ್ನಮಲ್ಲಿಕಾರ್ಜುನನೇ ಕಾರಣ ಎನ್ನುವರು .ಹಾಗೇ ವಿನೋದ ಎಂದರೆ ,ಮನದ ಭಾವ ಅಥವಾ ಅವಸ್ಥೆ .
ಸಾಮಾನ್ಯ ಅರ್ಥದಲ್ಲಿ ಬಯಕೆಯ ವಸ್ತುಗಳನ್ನು ಪಡೆದುಕೊಳ್ಳುವುದೇ ವಿನೋದ.

ಗುರು ತನ್ನ ವಿನೋದಕ್ಕೆ ಗುರುವಾದ ಗುರು
ತನ್ನ ವಿನೋದಕ್ಕೆ ಲಿಂಗವಾದ ಗುರು
ತನ್ನ ವಿನೋದಕ್ಕೆ ಜಂಗಮವಾದ ಗುರು ,ತನ್ನವಿನೋದಕ್ಕೆ ಪಾದೋದಕವಾದ ಗುರು.
ತನ್ನ ವಿನೋದಕ್ಕೆ ಪ್ರಸಾದವಾದ ಗುರು

ಮನದ ಭಾವ ಬಯಕೆಯ ವಸ್ತುಗಳನ್ನು ಪಡೆದುಕೊಳ್ಳುವ ಅವಸ್ಥೆಯೇ ವಿನೋದ.
ಅಕ್ಕನವರ ಲಿಂಗಾಂಗ ಸಾಮರಸ್ಯದ ಅನುಭಾವದ ಅನುಭವದ ಅವಸ್ಥೆಯನ್ನು ನಾನಿಲ್ಲಿ ಪ್ರಸ್ತುತ ಪಡಿಸಿರಿವೆ.

ಬಸವಣ್ಣನವರು ಅತ್ಯಂತ ತಳ ಸಮುದಾಯದ ಜನರಿಗೂ ಲಿಂಗದೀಕ್ಷೆ ಕೊಟ್ಟು .ಅವರೂ ಕೂಡಾ ನಮ್ಮಂತೆ ,ನಿಮ್ಮಂತೆ ಮಾನವರು .ಅವರಿಗೂ ದೇವರನ್ನು ಕಾಣುವ ಪೂಜಿಸುವ ಹಕ್ಕು ಇದೆ .ಎಲ್ಲರಂತೆ ಅವರೂ ಕೂಡಾ ಲಿಂಗ ಧರಿಸಿ ಲಿಂಗಾಯತ ಧರ್ಮವನ್ನು ಸೇರಬಹುದು ಎಂದು ತಿಳಿದು .ಸಮ ಸಮಾಜದ ಅರಿವು ಮೂಡಿಸಲು ಯಾವುದೇ ಒಂದು ವರ್ಗಕ್ಕೆ, ಸೀಮಿತ ಗೊಳಿಸದೇ, ಕರಸ್ಥಲದಲ್ಲಿ ಲಿಂಗ ಎನ್ನುವ ಚೈತನ್ಯವನ್ನು ಒಂದು ಶಕ್ತಿಯನ್ನು ಕರಸ್ಥಲದಲ್ಲಿ ಪ್ರತಿಷ್ಠಾಪಿಸಿ.
ಲಿಂಗವಂತರನ್ನಾಗಿಸಿ,ಲಿಂಗಾಯತರನ್ನಾಗಿ ಮಾಡಿದರು ,ಲಿಂಗವನ್ನು ಧರಿಸಿದವರೆಲ್ಲರೂ ಲಿಂಗಾಯತರಾದರು.
ಇದು ತನ್ನದೇ ಆದ ತತ್ವ ಮತ್ತು ಸಿದ್ದಾಂತವನ್ನು ಹೊಂದಿದ ಬಹು ದೊಡ್ಡದಾದ ಲಿಂಗಾಯತ ಧರ್ಮವನ್ನು ಹುಟ್ಟು ಹಾಕಿದರು .

ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳು -ಅಂದರೆ ಗುರು ,ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ ,ರುದ್ರಾಕ್ಷಿ ಮತ್ತು ಮಂತ್ರಗಳೇ ಲಿಂಗಾಯತ ಮಾನವನ ಅಂಗವಾಗಿವೆ.

ಲಿಂಗಾಚಾರ, ಶಿವಾಚಾರ, ಸದಾಚಾರ, ಗಣಾಚಾರ ,ಮತ್ತು ಭೃತ್ತಾಚಾರ ಈ ಪಂಚಾಚಾರಗಳೇ ಪ್ರಾಣಗಳಾಗಿವೆ .
ಭಕ್ತ,ಮಾಹೇಶ,ಪ್ರಸಾದಿ ,
ಪ್ರಾಣಲಿಂಗಿ ,ಶರಣ ,ಐಕ್ಯ, ಈ ಷಟ್ಸ್ಥಲಗಳೇ ಆತ್ಮವಾಗಿವೆ.

ಈ ಅಷ್ಟಾವರಣಗಳನ್ನು ಶರಣರು ಚಲನ ಗೊಳಿಸಿದರು.
ಶರಣರು ತಮ್ಮ ದೇಹವನ್ನೇ ದೇವಾಲಯ ಮಾಡಿಕೊಂಡು ,ಹೊರಗಿನ ದೇವಾಲಯವನ್ನು ನಿರಾಕರಿಸಿ ,ತಾನೇ ಗುರು ,ತಾನೇ ಲಿಂಗ, ತಾನೇ ಜಂಗಮವಾಗಬೇಕು .ತಾನೇ ವಿಭೂತಿ ಧರಿಸಬೇಕು ,ತಾನೇ ಮಂತ್ರವನ್ನು ಜಪಿಸಬೇಕು ,ತಾನೇ ಪಾದೋದಕ ಪ್ರಸಾದವ ಸೇವಿಸಬೇಕೆಂದು ಹೇಳಿದರು .
ಹೀಗೆ ಅಷ್ಟಾವರಣಗಳು ಹೊರಗಿನವುಗಳಲ್ಲ ,ಅವು ಒಳಗಿನವುಗಳು,ಅವು ನಮ್ಮ ಅರಿವಿನ ಪ್ರತಿಕ .ಗುರು ಎಂದು ಸ್ವಷ್ಟಪಡಿಸಿದರು.

ಇಲ್ಲಿ ಗುರು ಎಂದರೆ ದೊಡ್ಡದು .ಈ ಗುರುವಿಗೆ ತನ್ನದೇ ಆದ ಘನತೆ ಇದೆ ಗೌರವ ಇದೆ .ಆ ಘನತೆ ಗೌರವಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಅರಿವು ಗುರುವಿಗೆ ಇರಬೇಕು .ಈ ಅರಿವು ಇಲ್ಲದೇ ನಡೆಯುವ ಗುರು, ಗುರು ಎನಿಸಿಕೊಳ್ಳಲಾರೆ.
ಗುರು ಎನಿಸಿಕೊಂಡವನು ಗುರು, ಲಿಂಗ, ಜಂಗಮ ಹಾಗೂ ಪ್ರಸಾದವನ್ನು ಹಗುರವಾಗಿ ಭಾವಿಸಲೂ ಬಾರದು .
ನನ್ನರಿವಿನ ಗುರುವಾದ ಈ ಗುರು ನನ್ನ ವಿನೋದದಿಂದ ಕರಸ್ಥಳಕ್ಕೆ ಬಂದು ಗುರುವಾದ, ಲಿಂಗವಾದ,ಜಂಗಮವಾದ ಪಾದೋದಕವಾದ ,ಪ್ರಸಾದವಾದ ವಿಭೂತಿಯಾದ ,ರುದ್ರಾಕ್ಷಿಯಾದ ,ಮಹಾಮಂತ್ರವಾದ ಎನ್ನುವರು ಅಕ್ಕ.

ಶಿವಶರಣರಲ್ಲಿ ಗುರು- ಹೊರಗಿರದೆ ಒಳಗಿನ ಅರಿವಾಗಿ ಬೆಳೆಯುತ್ತದೆ .
ಲಿಂಗ – ಹೊರಗಿರದೆ ಒಳಗಿನ ಆಚಾರವಾಗಿ ಬೆಳೆಯುತ್ತದೆ ಅದೇ ರೀತಿ
ಜಂಗಮ- ಹೊರಗಿರದೆ ಒಳಗಿನ ಅನುಭಾವವಾಗಿ ಬೆಳೆದು ನಿಲ್ಲುತ್ತದೆ .

ಇಲ್ಲಿ ಜಂಗಮ ಎಂದರೆ
ನಾವು ನೀವುಗಳೆಲ್ಲ ತಿಳಿದುಕೊಂಡ ಕಾವಿ ಬಟ್ಟೆಯನ್ನು ಧರಿಸಿಕೊಂಡು ತಿರುಗುವ ಜಂಗಮನಲ್ಲ .
ಈ ಜಂಗಮ ಎನ್ನುವುದು ಚರ ಅಂದರೆ ಸಂಚರಿಸುವುದು .
ಈ ಕಾಯವು ಅಂದರೆ ಈ ಶರೀರವು ಈ ಭೂಮಿಯ ಮೇಲೆ ಹುಟ್ಟಿದ ಬಳಿಕ ಅದರ ಉಪಯೋಗ ಸಮಾಜಕ್ಕೆ ಆಗಬೇಕು .ಕೇವಲ ಕೊರಳಲ್ಲಿ ಲಿಂಗ ಧರಿಸಿ ಕೂಡುವುದಲ್ಲ. ಲಿಂಗಧಾರಿಯಾದ ವ್ಯಕ್ತಿ ಸಮಾಜದಲ್ಲಿರುವ ಅಂಕು ಡೊಂಕು ಗಳನ್ನು ತಿದ್ದುವ ಕೆಲಸ ಮಾಡಬೇಕು .
ಒಳ್ಳೆಯ ತತ್ವ ಸಿದ್ಧಾಂತಗಳನ್ನು ರೂಢಿಸಿಕೊಂಡು ,ಒಳ್ಳೆಯ ಸಂಸ್ಕಾರವನ್ನು ಬೆಳೆಸಿಕೊಂಡು ,ಗುರು ,ಲಿಂಗ, ಜಂಗಮದ ತತ್ವ ಸಿದ್ದಾಂತಗಳನ್ನು ಪಾಲಿಸಿಕೊಳ್ಳಬೇಕು .
ಇಷ್ಟಲಿಂಗವೆಂಬ ಸಂಸ್ಕಾರವನ್ನು ಆಯತ ,ಸ್ವಾಯತ ಮತ್ತು ಸನ್ನಹಿತ ಮಾಡಿಕೊಳ್ಳಬೇಕು .

ಇಲ್ಲಿ ಲಿಂಗವೆಂದರೆ ಪರಮಾತ್ಮ ಅಥವಾ ಚೈತನ್ಯ. ಇದು ನಮ್ಮ ಅಂಗಕ್ಕೂ ,ಪ್ರಾಣಕ್ಕೂ ಸಮರಸವಾಗಬೇಕಾದರೆ ,ಅಂದರೆ ಕರಸ್ಥಲದಲ್ಲಿದ್ದ ಲಿಂಗದ ಚೈತನ್ಯ ದೇಹ ಮತ್ತು ಮನಸ್ಸಿಗೆ ಸಮರಸ ಮಾಡಬೇಕಾದರೆ ಎರಡೂ ಕಣ್ಣುಗಳೇ ದಾರಿ ಎನ್ನಲಾಗಿದೆ .ಲಿಂಗದಲ್ಲಿದ್ದ ಗುರು ,ಲಿಂಗ, ಜಂಗಮರನ್ನು ಸಾಧನೆಯ ಮೂಲಕ ತನು ಮನ ಭಾವಗಳಲ್ಲಿ ಸಮರಸಗೊಳಿಸುವ ವಿಧಾನ.

ತನ್ನ ವಿನೋದಕ್ಕೆ ವಿಭೂತಿಯಾದ ಗುರು
ತನ್ನ ವಿನೋದಕ್ಕೆ ರುದ್ರಾಕ್ಷಿಯಾದ ಗುರು
ತನ್ನ ವಿನೋದಕ್ಕೆ ಮಹಾಮಂತ್ರವಾದ
ಇಂತೀ ಭೇದವನರಿಯದೆ ಗುರು ,ಲಿಂಗ, ಜಂಗಮ, ಪಾದತೀರ್ಥ, ಪ್ರಸಾದ, ವಿಭೂತಿ ,ರುದ್ರಾಕ್ಷಿ
ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಲಾರದು

ಮೇಲೆ ತಿಳಿಸಿದ ಹಾಗೆ ನಮ್ಮ ನಮ್ಮ ಅರಿವಿನ ಜ್ಞಾನದ ಮಾರ್ಗಕ್ಕಾಗಿ ನಾವು ವಿಭೂತಿ ಧರಿಸುತ್ತೇವೆ. ನಾನು ಹಚ್ಚಿಕೊಳ್ಳುವ ಈ ವಿಭೂತಿಯೇ ನನ್ನ ಗುರು .ನನ್ನ ಕೊರಳೊಳಗಿನ ರುದ್ರಾಕ್ಷಿಯೇ ಎನ್ನ ಗುರು .ನಾನು ಧ್ಯಾನಿಸಿ ಉಚ್ಛರಿಸುವ ಈ ಮಹಾಮಂತ್ರವೇ
ಎನ್ನ ಗುರು ಇವೆಲ್ಲ ಬರೀ ವಿನೋದ ಕ್ಕಾಗಿ .
ಭೇದ ಅರಿತು ಗುರುವನ್ನು ಹೇಗೆ ಮರೆತು ಸಾಗಲಿ ? ಕರದಲ್ಲಿರುವ ಲಿಂಗವನ್ನು ಹೇಗೆ ಮರೆತು ಸಾಗಲಿ ? ಈ ಜಂಗಮ, ಈ ಪಾದತೀರ್ಥ, ಈ ಪ್ರಸಾದ, ಈ ವಿಭೂತಿ ಈ ರುದ್ರಾಕ್ಷಿಯನ್ನು ಹೇಗೆ ಮರೆತು ಸಾಗಲಿ
ಓಂ ನಮಃ ಶಿವಾಯಯೆಂಬ ಮಂತ್ರವನ್ನು ಹೇಗೆ ಬೇರಿಟ್ಟು ಅರಿಯಲಿ ಎನ್ನ ಚೆನ್ನಮಲ್ಲಿಕಾರ್ಜುನನನ್ನು

ಓಂ ನಮಃ ಶಿವಾಯ ಶರಣರು ಲಿಂಗಯೋಗದ ಮೂಲಕ ಮನುಷ್ಯ ಹೇಗೆ ತಾನೇ ದೇವನಾಗಬಲ್ಲನು ಎಂದು ಸಾಧಿಸಿ ತೋರಿದ್ದಾರೆ .
ತನ್ನ ಅಂತರೊಳಗೆ ದೇವರನ್ನು ಕಾಣುವುದು ಮಾನವ ಮಹದೇವನಾಗುವನು .
ಮನುಷ್ಯ ತಾನು ತನ್ನ ಸುತ್ತಲಿನ ಜೀವ ಜಾಲದ ಚೈತನ್ಯವನ್ನು ಚಿತ್ಕಳೆಯನ್ನು ನಿರಾಕಾರದ ಶಿವನ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಮತ್ತೆ ನಿರಾಕಾರದ ನಿರುಪಾಧಿಕ ತತ್ವದ ಅಧ್ಯಾತ್ಮಿಕ ಪಯಣಕ್ಕೆ ಕರೆದೊಯ್ಯುವುದೇ ಶರಣ ಮಾರ್ಗ. ತನ್ನಲ್ಲಿಯೇ ದೈವತ್ವವನ್ನು ಅಥವಾ ತಾನೇ ಲಿಂಗ ಸ್ವರೂಪಿಯಾಗಬೇಕೆನ್ನುವುದು ಶರಣರ ಪರಿಕಲ್ಪನೆ.
ಈ ಮರ್ತ್ಯ ಲೋಕವಾದ ಭೂಲೋಕವನ್ನೆಲ್ಲಾ ಸಂಚರಿಸುವ ಶರಣರು ಮಾತು ಮಾತಿಗೂ ಹೆಜ್ಜೆ ಹೆಜ್ಜೆಗೂ , ಓಂ ನಮಃ ಶಿವಾಯ
ಎಂದು ಅದೇ ಮಂತ್ರದಲ್ಲೇ ಮಂತ್ರ ಮುಗ್ಧರಾಗಿ ಲಿಂಗವನ್ನು ನೆನಪಿಸುತ್ತ, ಲಿಂಗವೇ ಆಗಿ ಬಿಡುವುದು .
ಶರಣರು ಒಪ್ಪಿಕೊಂಡ ಶಿವನು ಪುರಾಣದಲ್ಲಿ ಬರುವ ಶಿವನಲ್ಲ .
ಪ್ರತಿ ಸಾಧಕನ ಒಳಗಡೆ ಇರುವ ಅಂತಃಕರಣದ ಆತ್ಮನೇ ಪರಮಾತ್ಮ.
ಶಿವ ಸಾಧಕ ಬೆಳೆದಂತೆಲ್ಲ ಇದು ತನ್ನೊಳಗಡೆಯೇ ಇರುವ ಪ್ರಾಣಲಿಂಗವಾಗಿ ಪರಿವರ್ತನೆಯಾಗುತ್ತದೆ .ಅದೇ ಜ್ಞಾನಲಿಂಗವಾಗಿ ಬೆಳೆಯುತ್ತದೆ .

ಅಂಗೈಯಲ್ಲಿರ್ದ ಲಿಂಗವು ಜಾರಿತ್ತು ಮಾಡಿದ ಪೂಜೆಗೆ ಕಿಂಚಿತು ಫಲಪದವಿಯ ಕೊಟ್ಟು ಭವ ಹೇತುಗಳ ಮಾಡುವನಯ್ಯಾ

ಹೇ ಚೆನ್ನಮಲ್ಲಿಕಾರ್ಜುನಾ ಶರಣರ ದೃಷ್ಟಿಯಲ್ಲಿ ಶರಣನಾಗುವುದೆಂದರೆ ಮರುಜನ್ಮವಾದಂತೆ. ಈ ಹುಟ್ಟು ಮತ್ತು ಸಾವುಗಳ ಮಧ್ಯದಲ್ಲಿ ಮರೆತು ಸಾಗುತ್ತಿರುವೆ ಎನ್ನುವರು ಅಕ್ಕ.

ಜನನ ಮರಣಗಳೆಂಬ ಕ್ಲೇಶಗಳ ಹೊಡೆತಕ್ಕೆ ಕಾರಣವಾದ ಈ ಬಂಧವು ಮನುಷ್ಯನಿಗೆ ಅಜ್ಞಾನದಿಂದ ಸಂಭವಿಸಿದೆ .ಈ
ಅಭಿಮಾನದಿಂದಲೇ ಈ ಅಸತ್ಯವಾದ ಶರೀರವನ್ನು ಸತ್ಯವೆಂದು ಭಾವಿಸಿಕೊಂಡು ಅದು ತಾನೇ ಎಂಬ ಬುದ್ಧಿಯಿಂದ ಅದನ್ನು ವಿಷಯಗಳಿಂದ ಪೋಷಿಸುತ್ತದೆ .
ದೃಢಚಿತ್ತವಿಲ್ಲದೇ ಪೂಜಿಸುವ ಈ ಲಿಂಗವು ಕ್ಷಣ ಮಾತ್ರದಲ್ಲಿ ಅಂಗೈಯಿಂದ ಜಾರಿ ಬಿದ್ದು ವಡೆದು ಹೋಯಿತು .

ಇಷ್ಟ ಲಿಂಗದಲ್ಲಿ ದೃಷ್ಠಿ ನಟ್ಟು
ಬಿಟ್ಟು ತ್ರಿವಿಧವ ಮರಳಿ ಹಿಡಿಯದ ವಿರಕ್ತನಾದನಯ್ಯಾ ಗುರು ಚೆನ್ನಮಲ್ಲಿಕಾರ್ಜುನಾ

ಇಷ್ಟಲಿಂಗದಲ್ಲಿ ದೃಷ್ಟಿನೆಡದ ನನ್ನ ಮರುಳತನಕ್ಕೆ ಎನನ್ನಲಿ ? ಚೆನ್ನಮಲ್ಲಿಕಾರ್ಜುನಾ .
ಅಂತರಂಗ ಹಾಗೂ ಬಾಹ್ಯ ಎರಡೂ ಶುದ್ಧಗೊಂಡಿರಲಾರದು ಚೆನ್ನಮಲ್ಲಿಕಾರ್ಜುನಾ .
ಶುದ್ಧಾತ್ಮಗೊಂಡಿರಬೇಕು .ಭಾವ ಮನಸ್ಸುಗಳು ಏಕವಾಗಿ ಶುದ್ಧಿಗೊಂಡಿರಬೇಕು .ಆದರೆ ನನ್ನ ಮನವು ಮಲೀನ ಗೊಂಡಂತಾಗಿದೆ .
ಮಂಗಳಕರವಾದ ಲಿಂಗದ ದ್ಯಾನದಲ್ಲಿ ಏಕವಾಗುತ್ತಿಲ್ಲ. ಗುರು ಲಿಂಗ ಜಂಗಮಕ್ಕೆ ಮಾರು ಹೋಗದೇ ಡಂಭಕಳಾದೆ .
ದೃಢ ಚಿತ್ತವಿಲ್ಲದ ನನ್ನ ಭಕ್ತಿ ನಿನ್ನನ್ನು ಸೇರುತ್ತಿಲ್ಲ. ನನ್ನ ತ್ರಿಕರಣಗಳು ಶುದ್ಧವಾಗಿ, ಆಂತರಿಕ ಹಾಗೂ ಬಾಹ್ಯ ಮನ, ಭಾವ, ಬುದ್ಧಿ ಒಂದಾಗುವಂತೆ ಮಾಡಯ್ಯ, ಹೇ ಪ್ರಭು ಚೆನ್ನಮಲ್ಲಿಕಾರ್ಜುನಾ


Leave a Reply

Back To Top