ಕಥಾ ಸಂಗಾತಿ
ಸಿಂಗಲ್ ಚಾ…….ಸಣ್ಣ ಕಥೆ-
ನಾಗರಾಜ ಬಿ. ನಾಯ್ಕ

ಹಳ್ಳಿ ಅಂದ್ರೆ ಹಾಗೆ. ಅಲ್ಲೊಂದು ಭಾವ ಬೆಸುಗೆಯ ಬಂಧ ಸದಾ ಇರುತ್ತದೆ. ಅಲ್ಲೊಂದು ಪುಟಾಣಿ ಅಂಗಡಿ ಇದ್ದರೆ, ಆ ಊರಿನ ಜನರಿಗೆ ಅದೊಂದು ಅವಿನಾಭಾವದ ಸಂಬಂಧದಂತೆ. ಪುಟ್ಟ ಹಳ್ಳಿ ಹಕ್ಕಿ ಗದ್ದೆಯೇ ಹಾಗೆ .ಬೆಳಿಗ್ಗೆ ಸಂಜೆ ಒಂದೊಂದು ಬಸ್ಸು ಬಂದು ಹೋಗುವ ಅಪ್ಪಟ ಮಣ್ಣಿನ ಸೊಗಡಿನ ಹಳ್ಳಿ. ಅಲ್ಲೊಂದು ಇಲ್ಲೊಂದು ಮನೆ. ಊರು ದೊಡ್ಡದೇ. ಹಕ್ಕಿಗದ್ದೆ ಎಂಬುದು ಸುತ್ತಲೂ ಅನೇಕ ಊರಿಗೆ ಹೆಸರುವಾಸಿ. ಏಕೆಂದರೆ ಆ ಊರಿನ ಸಮೀಪ ಯಾವುದೇ ಟೀ ಅಂಗಡಿ ಇರಲಿಲ್ಲ. ಈಗೀಗ ಒಂದು ಇಪ್ಪತ್ತು ವರ್ಷಗಳ ಹಿಂದೆ ಆ ಚಾ ಅಂಗಡಿಗೆ ಬಹಳ ಬೇಡಿಕೆ ಇತ್ತು. ಚಿಕ್ಲ ಆ ಟೀ ಅಂಗಡಿ ಯಜಮಾನ. ಈ ಪುಟಾಣಿ ಗೂಡಂಗಡಿಯೊಂದು ಎಲ್ಲರ ನೆಚ್ಚಿನ ಸ್ಥಳವಾಗಿತ್ತು. ಬಂದು ಹೋಗುವ ಎಲ್ಲರಿಗೂ ಚಿಕ್ಲನ ಅಂಗಡಿಯ ಟೀ ಕುಡಿದರೆ ಮಾತ್ರ ಸಮಾಧಾನ. ಚಿಕ್ಲನ ವಿಶೇಷತೆಯೋ ಅವನ ಕೈಗುಣವೋ ಗೊತ್ತಿಲ್ಲ. ಕುಡಿದವರಿಗೆ ಮಾತ್ರ ಆ ಸಿಂಗಲ್ ಚಾ ಅಮೃತದಂತೆ ಕಂಡಿದ್ದಿದೆ. ಚಾ ಕುಡಿದು ಹೋಗಿ ಮನೆ ಕಡೆ ನೂರು ಮಾತು ಆಡುವ ನಡುವೆ ಅನೇಕ ಸಿಂಗಲ್ ಚಾ ಗಳು ಹೊಟ್ಟೆ ಸೇರಿ ನಗುತ್ತಿದ್ದವು. ಪರಿಚಯಗಳು, ಸುದ್ದಿಗಳು, ಮಾತುಕತೆಗಳು, ಬಗೆಹರಿಯದ ಸಮಸ್ಯೆಗಳು ಎಲ್ಲವೂ ಸಿಂಗಲ್ ಚಾದಲ್ಲಿ ಕರಗಿ ಹೋದ ಅದೆಷ್ಟೋ ಕಥೆಗಳು ಇವೆ ಈ ಹಕ್ಕಿಗದ್ದೆಯಲ್ಲಿ. ಅದರಲ್ಲೂ ಚಳಿಗಾಲ ಅಂದ್ರೆ ಕೇಳಬೇಕೆ ಅನೇಕರಿಗೆ ಈ ಸಿಂಗಲ್ ಚಾ ಬೇಕೇ ಬೇಕು. ಚಿಕ್ಲನ ಚಾ ಎಂದರೆ ಅದೊಂದು ವಿಶೇಷ ಅನೇಕರಿಗೆ. ಖಾರ, ಶೇಂಗಾ ಕಾಳು ,ಅವಲಕ್ಕಿ ಇದ್ದರಂತೂ ಅದರ ಗಮ್ಮತ್ತೇ ಬೇರೆ.
ನಾಲ್ಕು ಗಂಟೆಗೆ ಎದ್ದು ಇರುವ ಎಮ್ಮೆ ,ಆಕಳು ಹಾಲು ಕರೆದು ಅದರ ಕೆಲಸ ಮುಗಿಸಿ ಚಿಕ್ಲ ಐದು ಗಂಟೆ ಬೆಳಗಿನ ಜಾವಕ್ಕೆ ಅಂಗಡಿಗೆ ಬಂದ್ರೆ ಅನೇಕರು ಬೆಳಗಿನ ಬಸ್ಸಿಗೆ ಸಿದ್ದರಾಗಿ ನಿಂತಿರುತ್ತಿದ್ದರು. ಅಯ್ಯೋ ಬಂದೆ ಎನ್ನುತ್ತಾ ಅಂಗಡಿ ಬಾಗಿಲ ತೆಗೆದು ಬೇಗ ಒಲೆ ಹಚ್ಚಿ ಚಾ ಮಾಡಿಕೊಟ್ಟಾಗ ಚಿಕ್ಲನಿಗೆ ಸಮಾಧಾನ. ಕೊಟ್ಟ ಚಾ ಕ್ಕೆ ಹಣ ಕಡಿಮೆಯಾದರೂ ಹೋಗಿ ಬನ್ನಿ ಕೊಡುವಿರಂತೆ ಎಂದು ಬಾಯಿ ತುಂಬಿ ನಗುತ್ತಾ ಕಳಿಸುವ ಚಿಕ್ಲನ ಮಾತು ಕೇಳಲು ಬಹಳ ಚೆಂದ. ಒಮ್ಮೊಮ್ಮೆ ಊರಿನ ಸಿರಿವಂತರು ಬಂದು ಮನೆ ಜಗಳ ಹೊಟ್ಟೆಯಲ್ಲಿ ಹಾಕಿಕೊಂಡು ಸಿಂಗಲ್ ಚಾ ಕುಡಿದು ಹೋದುದ್ದು ಇದೆ. ಚಿಕ್ಲನ ಅಂಗಡಿ ಹಕ್ಕಿಗದ್ದೆಯ ರೇಡಿಯೋ ಸ್ಟೇಷನ್ ಇದ್ದಂಗೆ. ಎಲ್ಲ ಮನೆಯ ಸುದ್ದಿಗಳೂ ಅಲ್ಲಿಗೆ ಬಂದು ಹೋಗ್ತಾ ಇತ್ತು. ಮದುವೆ, ಹಬ್ಬ, ಊರಿನ ದೇವರ ಪೂಜೆ, ಹೊಸ್ತು, ಕಟ್ಟ ಕೌಲು, ದನ ಬಿಚ್ಚುವುದು, ಸುದ್ದಿಯ ಜೊತೆಗೆ ಒಂದಿಷ್ಟು ಮುನಿಸು, ಬೇಸರ, ಜಗಳ ಎಲ್ಲವೂ ಸಿಂಗಲ್ ಚಾ ದ ಸುತ್ತ ಮಾತನಾಡುತ್ತಿದ್ದವು. ಈ ಹಕ್ಕಿ ಗದ್ದೆಯಲ್ಲಿ ಹತ್ತನೇ ಕ್ಲಾಸ್ ಪಾಸಾದ ಅದೆಷ್ಟು ಮುಂದಿ ಇದ್ದರು. ಎಲ್ಲರೂ ಕಾಲೇಜ್ ಕಡೆ ಮುಖ ಮಾಡಿ ಹೊರಟು ಒಂದಿಷ್ಟು ಓದು ಬರಹ ಕಲಿತು ಜಾಣರಾಗಿ ಬಂದ ಕತೆಗಳು ಚಿಕ್ಲನ ಅಂಗಡಿಯಲ್ಲಿ ಬಂದು ತಾವು ಓದಿದ ಅನೇಕ ಸಂಗತಿಗಳ ಕುರಿತು ಮಾತನಾಡುತ್ತಿದ್ದವು .
ಮನೆಯ ಅಳತೆಯಿಂದ ಹಿಡಿದು ಬೆಳೆಯುವ ಬೆಳೆಗಳ ವರೆಗೆ ಶೇಂಗಾದಿಂದ ಹಿಡಿದು ಈರುಳ್ಳಿಯವರೆಗೆ ಎಲ್ಲ ವಿಚಾರಗಳು ಸಿಂಗಲ್ ಚಾದ ಸುತ್ತ ಗಿರಕಿ ಹೊಡೆಯುತ್ತಾ ಮರೆಯಾಗುತ್ತಿದ್ದವು. ಸಂಜೆ ಊರ ಸಮೀಪದ ಬಯಲಾಟ, ನಾಟಕ ಇವುಗಳಿದ್ದರಂತೂ ಸಿಂಗಲ್ ಚಾ ಬೋಂಡಾ ಇವುಗಳ ಸುತ್ತ ಜನ ನಿಲ್ಲುತ್ತಿದ್ದರು. ಕಾದು ನಿಂತು ರುಚಿ ರುಚಿಯಾದ ಚಾ ಸೇವಿಸಿ ಖುಷಿಯಾಗುತ್ತಿದ್ದರು. ಜನ ಹೆಚ್ಚಾಗುವ ದಿನಗಳಲ್ಲಿ ಚಿಕ್ಲ ತನ್ನ ತಮ್ಮನ ಕರೆ ತರುತ್ತಿದ್ದ. ಇಬ್ಬರೂ ಸೇರಿ ತಮ್ಮ ನಿತ್ಯದ ಕೆಲಸಗಳೊಟ್ಟಿಗೆ ತೂಗಿಸಿಕೊಂಡು ಹೋಗುತ್ತಿದ್ದರು. ದೂರದ ಬಸ್ಸಿಗೆ ಎಂದು ಬರುವ ಡ್ರೈವರ್ ಮಂದಿ ಅಂದ್ರೆ ಈ ಚಿಕ್ಲನಿಗೆ ಬಹಳ ಆದರ. ಏಕೆಂದರೆ ಅವರು ಹೇಳಿದಂತೆ ಅವರಿಗೆ ಟೀ ಮಾಡಿಕೊಳ್ಳುತ್ತಿದ್ದ ಚಿಕ್ಲ. ಅವರ ಮೇಲೆ ವಿಶೇಷ ಅಕ್ಕರೆ.ಪೇಟೆಗೆ ಹೋದಾಗೆಲ್ಲ ಚಿಕ್ಲನ ಹೆಸರು ಹಿಡಿದು ಅವರು ಕೂಗಿದ್ರೆ ಚಿಕ್ಲನಿಗೆ ತುಂಬಾ ಖುಷಿ. ಹಕ್ಕಿಗದ್ದೆಗೆ ನನ್ನಿಂದ ಹೆಸರು ಬಂತು ಎಂದು ಚಿಕ್ಲ ಖುಷಿ ಪಡುವ. ಬಸ್ಸಿನಲ್ಲಿ ಅವನು ಕುಳಿತಿರುವಾಗ ಅವರೆಲ್ಲಾ ನನ್ನ ಕುರಿತು ಮಾತನಾಡುತ್ತಿರಬಹುದು ಎಂದು ಅನ್ನಿಸಿದ್ದಿದೆ. ನಾನು ಮಾಡುವ ಸಿಂಗಲ್ ಚಾ ಎಂದರೆ ಕಡಿಮೆಯೇ ಎಂದು ಆಗಾಗ ಹೆಮ್ಮೆಯಿಂದ ಅಂದು ಕೊಳ್ಳುವ ಚಿಕ್ಲ.
ಒಮ್ಮೊಮ್ಮೆ ಅಪರಿಚಿತರೂ ಗಾಡಿ ನಿಲ್ಲಿಸಿ ಚಹಾ ಕುಡಿದು ಹೋದದ್ದಿದೆ . ದೂರದ ಅದ್ಯಾವುದೋ ದೇಶದಿಂದ ಬಂದ ಭಾಷೆ ಗೊತ್ತಿಲ್ಲದ ವ್ಯಕ್ತಿ ಒಬ್ಬ ಅಂಗಡಿ ಎದುರಿಗೆ ನಿಂತಾಗ ಜನ ಮಾತಾಡಿದ್ದುಂಟು. ಚಿಕ್ಲ ಈಗ ಜಗತ್ತಿಗೆ ಗುರುತಾದ ಎಂದು. ಬಂದವರ ಹತ್ತಿರ ಏನು ಬೇಕೆಂದು ಚಿಕ್ಲ ಕೇಳಲಾರ. ಆದರೆ ನಗುತ್ತಲೇ ಅವರನ್ನು ಏನು ಬೇಕು ಎಂದು ಕೇಳಿದಾಗ ಸುಮ್ಮನೆ ಕುಳಿತರು. ಒಂದೆರಡು ಮಂದಿ ಬಂದು ಸಿಂಗಲ್ ಚಾ, ಅವಲಕ್ಕಿ ಎಂದಾಗ ಅವರೂ ಕೂಡ ಸಿಂಗಲ್ ಚಾ ಅವಲಕ್ಕಿ ಎಂದು ತಡವರಿಸುತ್ತಾ ಹೇಳಿದಾಗ ಚಿಕ್ಲ ವಿಶೇಷ ಕಾಳಜಿ ವಹಿಸಿ ಅವರಿಗೆ ಚಾ ಅವಲಕ್ಕಿ ಮಾಡಿ ಕೊಟ್ಟ. ಅವರು ಚಾ ವನ್ನು ತುಂಬಾ ಇಷ್ಟ ಪಟ್ಟು ಕುಡಿದಾಗ ಚಿಕ್ಲನಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಭಾಸವಾಯಿತು. ಅವರು ಹೊರಟು ನಿಂತಾಗ ಹಣ ಕೊಡಲು ಮುಂದಾದರು . ನೂರರ ನೋಟನ್ನು ಎತ್ತಿ ಕೊಟ್ಟಾಗ ಸ್ವೀಕರಿಸದೇ ಕೈ ಮುಗಿದ. ಅವರು ಖುಷಿಯಾಗಿ ಮುಂದೆ ಹೋದ್ರು. ಹೋಗುವಾಗ ಚಿಕ್ಲನ ಅಂಗಡಿಯ ಫೋಟೋ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು. ಈಗ ಅನ್ನಿಸ್ತು ಚಿಕ್ಲನಿಗೆ. ತನ್ನಂಗಡಿ ಪುಟ್ಟದಾದರೂ ಅದಕ್ಕೆ ಒಂದು ಹೆಸರು ಇಡಬೇಕಿತ್ತು ಎಂದುಕೊಂಡ. ಅವರು ಎಲ್ಲಾದರೂ ತೋರಿಸಿದರೆ ನನ್ನ ಹೆಸರು ಇಲ್ದಿದ್ರೆ ಹೇಗೆ ಎಂದು ಯೋಚಿಸಿದ. ವಿಚಾರಿಸಿದ. ಬಂದವರಿಗೆಲ್ಲ ಕೇಳಿದ. ಅಂಗಡಿಗೆ ಒಂದು ಹೆಸರು ಕೊಟ್ರೆ ಹೇಗೆ ?ಎಂದು. ನಾನಾ ಹೆಸರುಗಳು ಬಂದವು .ಕಲಿತವರು ಎಲ್ಲರೂ ಒಂದೊಂದು ಹೆಸರು ಕೊಟ್ಟರು . ಚಿಕ್ಲನಿಗೆ ಯಾವ ಹೆಸರು ಸರಿಯಾದದ್ದು ಅನ್ನಿಸಲಿಲ್ಲ. ಒಂದಿಷ್ಟು ಓದಿ ಊರು ಬಿಟ್ಟ ಮಂದಿ ಊರಿಗೆ ಬಂದಾಗ ಕೇಳಿದ. ಪೇಟೆಯ ಅಂಗಡಿಗಳ ಹೆಸರುಗಳು ಹೇಗಿರುತ್ತವೆ? ಎಂದು ಕೆಲವರ ಕೇಳಿದ ಚಿಕ್ಲ. ಕೆಲವರು ಚಿಕ್ಲನ ಅಂಗಡಿಗೆ ಹೆಸರಿಡುವ ಆಸೆಗೆ ನಾನಾ ಹೆಸರನ್ನು ಸೂಚಿಸಿದರು. ಇನ್ನು ಕೆಲವರು ಸರಿಯಾದ ಜನರನ್ನು ಕೇಳಿ ಇಡೋಣ ಎಂದು ಹೇಳಿದರು. ಅನೇಕ ದಿನಗಳು ಕಳೆದವು . ಈ ಅಂಗಡಿಗೆ ಹೆಸರಿಡುವ ಕಾರ್ಯ ಅಪೂರ್ಣವಾಗಿ ಉಳಿಯಿತು. ಕೊನೆಗೆ ಏನು ಹೆಸರಿಡುವುದು ಬೇಡ ಎಂದು ಸುಮ್ಮನಾದ. ಆದರೂ ಅದರ ಆಶೆ ನಿರಾಶೆಯಾಗಿಯೇ ಉಳಿಯಿತು. ಚಿಕ್ಲನಿಗೆ ಒಮ್ಮೊಮ್ಮೆ ಈ ಊರಿನ ಅದೆಷ್ಟೋ ಜನರಿಗೆ ತಾನು ಸಿಂಗಲ್ ಚಾ ಕೊಟ್ಟಿರುವೆ ಎಂದು ಲೆಕ್ಕಿಸಲು ಹೋದರೆ ಲೆಕ್ಕ ಸಿಗಲಿಲ್ಲ. ಯಾರೋ ಬಿಟ್ಟು ಹೋದ ವಸ್ತುಗಳು ಕೊಟ್ಟು ಹೋದ ವಸ್ತುಗಳು ಗುರುತು ಹಚ್ಚಿದರೂ ತನ್ನ ಸಾಧನೆ ಸಣ್ಣದಲ್ಲ ಎಂದು ಅವನಿಗೆ ಅನ್ನಿಸಿತು.
ಈ ನಡುವೆ ಹತ್ತನೇ ತರಗತಿ ಓದಿ ಡ್ರೈವರ್ ಕೆಲಸ ಕಲಿತ ತಮ್ಮನಿಗೆ ಯಾವುದೋ ಕಂಪನಿಯಲ್ಲಿ ಉದ್ಯೋಗ ಸಿಕ್ಕಿ ಹೊರಟು ನಿಂತಾಗ ಚಿಕ್ಲನೇ ತನಗೆ ಗುರುತಿನ ಡ್ರೈವರ್ ಹತ್ತಿರ ಹೇಳಿ ಬಸ್ಸು ಹತ್ತಿಸಿ ಬಂದಿದ್ದ. ತಮ್ಮ ಚೆನ್ನಾಗಿ ಬೆಳೆಯಲಿ ಎಂದು ಹರಸಿ ಬಂದಿದ್ದ. ಕಷ್ಟ ಅಂತ ಆದ್ರೆ ಊರ ಕಡೆ ಬಂದು ಬಿಡು ಎಂದು ಹೇಳಿದ್ದಿದೆ ತಮ್ಮನಿಗೆ. ತಮ್ಮ ಬೆಂಗಳೂರಿಗೆ ಹೋದವನು ಅಲ್ಲೇ ನೆಲೆ ನಿಂತ. ಉದ್ಯೋಗ ಮಾಡುತ್ತಲೇ ಒಂದಿಷ್ಟು ಕೆಲಸ ಮಾಡಿದ. ಆದರೂ ಚಿಕ್ಲನಿಗೆ ಅಂಗಡಿಗೆ ಬೇಕಾದ ಹೆಸರು ಯಾವಾಗಲೂ ಕಾಡುತ್ತಿತ್ತು, ಊರಿಗೆ ಬಂದ ಹೊಸ ಮೇಷ್ಟ್ರು ರಾಜು ಸರ್ ಒಮ್ಮೊಮ್ಮೆ ಏನಾದರೂ ಬೇಕಾದರೆ ಅಂಗಡಿ ಕಡೆ ಬಂದು ಹೋಗೋರು. ಅವರನ್ನು ಒಂದು ಮಾತು ಕೇಳಿ ಬಿಡುವ ಎಂದು ಕೇಳಿಬಿಟ್ಟ ಚಿಕ್ಲ. ಅಂಗಡಿಗೆ ಒಂದು ಒಳ್ಳೆಯ ಹೆಸರು ಗೊತ್ತಿದ್ರೆ ಹೇಳಿ. ಅದೇ ಇಡುವ ಎಂದು ಹೇಳಿದ. ರಾಜು ಮೇಸ್ಟ್ರು ಬೇರೆ ಹೆಸರು ಬೇಡ ನಿಮ್ಮ ಅಂಗಡಿಗೆ. ಸಿಂಗಲ್ ಚಾ ಅಂಗಡಿ ಸಾಕು ನೋಡಿ ಎಂದು ಹೇಳಿದರು . ಹೌದಲ್ಲ ಎಷ್ಟು ಚಂದ ಇದೆ ಇದು . ಇದೇ ಹೆಸರು ಇಟ್ಟು ಬಿಡುವುದು ಒಳ್ಳೆಯದು ಎಂದು ರಾಜು ಮೇಷ್ಟ್ರಿಗೆ ಹೇಳಿದ. ನೀವು ಏನೂ ವಿಚಾರ ಮಾಡುವುದು ಬೇಡ ನಾನೇ ಒಂದು ಬೋರ್ಡ್ ಬರೆದು ತಂದು ಕೊಡುವೆ ತೂಗು ಹಾಕಿ ಎಂದು ಅವರು ಈಗ ಚಿಕ್ಲನಿಗೆ ಹೇಳಿದಾಗ ಸಂತೋಷವಾಯಿತು. ಮಾರನೇ ದಿನ ರಾಜು ಸರ್ ಬೋರ್ಡ್ ಬರೆದು ತಂದುಕೊಟ್ರು ಅವರ ಕೈಯಲ್ಲಿ ಹಾರ ಹಾಕಿ ಅಂಗಡಿ ಹೊರಗೆ ತೂಗು ಹಾಕಿದ ಚಿಕ್ಲ . ಈಗ ಅವನಿಗೆ ಪೂರ್ಣ ಸಂಭ್ರಮ. ಸಿಂಗಲ್ ಚಾ ಅಂಗಡಿ ಎಂಬ ಹೆಸರಿನೊಟ್ಟಿಗೆ ಸಿಂಗಲ್ ಚಾ ಕೂಡಾ ಅದೆಷ್ಟೋ ಮನಸುಗಳನ್ನು ಗೆಲ್ಲುತ್ತಲೇ ಹೋಯಿತು. ಅದೆಷ್ಟೋ ವರ್ಷ ಸಿಂಗಲ್ ಅಂಗಡಿಯೆಂಬ ಹೆಸರಿನಿಂದ ಅದು ಹೆಸರು ಪಡೆಯಿತು. ಉಪಕಾರಿಯಾದ ಚಿಕ್ಲ ಸಿಂಗಲ್ ಚಾ ಎಂಬ ಹೆಸರಿನಿಂದ. ಅವನ ಅಂಗಡಿಯ ಅದೇ ಹೆಸರಿನ ಅಂಗಡಿಯನ್ನ ತಮ್ಮ ದೂರದ ಪೇಟೆಯಲ್ಲಿ ಆರಂಭಿಸಿ ಅದಕ್ಕೆ ಕೂಡ ಅದರ ಹೆಸರನ್ನೇ ನೀಡಿದ. ಅದು ತುಂಬಾ ಹೆಸರು ಮಾಡಿತು. ಚಿಕ್ಲನ ಸಿಂಗಲ್ ಚಾ ಗಿರಾಕಿಗಳು ಕೂಡ ಕಡಿಮೆಯಾಗಲಿಲ್ಲ. ಸಿಂಗಲ್ ಚಾ ಸುತ್ತ ಸುಳಿವ ಸುದ್ದಿಗಳು ಇನ್ನೂ ಹಾಗೆ ಚಾ ಸುತ್ತ ನಿಂತು ಮಾತನಾಡುತ್ತದೆ. ಕಥೆ ಹೇಳುತ್ತದೆ. ಕಥೆಯಾಗುತ್ತದೆ. ಆಪ್ತತೆ ಆಗುತ್ತದೆ. ಸಿಂಗಲ್ ಚಾದ ಮೂಲಕ ಚಿಕ್ಲ ಊರಿನ ಎಲ್ಲರಿಗೂ ಉಪಕಾರಿ ಆದ………

ನಾಗರಾಜ ಬಿ. ನಾಯ್ಕ
ಹುಬ್ಬಣಗೇರಿ
ಕುಮಟಾ.