ಮಾಸ್ಕಿನ ಮುಸುಕಿನಲಿ ಮುಂಗಾರು
ಶಾಲಿನಿ ಆರ್.
ಮತ್ತೆ ಮುಂಗಾರು. ಆದರೆ ಇದು ಕೊರೋನಾ ಮುಂಗಾರು. ಜೀವನದಲ್ಲಿ ಮೊದಲ ಬಾರಿ ಮಳೆ ಮತ್ತು ನಾನು, ನನ್ನ ಗಾಡಿ ಮತ್ತೆ ನಿನ್ನ ಮೌನ, ಒಂದಕ್ಕೊಂದು ಸಂಬಂಧ ಇಲ್ಲದ ಹಾಗೆ ಲಾಕ್ ಡೌನ್ ಆಗಿರೋದು.
ಪ್ರತಿ ಸಾರಿ ಕಾಯೋ ಹಾಗೆ ಈ ಸಾರಿ ಮುಂಗಾರು ಅನುಭವಿಸಲಿಕ್ಕೆ ಮನಸ್ಸು ಹಿಂದೆ ಮುಂದೆ ನೋಡ್ತಿದೆ.ಇಳೆಯೇನೋ ತೋಯ್ತಾ, ಅದರ ಸಿರಿ ಸಂಭ್ರಮನ ಅದು ಸಂಭ್ರಮಿಸ್ತಿದೆ. ಯಾಕಂದ್ರ ಬಾಳ ವರುಷದ ಮ್ಯಾಲ ಅದಕ್ಕೆ ತನ್ನದೇ ಆದ ಸಮ್ಮಾನ ಅಭಿಮಾನ ತುಂಬಿ ತುಳುಕುತಿದೆ ಅಲ್ವಾ ಅದಕ್ಕೆ.
ಯಾಕೋ ಮುಂಗಾರು ನನಗೆ ಈ ಬಾರಿ ಮುದ ಕೊಡ್ತಿಲ್ಲ ? ಅಥವಾ ಅನುಭವಿಸಲಿಕ್ಕೆ ಮನಸ್ಸೇ ಆಗ್ತಿಲ್ಲವೋ ?.
ಪ್ರತಿ ಬಾರಿ ಮಳೆಯ ಪ್ರತಿ ಹನಿಯ ಅನುಭವವನ್ನ ಅನುಭವಿಸೋಕೆ ನಾನೇ ಅವಕಾಶ ಮಾಡಕೋತಿದ್ದೆ. ಆಗೆಲ್ಲ ಮನಸ್ಸು ನವಿಲಾಗತಿತ್ತು.ವಾವ್ಹ್ ! ಎಂಥ ಸೋಜಿಗದ ಮುದ ಇದು ಅಂತ ಮಳೆನಲ್ಲಿನೇ ಗಾಡಿಲಿ ಹೋಗ್ತಿದ್ದೆ.ಒಂದು ರೇಂಜಿಗೆ ಒದ್ದೆ ಆದ ಮೇಲೆ ಮತ್ತೇನೂಂತ, ಮಳೆನಲ್ಲಿ ನಿಲ್ಲದೇ ಗಾಡಿನಲ್ಲಿ ಹೋಗತ್ತಿದ್ದೆ. ಮನಸ್ಸಲಿ ನೀ ಬೆಚ್ಚಗಿರ್ತಿದ್ಯಲ್ಲ, ಒಂದು ರೀತಿ ಭಂಡ ಧೈರ್ಯ ನಂಗೆ. ಹಾಗೆ ಹೋಗುವಾಗ ತುಟಿ ಬಿಗಿಹಿಡಿದರು ಹನಿಗಳು ನನ್ನೊಡಲಿಗೆ ಕ್ಷಣಮಾತ್ರದಲ್ಲಿ ನೇರವಾಗಿ ಒಳಗೆ ಹೋಗಿರೋದು ಅಮೃತದಂತಹ ಮಳೆಹನಿಗಳು. ಅದನ್ನ ಸವಿತ ನಾನು ನನ್ನ ದ್ವಿಚಕ್ರವಾಹನ ಇಬ್ಬರು ಖುಷಿಯಾಗಿ ಅನುಭವಿಸ್ತಿದ್ವಿ.
ಪ್ರತಿ ಮಳೆಗಾಲಾನು ನೆನಪಿನ ಹೂರಣನೆ. ಎಲ್ಲ ಖುಷಿಯ ಕ್ಷಣಗಳು, ದುಃಖದ ಕರಿಮುಗಿಲು, ಎಲ್ಲ ಈ ಮುಂಗಾರಿನ ಮಳೆಹನಿಲಿ ಬೆರೆತು ಹೋಗ್ತಿತ್ತು ಅರಿವಿಗೂ ಬಾರದ್ಹಾಂಗೆ.
ಯಾವಾಗಲೂ ಈ ಮಳೆ ನಂಗೆ ನನ್ನ ಭಾವನೆಗೆ ಸಾಥ್ ಕೊಡ್ತಿತ್ತು.ಎಂಥ ಉತ್ಸಾಹಭರಿತವಾಗಿರತಿತ್ತು. ನಿನ್ನ ನೆನಪ ಕವನ ಕೂಡ, ಮಳೆಗಾಲ ಮುಗಿಯೋದ್ರೊಳಗೆ ಕಾವ್ಯವಾಗಿಬಿಡತಿತ್ತು.ಆ ನೆನಪುಗಳ ಕಚಗುಳಿಗೆ.
ಪ್ರತಿ ಭಾರಿ ಅನ್ನಕೊಳ್ಳತಿದ್ದೆ ನಾನು ನೀನು ಈ ಮಳೆ ಜೊತೆ ಜೊತೆಯಲಿ ಇನ್ನುಳಿದೆಲ್ಲ ಮುಂಗಾರೂಂತ.
ಆದರೆ ಈಗ ಬರಿ ಆತಂಕ. ಗಾಡಿಲಿ ಹೋದ್ರು.ಮುಖಕ್ಕೆ ಮಾಸ್ಕ ಇರತ್ತೆ ಅನುಭವಿಸಲಾರದ್ಹಾಂಗ ಈ ಸೋನೆ ಮಳೆನಾ. ಮುಂಗಾರಿನ ಮೋಡದಾಟ ಕೂಡ ಈ ಭಾರಿ ನೋಡೋಕಾಗ್ತಿಲ್ಲ. ನೆಪಗಳಿಗೂ ಕ್ವಾರೆಂಟೈನ್ ಮುಂಗಾರಿನ ಸಂಗಡ ಆಡಲಿಕ್ಕೆ. ಯಾಕೆಂದರೆ ಪಕ್ಕದ ಏರಿಯಾ ರವಿನಗರದಲ್ಲೇ ಕೊರೋನಾ ಪಾಸಿಟಿವ್ . ನಾವು ಸೀಲ್ ಡೌನ್.
ಬೈ ಛಾನ್ಸ ಇವತ್ತು ಮಾಸ್ಕ ಮರೆತು ಹೋದೆ .ಅರ್ಧ ದಾರಿ ಹೋದ ಮೇಲೆ ನೆನಪಾಯಿತು ಮಾಸ್ಕ ಹಾಕದೆ ಇರೋದು ನಿಜದ ಆತಂಕ ಮನೆ ಮಾಡ್ತು. ಸೀದ ಕೆಲ್ಸ ಮುಗ್ಸಿ ಅಲ್ಲಿ ಇಲ್ಲಿ ನೋಡದೆ ಮತ್ತೆ ಗೂಡು ಸೇರಿದಾಯ್ತು ನಾನು ಮತ್ತು ನನ್ನ ಗಾಡಿ. ಮಳೆ ಇತ್ತು ಸಣ್ಣಗೆ, ಆದರೆ ಆರಾಧಿಸೋ ಮನಸ್ಸೇ ಇರಲಿಲ್ಲ.ಜೊತೆಗೆ ನೆನೆಪುಗಳು ಈಗ ನಿನ್ನ ಅಡಿಯಾಳಗಿರುವಾಗ , ಪುರುಸೊತ್ತಾದಾಗ ಮಾತ್ರ ನನ್ನ ಬಳಿ ಬರುವ ನೆಪ ಅವಕ್ಕೆ. ಒಂದು ರೀತಿಲಿ ಅನಾಥ ಭಾವದಂಚು ತಾಗಿದೆ ಗೊತ್ತಾ.
ಇದೆಲ್ಲ ಮತ್ತೊಂದು ಮುಂಗಾರಿನವರೆಗೆ ಮುಂದುವರಿದೆ ಇದ್ರೆ ಸಾಕು . ಎಲ್ಲ ಮೊದಲಿನ ಸಹಜ ಬದುಕು ಮರಳಿ ನಿಲ್ಲಲಿ, ಅನುವ ಹರಕೆ , ಹಾರೈಕೆ ಈ ಮಾಸ್ಕಿನ ಮುಂಗಾರು ಮಳೆಗೆ…
*********************************