ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೊಂದು ಪತ್ರ”ಹನಿಬಿಂದು

 ಹಲೋ ವಿದ್ಯಾರ್ಥಿಗಳೇ!  ಎಲ್ಲರೂ ಹೇಗಿದ್ದೀರಾ? ಪರೀಕ್ಷೆಗಂತೂ ನಿಮ್ಮ ತಯಾರಿ ಭರ್ಜರಿಯಾಗಿ ನಡೆದಿರಬೇಕಲ್ವೇ! ತುಂಬಾ ತುಂಬಾ ಓದ್ತಾ ಇದ್ದೀರಾ?  ಅದರಲ್ಲೂ ತುಂಬಾ ಯೋಚಿಸಿ ” ನಾನು ಅವರಿಗಿಂತ ಜಾಸ್ತಿ ಅಂಕಗಳನ್ನು ಪಡೆಯಬೇಕು,  ಇವರಿಗಿಂತ ಜಾಸ್ತಿ ಅಂಕಗಳನ್ನು ಪಡೆಯಬೇಕು” ಮೊದಲಾದ ಗುರಿಗಳನ್ನು ಇಟ್ಟುಕೊಂಡು ರಾತ್ರಿ ಹಗಲು ನಿದ್ದೆಯನ್ನು,  ಊಟವನ್ನು ಲೆಕ್ಕಿಸದೆ ಓದ್ತಾ ಇದ್ದೀರಾ? ಟಿವಿ ಮೊಬೈಲ್ ಎಲ್ಲವನ್ನು ಪಕ್ಕಕ್ಕಿಟ್ಟು ಓದಲೇಬೇಕು.  ಈ ಸಲ ಏನಾದರೂ ಸರಿ ಉತ್ತಮ ಅಂಕಗಳನ್ನು ಪಡೆದೇ ತೀರುತ್ತೇನೆ”ಎಂದು ಕಾರ್ಯ ಸಿದ್ದಿಗಾಗಿ ಹೊರಟು ನಿಂತ ಕಲಿಯಂತೆ ಪರೀಕ್ಷೆ ಬರೆಯಲು ನಿಂತಿದ್ದೀರಲ್ಲವೇ? ತುಂಬಾ ಸಂತೋಷ. ಹೌದು ! ನಾವೇನಾದರೂ ಉತ್ತಮ ಕೆಲಸಗಳನ್ನು ಮಾಡ ಹೊರಟರೆ, ಅದರ ಬೆನ್ನು ಬಿದ್ದು ಮಾಡಿದಾಗ ಜಯ ಖಂಡಿತ . ನಿಮ್ಮ ಪರಿಶ್ರಮ ವ್ಯರ್ಥವಾಗದು.


    ಆದರೆ ಇನ್ನೂ ಕೆಲವರು ವಿದ್ಯಾರ್ಥಿಗಳಿದ್ದಾರೆ, ಅವರಿಗೆ ನಾವು ಹತ್ತನೇ ತರಗತಿ ಎಂಬುದೇ ಮರೆತು ಹೋಗಿದೆ. ಇನ್ನೂ ಕೂಡ ಚಿಕ್ಕ ಮಕ್ಕಳ ಹಾಗೆ ಹೊಡೆದಾಡಿಕೊಂಡು,  ಬೈದಾಡಿಕೊಂಡು ಓದುವುದನ್ನು ಮರೆತು “ಹೇಗೂ ನಾನು ಪಾಸ್ ಆಗಬಹುದು,  ಪಾಸಾದರೆ ಸಾಕು” ಅಂದುಕೊಂಡು ಒಂದೇ ಚೂರು ಪುಸ್ತಕವನ್ನು ನೋಡದೆ ಇರುವವರು ಇದ್ದಾರೆ. ಹಾಗೆಯೇ ಉಳಿದವರು ಕೆಲವರು “ಅಂಕಗಳು ಬಂದರೆ ಬರಲಿ, ಆದರೆ ಹೋಗಲಿ” ಎಂದು ಕೂಡಾ ಇದ್ದಾರೆ.  ದಯವಿಟ್ಟು ಇನ್ನು 30 ದಿನಗಳಷ್ಟೇ ಬಾಕಿ ಇದೆ. ಅಷ್ಟು ದಿನಗಳನ್ನು ಸರಿಯಾಗಿ ನಿಮ್ಮ ಬದುಕಿನಲ್ಲಿ ಬಳಸಿಕೊಳ್ಳಿ.  ದಿನಕೊಂದು ಅಂಕಗಳ ಉತ್ತರವನ್ನು ಕಲಿತರೂ ಕೂಡ 30 ದಿನಕ್ಕೆ 30 ಅಂಕಗಳ ಪ್ರಶ್ನೆಗಳಿಗೆ ಉತ್ತರಗಳನ್ನು ಕಲಿಯಬಹುದು ಎಂಬುದನ್ನು ಮನನ ಮಾಡಿಕೊಳ್ಳಿ.  ಬದುಕಿನಲ್ಲಿ ಯಾವಾಗ ಏನು ಟ್ವಿಸ್ಟ್ ಬೇಕಾದರೂ ಬರಬಹುದು. ನಾವು ಬದುಕಿನಲ್ಲಿ ಬರುವಂತಹ ಒಂದು ಟ್ವಿಸ್ಟ್ ಈ ಎಸ್ ಎಸ್ ಎಲ್ ಸಿ ಪರೀಕ್ಷೆ.  ಇದರ ಅಂಕಗಳು ನಮ್ಮ ಬದುಕಿನ ದಾರಿಯನ್ನು ಬದಲಿಸಬಹುದು ನೆನಪಿಡಿ.
    ಎಸ್ ಎಸ್ ಎಲ್ ಸಿ ಅಂಕಗಳೇ ನಮ್ಮ ಬದುಕು ಖಂಡಿತಾ ಅಲ್ಲ,  ಆದರೆ ಎಸ್ ಎಸ್ ಎಲ್ ಸಿ ಅಂಕಗಳಿಗೆ ಕೂಡ ನಮ್ಮ ಬದುಕನ್ನು ಬದಲಿಸುವಂತಹ ಸಾಮರ್ಥ್ಯವಿದೆ ಎಂಬುದನ್ನು ತಿಳಿದುಕೊಳ್ಳಿ.  ಆದ್ದರಿಂದ ನಿಮ್ಮೆಲ್ಲ ಶಿಕ್ಷಕರು ನಿಮ್ಮನ್ನು ಉತ್ತೀರ್ಣಗೊಳಿಸಲು ನಿಮ್ಮ ಅಂಕಗಳನ್ನು ಜಾಸ್ತಿ ಗೊಳಿಸಲು ತಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ಕಷ್ಟ ಪಡುತ್ತಿದ್ದಾರೆ. ಅದೇ ಕಷ್ಟವನ್ನು ನಿಮ್ಮಿಂದಲೂ ನಿರೀಕ್ಷಿಸುತ್ತಿದ್ದಾರೆ.  ಅದನ್ನು ನೀವು ನಿಮ್ಮ ಅಂಕಗಳ ಮೂಲಕ ತೋರಿಸಬೇಕೆಂದು ಪೋಷಕರು ಕೂಡ ಬಯಸುತ್ತಿದ್ದಾರೆ.  ಇಷ್ಟು ವರ್ಷದ ತಮ್ಮ ಕಷ್ಟಕ್ಕೆ ತಮ್ಮ ನಷ್ಟ ಯಾವುದನ್ನು ಕೊಡಲಿಕ್ಕೆ ಸದಾ ಪೋಷಕರು ಈ ವರ್ಷ “ಉತ್ತಮ ಅಂಕ ಬರಲಿ” ಎಂದು ಎಂದು ಹಾರೈಸುತಿದ್ದಾರೆ. ಇದೆಲ್ಲವೂ ಕೂಡ ನಿಮಗೆ ತಿಳಿದಿರಬೇಕಾದ ವಿಷಯ.


       ನೀವೇನು ಕೆಟ್ಟವರಲ್ಲ , ನಿಮಗೆ ಎಲ್ಲ ವಿಚಾರಗಳ ಬಗ್ಗೆಯೂ ತಿಳಿದಿದೆ.  ಎಲ್ಲ ಶಿಕ್ಷಕರ ಗುಣ ನಡತೆಗಳು ನಿಮಗೆ ತಿಳಿದಿದೆ.  ಯಾವ ಶಿಕ್ಷಕರು ಹೇಗೆ? ಯಾವ ಶಿಕ್ಷಕರು ಒಳ್ಳೆಯವರು,  ಯಾವ ಶಿಕ್ಷಕರ ಮನಸ್ಸಿನ ಆಲೋಚನೆಗಳು ಚೆನ್ನಾಗಿಲ್ಲ , ಯಾವ ಶಿಕ್ಷಕರು ಉತ್ತಮವಾಗಿ ನಮ್ಮನ್ನು ತಯಾರಿಗೊಳಿಸುತ್ತಾರೆ,  ಎಲ್ಲಾ ಶಿಕ್ಷಕರನ್ನು (ಕೆಲವರನ್ನು ಹೆಸರು ಕೂಡ ಇಟ್ಟು) ಅವರನ್ನು ಜಡ್ಜ್ ಮಾಡುವ  ಕೆಪ್ಯಾಸಿಟಿ ನಿಮಗಿದೆ.  ಹಾಗಾಗಿ ಮೊದಲು ನಿಮ್ಮ ಎಲ್ಲಾ ಶಿಕ್ಷಕರ ಶ್ರಮವನ್ನು ಅರಿತುಕೊಳ್ಳಿ.  ತಮ್ಮ ಮನೆ ಮಕ್ಕಳು ಎಲ್ಲವನ್ನು ಬಿಟ್ಟು ಬೆಳಿಗ್ಗೆ,  ಸಂಜೆ, ರಜಾ ದಿನಗಳು,  ಭಾನುವಾರ ಎಲ್ಲವೂ ಕೂಡ ಓಟಿ ಇಲ್ಲದೆ ಓವರ್ ಟೈಮ್ ಕೆಲಸ ಮಾಡುವವರು ಇವರು.  
          ಶಿಕ್ಷಕರು , ಅದು ಕೂಡ ನಿಮಗಾಗಿ ಮತ್ತು  ನಿಮ್ಮ ಉತ್ತಮ ಅಂಕಗಳಿಗಾಗಿ!! ಇದರಿಂದ ಶಿಕ್ಷಕರಿಗೆ ಏನು ಸಿಗುತ್ತದೆ ಎಂದು ನೀವು ಕೇಳುವಿರಾದರೆ ಕೇವಲ ಸಂತೋಷ ಅಷ್ಟೇ. “ನನ್ನ ವಿದ್ಯಾರ್ಥಿಯೊಬ್ಬ ಉತ್ತಮ ಅಂಕಗಳನ್ನು ನನ್ನ ವಿಷಯದಲ್ಲಿ ಪಡೆದು ಉತ್ತೀರ್ಣನಾದ”  ಎಂದು ಹೇಳಿಕೊಳ್ಳುವ ಖುಷಿ ಮಾತ್ರವೇ ಹೊರತು ಇನ್ನೇನು ಇಲ್ಲ. ಇಡೀ ವರ್ಷ ಶ್ರಮಪಟ್ಟು ಕೊನೆಗೆ ಕಡಿಮೆ ಅಂಕ ಗಳಿಸಿದರೆ ಅದರಿಂದ ಎಲ್ಲರಿಗೂ ಬೇಸರವಾಗುತ್ತದೆ.  ಅದರ ಬದಲು ಸ್ವಲ್ಪ ಓದಿ ಉತ್ತಮ ಅಂಕಗಳನ್ನು ಪಡೆದರೆ ಎಲ್ಲರಿಗೂ ಸಂತೋಷವೇ ಅಲ್ಲವೇ? ಹಾಗಂತ ನನ್ನ ಕೈಯಲ್ಲಿ ಸಾಧ್ಯವೇ ಇಲ್ಲ ಎಂದಲ್ಲ,  ಯಾರು ಸಾಧನೆ ಮಾಡಿದರು ಸಾಧನೆ ಸಾಧಕನ ಸ್ವತ್ತಲ್ಲವೇ? ಅದು ಯಾವಾಗ ಯಾರಿಗೆ ಬೇಕಾದರೂ ಒಲಿಯಬಹುದು.  ಎಲ್ಲೋ ಒಂದು ಮೂಲೆಯಲ್ಲಿ ಸರವನ್ನು ಮಾರುತ್ತಿದ್ದ ಮೋನ ಈಗ ಮೊನಾಲಿಸಾ ಆಗಿ ದೇಶಕ್ಕೆ ಪ್ರಸಿದ್ಧಿ ಪಡೆಯಲಿಲ್ಲವೇ?  ಹಾಗೆ ಮುಂದೆ ನೀವು ಕೂಡ ಒಂದು ದಿನ ದೇಶದ ಉತ್ತಮ ಪ್ರಜೆಗಳಾಗಿ ಇಡೀ ದೇಶದ ಜನರ ಮನ ಗೆಲ್ಲಬಹುದು!!
    ಇದೀಗ ನಿಮ್ಮ ಮುಂದೆ ನಿಮ್ಮ ಬದುಕಿನ ಒಂದು ಯುದ್ಧ ನಿಂತಿದೆ.  ಆಯುಧವನ್ನು ನೀವು ಗೆಲ್ಲಲೇ ಬೇಕು.  ಅದಕ್ಕೆ ನೀವು ಖಡ್ಗವನ್ನು ಬಳಸಬೇಕೆಂದಿಲ್ಲ.  ಬದಲಾಗಿ ಪೆನ್ನಿನ ಮೂಲಕ ನಿಮ್ಮ ಅರಿವನ್ನು ಬಳಸಬೇಕಾಗಿದೆ. ಆ ಬಳಸುವಿಕೆಗೆ ನೀವು ತಯಾರಾಗಬೇಕಿದೆ.  ನಿಮ್ಮನ್ನು ಪೋಷಕರು ಮತ್ತು ಶಿಕ್ಷಕರು ಸೇರಿ ಅದಕ್ಕೆ ತಯಾರುಗೊಳಿಸುತ್ತಿದ್ದಾರೆ.  ಅದಕ್ಕಾಗಿ ನೀವು ಅವರೊಡನೆ ಸ್ಪಂದಿಸುತ್ತಾ , ಉತ್ತಮವಾಗಿ ಕಲಿತು ಉತ್ತಮ ಅಂಕಗಳನ್ನು ಪಡೆದು,  ಮುಂದೆ ನಮ್ಮ ಭಾರತವನ್ನು ಆಳುವವರು ನೀವಾಗಲಿರುವ ಕಾರಣ ದೇಶವನ್ನು ಉತ್ತಮವಾಗಿ ಕಟ್ಟಲು ಶ್ರಮವನ್ನು ಪಡಬೇಕು. ಅದಕ್ಕಾಗಿ ಉತ್ತಮ ಆಲೋಚನೆಗಳನ್ನು ಬೆಳೆಸಿಕೊಂಡು,  ಮುಂದೆ ಬರುವ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು,  ನಿಮ್ಮ ಪೋಷಕರಿಗೂ ಶಾಲೆಗೂ ಹಾಗೂ ಶಿಕ್ಷಕರಿಗೂ ಕೀರ್ತಿಯನ್ನು ತನ್ನಿ ಎಂದು ಹೇಳುತ್ತಾ ಚೆನ್ನಾಗಿ ಪರೀಕ್ಷೆ ಬರೆಯಿರಿ ಮಕ್ಕಳೇ….. ಆಲ್ ದ ಬೆಸ್ಟ್…


Leave a Reply

Back To Top