.

ಸಿನಿಮೀಯ ದಾಟಿಯ ಈ ಲೇಖನದ ಶೀರ್ಷಿಕೆಯನ್ನು ಕಂಡು ಹುಬ್ಬು ಹಾರಿಸದಿರಿ. ಹುಟ್ಟಿನಿಂದ ಸಾವಿನವರೆಗೂ ಹೆಣ್ಣು ಮಕ್ಕಳು ತಂದೆಯ, ಪತಿಯ ಮತ್ತು ಮಕ್ಕಳ ರಕ್ಷೆಯಲ್ಲಿ ಬದುಕಬೇಕು ಎಂಬ ಮನು ಸ್ಮೃತಿಯ ವಾಕ್ಯಗಳು ಮತ್ತು ನಮ್ಮ ಸಾಮಾಜಿಕ ಪರಿಸ್ಥಿತಿಯು ಹೆಣ್ಣು ಮಕ್ಕಳನ್ನು ಅತಂತ್ರವಾಗಿಸಿದೆ. ಆಕೆಯದ್ದೇ ಪಾಲನೆ ಪೋಷಣೆಯಲ್ಲಿ ಬೆಳೆಯುವ ಆಕೆಯ ಮಕ್ಕಳಿಗೆ ತಾಯಿಯಾಗಿ, ಗೃಹ ಕೃತ್ಯಗಳನ್ನು ಸಂಭಾಳಿಸುವ ಪತಿಯ ಎಲ್ಲಾ ಅವಶ್ಯಕತೆಗಳಿಗೆ ಸ್ಪಂದಿಸುವ ಪತ್ನಿಯಾಗಿ, ತನ್ನ ಹೆತ್ತ ತಂದೆ ತಾಯಿಯರ ಬಾಳಿಗೆ ಆಶಾಕಿರಣವಾಗಿ! ಬೆಳೆಯುವ ಹೆಣ್ಣು ಮಕ್ಕಳಲ್ಲಿ ಒಂದು ರೀತಿಯ ಅತಂತ್ರ ಮನೋಭಾವ ಸದಾ ಇದ್ದೇ ಇರುತ್ತದೆ.

ಅದೃಷ್ಟವಂತರು ಮಾತ್ರ ತಂದೆಯ ಮನೆಯಲ್ಲಿ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ ಎಂದಾದರೂ ಕೂಡ ಆಕೆ ಎಂದಾದರೂ ಕೊಟ್ಟ ಮನೆಗೆ ಹೋಗುವವಳು ಎಂಬ ಭಾವ, ಮದುವೆಯಾಗಿ ಬಂದ ಗಂಡನ ಮನೆಯಲ್ಲಿ ಹೊರಗಿನಿಂದ ಬಂದವಳು ಎಂಬ ಭಾವ ಮುಂದೆ ಮಕ್ಕಳ ಮದುವೆ ಮಾಡಿದಾಗ ಬರುವ ಸೊಸೆಗೆ ಹೊರೆ ಆಗುತ್ತಿದ್ದೇನೆ ಎಂಬ ಭಾವ ಹೀಗೆ ಅತಂತ್ರಗಳ ಹೊಯ್ದಾಟದಲ್ಲಿಯೇ ಆಕೆಯ ಬದುಕು ಸಾಗುತ್ತದೆ. ಇದಕ್ಕೆ ಕೊಂಚಮಟ್ಟಿಗೆ ನಮ್ಮ ಸಾಮಾಜಿಕ ಪರಿಸ್ಥಿತಿಗಳು ಕಾರಣವಾದರೆ ಮತ್ತೆ ಕೆಲಮಟ್ಟಿಗೆ ಹೆಣ್ಣು ಮಕ್ಕಳ ಕುರಿತ ಪೂರ್ವಾಗ್ರಹಗಳು ಆಕೆಯನ್ನು ಹಣ್ಣು ಮಾಡುತ್ತವೆ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಆಕೆ ಸಬಲಳಾಗದ ಹೊರತು ಆಕೆ ಎಲ್ಲ ಸೌಲಭ್ಯಗಳಿಂದ ವಂಚಿತಳು. ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರಗಳು ಕಾಯ್ದೆ ಕಾನೂನುಗಳನ್ನು ತಂದಿವೆ ಏನ್ನುವುದೇನೋ ನಿಜ, ಆದರೆ ಅವುಗಳ ಅನುಷ್ಠಾನ ತೃಪ್ತಿಕರವಾಗಿಲ್ಲ ಎಂಬುದು ಕೂಡ ಅಷ್ಟೇ ಗಮನಾರ್ಹ.

 ಬದಲಾದ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುತ್ತಿದ್ದು ಉದ್ಯೋಗ ರಂಗದಲ್ಲಿಯೂ ಅವರು ತಮ್ಮ ಛಾಪನ್ನು ಮೂಡಿಸುತ್ತಿದ್ದು ಮುಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳ ಸ್ವಾವಲಂಬಿತ್ವ ಹೆಚ್ಚಾಗುವ ಆಶಯಪೂರಿತ ವಾತಾವರಣವನ್ನು ಗಮನಿಸುತ್ತಿದ್ದರೂ ದೀಪದ ಅಡಿಯಲ್ಲಿ ಕತ್ತಲೆ ಎಂಬ ಮಾತಿನಂತೆ ಮಧ್ಯ ವಯಸ್ಸಿನ ಹೆಣ್ಣು ಮಕ್ಕಳು ತಮ್ಮ ಹಣೆಬರಹವನ್ನು ಹಳಿಯುತ್ತಾ ಬದುಕನ್ನು ಸವೆಸುತ್ತಾರೆ. ಬಾಳಿನ ನಡು ಮಧ್ಯದಲ್ಲಿ ನಿಡುಸುಯ್ಯುವ ಬದಲು ಹೆಣ್ಣು ಮಕ್ಕಳು ತಮ್ಮ ಬಳಿ ಕೆಲ ಅಧಿಕಾರಗಳನ್ನು ಹೊಂದಿರಲೇಬೇಕು. ಅವುಗಳನ್ನು ಹೀಗೆ ಪಟ್ಟಿ ಮಾಡಬಹುದು.

 ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಸಬಲರಾಗಿರಲೇಬೇಕು. ಕೆಲ ಸಹಸ್ರ ರೂಗಳನ್ನು ದುಡಿಯುವಷ್ಟಾದರೂ  ಶೈಕ್ಷಣಿಕ ಅರ್ಹತೆ ಅವರಲ್ಲಿರಬೇಕು. ಇಲ್ಲದೆ ಹೋದರೆ  ಹೊಲಿಗೆ, ಕಸೂತಿ, ಎಂಬ್ರಾಯ್ಡರಿ, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಾರಾಟ, ಮಕ್ಕಳಿಗಾಗಿ ಟ್ಯೂಷನ್ ತೆಗೆದುಕೊಳ್ಳುವುದು ಹೀಗೆ ಹತ್ತು ಹಲವು ವಿದ್ಯೆಗಳಲ್ಲಿ ಒಂದು ಕಲೆಯಲ್ಲಿ ತನ್ನ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಳ್ಳುವಷ್ಟು ಆರ್ಥಿಕ ಸಬಲತೆಯನ್ನು ಆಕೆ ಹೊಂದಿರಲೇಬೇಕು.

 ಹೆಣ್ಣು ಮಕ್ಕಳ ಬಳಿ  ತನ್ನ ವೈಯುಕ್ತಿಕ ಅಗತ್ಯಗಳನ್ನು
ಸ್ವತಂತ್ರವಾಗಿ ಪೂರೈಸಿಕೊಳ್ಳುವಷ್ಟು ಸ್ವಂತದ  ಹಣವಿರಬೇಕು. ಬದುಕಿನಲ್ಲಿ ಆಗಲೇಬಾರದು ಎಂಬ ಆಶಯವನ್ನು ಹೊತ್ತು ಕೂಡ ಅನಿವಾರ್ಯ ಪರಿಸ್ಥಿತಿಯಲ್ಲಿ ತನ್ನದೇ ಆದ ಪುಟ್ಟ ಗೂಡಿಗೆ ವಲಸೆ ಹೋಗಲು ತುಸು ಹಣ ಆಕೆಯ ಬಳಿ ಇರಲೇಬೇಕು.

 ಒಳ್ಳೆಯ ಬಟ್ಟೆ ಬರೆಗಳು ಆಕೆಯ ಮೂಲಭೂತ ಅವಶ್ಯಕತೆಗಳಲ್ಲಿ ಇದ್ದರೂ ಕೂಡ ಉತ್ತಮ ಬಟ್ಟೆಗಳ ಸಂಗ್ರಹ ಆಕೆಯಲ್ಲಿರಬೇಕು. ಒಳ್ಳೆಯ ಬಟ್ಟೆಗಳನ್ನು ಧರಿಸಿದ ಹೆಣ್ಣು ಮಕ್ಕಳ ಆತ್ಮವಿಶ್ವಾಸ ಮತ್ತಾವುದಕ್ಕೂ ಸಮನಲ್ಲ.

 ಒಳ್ಳೆಯ ಬಾಲ್ಯ ಮತ್ತು ಲವಲವಿಕೆಯ ಯೌವನಗಳನ್ನು ಆಕೆ ಹೊಂದಿರಬೇಕು. ಬದುಕಿನ ಎಲ್ಲ ಸಾರಗಳನ್ನು ಅನುಭವಿಸಿದ ಆಕೆ ಮಾನಸಿಕವಾಗಿ ದೈಹಿಕವಾಗಿ ಬಲಿಷ್ಠರಾಗಿರಲೇಬೇಕು. ಜೀವಂತಿಕೆ, ಉತ್ಸಾಹ, ಹುಮ್ಮಸ್ಸು ಮತ್ತು ಬದುಕಿನೆಡೆಗಿನ ಪ್ರೀತಿ ಆಕೆಯಲ್ಲಿ ಬತ್ತದ ತೊರೆಯಂತಿರಬೇಕು.

 ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ಜಯಿಸಿರುವ ಇಲ್ಲವೇ ಸೋತಿದ್ದರೂ ಮನದ ಹುಮ್ಮಸ್ಸನ್ನು ಕಳೆದುಕೊಳ್ಳದ ಮತ್ತು ಆ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವ ಮನಸ್ಥಿತಿ ಆಕೆಯದಾಗಿರಬೇಕು.

 ಒಳ್ಳೆಯ ಪರಿವಾರ, ಸ್ನೇಹ ಬಳಗ, ಉತ್ತಮ ಹವ್ಯಾಸಗಳು ಆಕೆಯ ಬದುಕನ್ನು ಪ್ರೀತಿಪೂರ್ವಕವಾಗಿ ತುಂಬಿರಬೇಕು. ಸ್ನೇಹಿತರೊಂದಿಗೆ ತನಗೆ ಇಷ್ಟ ಬಂದ ಹೊರ ಸುತ್ತಾಟಕ್ಕೆ ಮನೆಯವರ ಅನುಮತಿಗಾಗಿ ಕಾಯದೆ ಹೋಗುವಷ್ಟು ಸ್ವಾತಂತ್ರ್ಯ ಆಕೆಗೆ ಇರಲೇಬೇಕು.

 ತನ್ನಿಷ್ಟದ ಅಡುಗೆ ಮಾಡಿ ಮನೆಯ ಎಲ್ಲರೊಂದಿಗೂ ಕುಳಿತು ಮಾತನಾಡುತ್ತಾ ಉಣ್ಣುವ, ಬೇಸರವಾದಾಗ ದೂರದರ್ಶನದ ಮುಂದೆ ಕುಳಿತು ಹೊಸ ಚಿತ್ರಗಳನ್ನು
ಮನೆ ಮಂದಿಯೊಂದಿಗೆ ನೋಡುವ, ಅವರಂತೆ ತನಗೂ ವಿಶ್ರಾಂತಿ ಬೇಕೆಂಬ ಮನಸ್ಥಿತಿಯನ್ನು ಅವರಲ್ಲಿ ಮೂಡಿಸುವ ಮತ್ತು ಅಂತಹ ಅವಕಾಶವನ್ನು ಆಕೆ ತನಗಾಗಿ ಕಲ್ಪಿಸಿಕೊಳ್ಳಲೇಬೇಕು. ತನ್ನ ಬದುಕಿನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತೇನೆ, ತನ್ನ ಕುಟುಂಬದ ಮೇಲೆ ತನ್ನ ಕರ್ತವ್ಯಗಳ ಜೊತೆ ಜೊತೆಗೆ  ಹಕ್ಕುಗಳು ಮತ್ತು ಅಧಿಕಾರ  ಕೂಡ ಇದೆ ಎಂಬ ಭಾವ ಕೊಡುವ ಧೈರ್ಯವನ್ನು ಜಗತ್ತಿನ ಮತ್ತಾವುದೇ ಶಕ್ತಿಯಿಂದ ಪಡೆಯಲು ಸಾಧ್ಯವಿಲ್ಲ.

 ಈಗಾಗಲೇ ಬದುಕಿನ ಹಲವು ಮಗ್ಗಲುಗಳನ್ನು ಕಂಡಿರುವ ಆಕೆ ತನ್ನ ಮಕ್ಕಳಿಗೆ ದೃಢ ವಿಶ್ವಾಸದಿಂದ ಯಾವ ರೀತಿ ಸ್ನೇಹಿತರೊಂದಿಗೆ ಸಂಬಂಧವನ್ನು ಹೊಂದಿರಬೇಕು. ಸ್ನೇಹ ಸಂಬಂಧ ಪ್ರೇಮ ಸಂಬಂಧ ವಾಗದಂತೆ ಎಚ್ಚರ ವಹಿಸುವ, ಮೌಲ್ಯಗಳನ್ನು ಪರಿಪಾಲಿಸುವ ನಿಷ್ಟುರವೆನಿಸಿದರೂ ಕಠಿಣವಲ್ಲದ ರೀತಿಯಲ್ಲಿ ಬೇರೊಬ್ಬರೊಂದಿಗೆ ಮಾತನಾಡುವ ಕಲೆಯನ್ನು ಮಕ್ಕಳಿಗೆ ಕಲಿಸಿರಬೇಕು.

ತನ್ನ ಅಸ್ತಿತ್ವವನ್ನು ತಾನು ಕಳೆದುಕೊಳ್ಳದೆ ಬದುಕಿನಲ್ಲಿ
ಹೇಗೆ ಮುನ್ನಡೆಯಬೇಕು, ತನ್ನ ಅಂದ ಚಂದ ಮತ್ತು ದೈಹಿಕ ಅಂಗಗಳ ಅಸಹಜ ವ್ಯತ್ಯಾಸಗಳ ಕುರಿತು ಕೀಳರಿಮೆಯಿಂದ ಬಳಲದೆ ಇರುವುದನ್ನು ತಾನು ಪ್ರಸ್ತುತ ಇರುವಂತೆಯೇ ಒಪ್ಪಿ ಅಪ್ಪಿ ನಡೆಯುವ ಧೈರ್ಯವನ್ನು ಹೊಂದಿರಲೇಬೇಕು. ಮನೋ ದೈಹಿಕ ಆರೋಗ್ಯದ ದೃಷ್ಟಿಯಿಂದ ಯೋಗ ವ್ಯಾಯಾಮ ಧ್ಯಾನ ಮತ್ತು ನಡಿಗೆಗಳಲ್ಲಿ ತೊಡಗಿಸಿಕೊಂಡು ತನ್ನನ್ನು ತಾನು ಚಟುವಟಿಕೆಯಿಂದ ಇಟ್ಟುಕೊಂಡಿರುವುದು ಮತ್ತಷ್ಟು ಉತ್ತಮ ಆಯ್ಕೆ.

 ನನಗೆ ಒಳ್ಳೆಯ ಬಾಲ್ಯ ದೊರೆಯಲಿಲ್ಲ, ನನ್ನ ಪಾಲಕರು ನನಗೆ ಸ್ವಾತಂತ್ರ ಕೊಡಲೇ ಇಲ್ಲ, ನನ್ನಿಷ್ಟದ ಪತಿ ನನಗೆ ದೊರೆಯಲಿಲ್ಲ, ದೂರದ ಊರಲ್ಲಿ ಗಂಡ ಮನೆ ಮಕ್ಕಳು ಎಂದು ಪುಟ್ಟ ಸಂಸಾರದ ಕನಸು ನನಸಾಗಲಿಲ್ಲ, ನನ್ನ ಗಂಡನ ಮನೆ ನನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಕಸಿದುಕೊಂಡಿತು ಎಂದೆಲ್ಲಾ ಈಗಾಗಲೇ ನಡೆದು ಹೋಗಿರುವ ಮತ್ತು ಬದಲಾಯಿಸಲು ಸಾಧ್ಯವಿಲ್ಲದ ಘಟನೆಗಳನ್ನು ನೆನೆದು ಮನಸ್ಸನ್ನು ಕಹಿ ಮಾಡಿಕೊಂಡು ಇರುವುದರ ಬದಲು ಇರುವುದನ್ನು ಇರುವಂತೆಯೇ ಒಪ್ಪಿ ಅಪ್ಪಿ ಬಾಳಬೇಕು ಆದರೆ ಆ ಬಾಳುವೆಯಲ್ಲಿ ತನ್ನದೇ ಆದ ಸ್ವಂತ ವ್ಯಕ್ತಿತ್ವವನ್ನು ಹೊಂದಿರಬೇಕು.  

 ಹೆಣ್ಣು ಮಕ್ಕಳು ತಮ್ಮ ಇಷ್ಟ ಮತ್ತು ಅನಿಷ್ಟಗಳ ಕುರಿತು ಖಚಿತ ಅವಗಾಹನೆಯನ್ನು ಹೊಂದಿರಬೇಕು ಎಲ್ಲರನ್ನೂ ಎಲ್ಲಾ ಕಾಲದಲ್ಲಿಯೂ ಮೆಚ್ಚಿಸಲು ಸಾಧ್ಯವಿಲ್ಲ ಎಂಬ ಅರಿವನ್ನು ಹೊಂದಿರಬೇಕು. ತಮ್ಮ ಸಂಗಾತಿಯಿಂದಾಗಲಿ, ಮಕ್ಕಳಿಂದಾಗಲೀ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು. ತನ್ನವರು ಮತ್ತು ತನ್ನವರಲ್ಲದವರ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು.. ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳಬಾರದು.

ಅಂತಿಮವಾಗಿ ಹೆಣ್ಣು ಮಕ್ಕಳು ತಾವಿಷ್ಟಪಡದಿದ್ದರೂ
 ಬದುಕಿನಲ್ಲಿ ಒಬ್ಬಂಟಿಯಾಗಿ ಬದುಕುವ ಸಮಯ ಬಂದಾಗ ಅದಕ್ಕೆ ತಯಾರಾಗಿರಬೇಕು.

 ಬದುಕು ಒಡ್ದುವ ಯಾವುದೇ ಸವಾಲಿಗೆ ಹೆಣ್ಣು ಮಕ್ಕಳು ತಯಾರಾಗಿರಬೇಕು… ಏನಂತೀರಾ?


Leave a Reply

Back To Top