ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಗೆರೆ ದಾಟಿದವಳು

ಬೆಳಕ ಜಗತ್ತಿನ
ಅಂಧಕಾರಕ್ಕೆ ಬೆರಗಾದ ಮಗು
ಮಾತೇ..ಮರೆತುಬಿಟ್ಟಿದೆ;
ಒಂದೆರಡು ವರುಷ!
ಬೆಳೆಬೆಳೆಯುತ್ತಿರುವ ಮಗುವೀಗ
ಕಲಿಕಾ ಪ್ರಕ್ರಿಯೆಯಲ್ಲಿ
ಹೊಸಿಲ ದಾಟಲೆತ್ನಿಸುತ್ತಿದೆ…
ಮಗು ಬೆಳೆದು ಹೆಣ್ಣಾಗಿದ್ದಾಳೆ
ಸುತ್ತಲ ಬೇಲಿಯೂ ಗಟ್ಟಿಯಾಗಿದೆ!

ಕಟ್ಟುಪಾಡುಗ ಒಳಗೆ… ಬಿಗಿಯಾದವಳಿಗೀಗ
‘ಸಹನಾಮೂರ್ತಿ’
ಬಿರುದು ಸಿಕ್ಕಿದೆ!
ಕರಿಬೇವಿನೆಲೆಯಂತಹ
ಬದುಕಿವಳದು
ಒಗ್ಗರಣೆಯಲ್ಲಿ ಹುರಿಯಲ್ಪಟ್ಟು
ಸಿಡಿಯುವ ಸಾಸಿವೆಯೊಂದಿಗೂ
ಒಂದಿನಿತೂ ಎಗರಾಡದೆ
ಉರಿಯಲ್ಲೂ..ಯಾತರದ ಮೌನ!?
ಸಾಂಬಾರಿನೊಂದಿಗೆ ಬೆಂದೆದ್ದು
ಸ್ವಾದ ಬಿಟ್ಟುಕೊಟ್ಟ ಬೆವಿನೆಲೆಯನ್ನು
ಊಟದ ತಟ್ಟೆಯಲ್ಲಿ
ಎತ್ತಿಟ್ಟು ಎಸೆದಾಗ…
ಸಹನೆಗೂ…ಸಿಡಿಮಿಡಿ..
‘ಸಹನಾಮೂರ್ತಿ’ ಪಟ್ಟದೊಡತಿ
ಪಟ್ಟ ತೊರೆದಿದ್ದಾಳೆ
ನಡೆವ ಹಾದಿಯಲಿ
ಗೆರೆ ಮೂಡಿಸೋ..ಛಲದಿ
ಗೆರೆ ದಾಟಿದ್ದಾಳೆ
ಅರಿಯದೆ ದುಡುಕಿದ
ಸೀತೆಯಲ್ಲ ಇವಳು
ಅಸಮಾನತೆಯ ಉರಿಯಲ್ಲಿ
ತೆಪ್ಪಗಿರಲಾಗದೆ ಸಿಡಿದ
ಒಗ್ಗರಣೆಯ ಸಾಸಿವೆ ಇವಳು!!
ಲೀಲಾಕುಮಾರಿ ತೊಡಿಕಾನ
