ಮಧು ಕಾರಗಿ ಅವರ ಕವಿತೆ-‘ಹೂ’ ಹನಿಗಳು

ಹೂ’ಗಳೇ
ಇರಬಹುದು
ಇರಬಹುದು ನೀವೇ
ನಗುವ ಭಾಷೆಯಲ್ಲಿ
ಮೊದಮೊದಲ ಪದವೀಧರರು!

ಅಪೂರ್ವ ರೂಪರಾಶಿಯ
‘ಹೂ’ಗಳು ಬಾಗುವುದ ಹೇಳಿಕೊಡುವಾಗ
ಬಿಡು ಬಿಡು
ನೀನು ಬೀಗುವುದನು!

ನಿರ್ಬಂಧಗಳೇ
ತುಂಬಿರುವ ಲೋಕದಲ್ಲಿ
‘ಏ ಅದ್ಯಾಕೆ ಯಾವಾಗ್ಲೂ ನಗ್ತಿರ್ತಿಯ
ನಿಂಗೇನು ಹುಚ್ಚಾ’?
ಎಂಬ ಪ್ರಶ್ನೆ ನಿಮಗಷ್ಟೇ
ಅನ್ವಹಿಸುವುದಿಲ್ಲ ನೋಡಿ!

ಹಾದಿ ಬದಿಯ ‘ಹೂ’ಗಳೇ
ತೆರೆದ ಮನದ ನೀವು
ಮುಚ್ಚಿಕೊಂಡ ಕದಗಳಿಗೆ
ಯಾವಾಗಲೂ
ಪಾಠ ಹೇಳತ್ತಲೇ ಇರುತ್ತೀರಿ!

ಎಲೆ ಬಳ್ಳಿಗಳ
ಮುದ್ದು ಗೆಳತಿಯೇ
ಎಷ್ಟು ಸಡಗರ ನಿನಗೆ ;
ದಿನವೊಂದನೆ
ಜನುಮದಂತೆ ಕಳೆದುಬಿಡಲು!

ನಿಜ ಹೇಳಿ
ಇಡೀ ದಿನದ ಲವಲವಿಕೆಗೆ
ಹೊನ್ನ ಕಿರಣಗಳ ಚೆಲುವ
ಹೊತ್ತು ತರುವ
ಸಿಹಿಮುತ್ತು ತಾನೇ!

ಹರನ ತಲೆಯ
ಮೇಲೆ ಕುಳಿತರೂ
ದೀರ್ಘ ಆಯಸ್ಸು ಬೇಡಲಿಲ್ಲ ನೀವು ;
ಬದುಕನು
ಬರೀ ಬದುಕುವುದಕೂ
ಒಪ್ಪಿ ಅಪ್ಪುವುದಕೂ
ವ್ಯತ್ಯಾಸ ನಿಮ್ಮಿಂದಲೇ ತಿಳಿದದ್ದು !


2 thoughts on “ಮಧು ಕಾರಗಿ ಅವರ ಕವಿತೆ-‘ಹೂ’ ಹನಿಗಳು

  1. ವಾವ್…..ಹೂಮನದ ಹುಡುಗಿಯ ಹೂ ಕವಿತೆ ಮಧು….ಚೆಂದ ಇದೆ….

Leave a Reply

Back To Top