ಹಾಸ್ಯ ಸಂಗಾತಿ
ಎಚ್.ಗೋಪಾಲಕೃಷ್ಣ
ಮೇಡಂ ಕೊಟ್ಟ ಶಿಕ್ಷೆ…..

ರಾಮಜ್ಜ ಕೆಮ್ಮಿದ. ಏನೋ ಹೇಳಲು ಹೊರಟಿದ್ದಾನೆ ಅನಿಸಿತು. ಆಗ ತಾನೇ ಉಂಡು ಕೂತಿದ್ದೆವು. ಎದುರಿಗೆ ಒಂದು ದೊಡ್ಡ ಬೆಳ್ಳಿ ತಟ್ಟೆಯಲ್ಲಿ ಬಾಳೆ ಎಲೆ ಹರಡಿ ಅದರಲ್ಲಿ ಕೋಡುಬಳೆ ರಾಶಿ ಹಾಕಿದ್ದರು. ಅದರ ಪಕ್ಕ ಅದೇ ಸೈಜಿನ ಮತ್ತೊಂದು ತಟ್ಟೆ, ಇದೂ ಸಹ ಬೆಳ್ಳಿಯದೇ. ಇದರ ಮೇಲೂ ಒಂದು ಬಾಳೆ ಎಲೆ. ಅದರ ಮೇಲೆ ಇದ್ದದ್ದು ಕೋಡುಬಳೆ ಅಲ್ಲ, ಬದಲಿಗೆ ತೆನ್ ಗೊಳಲು ಅಥವಾ ಮುಚ್ಚೊರೆ. ನಿಮ್ಮೂರಲ್ಲಿ ತೆನ್ ಗೊಳಲು ಅಥವಾ ಮುಚ್ಚೊರೆ ಇವುಕ್ಕೆ ಅದೇನು ಹೇಳ್ತಾರೋ ತಿಳಿಯದು. ಆದರೆ ನಮ್ಮ ಕಡೆ ಇದನ್ನು ಯಾವ ಹೆಸರಿಂದಲೇ ಕೂಗಲಿ, ಅದರ ರುಚಿ ಅದೂ ಉಂಡ ನಂತರ ತಿಂದರೆ ಹೋ, ಅದನ್ನು ವರ್ಣಿಸಲು ಆದಿಶೇಷ ನಿಂದಲೂ ಅಸಾಧ್ಯ.. ಅದರಲ್ಲೂ ನಮ್ಮ ಪ್ರಭಿ ಮಾಡಿದ್ದು ಅಂದರೆ ಇಡೀ ನಮ್ಮ ವಂಶದವರಿಗೆ ಮೈ ಎಲ್ಲಾ ಬಾಯಿ!
ಎಲ್ಲರೂ ತಟ್ಟೆ ಸುತ್ತ ಕೂತಿದ್ದೇವಾ. ಆಗ ಮಾತು ಶುರು ಆಗಿದ್ದು. ನಮ್ಮ ಚಿಕ್ಕಪ್ಪ ಪೊಲೀಸ್ ಆಗಿದ್ದೂರು ಕಳ್ಳರಿಗೆ ಹೇಗೆ ಶಿಕ್ಷೆ ಕೊಡ್ತಾ ಇದ್ದರು ಅಂತ ಮಾತು ಶುರು ಆಗಿತ್ತು. ಕಳ್ಳರಿಗೆ ಏರೋಪ್ಲೇನ್ ಶಿಕ್ಷೆ,ಮೆಟ್ಟಿಂಗಾಲಿನ ಮೇಲೆ ನಿಲ್ಲೋದು, ಚಕ್ಲ ಮಕ್ಳ ಹಾಕಿ ಒಂದು ದಿನ ಹಾಗೇ ಅದೇ ಪೋಸಿಶನ್ ನಲ್ಲೇ ಇರಿಸೋದು…….. ಮೊದಲಾದ ಆ ಕಾಲದ ಅನಾಗರಿಕ ಕತೆಗಳನ್ನು ನನ್ನ ಕಸಿನ್ ಪ್ರಾಣೇ ಶಿ ವಿವರಿಸುತ್ತಾ ಅದನ್ನು ಬಿಕ್ಕಿ ಬಿಕ್ಕಿ ನಗುತ್ತಾ ಎಂಜಾಯ್ ಮಾಡುತ್ತಾ ಇದ್ದನಾ, ಆಗ ನಮ್ಮ ರಾಮಜ್ಜ ಕೆಮ್ಮಿದ್ದು.
ರಾಮಜ್ಜ ಕೆಮ್ಮಿದ ಅಂದರೆ ಅವನು ಮಾತಿನ ಮಧ್ಯೆ ತೂರಲು ನಮ್ಮ ಅನುಮತಿಗೆ ಕಾಯ್ತಾ ಇದಾನೆ ಅಂತ ಅರ್ಥ. ಅಕಸ್ಮಾತ್ ಅವನನ್ನ ಇಗ್ನೋರ್ ಮಾಡಿದರು ಅಂದರೆ ಇಡೀ ಸಭೆ ಆಕ್ರಮಿಸಿಕೊಂಡು ರಂಪಾಟ ಮಾಡಿ ಬಿಡ್ತಾನೆ. ಈ ರಂಪಾಟದ ಅನುಭವ ಸಾಕಷ್ಟು ಆಗಿರೋದರಿಂದ ಅವನು ಕೆಮ್ಮಿದ ಅಂದರೆ ಸಾಕು ಅವನಿಗೆ ರೆಡ್ ಕಾರ್ಪೆಟ್ ಹಾಸಿಬಿಡ್ತೀವಿ. ಇದು ನಮ್ಮ ಫ್ಯಾಮಿಲಿ ಸೀಕ್ರೆಟ್ಟು.
“ಯೆಸ್ ರಾಮಜ್ಜಾ, ಅದೇನೋ ಹೇಳಬೇಕಾ? ಯು ವಾಂಟ್ ಟು ಟೇಕ್ ಥಿ ಫ್ಲೋರ್…”ಅಂದ ಅನಂತು. ಅನಂತು ಸಹ ನಮ್ಮ ಕಸಿನ್ ಗುಂಪು. ತುಂಬಾ ಸಾಫೀಸ್ಟಿಕೇಟೆಡ್ ಗುಣ. ಆಗಾಗ ಇಂತಹ ಪಾಲಿಶ್ ಮಾತು ಉದುರಿಸಿ ಗಲಿಬಿಲಿ ಕ್ರಿಯೇಟ್ ಮಾಡ್ತಾನೆ!
ರಾಮಜ್ಜ ಗಲಿಬಿಲಿ ಗೊಂಡ ಈ ಮಾತಿಗೆ.
“ಫ್ಲೋರಾ? ಯಾವ ಫ್ಲೋರೂ ಬೇಡಪ್ಪಾ. ರಾಗಿ ಗಂಜಿ ಸಾಕು ನನಗೆ….”ಅಂದ!
“ಅಯ್ಯೋ ರಾಮಜ್ಜಾ ನಾನು ಹಾಗಲ್ಲಾ ಹೇಳಿದ್ದು.. ನೀನೇನಾದರು ಮಾತಾಡಕ್ಕೆ ಇದ್ಯಾ….”ಅನಂತು.
” ಹೂಂ ಕನ್ ರಪ್ಪಾ… ನನ್ನ ಅಜ್ಜನ ಕಡೆ ಕಸಿನ್ಸ್ ಕತೆ ನೆನಪಿಗೆ ಬಂತು….’
“ಹೂಂ ನೀವೂ ಕೈ ಹಾಕ್ರೋ…. ಅಂತ ಹೇಳಿ
ಎರಡು ಕೋಡುಬಳೆ ತೆಗೆದು ಅಂಗೈಯಲ್ಲಿ ಇಟ್ಟು ಇನ್ನೊಂದು ಕೈಯಿಂದ ಅದುಮಿದ. ಪೀಸ್ ಪೀಸ್ ಆದ ಕೋಡುಬಳೆ ಎರಡು ಚೂರು ತೆಗೆದು ಬಾಯಲ್ಲಿ ಹಾಕ್ಕೊಂಡು ಶುರು ಮಾಡಿದ…. ನಾವೂ ಸಹ ಕೈಹಾಕಿ ಅವನಿಗೆ ಸಾಥ್ ನೀಡಿದೆವು.
“ನನಗೆ ಅಜ್ಜನ ಕಡೆಯಿಂದ ನಾಲ್ಕು ಕಸಿನ್ಸ್ ಅಂತ ಹೇಳಿದ್ದೆ ತಾನೇ.. ಅವರಲ್ಲಿ ಮೊದಲನೆಯವನು ಲಕ್ಷ್ಮಣ, ಅವನ ತಮ್ಮ ನರಹರಿ, ಅವನ ತಮ್ಮ ಶ್ರೀಹರಿ, ಆಮೇಲೆ ಮುರಹರಿ ಅಂತ. ಲಕ್ಷ್ಮಣನಿಗೆ ನಾವು ಇವನೊಬ್ಬ ಹರಿ ಅಂತ ಹೆಸರು ಇಟ್ಕೊಳ್ಳಲಿಲ್ಲ ಅದರಿಂದ ಅವನಿಗೂ ಒಂದು ಹರಿ ಅನ್ನೋ ಬಾಲ ಇರಲಿ ಅಂದುಕೊಂಡೆವಾ.. ಆಗ ಇವನಿಗೆ ಕಲ್ಲೆ ಪುರಿ ಅಂತ ಇಟ್ಟದ್ದು. ನಿಧಾನಕ್ಕೆ ಅದು ಮುದ್ಧಿಗೆ ಏನೇನೋ ರೂಪ ತಾಳಿತು. ಕಲ್ಲು, ಕಾಲು, ಕುಲು ಅಂತ ಏನೇನೋ ಆಗಿ ಅವನು ವಯಸ್ಸಿಗೆ ಬಂದಾಗ ಕಾರಾ ಪುರಿ ಆಗಿ ಪುರಿ ಆಗಿದ್ದ. ಈಗ ಪುರಿ ಸಂಗತಿಗೆ…..”
ಒಂದು ಮುಷ್ಟಿ ಪುಡಿ ಪುಡಿ ಆಗಿದ್ದ ತೆಂ ಗೋಳಲು ತಗೊಂಡು ಎದುರಿನ ಪುಟ್ಟ ತಟ್ಟೆಲಿ ಹಾಕ್ಕೊಂಡ.. ನಾವು ಅವನಿಗೆ ಸಾಥ್ ಕೊಟ್ಟೆವು, ಎಂದಿನಂತೆ.
“ಏನು ಹೇಳ್ತಾ ಇದ್ದೇ…..ಹೂ ಅವನು ಕಳ್ಳೆ ಪುರಿ ಸಂಗತಿಗೆ ಬಂದಿದ್ದೆ ತಾನೇ…. ಪುರಿಗೆ ಮೂವತ್ತಾದರೂ ಮದುವೆ ಆಗಿರಲಿಲ್ಲ. ಯಾವ ಹೆಣ್ಣು ಬಂದರೂ ಬೇಡ ಬೇಡ ಅಂತ ಇದ್ದ. ಸರಾಸರಿ ವರ್ಷಕ್ಕೆ ನೂರು ಹುಡುಗಿಯರ ಹಾಗೆ ಸಾವಿರ ಹುಡುಗಿಯರನ್ನು ನೋಡಿದ್ದ ಅಂತ ಅವನಮ್ಮ ಲೆಕ್ಕ ಇಟ್ಟಿದ್ದಳು.
ಸರೀ ನಪ್ಪಾ ಇವ ಸನ್ಯಾಸಿ ಆಗಲಿ, ಹೆಣ್ಣು ನೋಡೋದು ತಪ್ತದೆ ಅಂತ ಅವನಪ್ಪ ಅವನಪ್ಪ ಅವನಮ್ಮ ನೆಂಟರು ಪಂಟರು ಎಲ್ಲಾ ಪ್ಲಾನ್ ಮಾಡಿದರಾ. ಯಾವುದೋ ಪುಟ್ಟ ಮಠಕ್ಕೆ ಹೆಡ್ ಅಂತ ಇವನನ್ನ ಕೂಡಿಸಿದ್ರಾ…
…. ಮಠದ ಸ್ವಾಮಿ ಆದನಾ, ದಿನಾ ಗರಿ ಗರಿ ಕಾವಿ ಬಟ್ಟೆ ತೋಡೋದು, ಪ್ರವಚನ ಮಾಡೋದೂ ಕೂಗಿದ ಕಡೆಗೆ ಹೋಗಿ ಭಾಷ್ಣ ಪಾಸ್ನ ಮಾಡ್ಕೊಂಡು ಫೆಮೇಸ್ ಆಗ್ಬಿಟ್ಟ.. ಗದ್ದುಗೆಗೆ ಚೆನ್ನಾಗಿ ಕಾಣಿಕೆ ಹರಿದು ಬರೋಕ್ಕೆ ಶುರು ಆಯ್ತಾ…. ಇವನು ಫೆಮಸ್ಸೂೂ ಆದ್ನಾ…. ಹಿ ಮೇಡ್ ನೇಮ್ ಅಂಡ್ ಫೆಮ್.
“ಫೇಮಸ್ ಆದ ಅಂದರೆ ಭಕ್ತರಿಗೆ ಕಡಿಮೆನೇ…? ಹಿಂಡಹಿಂಡೂ ಜನ ಇವನ ಭಕ್ತರು ಆದ್ರಾ. ಅದರಲ್ಲಿ
ನಮ್ಮ ಭಕ್ತರ ಹಳ್ಳಿ ಸಿಸ್ಟರ್ಶೂ ಸೇರಿದ್ರಾ.. ಇಲ್ಲಿಂದಲೇ ಹೊಸಾ ಕತೆ ಸುರು ಆಗಿದ್ದು..
“ಮುಂಡೇದು, ಸ್ವಾಮಿ ಆಗಿತ್ತಲ್ಲ, ತೆಪ್ಪಗೆ ಮಠಕ್ಕೆ ಬಂದೂರನ್ನ ನೋಡ್ಕೊಂಡು ಮೂರುಹೊತ್ತು ಉಣ್ಣಿ ಕೊಂಡು ನಾಲ್ಕು ಹೊತ್ತು ಫಲಾರ ಮಾಡ್ಕೊಂಡು ಆಗಾಗ ಎಳನೀರು ಬಸ್ಕೊಂಡು ಪಿಸ್ತಾ ಗೋಡಂಬಿ ದ್ರಾಕ್ಷಿ ಕಲ್ಸಕ್ಕರೆ ಬಾಯಾಡಿಸಿಕೊಂಡು ಇದ್ದಿದ್ದರೆ ಅವನಂತ ಸ್ವಾಮಿ ಇಲ್ಲಾಂತ ಭಕ್ತರು ಮೆರೆಯೋರು. ಆದರೆ ಆಗಿದ್ದೇ ಬೇರೆ….
“ಸಿಸ್ಟರ್ಸು ಸ್ಕೂಲು ಕಾಲೇಜಲ್ಲಿ ಓದ್ತಾ ಇದ್ದೋರು . ಸ್ವಾಮಿಗಳ ಶಿಷ್ಯರು ಆದ್ರಾ ಏನೇನೋ ಹೊಸಹೊಸ ಯೋಜನೆ ಹಾಕೊಂಡ್ರು. ಮೊದಲನೇ ಹುಡುಗಿ ಮನೆಯಿಂದ ಶಾಲೆಗೆ ಅಂತ ಸ್ಕೀಂ ಶುರು ಮಾಡಿತು. ಮನೇಲಿರೋ ಕೂಸುಗಳನ ಶಾಲೆಗೆ ತರೋದು, ಅವು ಗಳ ಮೂಗು ಒರೆಸೋದು, ಮುಖ ತೊಳೆಯೋದು,ತಲೆ ಬಾಚೋದು, ಅವುಗಳಿಗೆ ಚೆಡ್ಡಿ ಲಂಗ ತೋಡಿಸೋದು….. ಇಂತ ಸೋಶಿಯಲ್ ಸರ್ವೀಸ್ ಮಾಡ್ತಾ ಇದ್ಳು. ಇದು ನಮ್ಮ ಕಲ್ಲೇ ಪುರಿ ಹೃದಯ ಗೆಲ್ತಾ..? ಇಬ್ಬರಿಗೂ ಲವ್ ಆಯ್ತಾ…?
“ಅದರ ಎಫೆಕ್ಟು ಅಂದರೆ ಇಬ್ಬರೂ ಮದುವೆ ಆದ್ರು. ಗದ್ದುಗೆ ಬಿಡ್ತೀನಿ ಅಂತ ಇವನು, ಗದ್ದುಗೆ ಬಿಟ್ರೆ ಕಾಲು ಮುರಿತೀವಿ, ಸೋಮಿಗಳು ಮದ್ವೆ ಆಗಬಾರದು ಅಂತ ನಮ್ಮ ರೂಲ್ ಬುಕ್ ನಾಗಿಲ್ಲ.. ಅಂತ ದೇವರ ಗುಡಿ ಅವರು ಅಂದರೆ ಪಾರುಪತ್ತೇದಾರರು ಹೇಳಿ ಇವನು ಗದ್ದುಗೆ ಸೀಟು ಮುಂದುವರೆಸಿದ ನಾ…..
ಹೂಂ ಅಂತ ಗೋಣು ಆಡಿಸಿದೆವು.
“ಪ್ರಭಕ್ಕಾ, ತಟ್ಟೆ ಖಾಲಿ ಆಗದೆ ನೋಡವ್ವಾ…… ಅಂದ.
ಪ್ರಭಕ್ಕ ಬಂದು ಬೆಳ್ಳಿ ತಟ್ಟೆ ತೆಗೆದುಕೊಂಡು ಹೋದಳು.ಹತ್ನಿಮಿಷದಲ್ಲಿ ಹಿಂದೆ ಬಂದಳು. ಈ ಸಲ ಅವಳ ಕೈಲಿ ದೊಡ್ಡ ಅರಕಿನ ಚಟ್ಟೆ, ಎರಡೂ ಕೈಲಿ ಹಿಡಕೊಂಡು ಬಂದಳು. ಅದರ ತುಂಬಾ ಐವತ್ತು ರುಪಾಯಿ ರೇಟಿನ ಎರಡೂ ಬೊಗಸೆ ತುಂಬುವ ಹಾಗಿದ್ದ ತೆಂಗಿನ ಕಾಯಿ ಗಾತ್ರದ ತಂಬಿಟ್ಟು!
“ಪಾಪ ಹೆಣ್ಣು ಕೂಸು ಅಷ್ಟೊಂದು ಭಾರ ಹೊತ್ತು ತಂದಿದ್ದಾಳೆ. ಅವಳಿಗೆ ಹೆಲ್ಪ್ ಮಾಡ್ರೋ ಗಡವಾಗಳ….”ಅಂತ ಬೈದ. ಅನಂತು ಎದ್ದು ಪ್ರಭಕ್ಕನ ಸಂಗಡ ಒಳಗಡೆ ಹೋದ. ಬರ್ತಾ ಅವನ ಕೈಲಿ ಇನ್ನೊಂದು ದೊಡ್ಡ ಆರಕಿನ ಚಟ್ಟೇ, ಅದರಲ್ಲಿ ಫುಟ್ ಬಾಲ್ ಗಾತ್ರದ ಪುರಿ ಉಂಡೆ, ಊಹೂಂ ಉಂಡೆ ಅಲ್ಲ,ಉಂಡೆಗಳು…!
ಒಂದು ತಂಬಿಟ್ಟು ಉಂಡೆ ತಗೊಂಡು ಕೈನಲ್ಲೇ ಮುರಿದು ಬಾಯಿಗೆ ಎಸೆದು ಕೊಂಡ.
“ಎಲ್ಲಿಗೆ ನಿಲ್ಲಿಸಿದ್ದೆ..?ಇಬ್ಬರೂ ಮದುವೆ ಆದ್ರು. ಗದ್ದುಗೆ ಬಿಡ್ತೀನಿ ಅಂತ ಇವನು, ಗದ್ದುಗೆ ಬಿಟ್ರೆ ಕಾಲು ಮುರಿತೀವಿ, ಸೋಮಿಗಳು ಮದ್ವೆ ಆಗಬಾರದು ಅಂತ ನಮ್ಮ ರೂಲ್ ಬುಕ್ ನಾಗಿಲ್ಲ.. ಅಂತ ಅವರು ಹೇಳಿ ಇವನು ಗದ್ದುಗೆ ಸೀಟು ಮುಂದುವರೆಸಿದನಾ….. ಅಂತ ಹೇಳ್ತಾ ಇದ್ದೆ ಅಲ್ವಾ…?
“ಹೌದಜ್ಜಾ…. ಅಂತ ಖೋರಸ್ ಹಾಕಿದೆವು.
“ಕಳ್ಳೆಪುರಿ ಸಂತೋಷವಾಗಿ ಮಕ್ಕಳ ಸಿಂಬಳ ಒರೆಸಿ ಚೆಡ್ಡಿ ಬದಲಾಯಿಸಿ ಅವನ ಪ್ರವಚನ ಪಾಠ ಭಾಷಣ ಫಾಷಣ ಮುಂದುವರೆಸಿಕೊಂಡು ಸಂತೋಷವಾಗಿದ್ದ ಅಂತ ನೀವು ನಾವು ತಿಳಕೊಂಡಿದ್ದೆವು ತಾನೇ…..
“ಹೌದಜ್ಜಾ….. ಅಂತ ಖೊರಸ್ ಹೊಡೆದೆವು.
“ಅಲ್ಲೇ ಕರ್ಣಯ್ಯಾ ನಾವು ಉಲ್ಟಾ ಹೊಡೆದದ್ದು… ಅಂದ ತಾತಯ್ಯ
“ಇದೇನಜ್ಜಾ ಸಸ್ಪೆನ್ಸ್ ತಂದೆ…..”
“ಅದಕ್ಕೇ ಬಂದೆ. ಮುಂಡೇ ತ್ತದ್ದು ಖುಷಿಯಾಗದೆ ಅಂತ ತಿಳಕೊಂಡವಾ. ಆಗಾಗ ಅವನ ಮಠಕ್ಕೆ ಹೋಗಿ ಬಂದು ಮಾಡ್ತಾ ಇದ್ದ, ನಮ್ಮ ಶಾಮಿ. ಆಲ್ಲಿ ಮಸ್ತಾಗಿ ಸಿಕ್ತಾ ಇತ್ತಲ್ಲ ದ್ರಾ ಕ್ಷಿ ಗೋಡಂಬಿ ಪಿಸ್ತಾ ಗಳು ಅದರ ಅಟ್ರಾಕ್ಷನ್ನು ಇವನಿಗೆ. ಇವನು ಮಠಕ್ಕೆ ಹೋದಾಗಲೆಲ್ಲಾ ಇವನು ಕಳ್ಳೆಪುರಿ ಅದೇನೋ ಮಾಡ್ತಾ ಇರೋನಂತೆ. ಸರಕ್ಕನೆ ಮುಚ್ಚಿಡ್ತಾ ಇದ್ನಂತೆ… ಶಾಮಿಗೆ ಅದೇನೋ ಡೌಟು. ಐದಾರು ಸಲ ಹಿಂಗಾಗದೆ. ಅದೇನಲಾ ಅದೇನಲಾ ಅಂತ ಇವನು ಕೇಳೋದು. ಅವನು ಅಳು ಮುಖ ಮಾಡ್ಕೊಂಡು ಏನಿಲ್ಲ ಏನಿಲ್ಲ ಅಂತ ಅನ್ನೋದು ಇದಾಗದೆ. ಕೊನೆಗೆ ಬಲವಂತ ಮಾಡಿ ಕೇಳಿದನಂತೆ.ಕಳ್ಳೆಪುರಿ ಮೂಗಿನಲ್ಲಿ ಸಿಂಬಳ ಸೂರಿಸ್ತಾ ಅಜ್ಜನ ಕಳಿಸು, ನೋಡಬಕು ಅಂದನಂತೆ.
ಸಾಮಿ ನನ್ನ ಹತ್ರ ಈ ಸುದ್ದಿ ಹೇಳಿದ. ಅಜ್ಜೋ ಹೋಗಿ ನೋಡು ಅದೇನೋ ವ್ಯಸನ ದಲ್ಲವನೆ…. ಅಂದ…
“ಅವರ ಮಠಕ್ಕೆ ಹೇಳದೇ ಕೇಳದೇ ಹೋದೆ.ಸೋಮಿಗಳು ರೂಮಿನಲ್ಲಿದ್ದಾರೆ ಅಂದರು. ಸೀದಾ ರೂಮಿಗೆ ನುಗ್ಗಿದೆ. ರೂಮಿನಲ್ಲಿ ಅವನು ದಪ್ಪನೆ ನೋಟ್ ಬುಕ್ ಇಟ್ಕೊಂಡು ಇನ್ನೊಂದು ಬುಕ್ಕಿಂದ ನೋಡ್ಕೊಂಡು ಅದೇನೋ ಬರೀತಾ ಇದ್ದ.ಮೂರು ವರ್ಷದ ಡಿಗ್ರಿಲಿ ಒಂದೇ ಒಂದು ಪೇಜು ಬರೆದವನಲ್ಲ ಇವನು! ಆಶ್ಚರ್ಯ ಆಯ್ತಾ…
ಕಳ್ಳೆಪುರಿ ಏನಿದು ಏನು ಬರೀತಾ ಇದ್ದಿ ಅದೂ ಅಲ್ಲಿಂದ ಇಲ್ಲಿಗೆ….. ಅಂತ ಬೆನ್ನಿನ ಮೇಲೆ ಕೈ ಆಡಿಸಿದೆ..
“… ಅಜ್ಜೋ, ಮೊದಲು ಬಾಗಿಲು ಹಾಕು ಹಂಗೇ ಚಿಲುಕ ಹಾಕು…. ಅಂದ. ಬಾಗಿಲು ಮುಚ್ಚಿ ಚಿಲಕ ಹಾಕಿದ್ನಾ….
ಬಂದು ಪಕ್ಕದಲ್ಲಿ ಕೂತು ಗೊನ್ನೇ ಸುರಿಸ್ತಾ ಕಣ್ಣಲ್ಲಿ ನೀರು ಹರಿಸ್ತಾ ಅವನ ಕತೆ ಹೇಳಿದಾಕಣ್ರಯ್ಯ….. ಅಂತ ಪುರಿ ಉಂಡೆ ಕೈಗೆ ತಗೊಂಡ. ಅವನು ಪುರಿ ಉಂಡೆ ಮುಗಿಸೋ ವರೆಗೂ ಕಾದೆವು. ನಾವೂ ಕೈ ಹಾಕಿದೋ..
ಮುಂದೇನಾಯ್ತು…. ಅಂತ ಖೋರಸ್ ಹಾಕಿದೆವು. ಚೆಂಬುನಿಂದ ನೀರು ಕುಡಿದು ಮೀಸೆ ಒರೆಸಿಕೊಂಡು ರಾಮಜ್ಜ ಕತೆ ಮುಂದುವರೆಸಿದ..
“ಕಳ್ಳೆಪುರಿ ಹೆಂಡತಿ ಸ್ಕೂಲ್ ಮೇಡಮ್ ಅಂತ ಹೇಳಿದೆ ಅಲ್ವಾ. ಅವಳ ಇಬ್ಬರ ತಂಗೀರು ಮೇಡಂಸು. ಒಬ್ಬಳು ಹೈಸ್ಕೂಲು ಮೇಡಂ ,ಕೊನೆ ಅವಳು ಕಾಲೇಜು ಮೇಡಮ್. ಕಳ್ಳೆಪುರಿ ಮಠದ ಸಾಮಿ ತಾನೇ. ಏನಾದರೂ ಸಣ್ಣ ಪುಟ್ಟ ತಪ್ಪು ಮಾಡಿದಾಗ ಅವನಿಗೆ ಪನಿಷ್ ಮೆಂಟ್ ಅಂತೆ…..
“ಏನು ತಪ್ಪು ಅಂದರೆ….. ಅಂತ ಕೇಳಿದೆ.
“ತೀರ್ಥ ಕೊಡಬೇಕಾದರೆ ಯಾರದ್ದೋ ಹುಡುಗಿ ಕೈ ತಗುಲಿತು ಅಂತ….. ಅಜ್ಜಾ ಪ್ಲೀಸ್ ನಗಬೇಡ…”ಅಂದ ಕಳ್ಳೆಪುರಿ.
ಹಾಗೆ ನೋಡಿದರೆ ಇನ್ನೂ ಪೂರ್ತಿ ನಕ್ಕಿರಲಿಲ್ಲ ನಾನು.
ಕಳ್ಳೆಪುರಿ ಮುಂದುವರೆಸಿದ
“ಸಣ್ಣ ಮಿಸ್ಟೇಕು ಆದರೆ ಅಪಾಲಜಿ ಕೇಳೋದು, ಅದಕ್ಕಿಂತ ಕೊಂಚ ದೊಡ್ಡ ತಪ್ಪು ಅಂದರೆ ನೂರು ಉಟ್ ಪೈಸು,…..
“ಇದು ಯಾವ ತರಹದ ತಪ್ಪು….? ಅಂತ ಕೇಳಿದೆ.
ಕಳ್ಳೆಪುರಿ ವಿವರಿಸಿದ
“ಮಠದಲ್ಲಿ ಯಾರಾದರೂ ಹೆಂಗಸರ ಜತೆ ನಗ್ ನಗ್ತಾ ಮಾತಾಡಿದರೆ… ನೂರು ಉಟ್ ಪೈಸು, ಕಿವಿ ಹಿಡ್ಕೊಂಡು ಉಟ್ ಪೈಸು, ಒಂಟಿ ಕಾಲಮೇಲೆ ನಿಲ್ಲೋದು, ತಲೆ ಕೆಳಗೆ ಕಾಲು ಮೇಲೆ ಮಾಡಿ ನಿಲ್ಲೋದು…. ನನ್ನ ಗೋಳು ನನಗಾದರೆ ನಿನಗೆ ನಗು…”ಅಂತ ರೇಗಿದ. ನನ್ನ ಅರಿವಿಗೆ ಬಾರದ ಹಾಗೆ ನಗು ಒತ್ತರಿಸಿ ಕೊಂಡು ಬಂದಿತ್ತು.
“ಸಾರಿ, ಸಾರಿ, ಕಳ್ಳೆಪುರಿ….. ಅಂದೆ.
“ಖಂಡಿತ ನಗುಲ್ಲ. ಮುಂದೆ ಹೇಳು…..”ಅಂತ ಪುಸಲಾಯಿಸಿದೆ.
“…..ನಮ್ಮ ಹಾಸ್ಟೆಲ್ ಹುಡುಗನ ರೂಮು ಚೆಕ್ ಮಾಡುಕ್ಕೆ ಹೋಗಿದ್ದೆ, ಅವನ ಮೇಲೆ ಸಿಗರೇಟ್ ಸೇದುತ್ತಾನೆ, ಕುಡಿತಾನೆ ಅಂತ ಕಂಪ್ಲೇಂಟ್ ಇತ್ತು ಅಂತ. ಚೆಕ್ ಮಾಡಿದ್ನಾ?ಅವನ ರೂಮಲ್ಲಿ ಸಿಗರೇಟ್ ಪ್ಯಾಕ್, ಬೀರ್ ಬಾಟಲಿ, ರತಿ ವಿಜ್ನಾನ ಪುಸ್ತಕ ಸಿಕ್ಕಿದವು. ಅದನ್ನ ರೂಮಿಗೆ ತಂದೆ… ಅಜ್ಜಾ ಪ್ಲೀಸ್ ಐ ಆಮ್ ಸಿರಿಯಸ್, ನಗಬೇಡ…. ಅಂದ.
ಎರಡು ಮೂರು ಸಲ ಕೆಮ್ಮಿ ನಗು ತಡೆದೆ.
“ಮುಂದೆ….. ಅಂದೆ
“ಒಂದು ಬಾಟಲು ಬೀರು ಮುಗಿಸಿ, ಸಿಗರೇಟು ಅರ್ಧ ಸೇದಿದ್ದೆ. ರತಿ ವಿಜ್ನಾನ ಇನ್ನೂ ಹದಿನೈದು ಪುಟ ಇತ್ತು..ಮೂರೂ ಜನ ಸಿಸ್ಟರ್ಸು ಒಳಗೆ ನುಗ್ಗಿದರು..
ಅಜ್ಜಾ ಸೊಂಟ ಮುರಿದುಬಿಡ್ತೀನಿ ನಕ್ಕರೆ….”ಅಂದ.
“ಇಲ್ಲ ನಗುಲ್ಲಾ ಅಂದರೆ ನಗಲ್ಲಾ ಮುಂದೆ ಹೇಳು..”
“ಇದಕ್ಕೆ ಪನಿಶ್ಷ್ಮೆಂಟು ಹತ್ತು ಸಾವಿರ ಸಲ ನಾನು ಮಾಡಿದ್ದು ತಪ್ಪಾಯಿತು, ಇನ್ಮೇಲೆ ಹೀಗೆ ಮಾಡುದಿಲ್ಲ…. ಅಂತ ಒಂದರ ಕೆಳಗೆ ಒಂದು ಗುಂಡಾಗಿ ಬರೆಯೋದು….”
“ಹೋ. ನಾನು ಬಂದಾಗ ಅದೇನಾ ನೀನು ಮಾಡ್ತಾ ಇದ್ದದ್ದು…?”ನನ್ನ ಪ್ರಶ್ನೆ.
“ಇದು ಹೋದ ವಾರದ್ದು. ಇವತ್ತಿನ ಪನಿಶ್ಷ್ಮೆಂಟು ಬೇರೆ…”ಅಂದ.
ಕುತೂಹಲ ಹೆಚ್ಚೆಚ್ಚು ಆಗ್ತಾ ಇದೆ ತಾನೇ? ನನಗೂ ಅದೇ ಆಗಿದ್ದು. ಕೊನೇ ಪುರಿ ಉಂಡೆ ತಗೊಂಡು ಅದರ ಮೇಲೆ ಮುಷ್ಟಿಯಿಂದ ಹೊಡೆದ. ಚುಪ್ಪಾನ್ ಚೂರು ಆಯಿತು. ಸುಮಾರು ದೊಡ್ಡ ಪೀಸ್ ತಗೊಂಡ, ಬಾಯಿಗೆ ಹಾಕಿಕೊಂಡ ಅಗಿದು ನುಂಗಿದ.
“ಮತ್ತೆ ಕಳ್ಳೆಪುರಿ ಪುರಾಣಕ್ಕೆ.. ಅಂದ
ಎಲ್ಲರೂ ತಲೆ ಆಡಿಸಿ ಕಂಟಿನ್ಯೂ ಕಂಟಿನ್ಯೂ ಕಂಟಿನ್ಯೂ ಅಂತ ಕೋರಸ್ ಹಾಡಿದೆವು.
“ಇದು ಹೋದ ವಾರದ್ದು. ಇವತ್ತಿನ ಪನಿಶ್ಷ್ಮೆಂಟು ಬೇರೆ.. ಅಂದೆ ತಾನೇ? ಅದೇನು ಅಂತ ಕೇಳಿದೆ.
“ಹಾಸ್ಟೆಲ್ ರೂಮಿನಿಂದ ಬೀರ್ ಬಾಟಲು ಸೀೀಜ್ ಮಾಡಿದ್ದೇನಲ್ಲಾ. ಮೊನ್ನೆ ಬೀರು ಕುಡಿದು ನಾಲ್ಕು ಸಿಗರೇಟ್ ಬೂದಿ ಮಾಡಿದ್ದೆ. ಅವರೆಲ್ಲ ಮೊದಲನೇ ಸಲ ಹಿಡಿದರಲ್ಲ ಆಗ ಸಿಗರೇಟ್ ಪ್ಯಾಕು ಮುಚ್ಚಿಟ್ಟಿದ್ದೆ. ಅದೇ ಸಿಗರೇಟು ಈಗ ಸೇದಿದ್ದು. ದೆಬನೇರ್ ಅಂತ ಇಂಗ್ಲಿಷ್ ಮ್ಯಾಗಝೀನ್ ಗೊತ್ತು ತಾನೇ?(Debonair ಅಂತ ಒಂದು ಪೋಲಿ ಮ್ಯಾಗಝೀನ್) ಅದರ ಇಪ್ಪತ್ತನೇ ಪೋಟೋ ನೋಡ್ತಾ ಮೈ ಮರೆತಿದ್ದೆ…ಕೊನೇ ತಂಗಿ ನಾನಿದ್ದ ರೂಮಿಗೆ ಅವಳ ಕಾಲೇಜು ಪುಸ್ತಕ ಹುಡುಕ್ಕೊಂಡು ಬಂದಳು….. ನೋಡು ನನ್ನ ಪೇಶನ್ಸ್ ಟೆಸ್ಟ್ ಮಾಡ್ತಾ ಇದ್ದಿ. ನಗಬೇಡ ಅಂತ ಎಷ್ಟು ಸಲ ಬೊಗಳಲು ಸಾಧ್ಯ….?”ಅಂತ ಸಿಡ ಕಿದ.
“… ಇಲ್ಲಪ್ಪಾ ಸಾರಿ ಅಂದರೆ ಸಾರಿ. ಇನ್ನು ನಕ್ಕರೆ ಕೇಳು ಅಂದೆ. ಮುಂದೆ?
“ಹಾಸಿಗೆ ಮೇಲೆ ಬೋರಲು ಮಲಗಿ ಮ್ಯಾಗಝೀನ್ ಓದ್ತಾ ಇದ್ದೆ. ಅವಳು ಬಂದಿದ್ದು ಗೊತ್ತಾಗಲಿಲ್ಲ. ಆಚೆ ಹೋದಾಗ ಶಬ್ದ ಆಯ್ತು. ಶನಿ ತೊಲಗ್ತು ಆಂತ ಮುಂದಿನ ಪೋಟೋ ಡೀಪ್ ಆಗಿ ಸ್ಟಡಿ ಮಾಡ್ತಾ ಇದ್ದೆ…… ಹೋಗ್ ನಾನ್ ಏನೂ ಹೇಳುಲ್ಲ…..”ಅಂದ. ನನಗೆ ಗೊತ್ತಿಲ್ಲದೆ ನಗು ಹೊರಟಿತ್ತು.
“ಸಾರಿ ಪುರಿ ಸಾರಿ ಕಣಪ್ಪಾ, ದೇವರಾಣೆ ಇನ್ನ ನಕ್ಕರೆ ಕೇಳು…… ಅಂತ ಪುಸಲಾಯಿಸಿ ದೆ.
ಪುರಿ ಮುಂದು ವರೆಸಿದ
“ಶನಿ ತೊಲಗ್ತು ಆಂತ ಮುಂದಿನ ಪೋಟೋ ಡೀಪ್ ಆಗಿ ಸ್ಟಡಿ ಮಾಡ್ತಾ ಇದ್ದೆ…… ಅಂತ ಹೇಳ್ತಾ ಇದ್ದೆ ತಾನೇ.. ಕೊನೇ ಶನಿ ಆಚೆ ಹೋಗೀತ್ತಲ್ಲ, ಮಿಕ್ಕ ಎರಡು ರಾಕ್ಷಸೀರ್ನ ಜತೆಗೆ ಹಾಕ್ಕೊಂಡು ಬಂದಳು….
ಅಜ್ಜಾ ಯು ಆರ್ ಟೆಸ್ಟಿಂಗ್ ಮೈ ಪೇಶಂಸ್……”
“ಇಲ್ಲ ದೊರೆ ಬಾಯೊಳಗೆ ಜಿರಳೆ ಹೋದ ಹಾಗೆ ಅನಿಸ್ತು, ಅದಕ್ಕೆ ಕೆಮ್ಮಿ ಆಚೆ ಕಳಿಸಕ್ಕೆ ಟ್ರೈ ಮಾಡಿದೆ… ನೀನು ಕಂಟಿನ್ಯೂ ಮಾಡು……”ಅಂದೆ.
“ಕೊನೇ ಶನಿ ಆಚೆ ಹೋಗೀತ್ತಲ್ಲ, ಮಿಕ್ಕ ಎರಡು ರಾಕ್ಷಸೀರ್ನ ಜತೆಗೆ ಹಾಕ್ಕೊಂಡು ಬಂದಳು…. ಅಂತ ಹೇಳಿದೆ ತಾನೇ? ಮೂರೂ ಸಿಸ್ಟರ್ಸು ಅಲ್ಲೇ ನಿಂತು ಏನು ಮಾಡ ಬೇಕು ಅಂತ ಚರ್ಚೆ ಮಾಡಿದರು. ಮೂರನೇ ಶನಿ ಪ್ರೊಫೆಸರ್ ಒಬ್ಬ ಯಾವುದೋ ಥೀಸಿಸ್ ಬರೆದಿದ್ದಾನಂತೆ, ಅದನ್ನ ಹುಡುಕಿ ಅವಳು ರೂಮಿಗೆ ಬಂದದ್ದು. ಅವಳ ಕೈಲಿ ಆ ದಪ್ಪನೆ ಪುಸ್ತಕ ಇತ್ತು. ದಪ್ಪನೆ ಪುಸ್ತಕ ನನ್ನೆದುರು ಎಸೆಯಿತು ಶನಿ ನಂಬರು ಒಂದು. ನಂಬರ್ ಎರಡು ಇದನ್ನು ಎರಡು ಸಲ ಬರೀ ಬೇಕು, ಅದೇ ಪನಿಶ್ಮೆಂಟ್ ಅಂತ ಹೇಳ್ತಾ…? ಶನಿ ನಂಬರು ಮೂರು ಎರಡೇ ಸಲ ಸಾಕೇನೆ? ಹತ್ತು ಸಲ ಬರಿಲಿ ಬುದ್ಧಿ ಬರುತ್ತೆ ಅಂದಳು…. ನೀನು ಬಂದಾಗ ನಾಲ್ಕನೇ ಸಲದ್ದು ಬರೀತಾ ಇದ್ದದ್ದು…..”ಅಂತ ಮೂಗು ಆಮೇಲೆ ಕಣ್ಣು ಒರೆಸಿಕೊಂಡ. ಎರಡೂ ಕೈಗಳನ್ನು ರಪರಪ ಉಜ್ಜಿದ, ಬೆರಳಿನ ನಟಗೆ ಮುರಿದ. ಎರಡೂ ಕೈ ಮೇಲೆತ್ತಿ ಆಕಾಶದಲ್ಲಿ ಮುಷ್ಟಿ ತಿರುಗಿಸಿದ.
“….. ನಿನ್ನನ್ನ ಯಾಕೆ ಬಾ ಅಂತ ಹೇಳಿದ್ದು ಗೊತ್ತಾಯ್ತಾ
.?”ಅಂದ.
“ತುಂಬಾ ಕಷ್ಟ ಪಟ್ಟು ನಗು ತಡೆದಿದ್ದೆ. ಈಗ ನಗು ಒತ್ತರಿಸಿ ಒತ್ತರಿಸಿಒತ್ತರಿಸಿಒತ್ತರಿಸಿ ಬರಬೇಕೇ…. ಮುಖ ಸಿಂಡರಿಸಿ ಕೊಂಡು ನನ್ನನ್ನೇ ನೋಡ್ತಾ ಇದ್ದ. ಅವನ ಕಣ್ಣು ಮೂಲೆಯಲ್ಲಿ ಇಟ್ಟಿದ್ದ ವಿಕೆಟ್ ನೋಡ್ತಾ ಇತ್ತು.. ಅವನು ಅದರತ್ತ ಹಾರುವ ಮೊದಲು ಅದಕ್ಕೆ ಅಡ್ಡ ನಿಂತೆ……
” ಪುರಿ, ಅಯ್ಯೋ ಅನ್ಸತ್ತೆ ಕಣೋ ಅಂದೆ…..
“ನಿನ್ನ ಸಿಂಪತಿ ಏನೂ ಬೇಡ ಶನಿಗಳಿಗೆ……”ಅಂದ
“ಸಿಂಪ ತಿ ನಿನಗೋ ಮಾರಾಯ ಅಂದೆ….”
“ಥಿಂಕ್ ಸಮ್ ಥಿಂಗ್…”ಅಂದ.
“ನನ್ನ ಹತ್ರ ಹತ್ತು ಪ್ಲಾನ್ ಇದೆ, ನಿನ್ನನ್ನ ಈ ಕ ಕಷ್ಟ ದಿಂದ ಪಾರು ಮಾಡೋಕ್ಕೆ…..
ಎಲ್ಲಿ ತಟ್ಟೆ ಎಲ್ಲಾ ಖಾಲಿ ಮಾಡಿಬಿಟ್ರೇನೋ… ಅಂದ ರಾಮಜ್ಜಾ… ತಟ್ಟೆ ಖಾಲಿ ಆಗಿದ್ದು ನಮ್ಮ ಗಮನಕ್ಕೂ ಬಂದಿರಲಿಲ್ಲ.
“ಇರಜ್ಜಾ ಪ್ರಭಿಗೆ ಹೇಳೋಣ ಏನಾದರೂ ತರ್ತಾಳೆ….”ಅಂದೆವು.
“ಅವಳು ಒನಕೇಲಿ ಬಡಿದು ಓಡಿಸ್ತಾಳೆ ಅಷ್ಟೇ…. ಅಂತ ರಾಮಜ್ಜಾ ಮೇಲೆದ್ದ.
“ಅಜ್ಜಾ ಕತೆ ಫಿನಿಶ್ ಮಾಡು, ಆಮೇಲೆ ವಿಸರ್ಜನೆ….”ಅಂತ ತಡೆದೆವು. ಮುಠ್ಠಾಳ ಮುಂಡೆ ವ,ನಿಮಗಂತೂ ಕೆಲಸ ಇಲ್ಲ ಅಂದರೆ ನನಗೆ ಇಲ್ಲೇನ್ರೋ…. ಅಂತ ಚಪ್ಪಲಿ ಗೂಡಿನ ಕಡೆ ಹೆಜ್ಜೆ ಹಾಕಿದ.
“ಅಜ್ಜಾ ಅಜ್ಜಾ ಹೀಗೆ ಸಸ್ಪೆನ್ಸ್ ನಲ್ಲಿ ಹಾಕಿ ಹೋಗ್ಬೇಡ…”ಅಂತ ಬೇಡಿಕೊಂಡೆವು.
“ಮುಂದಿನ ಸಲ ಸಿಕ್ಕಿದಾಗ ಕತೆ ಕಂಟಿನ್ಯೂ ಅಂತ ಹೊರಟೆ ಬಿಟ್ಟ.
ಕತೆ ಈ ಘಟ್ಟಕ್ಕೆ ಬಂದು ನಿಂತಿದ್ದಕ್ಕೆ ನನಗೂ ತುಂಬಾ ಬೇಸರ ಇವರೇ…
ಆದಷ್ಟೂ ಬೇಗ ಕುತೂಹಲ ತಣಿಸುತ್ತೇನೆ!

ಎಚ್.ಗೋಪಾಲಕೃಷ್ಣ
ಸಕತ್ತಾಗಿದೆ
ಧನ್ಯವಾದಗಳು
ಲೋಕಾಭಿರಾಮವನ್ನು ಹೇಗೆ ಸ-ರಸವಾಗಿಸಿ, ವಿನೋದವಾಗಿಸಿ, ಸ್ವಾರಸ್ಯವಾಗಿಸಿ, ನಮ್ಮನ್ನು ನಗಿಸಿ ನಲಿಸಬಹುದು ಎಂಬುದಕ್ಕೆ ಈ ತಿಳಿಹಾಸ್ಯದ ಗಟ್ಟಿ ಬರಹವು ಒಂದು ಉತ್ತಮ ನಿದರ್ಶನ. ಓದುಗನಿಗಾಗಿದೆ ಇಲ್ಲಿ ಸರಸ ಸಂಭಾಷಣೆಯ ಸೊಗಸಿನ ದರ್ಶನ.
ದೇಶಾ’ವರಿ’ಯಾಗಿ ನಗಬೇಕಾದ ಇಂದಿನ ನಗೆ ಬರಹಗಳ ಯುಗದಲ್ಲಿ ಇಂಥ ಬರಹಗಳು ನಗೆಯ ಬುಗ್ಗೆ ಉಕ್ಕಿಸುವ ಅಮೂಲ್ಯ ವರಹಗಳು.
– ಎಚ್. ಆನಂದರಾಮ ಶಾಸ್ತ್ರೀ
ಶ್ರೀ ಆನಂದರಾಮ ಶಾಸ್ತ್ರೀ ಅವರಿಗೆ,
ಧನ್ಯವಾದಗಳು ಲೇಖನ ಇಷ್ಟ ಪಟ್ಟಿದುದಕ್ಕಾಗಿ… ಎರಡಡಿ ಎತ್ತರ ಆದೆ