ಕಾವ್ಯಯಾನ

ಅಪ್ಪ…

Father and son' Painting by shai yossef | Saatchi Art

ಸುಜಾತ ಲಕ್ಷ್ಮೀಪುರ.

ಅಪ್ಪ ನೆನಪಿಗೆ ಬರುವುದು ಅಪರೂಪ…

ಕಣ್ಣು ಬಿಟ್ಟಾಗಿನಿಂದ‌ ಕಂಡ‌
ಅಮ್ಮನ ಮೊಗದಲ್ಲೇ ಅಪ್ಪನ‌ ಸುಳಿವು..
ಅಮ್ಮನಲ್ಲಿ ಪ್ರೀತಿ ತುಂಬಿದ ಭಯ ಆತಂಕ
ಆವಸರಿಸಿದರೆ ಗೊತ್ತಾಗುತ್ತಿತ್ತು ಅಪ್ಪ ಬಂದಾ!

ಚಿಕ್ಕವಳಿರುವಾಗಲೇ
ಮಧ್ಯ ರಾತ್ರಿ ಎಬ್ಬಿಸಿ ಕುಳ್ಳಿರಿಸುತ್ತಿದ್ದ ಓದು.. ಓದು..
ತಾನು ಕಲಿತ ನಾಲ್ಕು ಅಕ್ಷರ ಸಾಲದೆಂದು ನಮ್ಮನ್ನು ಬಡಿದೆಚ್ಚರಿಸುತ್ತಿದ್ದ.

ರಾತ್ರಿ ಎಷ್ಟೋ ಹೊತ್ತಿಗೆ ಕುಡಿದು ತೂರಾಡುತ್ತಾ ತಿಂಡಿ ಕಟ್ಟಿಸಿಕೊಂಡು
ಮನೆಗೆ ಬರುತ್ತಿದ್ದ ಅಪ್ಪ..
ಹೊತ್ತು ಗೊತ್ತು ನೋಡದೆಯೇ ಎಬ್ಬಿಸಿ ತಿನ್ನಿಸುತ್ತಿದ್ದ.

ಕುಡಿತ ದುಡಿಮೆಯಲ್ಲೇ
ಜೀವ ಸವೆಸಿದ ಅಪ್ಪ
ಮುದ್ದು ಮಾಡಿದ್ದು ನೆನಪೇ ಇಲ್ಲಾ..
ಒದ್ದು ಎಬ್ಬಿಸಿ ನೀರಿಗೆಂದು ಕೊಡ ಕೊಡುತ್ತಿದ್ದ,
ಆಮೇಲೆ‌ ಕೈಗೆ ಪುಸ್ತಕ.

ಯೌವನದ ಹೊಸ್ತಿಲಿಗೆ ಕಾಲಿಡುವ ಮುನ್ನವೇ ಮಲಗಿದ್ದವನು ಮಲಗಿದ್ದಂತೆ ಹೊರಟುಹೋದ.

ಅದೆಂದೋ ಒಂದು ದಿನ ಅಪ್ಪ ಅಮ್ಮನಿಗೆ ಹೇಳುತ್ತಲಿದ್ದ,
‘ನೋಡು ನನ್ನ ‌ಮಗಳು ಚಂದ ಓದಿ ದೊಡ್ಡವಳಾಗಿ ಹೆಸರು ತರುತ್ತಾಳೆ. ನಿನ್ನ ಮಗ ನಾಲಾಯಕ್’

ಅಪ್ಪನೆಂದರೆ ಗದರಿಕೆಯ ದನಿ ಈಗಲೂ ಕೇಳಿಸುತ್ತದೆ
ಅಪ್ಪ ಆಡಿದ್ದು ಗಳಿಸಿದ್ದು ಸಾಕಿದ್ದು ಸಲಹಿದ್ದು ಬಹಳ ಕಡಿಮೆ.
ಅವನಿಟ್ಟಿದ್ದ ಒಂದೇ ವಿಶ್ವಾಸ
ನನ್ನನ್ನು ಬೆಳೆಸಿದೆ.

ನನ್ನ ನೆರಳಾಗಿ ಗೆಲುವಾಗಿ ನೆಮ್ಮದಿಯಾಗಿ ಅಮ್ಮ ನಿಂತಿದ್ದಾಳೆ.
ಅಮ್ಮನ ಎದೆಯ ಗೂಡಲ್ಲಿ ಅಪ್ಪ ಈಗಲೂ ಬೆಚ್ಚಗಿದ್ದಾನೆ.

***********

Leave a Reply

Back To Top