ಕಾಡುವ ಹಾಡು!

ಒಲವೇ ಜೀವನ ಸಾಕ್ಷಾತ್ಕಾರ

ಸುಜಾತ ರವೀಶ್

ಒಲವೇ ಜೀವನ ಸಾಕ್ಷಾತ್ಕಾರ ಒಲವೇ ಮರೆಯದ ಮಮಕಾರ
ಚಿತ್ರ ಸಾಕ್ಷಾತ್ಕಾರ (೧೯೭೧)
ಅಭಿನಯ ರಾಜಕುಮಾರ್ ಜಮುನಾ ಪೃಥ್ವಿರಾಜ್ ಕಪೂರ್
ಸಾಹಿತ್ಯ ಕೆ ಪ್ರಭಾಕರ ಶಾಸ್ತ್ರಿ ಸಂಗೀತ ಎಂ ರಂಗರಾವ್ .

ಚಿತ್ರದ ನಾಯಕ ನಾಯಕಿ ಇನ್ನೇನು ಮದುವೆಯಾಗಲಿರುವವರು. ಅವರ ಮನದ ತುಂಬಾ ಪ್ರೀತಿಯ ಕನಸು ತುಂಬಿರುತ್ತದೆ. ಕಂಡದ್ದೆಲ್ಲ ಪ್ರೇಮದ ಪ್ರತಿರೂಪ ಆಗಿರುತ್ತದೆ .ಅಂತಹ ಸಂದರ್ಭದಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡು ಕನ್ನಡದ ಚಿತ್ರ ರಸಿಕರ ಮನಸೂರೆಗೊಂಡಿದ್ದು ಆಶ್ಚರ್ಯವಲ್ಲ. ಪ್ರೇಮಿಗಳ ಪಾಲಿನ ಅಮರ ಗೀತೆಯಾಗಿಯೂ ಬಿಟ್ಟಿದೆ .
ಪ್ರಕೃತಿಯ ವಿವಿಧ ಬಗೆಗಳಲ್ಲಿ ಒಲವಿನ ಸಾಕ್ಷಾತ್ಕಾರವನ್ನು ಕಾಣುತ್ತಾರೆ ಧುಮ್ಮಿಕ್ಕಿ ಹರಿಯುವ ಜಲಪಾತ ದುಂಬಿಯ
ಹಾಡಿನ ಝೇಂಕಾರ ಘಮ್ಮನೆ ಹೊಮ್ಮುವ ಹೊಸ ಹೂವಿನ ಪರಿಮಳ ಎಲ್ಲದರಲ್ಲೂ ಒಲವೇ ಒಲವು .ಆದಿ ಹಾಗೂ ಅಂತ್ಯ ಪ್ರಾಸಗಳನ್ನು ಹೊಂದಿರುವ ಮೊದಲ ಮೂರು ಸಾಲುಗಳ ಮಾಧುರ್ಯವನ್ನು ಸವಿಯಲೇಬೇಕು. ಮುಂದೆ ವಸಂತನ ಕೋಗಿಲೆಯ ಇಂಚರ ಗಾಂಧಾರ ಭಾಷೆಯಲ್ಲಿ ಹಾಡುತ್ತಿರುವ ಹಕ್ಕಿಗಳ ಕಲರವ ಮತ್ತು ಮಲೆನಾಡಿನ ನಿಸರ್ಗ ಸೌಂದರ್ಯದಲ್ಲಿ ಪ್ರೇಮವನ್ನು ಕಾಣುತ್ತಾರೆ .ಎಲ್ಲಕ್ಕಿಂತ ಪ್ರಿಯವಾದದ್ದು ಕಡೆಯ ಪ್ಯಾರ. ಆಗ ಆಕಾಶವಾಣಿಯಲ್ಲಿ ಈ ಪ್ಯಾರಾವನ್ನು ಕತ್ತರಿಸಿ ಹಾಕುತ್ತಿದ್ದರು .ಹಾಗಾಗಿ ಈ ಸಾಲುಗಳು ಅಪರೂಪವೇ .

ಒಲವಿನ ಪೂಜೆಗೆ ಒಲವೇ ಮಂದಾರ
ಒಲವೇ ಬದುಕಿನ ಬಂಗಾರ
ಒಲವಿನ ನೆನಪೇ ಹೃದಯಕೆ ಮಧುರ
ಒಲವೇ ದೈವದ ಸಾಕ್ಷಾತ್ಕಾರ .

ಈ ಸಾಲುಗಳು ಗೀತೆಗೆ ದೈವೀಕತೆಯನ್ನು ಒದಗಿಸಿ ಕೊಟ್ಟಿದೆ ಎಂದರೆ ತಪ್ಪಾಗಲಾರದು .ಉತ್ತಮ ಸಾಹಿತ್ಯ ಸಂಗೀತ ಇರುವ ಯಾವುದೇ ಗೀತೆ ಕನ್ನಡ ಜನರನ್ನು ಸೆಳೆಯುತ್ತಿದೆ ಎನ್ನುವುದಕ್ಕೆ ಇದು ಒಂದು ಉದಾಹರಣೆ. ಪಿಬಿ ಶ್ರೀನಿವಾಸ್ ಹಾಗೂ ಪಿ ಸುಶೀಲಾ ಅವರ ಮಧುರ ಕಂಠದಲ್ಲಿ ಹೊಮ್ಮಿರುವ ಈ ಸುಂದರ ಗೀತೆ ಎಷ್ಟು ಕೇಳಿದರೂ ತೃಪ್ತಿಯಾಗುವುದಿಲ್ಲ .ಮುಂಚೆ ಬರೀ ರೇಡಿಯೋ ಆಕಾಶವಾಣಿಯಲ್ಲಿ ಕೇಳಿ ನಂತರ ಧ್ವನಿ ಸುರುಳಿಗಳಲ್ಲಿ ತದನಂತರ ಸಿಡಿಗಳಲ್ಲಿ ಹಾಗೂ ಈಗ ಮೊಬೈಲ್ನಲ್ಲಿ ಸೇವ್ ಆಗಿರುವ ನನ್ನ ಅಚ್ಚುಮೆಚ್ಚಿನ ಗೀತೆ ಇದು .ನಮ್ಮ ಹಳೆಯ ಚಿತ್ರಗೀತೆಗಳ ಸೊಗಡೇ ಹಾಗೆ ಚಿನ್ನದ ಮಲ್ಲಿಗೆಗೆ ಪರಿಮಳ ಬೆರೆಸಿದ ಹಾಗೆ .

Leave a Reply

Back To Top