ವಿರಿಂಚಿಯವರ ತೆಲುಗು ಕಥೆ ʼನಾವೇ ಬದಲಾಗಬೇಕು‌ʼ ಕನ್ನಡಾನುವಾದ ಶಿವಕುಮಾರ್‌ ಕಂಪ್ಲಿ

  

  

ನಿಜಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವರ ಕುರಿತು ನಾನೇನೆಂದುಕೊಳ್ಳುತ್ತಿದ್ದೆ? ʼರಣಹೇಡಿಗಳು…
ಜೀವನದ ಸಮಸ್ಯೆಗಳನ್ನು ಎದುರಿಸಲಾಗದೆ ಓಡಿಹೋಗುವವರು ʼ ಅಂತಲ್ಲವೇ!? ಆತ್ಮಾಹುತಿ
ದಾಳಿಗಳನ್ನು ಮಾಡೋ ಉಗ್ರವಾದಿಗಳ ಚಟುವಟಿಕೆಗಳನ್ನು ʼಹೇಡಿತನದ ಕೃತ್ಯವೆಂದುʼ ನಮ್ಮ ರಾಜಕೀಯ
ನಾಯಕರು ಬಣ್ಣಿಸುತ್ತಾರೆ.ಅಂದರೆ, ನಿಜವಾಗಲೂ ಆತ್ಮಹತ್ಯೆಗಳು, ಆತ್ಮಾಹುತಿಗಳನ್ನು ಹೇಡಿಗಳೇ
ಮಾಡಬಲ್ಲರಾ?
ಅದಕ್ಕೆ ಧೈರ್ಯದ ಅಗತ್ಯವಿಲ್ಲವೇ? ನಾನು ಹೇಡಿಯೇ ಅಲ್ಲವಾ ? ಆತ್ಮಹತ್ಯೆಗೆ ಯಾಕೆ ಭಯ
ಪಡುತ್ತಿದ್ದೇನೆ ? ಹೇಡಿಗಳೇ ಆತ್ಮಹತ್ಯೆಗಳನ್ನು ಮಾಡಿಕೊಳ್ಳುವುದಾದರೆ, ಆತ್ಮಹತ್ಯೆಗೆ ಭಯಪಡೋ
ಹೇಡಿಗಳು ದೈರ್ಯಸ್ಥರಾ? ಹಾಗಾದರೆ ನಾನು ಧೈರ್ಯಸ್ಥನಾ!? ಹೇಡಿಯಾ?
ಏನೋ! ಇದು ನನಗೇ ಗೊಂದಲಮಯವಾಗಿದೆ.
ಈ ದಿನ ಹೇಗಾದರಾಗಲಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಉಕ್ಕಿಹರಿವ ನದಿಯ ಬಳಿಗೆ ಬಂದ ನಾನು,
ಗಂಟೆಗಳಿಂದ ಅಲೆಗಳಲ್ಲಿ ಕಾಲುಗಳನ್ನು ಆಡಿಸುತ್ತಾ ಪಂಚೆಯನ್ನು ಎತ್ತಿಕೊಂಡು ಯಾಕೆ ನಿಂತಿದ್ದೆ? ಒಂದು
ಹತ್ತುಹೆಜ್ಜೆ ಮುಂದಕ್ಕೆ ಬಂದಿದ್ದರೆ ಬಂದಿದ್ದ ಕೆಲಸವೇ ಆಗಿಹೋಗುತಿತ್ತಲ್ಲವೇ? ಅಂದರೆ ನನಗೆ
ಸಾಯಬೇಕೆಂದಿಲ್ಲವಾ? ಸಾಯುವುದು ತನ್ನ ಉದ್ದೇಶ ಅಲ್ಲವಾ? ಅಂದರೆ ನಾನು..ಯಾರನ್ನು ಬ್ಲಾಕ್‌
ಮೇಲ್‌ ಮಾಡಬೇಕೆಂದು ಈ ನದಿದಡಕ್ಕೆ ಬಂದಿದ್ದು. ನಾನು ದಿನಾ ಸಾಯಂಕಾಲ ದಡಕ್ಕೆ ಬರುತ್ತಲೇ
ಇದ್ದೆನಲ್ಲವೇ!? ನಾನು ಒಂದು ದಿನವಾದರೂ ನದಿಯೊಳಗೆ ಇಳಿದು ಸ್ನಾನ ಮಾಡಿರುವೆನಾ? ಭಯ …
ಈಜು ಬಾರದು… ಮುಳುಗಿ ಹೋಗುತ್ತೇನೆ ಎನ್ನೋ ಭಯ!. ಮುಳುಗಿ ಸತ್ತು ಹೋಗುತ್ತೇನೆ ಎನ್ನೋ
ಭಯ! ಆ ಭಯವೇ ನನ್ನನ್ನು ನಾನು ಹುಟ್ಟಿ ಬೆಳೆದ ಹಳ್ಳಿಯೊಳಗೆ ಶಾಲಾ ಶಿಕ್ಷಕನನ್ನಾಗಿ
ಮಾಡಿದೆ.ಜೀವನದೊಳಗೆ ಏಳುಬೀಳು ಕಾಣದಂತೆ ಮಾಡಿದೆ.
ಈ ಹೇಡಿತನವೇ ನನಗೆ ನಿಜಾಯಿತಿಪರನೆಂಬುವ ಮುಸುಗು ತೊಡಿಸಿದೆ. ಅದೇ ನನ್ನನ್ನು
ಒಳ್ಳೆಯವನ್ನನ್ನಾಗಿ ಚಿತ್ರಿಸಿದೆ. ನೀತಿವಂತನೆಂಬ ಮುದ್ರೆ ಹಾಕಿದೆ. ಪ್ರಪಂಚದೊಳಗೆ ಅವಕಾಶ ಗಳಿಸದವನು
ಹೇಡಿಯೇ ತನ್ನ ಉದ್ದೇಶದೊಳಗೆ ನೀತಿವಂತ.
ನಾನು ಅಷ್ಟು ನಿಜಾಯಿತಿಪರನಾ? ಅವಿನೀತಿ ಕೆಲಸಗಳನ್ನು ಮಾಡಲಿಕ್ಕೆ ನಮಗೆ ಅಂತಹ
ಅವಕಾಶಗಳೆಲ್ಲಿ? ನಿಜಾಯಿತಿಯ ಹಣವಾದ ಪ್ರಾವಿಡೆಂಟ್‌ ಪಂಡ್‌ ನೊಳಗೇ ಮಗಳ ವಿವಾಹಮಾಡಿದೆ,

ಮಗನನ್ನು ಓದಿಸಿದೆ. ನಿವೃತ್ತಿಯ ಹಣದೊಳಗೇ ಸಿಟಿಯೊಳಗೆ ಪ್ಲಾಟ್‌ ಕೊಳ್ಳಬೇಕೆಂದ ಮಗನಿಗೆ ಎಲ್ಲಾ
ಬಿಡಿಸಿ ನೀಡಿದೆ.
ಮಗ ಹಳ್ಳಿಯ ಮನೆ ಮಾರಿ ತನ್ನ ಬಳಿಗೆ ಬರುವತನಕ ಜೀವತಿಂದನು. ಮತ್ತೆ ಈಗ? ರಿಟೈರ್‌ ಆಗಿ
ವರ್ಷವಾಗಿದೆ. ವರ್ಷದೊಳಗೆ ಎಷ್ಟೆಲ್ಲಾ.. ಬದಲಾವಣೆ !?
ರಿಟೈರ್‌ ಆಗಲಿಕ್ಕೂ ಮುಂಚಿನ ದಿನಗಳ ತನಕ ಎದುರಿಗೆ ಕಾಣಿಸುತಿದ್ದ ಪ್ರತಿಯೊಬ್ಬನೂ “ ಏನು
ಮೇಷ್ಟ್ರೇ! ಇನ್ನೂ ಹತ್ತು ತಿಂಗಳು ಸರ್ವೀಸ್ಸಿದೆಯಾ” ಎನ್ನುತ್ತಿದ್ದ. ಈಗ “ರಿಟೈರ್‌ ಆಗಿ ಹತ್ತು
ತಿಂಗಳಾಗಿದೆಯಾ? “ ಎನ್ನುತ್ತಿದ್ದಾರೆ.ಅಂದರೆ ನನಗೆ ವರ್ಷದೊಳಗೆ ಇಪ್ಪತ್ತು ತಿಂಗಳ ವಯಸ್ಸು ಏರಿ
ಬಿಟ್ಟಿತಾ!? ರಿಟೈರ್‌ ಆದ ಕೂಡಲೇ ಹಳ್ಳಿಯ ಮನೆ ಮಾರುವತನಕವೂ ಮಗ,ಸೊಸೆ ಎಲ್ಲಿಲ್ಲದ
ಅಭಿಮಾನ ಸೂಸುತಿದ್ದರು.
“ ಆ ಹಳ್ಳಿಯೊಳಗೆ ಒಬ್ಬರೇ ಏನ್‌ ಮಾಡತಾರೆ ? ಕೂಗಿದರೆ ಕೇಳೋರಿಲ್ಲ? ಈ ವಯಸ್ಸಿನೊಳಗೆ
ಒಂಟಿಯಾಗಿ ಯಾಕೆ ನೋವನುಭವಿಸುತ್ತಾರೆ. ನಿಮಗಾಗಿಯೇ ಡಬಲ್‌ ಬೆಡ್‌ ರೂಮ್‌ ಪ್ಲಾಟ್‌
ತೆಗೆದುಕೊಂಡಿದ್ದೇವೆ” ಎಂದರು ಮಗ ಆನಂದ,ಸೊಸೆ ಶಾಂತಿ.
ಮನೆ ಮಾರಿದ ಮೇಲೆ “ ಅಪ್ಪಾ! ಬ್ಯಾಂಕ್‌ ಲೋನ್‌ ಬರುವುದು ಲೇಟ್‌ ಆಗುತ್ತದೆ. ಬಿಲ್ಡರ್‌ ಗಲಾಟೆ
ಮಾಡುತಿದ್ದಾನೆ. ಆ ಮನೆ ಮಾರಿದ ಹಣ ನೀಡಿದರೆ ಲೋನ್‌ ಬಂದೊಡನೆ ಕೊಟ್ಟು ಬಿಡುತ್ತೇನೆ….”
ಎಂದನು. ಆ ಆಸ್ತಿಗೆ ಕಾಲುಬರುತ್ತವೆಂದು. ಆ ದಿನ ನನಗೆ ತಿಳಿಯಲಿಲ್ಲ. ಅನ್ನಪೂರ್ಣನನ್ನು,ನನ್ನನ್ನೂ
ಟಾಕ್ಸಿಗೆ ಹತ್ತಿಸಿ ಸಿಟಿಗೆ ಕರೆದುಕೊಂಡು ಬಂದ ಮಗ. ಅದು ಸಿಟ ಅಂಚಿನ ಸರಿವಂತರ ದೊಡ್ಡ
ಅಪಾರ್ಟಮೆಂಟ್‌ ಮೇಲಿನ ಪೆಂಟ್‌ ಹೌಸ್.
ನಮಗೋ… ಮಂಡಿನೋವುಗಳು,ಬಿ.ಪಿ. ಷುಗರು… ಲಿಫ್ಟ್‌ ಕೆಲಸ ಮಾಡದೆ ಹೋದರೆ ನಮ್ಮ ಕಥೆ
ಅಷ್ಟೇ. ನಾನು ಅರವತ್ತು ಮುಟ್ಟಿದೊಡನೆ ಮುಪ್ಪಿನವನಾಗಿಹೋದೆನಾ ? ಹಣೆಗೆ ಕುಂಕುಮ ಭಂಡಾರ
ಬಳಿದು, ಕೊರಳೊಳಗೆ ಬೇವಿನ ಸೊಪ್ಪು ಹೂ ಹಾರವನ್ನು ಹಾಕಿ ಕುರಿಯನ್ನು ಹಿಡಿದು ಕೊಂಡು
ಮೆರವಣಿಗೆಯಲ್ಲಿ ತಂದರೆ ಆ ಕುರಿಯು ಏನೆಂದುಕೊಳ್ಳುತ್ತದೆ? ಆ ದಿನವೇ ತನ್ನ ಕೊನೆ ದಿನವೆಂದು ಅದಕ್ಕೆ
ಗೊತ್ತಾಗುತ್ತಾ? ನನ್ನ ಸ್ವಾತಂತ್ರಕ್ಕೂ ಕೂಡಾ ಆ ದಿನವೇ ಕೊನೆಯ ದಿನವೆಂದು ನನಗೂ ತಿಳಿಲಿಲ್ಲ.
ಆ ಹಳ್ಳಿಯೊಳಗಿನ ಮನೆ ಮಾರೋ ಮೊದಲು ಎದ್ದಕೂಡಲೇ ವ್ಯಾಯಾಮ,ಯೋಗ,ಆನಂತರ,
ಪೂಜೆ,ಟಿಫಿನ್. ಮದ್ಯಾನ್ಹ ಊಟ,ವಿಶ್ರಾಂತಿ, ಸಾಯಂಕಾಲ ತುಂಗಭದ್ರೆಯ ಮರಳ ದಂಡೆಯ ಉದ್ದಕ್ಕೂ
ವಾಕಿಂಗ್‌. ಗುಡಿಯ ಮುಂದಿನ ಬೇವಿನ ಮರದ ಕೆಳೆಗೆ ಹರಟೆ, ಕಾಲಕ್ಷೇಪಗಳು! ಸಿಟಿಯೊಳಗೆ ನನ್ನೊಂದಿಗೆ
ಮಾತನಾಡುವ ತುಡಿತ,ಮಿಡಿತ,ಆವೇದನೆಗಳಾದರೂ, ಯಾರಿಗಿದೆ?

ಈ ನಡುವೆ ಮನೆಯೊಳಗೆ ಎಲ್ಲರೂ ನನ್ನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ!. ಒಂದು ಕಾಲದಲ್ಲಿ ನಾನೆಂದರೆ
ಕುಣಿದಾಡಿ ಸೇರುತಿದ್ದವರು ಈಗ ಯಾವ ಗೌರವವನ್ನೂ ನೀಡುತ್ತಿಲ್ಲ! ಮುದುಕಿ ಕೂಡಾ
ಅವರೊಂದಿಗೇ… ಸೇರಿ ನನ್ನ ಶತ್ರುವರ್ಗವಾಗಿ ಬದಲಾಗಿದ್ದಾಳೆ! ನನಗೆ ಬದುಕೇ ನೀರಸವಾಗಿದೆ. ಎರಡನೇ
ಸಲ ʼಕಾಫಿ..ʼ ಎಂದರೆ “ ಹೇ…ಸ್ವಲ್ಪ ತಡೀರೀ. ನಿಮ್ಮ ಕಾಫೀದೂ ಕೆಮ್ಮಿಂದೂ.. ದೊಡ್ಡ ಗೋಳು”
ಎನ್ನುತ್ತಾಳೆ ಇವಳು.
ರಿಟೈರ್‌ ಆದೊಡನೆಯೇ… ನಾವೆಷ್ಟು ಹಗುರವಾಗಿ ಹೋಗುತ್ತೇವೆ? ಯಾವತ್ತೂ ಯಾರನ್ನೂ …
ಬೇಡದ ನನ್ನನ್ನು ಎಲ್ಲದಕ್ಕೂ ಎಲ್ಲರನ್ನೂ ದೇವರುಗಳಿಗೆ ಬೇಡುವಂತೆ ಮಾಡಿಬಿಟ್ಟಿದೆ!
ಮುಂಜಾನೆಯೇ ಎಂತಹ ಅವಮಾನ ನಡೆಯಿತು? ಈ ದಿನ ಶನಿವಾರ ಅಲ್ಲವಾ ಬೆಳಿಗ್ಗೆಯೇ ಸ್ನಾನ
ಮಾಡಿ ಗುಡಿಗೆ ಹೋಗಬೇಕೆಂದು ಬಾತ್‌ ರೂಮಿಗೆ ಹೊರಟಿದ್ದೆ, “ಮಾವ!ನೀವು ಸ್ವಲ್ಪ ಹೊತ್ತು ನಿಲ್ಲಿ.
ಅನಿರುಧ್‌ ಸ್ಕೂಲಿಗೆ ಟೈಮ್‌ ಆಗುತ್ತದೆ” ಎಂದು ಬಿಟ್ಟಳು ಶಾಂತಿ. ಅಂದರೆ ನಾನು ಹಸು ಕಂದಮ್ಮನಿಗೆ
ಪೈಪೋಟಿಯಾಗಿರುವೆನಾ?
ಹೊಟ್ಟೆ ಹಸಿಯುತ್ತಿದೆ. ಬೇಗನೇ ಟಿಫಿನ್‌ ಕೊಡು ಅಂದರೆ “ ಸ್ವಲ್ಪತ್ತು ನಿಲ್ರೀ. ಆನಂದ್ ಬೇಗನೇ
ಆಫೀಸಿಗೆ ಹೋಗಬೇಕಂತೆʼ ಎನ್ನುತ್ತಾಳೆ ಮುದುಕಿ. ಸುಮ್ಮನಿರಲಾಗದೇ ನಾನೇನಾದರೂ ಸಲಹೆ ನೀಡಿದರೆ”
ಅಪ್ಪಾ! ನಿಮಗೆ ಪ್ರತಿಯೊಂದಕ್ಕೂ ಅಡ್ಡ ಬಾಯಾಕುವುದು ಹೆಚ್ಚಾಗಿದೆ ,ರಾಮಾ ಕೃಷ್ಣಾ,ಅಂತಾ
ಹಾಯಾಗಿ ಕೂರಲಾಗದೇ ಎಲ್ಲಾ ವಿಷಯಗಳೂ ನಿಮಗೇಕೆ ಬೇಕು ?” ಎನ್ನುತ್ತಾನೆ ಆನಂದ.
ನನ್ನ ಮನೆಯೊಳಗೆ ನಾನೇ ಒಬ್ಬಂಟಿ, ಪರದೇಶೀಯಾಗಿಹೋಗಿದ್ದೇನೆ.‌ನಾನು ನನ್ನ ಸಲಹೆಗಳು
ಯಾರಿಗೂ ಬೇಕಿಲ್ಲ! ಅಡಿಗೆಯೊಳಗಿನ ಕರಿಬೇವಿನಂತಾಗಿ ಹೋಗಿದೆ ತನ್ನ ಬದುಕು. ಯಾರಿಗೂ
ಬೇಕಿಲ್ಲದಾಗ ನಾನು ಯಾಕಾಗಿ ಬದುಕಬೇಕು….? ಯಾರಿಗಾಗಿ ಬದುಕಬೇಕು!
ಇಂತಹ ಬದುಕನ್ನು ಬದುಕುವುದಕ್ಕಿಂತಾ ಸಾಯುವುದೇ ಮೇಲು. ಅದಕ್ಕೇ ಅಲ್ಲವೇ ನಾನು ನದಿ ತನಕ
ಬಂದಿದ್ದು. ಆದರೆ, ಸಾಯಲಾರದೇ ಹೋಗುತ್ತಿದ್ದೇನೆ! ಅಂದರೆ? ಸಾವಿನ ವಿಷಯದೊಳಗೂ ಕೂಡಾ ನನಗೆ
ಏಕಾಭಿಪ್ರಾಯವಿಲ್ಲವಾ! ಹಾಗಂತ ನಾನು ಮನೆಗೆ ವಾಪಾಸು ಹೋಗೋ ಪ್ರಮೇಯವೇ
ಇಲ್ಲ.ಎಂದುಕೊಳ್ಳುವುದರೊಳಗೆ…
ಭುಜದ ಮೇಲೆ ಯಾರೋ ಕೈ ಹಾಕಿದಂತಾಯಿತು. ಬೆಚ್ಚಿಬಿದ್ದೆ!ಈ ಲೋಕಕ್ಕೆ ಮರಳಿದೆ. “ ನೀನು
ಶಂಕರ ಅಲ್ಲವೇ ? ” ಭುಜದ ಮೇಲೆ ಕೈ ಹಾಕಿದ ವ್ಯಕ್ತಿ ಕೇಳುತಿದ್ದಾನೆ. ಆತನಿಗೂ ನನ್ನಷ್ಟೇ
ವಯಸ್ಸಿರಬೇಕು.
ನನಗಿಂತಾ ಸ್ವಲ್ಪ ಬಲವಾಗಿ, ಎತ್ತರವಾಗಿ, ಇದ್ದಾನೆ. ಪಕ್ಕದಲ್ಲೇ ಇನ್ನೊಬ್ಬ ವ್ಯಕ್ತಿ.

“ ಹೌದೂ… ನೀವೂ…!” ಎಂದೆ. ಆತನನನ್ನು ಗುರುತು ಹಿಡಿಯಲಿಕ್ಕೆ ಪ್ರಯತ್ನಿಸುತ್ತಾ.
“ ನೀನು ಮೂಲಿಮನಿ ಶಂಕರ್‌ ಅಲ್ಲವಾ!?‌ ”
“ ಹೌದು….”
“ ನಾನು ಕಣೋ… ತೇರುಬೀದಿ ನಾರಾಯಣ ಸ್ವಾಮಿ. ಇವನನ್ನು ಗುರುತುಹಿಡಿದೆಯಾ? ನಮ್ಮ
ವೆಂಕೋಬಿ ”
“ ಎಷ್ಟುದಿನವಾಯ್ತು ಕಣ್ರೋ” ಅಂತಾ ಇಬ್ಬರನ್ನೂ ಒಂದೇ ಬಾರಿಗೆ ಅಪ್ಪಿಕೊಂಡೆ! ನನ್ನ ಆನಂದಕ್ಕೆ
ಎಲ್ಲೆಯೇ…ಇಲ್ಲದಂತಾಯಿತು.
“ನೀನು ಬಹಳ ಹೊತ್ತಿನಿಂದ ನದಿಯ ಸುಳಿಯನ್ನು ನೋಡುತ್ತಿದ್ದೆ. ನಿನ್ನ ನಡೆಯನ್ನು ನೋಡಿಯೇ
ಅನುಮಾನ ಬಂತು. ತುಂಬಾ ಹತ್ತಿರಕ್ಕೆ ಬಂದು ನೋಡಿದರೆ ನೀನು! ನಮ್ ಶಂಕರ…!.” ಎಂದನು
ನಾರಾಯಣ ಸ್ವಾಮಿ.‌
ಮಾತಿನ ಸುಳಿಯೊಳಗೆ ಮೂರೂ ಜನರು ಮುಳುಗಿದೆವು. ಬಾಲ್ಯಗಳ ಸಿಂಹಾವಲೋಕನ ಮಾಡಿಕೊಂಡೆವು.
ನಂತರ ನಾನು ನನ್ನ ಪ್ರಸ್ತುತ ಪರಿಸ್ಥಿತಿಯನ್ನ ಮಿತ್ರರ ಮುಂದಿಟ್ಟೆ.
“ ಅಲ್ವೋ….ನೀನ್ಯಾಕೆ ಹೀಗೆ ಸುಮ್ಮನೇ….ಖಾಲಿಯಾಗಿದ್ದೀಯ?” ಎಂದ ವೆಂಕೋಬಿ.
“ ರಿಟೈರ್‌ ಆದೆನಲ್ಲವೇ “
“ರಿಟೈರ್‌ ಆಗಿದ್ದು ಬದುಕಿನಿಂದ ಅಲ್ಲಪ್ಪಾ. ನೀನು ಮಾಡುತ್ತಿದ್ದ ಉದ್ಯೋಗದಿಂದ ”
“ ಯಾರಾದರೂ ಅಷ್ಟೇ ಅಲ್ಲವೇ?”.
“ ಎಲ್ಲರೂ ಅಲ್ಲ. ನಿನ್ನ ಹಾಗೆಯೇ ಕೆಲವರು. ನೀನು ಸ್ಟೇಟ್‌ ಗೌರ್ಮೆಂಟ್‌ ಎಂಪ್ಲಾಯಿ ಅರವತ್ತಕ್ಕೆ
ರಿಟೈರ್‌ ಆಗಿದ್ದಿಯಾ. ವಿಶ್ವವಿದ್ಯಾಲಯಗಳಾದರೆ ಅರವತ್ತೆರಡು.ಅದೇ ನ್ಯಾಯಮೂರ್ತಿಗಳಾದರೆ
ಅರವತ್ತೈದು ವರ್ಷಕ್ಕೆ ರಿಟೈರ್‌ ಮೆಂಟ್. ಅಲ್ಲವೇ?”
“ ಹೌದು, ನಾವು ಮುದುಕರಾಗೋದ್ವಿ ಅಂತಲ್ಲವೇ! ನೀನು ಇನ್ನು ಕೆಲಸಕ್ಕೆ ಬರಲಾರೆ ಮನೆಗೆ ಹೋಗು
ಎನ್ನೋದು”.
“ತಪ್ಪು. ಒಬ್ಬರು ಅರವತ್ತರಲ್ಲಿ, ಇನ್ನೊಬ್ಬರು ಅರವತ್ತೆರಡರಲ್ಲಿ,ಮತ್ತೊಬ್ಬರು ಅರವತ್ತೈದರಲ್ಲಿ
ಮುದುಕರಾಗುತ್ತಾರೆಯೇ? ಕೆಲಸದ ಪ್ರಕಾರವೇ ವಯಸ್ಸು ಹಿಂದಕ್ಕೆ ಮುಂದಕ್ಕೆ ಆಗುವುದೇ? ಕೆಲವರಿಗೆ
ಇಪ್ಪತ್ತರೊಳಗೇ ಅರವತ್ತು ಬರುತ್ತದೆ… ಮತ್ತೆ ಕೆಲವರಿಗೆ ಅರವತ್ತರೊಳಗೂ ಇಪ್ಪತ್ತು ಇರುತ್ತದೆ.”

“ಅಂದರೆ?”
“ನಿನ್ನೊಳಗೆ ಉತ್ಸಾಹ, ಆರೋಗ್ಯ ಇರುವವರೆಗೆ ನಿನ್ನ ಕಂಡರೆ ವೃದ್ದಾಪ್ಯಕ್ಕೂ ಭಯ. ಅದು ನಿನ್ನ
ತಂಟೆಗೆ ಬರದು. ವೃದ್ಧಾಪ್ಯ ಶರೀರಕ್ಕೇ ಹೊರತು, ಮನಸ್ಸಿಗೆ ಅಲ್ಲ. ನಿಜಕ್ಕೂ ನೀನು ಮನಸ್ಸು
ಮಾಡಿದರೆ ವೃದ್ದಾಪ್ಯ ಶರೀರಕ್ಕೂ ಬರದು.
ಮನಸ್ಸೆಂದಿಗೂ ಹದಿನಾರು ವರ್ಷದ ಹುಡುಗರ ಹಾಗೆ ಉತ್ಸಾಹ ಚಿಮ್ಮಿಸಬೇಕು. ಸೋಮಾರಿಗಳ
ಮನಸ್ಸು ಉತ್ಸಾಹವನ್ನೇ ಚಿಮ್ಮಿಸದು. ಯಾಕ್ಚುವಲ್‌ ಏಜ್‌ ಅರವತ್ತಾದರೂ, ನಮ್ಮ ಫಿಜಿಕಲ್‌ ಏಜ್‌
ನಲವತ್ತರಹಾಗೆ, ಮೆಂಟಲ್‌ ಏಜ್‌ ಇಪ್ಪತ್ತರಹಾಗೆ ಇರಬೇಕು.ಹಾಗೆ ಇರಿಸಿಕೊಳ್ಳಲು ಪ್ರಯತ್ನಿಸಬೇಕು.
ನೀನು ಹೀಗೆ ಖಾಲಿಯಾಗಿ ಇರುವುದೇ ನಿನ್ನ ಸಮಸ್ಯೆಗೆ ಕಾರಣ” ಎಂದನು ನಾರಾಯಣಸ್ವಾಮಿ.
“ಅದು ನನ್ನ ತಪ್ಪಾ?” ಕೇಳಿದೆ.
“ ಇದು ತಪ್ಪು ಒಪ್ಪುಗಳ ಸಮಸ್ಯೆ ಅಲ್ಲ. ನಾನು ಕೆಮಿಕಲ್‌ ಇಂಡಸ್ಟ್ರೀ ತೆರೆದಿದ್ದೇನೆ. ಎಷ್ಟೋ
ಸಂಪಾದಿಸಿದ್ದೇನೆ. ನಾನೂ ನಿನ್ನ ಹಾಗೆಯೇ ರಿಟೈರ್‌ ಆಗಿಬಿಡಬಹುದು. ಹಾಗಂತ ನಿನ್ನ ಹಾಗೆ ದಿನವೂ
ಹೆಂಡತಿ ಮಕ್ಕಳೊಡನೆ ಜಗಳ ಮಾಡಿಕೊಳ್ಳಲಾರೆ.ಆದರೂ ಮತ್ತೊಂದು ಹೊಸ ಇಂಡಸ್ಟ್ರಿಯ ಪಬ್ಲಿಕ್‌
ಇಷ್ಯೂಗಾಗಿ ಬಂದಿದ್ದೇನೆ. ಹೊಸ ವ್ಯಾಪಾರಗಳನ್ನು ಪ್ರಾರಂಭಿಸ ಬೇಕೆಂದಿದ್ದೇನೆ.
ನೋಡೋ ಶಂಕರಾ… ಎಪ್ಪತೈದರ ವಯಸ್ಸಿನೊಳಗೆ ರತನ್‌ ಟಾಟಾ ಛಾಲೆಂಜಿಗ್‌ ಆಗಿ ʼನಾನೋʼ
ಕಾರು ತರಲಿಲ್ಲವೇ!? ಈ ವೆಂಕೋಬ ಅವರ ತಂದೆ ನೀಡಿದ ನಾಲಕ್ಕು ಎಕರೆಗಳನ್ನು ನಲವತ್ತು ಎಕರೆಗಳಾಗಿ
ಮಾಡಿದ್ದಾನೆ. ಬಗೆ ಬಗೆಯ ಬೆಳೆಗಳನ್ನು ಬೆಳೆಯುತಿದ್ದಾನೆ. ಹೊಸ ಹೊಸ ಪ್ರಯೋಗಗಳನ್ನು
ಮಾಡುತಿದ್ದಾನೆ. ʼಉತ್ತಮ ರೈತʼ ಎಂಬ ಅವಾರ್ಡ ಪಡೆದಿದ್ದಾನೆ. ವ್ಯವಸಾಯ ಮಾಡುವವನಿಗೆ, ವ್ಯಾಪರ
ಮಾಡುವವನಿಗೆ ಇಲ್ಲದ ರಿಟೈರ್‌ ಮೆಂಟು ಉದ್ಯೋಗಸ್ಥರಿಗೆ ಅಷ್ಟೇ ಯಾಕೆ? ನೀನು ಗೌರ್ಮೆಂಟ್‌
ಉದ್ಯೋಗದಿಂದ ರಿಟೈರ್‌ ಆಗಿರಬಹುದು. ನೀನು ಖಾಲಿಯಾಗಿಯೇ… ಇರಬೇಡ. ಇದೇ ಉದ್ಯೋಗ ಅಂತ
ಅಲ್ಲ. ಯಾವುದೋ ಒಂದು ಕೆಲಸ..ನಿನಗೆ ಅಭ್ಯಾಸವಾಗಿರುವುದನ್ನು ಆದಾಯ ನೀಡುವಂತದ್ದನ್ನು
ನೋಡಿಕೋ” ಎಂದು ವಿವರಿಸಿದ.
“ ನೀವೆನ್ನುವುದು ನಿಜವೇ ಆದರೆ ಆಸ್ತಿ ಸಂಪತ್ತು ಇಲ್ಲದ ನಾನೇನು ಮಾಡಬಲ್ಲೆನೋ?”
ವೆಂಕೋಬಿ ನಗುತ್ತಾ ಹೇಳಿದ.‌ “ ಎಂಭತ್ತು ವರ್ಷದ ಮುಖ್ಯಮಂತ್ರಿಗಳನ್ನ, ರಾಷ್ಟ್ರಪತಿಗಳನ್ನ,
ಎಪ್ಪತೈದರ ಪ್ರಧಾನ ಮಂತ್ರಿಗಳನ್ನ ನಮ್ಮ ದೇಶದೊಳಗೆ ನೀನು ನೋಡಿಲ್ಲವೇ? ಅದಕ್ಕಿಂತಾ
ಕಷ್ಟವಾದವಾ ನಾವು ಮಾಡುವ ಉದ್ಯೋಗ? ನೀನು ಟೀಚರ್‌ ಉದ್ಯೋಗ ಮಾಡಿದ್ದೀಯ.

ಮ್ಯಾಥಮೆಟಿಕ್ಸ,ಇಂಗ್ಲೀಷ್‌ ಚನ್ನಾಗಿ ಮಾಡುತ್ತೀಯ. ಚಿಕ್ಕದಾಗಿ ಸ್ಟಾರ್ಟ್ ಮಾಡು. ದಿನಾ ಒಂದು ಗಂಟೆ
ಟ್ಯೂಷನ್‌ ಹೇಳು. ಆನಂತರ ನಿನಗೆ ಕೆಲವು ಗಂಟೆ ಖಾಲಿ ಬೀಳದು”
ನಾನೂ… ಆಲೋಚಿಸಿದೆ!
ನನ್ನ ಗೆಳೆಯರು ಹೇಳಿದ್ದು ನಿಜವೇ . ಆದಾಯ ಇಲ್ಲದೇ ಹೋಗಿದ್ದರಿಂದಲೇ ಅಲ್ಲವೇ ನಾನು
ಬೇರೆಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲಾರದ್ದು,ಎಲ್ಲರಿಗೂ ಹಗುರಾಗಿರುವುದು ಎಂದುಕೊಂಡು ”
ಓಕೆ. ಕಣ್ರೋ! ನೀವು ಹೇಳಿದಂತೆಯೇ ಮಾಡುತ್ತೇನೆ” ಎಂದೆ. ಮಿತ್ರರ ಪೋನ್‌ ನಂಬರ್‌ ಗಳನ್ನ
ತೆಗೆದುಕೊಂಡೆ.
ಮೂವರೂ ಕಾರು ಹತ್ತಿದೆವು. ನನ್ನನ್ನು ಮನೆ ಬಳಿ ಇಳಿಸಿ ಅವರಿಬ್ಬರೂ ಹೊರಟುಹೋದರು.
***‌
ಮುಂಜಾನೆಯೇ ಓಡಾಡಿ ಒಂದುಬೋರ್ಡ ತಂದೆ. ʼಇಲ್ಲಿ ಮ್ಯಾಥಮೆಟಿಕ್ಸ,ಇಂಗ್ಲೀಷ್‌ ಟ್ಯಷನ್‌
ಹೇಳಲಾಗುವುದುʼ ಅಂತ ಬರೆದು,ಪ್ಲಾಟ್‌ ನಂಬರ್‌, ಫೋನ್‌ ನಂಬರ್‌ ಹಾಕಿ ಅಪಾರ್ಟಮೆಂಟ್‌ ಗೇಟಿಗೆ
ಹಾಕಿದೆ.
ವಾರ ಕಳೆದರೂ ಒಬ್ಬರೂ ಬರಲಿಲ್ಲ.ವಾರದ ನಂತರ ಪ್ಲಾಟ್‌ ನೊಳಗೆ ಇಬ್ಬರು ಮಕ್ಕಳನ್ನು ಅವರ
ಅಮ್ಮಂದಿರು ಎಳೆದುಕೊಂಡು ಬಂದು ಬಲವಂತವಾಗಿ ಕೂರಿಸಿದರು.
ಒಳ್ಳೆಯ ದಿನ ನೋಡಿ ಟ್ಯೂಷನ್‌ ಪ್ರಾರಂಭಿಸಿದೆ. ತಿಂಗಳು ಕಳೆಯುವುದರೊಳಗೇ ಹತ್ತು ಜನರಾದರು.
ಎರಡು ತಿಂಗಳೊಳಗೆ ಕೈಗೆ ಆರುಸಾವಿರ ಬರತೊಡಗಿತು! ಬಜಾರಿಗೆ ಹೋಗಿ ಬರುವಾಗ ಸೊಸೆಯ
ಹುಟ್ಟಿದ ದಿನಕ್ಕೆ ಒಂದು ಒಳ್ಳೆಯ ಸೀರೆ, ಮಗನಿಗೆ ವಾಚು, ಅನಿರುದ್ಧನಿಗೊಂದು ಚಂದದ ಗೊಂಬೆ, ಪತ್ನಿಗೆ
ಬಳೆಗಳು, ಹೂಗಳನ್ನು ಕೊಂಡು ತಂದೆ.ಅಂಗಡಿಯವನು ಮನೆಯೊಳಗೆ ಇಪ್ಪತೈದು ಕೇಜಿಯ ಅಕ್ಕಿ
ಮೂಟೆಯನ್ನು ತಂದು ಹಾಕಿದ.
ಮನೆ ಬಳಿ ಬಂದು ಚಪ್ಪಲಿ ಬಿಚ್ಚುತ್ತಾ….ನಿಂತಾಗ ಮಗನ ಮಾತು ಕೇಳಿಸಿತು. “ ಅಮ್ಮಾ! ಈ ಇಳಿಯ
ವಯಸ್ಸಿನೊಳಗೆ ಇವರು ಯಾಕೆ ಕಷ್ಟಪಡಬೇಕು? ಏನೋ ಇರುವುದರೊಳಗೇ ಹೊಂದಿಕೊಂಡರಾಗದೇ!
ನಾಳೆ ಬ್ಯಾಂಕ್‌ ಲೋನ್‌ ಬಂದೊಡನೆಯೇ ಅವರು ನೀಡಿದ ಹಣವನ್ನು ಕೊಟ್ಟುಬಿಡಬೇಕು. ಈ
ವಯಸ್ಸಿನೊಳಗೆ ಅವರ ಕೈಯೊಳಗೆ ಹಣವಿದ್ದರೇ ಅದೊಂದು ದೈರ್ಯ”
“ನಿಮ್ಮ ಅಪ್ಪನವರಿಗೆ ಆತ್ಮಾಭಿಮಾನ ಹೆಚ್ಚು ಎಂಬ ವಿಷಯ ನಿನಗೂ ಗೊತ್ತಲ್ಲಪ್ಪಾ! ಬದುಕಿರುವ
ತನಕ ನಾನು ಒಬ್ಬರಮೇಲೆ ಆಧಾರ ಪಡಬಾರದು. ನಾನೂ ಕಷ್ಟ ಪಡಬೇಕು ಅನ್ನೋದು ಅವರ

ಆಲೋಚನೆ. ರಿಟೈರ್‌ ಆದಾಗಿನಿಂದಲೂ ಅವರು ಏನನ್ನೋ ಕಳೆದುಕೊಂಡವರಂತೆ ಇದ್ದರು. ಈಗ
ನೋಡು ಅವರ ಮುಖದೊಳಗೆ ಅದೆಂತದೋ ಹೊಸ ಕಳೆ, ಉತ್ಸಾಹ ಬಂದಿದೆ “ ಹೇಳುತ್ತಿದ್ದಾಳೆ ಪತ್ನಿ.
ನಾನು ಸಣ್ಣಗೆ ಕೆಮ್ಮಿದೆ.
ಆ ಕೆಮ್ಮಿಗೆ ಅಮ್ಮ ಮಗ ಇಬ್ಬರೂ ಸಂಭಾಷಣೆಯನ್ನು ನಿಲ್ಲಿಸಿದರು.
“ ಅಮ್ಮಾ ಶಾಂತೀ! ಕಂದಾ… ಅನಿರುಧ್!”‌ ಅಂತಾ ಕೂಗಿದೆ.
ಶಾಂತಿ ಅಡುಗೆ ಮನೆಯೊಳಗಿಂದ ಕೈಗಳನ್ನು ತೊಳೆದುಕೊಳ್ಳುತ್ತಾ ಬಂದಳು. ಅನಿರುಧ್‌ ವೇಗವಾಗಿ
ಓಡಿಬಂದು “ ತಾತಯ್ಯಾ!” ಎನ್ನುತ್ತಾ ನನ್ನನ್ನ ತಬ್ಬಿ ಹಿಡಿದುಕೊಂಡನು. ತಂದ ಪ್ಯಾಕೇಟ್ ಶಾಂತಿಯ
ಕೈಗಳೊಳಗೆ ಇಟ್ಟೆ. ಅದೇನೋ ಗ್ರಹಿಸಿದ ಶಾಂತಿ “ ಏಕೆ ಮಾವಯ್ಯಾ! ಈಗ ಇವೆಲ್ಲಾ” ಎನ್ನುತ್ತಾ
ಪ್ಯಾಕೇಟ್‌ ತೆಗೆದುಕೊಂಡಳು. ಅನಿರುಧ್‌ ಗೊಂಬೆಯನ್ನು ಹಿಡಿದುಕೊಂಡು “ ಥ್ಯಾಂಕ್ಯೂ! ತಾತಾ!”
ಎನ್ನುತ್ತಾ ಸರ್ರನೆ ಓಡಿದ.
ಮಗನನ್ನು ಕರೆದು ವಾಚು ನೀಡಿದೆ. ಠೀವಿಯಲ್ಲಿ ನಮ್ಮ ಬೆಡ್‌ ರೂಮ್ ನೊಳಕ್ಕೆ ಹೋದೆ.ಮಲ್ಲಿಗೆ
ಹೂಗಳೂ,ಬಳೆಗಳನ್ನು ಪತ್ನಿಗೆ ನೀಡಿದೆ. ಆಕೆ ಹಿಗ್ಗಿನಿಂದ ನನ್ನ ಕಡೆ ನೋಡಿದಳು.
ತಿಂಗಳು… ತಿಂಗಳೂ … ಟ್ಯೂಷನ್‌ ಮಕ್ಕಳುಗಳಿಂದ ತುಂಬಿತು. ಆದಾಯ ಕೂಡಾ
ಬೆಳೆಯತೊಡಗಿತು.ಕ್ಷಣವೂ… ಬಿಡುವು ಇರಲಾಗುತ್ತಿಲ್ಲ.ಆಗಾಗ ಮನೆಯ ಎಲ್ಲರಿಗೆ ಏನಾದರೂ
ಒಂದನ್ನು ಕೊಡಿಸತೊಡಗಿದೆ. ಚಿಕ್ಕ ಕ್ಲಾಸಿನವರಿಗೆ ಹೇಳುವುದು ಕಡಿಮೆಮಾಡಿ ಟೆನ್ತ ಕ್ಲಾಸ್‌ ನವರಿಗೇ
ಬೆಳಗ್ಗೆ ಎರಡು ಬ್ಯಾಚ್‌ ಗಳು, ಸಂಜೆ ಎರಡು ಬ್ಯಾಚ್‌ ಗಳನ್ನು ಹೇಳತೊಡಗಿದೆ.ಊರಲ್ಲಿ ಶಂಕರ್‌
ಮಾಸ್ಟರ್‌ ಟ್ಯೂಷನ್‌ ಎಂದರೆ ಎಂತಹವರಾದರೂ ತೊಂಭತ್ತು ಪರ್ಸೆಂಟ್‌ ಗ್ಯಾರಂಟಿ ಎನ್ನೋ ವಿಶ್ವಾಸ
ಏರ್ಪಟ್ಟಿದೆ.
ಕಾರ್ಪೋರೇಟ್‌ ಸ್ಕೂಲ್‌ ನಿಂದ ಆಹ್ವಾನಗಳು ಬರುತ್ತಿವೆ. “ನಿಮ್ಮ ಲಾಸ್ಟ್‌ ಪೇ ಗಿಂತಲೂ ಎರಡು
ಪಟ್ಟು ನೀಡುತ್ತೇವೆ ಎನ್ನುತ್ತಿದ್ದಾರೆ.”
ಆ ದಿನ ಭಾನುವಾರ. ಟ್ಯೂಷನ್‌ ಗೆ ರಜೆ ಇದ್ದರಿಂದ ನಾರಾಯಣಸ್ವಾಮಿಗೆ, ವೆಂಕೋಬಿಗೆ ಪೋನ್‌
ಮಾಡಿದೆ. ಸಾಯಂಕಾಲ ಮೂವರೂ ನದೀ ತೀರದಲ್ಲಿ ಕೂಡಿಕೊಂಡೆವು. “ ಏನಪ್ಪಾ ಶಂಕರ್?‌ ಏನು
ವಿಶೇಷ?” ಎಂದನು ನಾರಾಯಣ ಸ್ವಾಮಿ.‌

“ ನೀವು ಆ ದಿನ ಸಿಗದೇ ಹೋಗಿದ್ದರೆ!?, ಈ ಶಂಕರ್‌ ಈ ದಿನ ಹೀಗೆ ಇರುತ್ತಿರಲಿಲ್ಲ
ಕಣ್ರಯ್ಯಾ…ನಿಮ್ಮ ಸಲಹೆ ಪಾಲಿಸಿದೆ. ಶ್ರಮಕ್ಕೆ ತಕ್ಕ ಆದಾಯವು ಕೂಡಾ ಬರುತ್ತಿದೆ. ಈಗ
ಉಸಿರಾಡಲಿಕ್ಕೂ ಕೂಡಾ ಖಾಲಿ ಇಲ್ಲಪ್ಪಾ” ಎಂದು ನಕ್ಕೆ.
“ ಅದರದೇನಿದೆ ಬಿಡು ಗೆಳೆಯಾ….ನಮಗೆ ತೋಚಿದ್ದನ್ನು ಹೇಳಿದೆವು. ಹಿತವಚನವನ್ನು ಎಲ್ಲರೂ
ಆಚರಿಸಲಾರರು. ನೀನು ಆಚರಿಸಿದೆ. ಫಲಿತವನ್ನೂ ಆಸ್ವಾದಿಸುತ್ತಿದ್ದೀಯ” ಎಂದ ನಾರಾಯಣಸ್ವಾಮಿ.
“ ‌ ಗೆಳೆಯರೇ….ನನಗೆ ಈಗ ನಿಮ್ಮ ಸಲಹೆ ಬೇಕು. ಕಾರ್ಪೋರೇಟ್‌ ಕಂಪನಿಯವರು ಕೊನೆಯ
ಸ್ಯಾಲರಿಗಿಂತಲೂ ಎರಡು ಪಟ್ಟು ನೀಡುತ್ತೇವೆಂದು ಕೇಳುತಿದ್ದಾರೆ” ಏನು ಮಾಡಬೇಕೋ…
ನಿರ್ಧರಿಸಲಾಗುತ್ತಿಲ್ಲ”
“ನೋಡಪ್ಪಾ…ನೌಕರಿಯಿಂದ ರಿಟೈರ್‌ ಆದ ನೀನು ಈಗ ಟ್ಯೂಷನ್‌ ಹೇಳುತ್ತಿದ್ದೀಯ. ಮತ್ತೆ
ಪ್ರವೇಟ್‌ ವ್ಯಕ್ತಿಗಳ ಕೆಳಗೆ ಕೆಲಸ ಮಾಡುವುದು… ಅದೂ ಈ ವಯಸ್ಸಿನೊಳಗೆ!, ಅಷ್ಟು ಸುಲಭ ಅಂತ
ನಾನು ಭಾವಿಸಲಾರೆ.ರಕ್ತ ಸಂಬಂಧಿಗಳ ಮಾತುಗಳಿಗೇ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಆವೇಶ
ಬಿದ್ದವನು ನೀನು, ಹೊರಗಿನವರ ಒತ್ತಡಗಳಿಗೆ ಯಾವ ದಿನವಾದರೂ ರಿಜೈನ್‌ ಮಾಡಿಬಿಡುತ್ತೀಯ. ಆಗ
ನಿನ್ನ ಪರಿಸ್ಥಿತಿ ಏನು? ಮತ್ತೊಮ್ಮೆ ಮಕ್ಕಳನ್ನ ಕೂಡಿಹಾಕಿ ಟ್ಯೂಷನ್‌ ಗಳನ್ನ ಮಾಡಲಾರೆ ನೋಡು ”
ಎಂದನು ವೆಂಕೋಬಿ.‌
“ ನನ್ನದೊಂದು ಚಿಕ್ಕ ಸಲಹೆ” ಎಂದ ನಾರಾಯಣ ಸ್ವಾಮಿ.‌
ಇಬ್ಬರೂ ನಾರಾಯಣ ಸ್ವಾಮಿ ಕಡೆಗೆ ನೋಡಿದರು. “ಹೊಸ ಕಾನ್ಸೆಪ್ಟನೊಂದಿಗೆ ನೀನೇ ಯಾಕೆ
ಒಂದುಸ್ಕೂಲ್‌ ನ್ನ ಶುರುಮಾಡಬಾರದು? ಮಾನಸಿಕ ಒತ್ತಡ ಇಲ್ಲದ, ಆಡುತ್ತಾ, ಹಾಡುತ್ತಾ ಓದಿಸುವ
ಸ್ಕೂಲು ಯಾಕೆ ತೆರೆಯಬಾರದು?, ಜೀವನದ ಪಾಠಗಳನ್ನು ಕಲಿಸೋ ಸ್ಕೂಲ್‌ ಯಾಕೆ ಶುರು
ಮಾಡಬಾರದು!? ಆಗ ನೀನೇ ಹತ್ತು ಜನಕ್ಕೆ ಉದ್ಯೋಗ ನೀಡಬಹುದು. ಎಷ್ಟೋ ಬಡ ಮಕ್ಕಳಿಗೆ
ಉಚಿತವಾಗಿ ಓದಿಸಬಹುದು” ಎಂದನು.
“ ಸ್ಕೂಲ್‌ ಸ್ಟಾರ್ಟ ಮಾಡುವುದು ಸಣ್ಣ ಮಾತೇ? ನನಗಂತಹ ಶಕ್ತಿ ಇದೆಯಾ?” ಎಂದು ಕೇಳಿದೆ.
“ ನಿನಗೆ ಇರದೆ ಹೋದರೆ ಏನು, ನಾನು ಹೇಳಿದ್ದೆನಲ್ಲವೇ? ನಾನು ಇಂಡಸ್ಟ್ರೀ ಗಾಗಿ ಸಿಟಿ ಹತ್ತಿರ ಹತ್ತು
ಎಕರೆಯ ಸ್ಥಳವನ್ನು ಕೊಂಡಿರುವೆ ಎಂದು. ಅದರೊಳಗೆ ನಾವು ಒಂದು ಸ್ಕೂಲ್‌ ಮಾಡೋಣ. ನೀನು,
ನಾನು ವೆಂಕೋಬಿ. ನಾವು ನಿನಗೆ ಎಲ್ಲಾ‌ ವಿಧಗಳ ಸಹಕಾರವನ್ನು ನೀಡುತ್ತೇವೆ. ಇಡೀ ಸ್ಕೂಲ್‌ ನಿನ್ನ
ಆಧೀನದಲ್ಲಿರುತ್ತದೆ. ಏನಂತೀಯ?” ಎಂದನು ನಾರಾಯಣ ಸ್ವಾಮಿ.‌
ನನ್ನ ಆನಂದಕ್ಕೆ ಪಾರವೇ ಇಲ್ಲದಾಯಿತು.

“ ನಿಮಗೆ ನನ್ನ ಮೇಲೆ ಅಷ್ಟು ನಂಬಿಕೆ ಇರುವುದಕ್ಕೆ ಥ್ಯಾಂಕ್ಸ ಕಣ್ರೋ.. ನಿಮ್ಮ ನಂಬಿಕೆಯನ್ನ
ಈಡೇರಿಸುತ್ತೇನೆ.” ಎಂದು‌ ನಾರಾಯಣ ಸ್ವಾಮಿಯ ಎರಡೂ ಕೈಗಳನ್ನು ಹಿಡಿದುಕೊಂಡೆ, ನನ್ನ
ಸಪೋರ್ಟ ಕೂಡಾ ಇರುತ್ತದೆ ಎನ್ನುವ ಸಂಕೇತದಂತೆ ವೆಂಕೋಬಿ ಕೂಡಾ ತನ್ನ ಎರಡೂ ಕೈಗಳನ್ನು
ಕೂಡಿಸಿದ.
ಅಂದುಕೊಂಡಹಾಗೆ ಆರು ತಿಂಗಳ ಒಳಗೇ ಹೊಸ ಕಾನ್ಸೆಪ್ಟ್‌ ಮೂಲಕ ಕಾರ್ಪೋರೇಟ್‌ ಸ್ಕೂಲ್‌
ಗಳಿಗಿಂತಲೂ… ಭಿನ್ನವಾದ ಸ್ಕೂಲ್‌ ಪ್ರಾರಂಭವಾಯಿತು. ಒಂದು ಕ್ಷಣವೂ ಪುರುಸೊತ್ತಿಲ್ಲ. ಈಗ
ಮನೆಯವರ ಪ್ರವರ್ತನೆಗಳಲ್ಲೂ ಎಷ್ಟೋ ಬದಲಾವಣೆ ಬಂದಂತೆ ಕಾಣುತ್ತಿದೆ.
ಒಂದು ದಿನ ನಾರಾಯಣ ಸ್ವಾಮಿ, ವೆಂಕೋಬಿ ಕೇಳಿದರು-
“ ಹೇಗಿದೆಯಪ್ಪಾ ನಿನ್ನ ಮನೆಯ ಪರಿಸ್ಥಿತಿ!” ಅಂತ.
“ಈಗ ತುಂಬಾ ಗೌರವದಿಂದ ನೋಡುತಿದ್ದಾರಪ್ಪಾ! ಒಂದು ಕಾಲಕ್ಕೆ ಯಾವ ಮೆನೆಯೊಳಗೆ
ಪರಕೀಯನಾಗಿದ್ದೆನೋ ಈಗ ಅದೇ ಮನೆಯೊಳಗೆ ವಿ.ಐ.ಪಿ. ಆಗಿದ್ದೇನೆ. ಅವರೊಳಗೆ ತುಂಬಾ ಬದಲಾವಣೆ
ಬಂದಿದೆ” ಎಂದೆ.
“ ಒಂದು ಮಾತು ಹೇಳಲಾ? ನಿಮ್ಮ ಮನೆಗೆ ಬಂದು ನಿಮ್ಮ ಮನೆಯವರೊಂದಿಗೆ ಮಾತನಾಡಿದೆನು.
ನಿಜಕ್ಕೂ ಅವರಿಗೆ ನೀನೆಂದರೆ ತುಂಬಾ ಗೌರವ. ಅದು ಅಂದಿಗೂ ಇಂದಿಗೂ ಒಂದೇ ಥರ ಇತ್ತು.
ಬದಲಾವಣೆ ಬಂದದ್ದು ನಿನ್ನೊಳಗೆ. ಯಾವೊತ್ತು ನೀನು ಖಾಲಿಯಾಗಿ ಇದ್ದೆಯೋ ಆಗ ನಿನ್ನೊಳಗೆ
ಆತ್ಮಹತ್ಯೆಯ ಭಾವ ಬಂದಿತ್ತು. ಎಲ್ಲರೂ ನಿನ್ನನ್ನು ಅವಮಾನಿಸುತ್ತಾರೆ ಅನ್ನೋ ಭಾವನೆ ಮೂಡಿತ್ತು.
ವೃದ್ಧಾಪ್ಯದ ಲಕ್ಷಣಗಳು ಬಂದವು.
ಯಾವಾಗ ನೀನು ದೊಡ್ಡ ಆದಾಯವನ್ನು ಸೃಷ್ಟಿಸಿಕೊಂಡೆಯೋ ನಿನ್ನೊಳಗೆ ಆತ್ಮ ವಿಶ್ವಾಸ
ಮೂಡಿತು. ಗೌರವ,ಉತ್ಸಾಹಗಳು ಏರ್ಪಟ್ಟವು. ನಿನ್ನ ಆಲೋಚೆನೆಯ ವಿಧಾನವೂ
ಬದಲಾಯಿತು.ನಿನ್ನೊಳಗೆ ಪಾಜಿಟಿವ್‌ ಥಿಂಕಿಂಗ್‌ ಬಂದಿತು. ಕುಟುಂಬದೊಳಗೆ ಕೆಲಸ ಇರುವವನಿಗೆ,
ಇರದವನಿಗೆ ಒಂದೇ ಪ್ರಯಾರಿಟಿ ಇರದು.
ಪ್ರಪಂಚದೊಳಗೆ ಯಾರೂ ನಮಗಾಗಿ ಬದಲಾಗರು. ನಾವೇ ಬದಲಾಗಬೇಕು. ಪ್ರತಿಯೊಂದನ್ನೂ
ಪಾಜಿಟಿವ್‌ ಆಗಿ ಆಲೋಚಿಸಿದರೆ ಯಾವುದೇ ಘರ್ಷಣೆಗಳಿರವು. ಪತ್ನಿ ಮಕ್ಕಳು ಕುಟುಂಬದೊಳಗೇ ಅಲ್ಲ
ಈ ಸಮಾಜದೊಳಗೆ ಕೂಡಾ ಎಲ್ಲರೂ ಒಳ್ಳೆಯವರಾಗಿಯೇ ಕಾಣುತ್ತಾರೆ.ಹೇಳಿದನು ನಾರಾಯಣ
ಸ್ವಾಮಿ.ನಾನು ನಾರಾಯಣ ಸ್ವಾಮಿಯ ಮಾತಿನೊಳಗಿನ ನಗ್ನಸತ್ಯವನ್ನು ಗ್ರಹಿಸಿದೆ.

  


Leave a Reply

Back To Top