ಮಳೆಗಾಲದ ಹಸಿ ಪ್ರೇಮಪತ್ರ…
ಆಶಾಜಗದೀಶ್
ಯಾರೋ ಹುಡುಗ ಹೇಳಿದನಂತೆ ತನ್ನ ಹುಡುಗಿಗೆ, “ಹೋಗಿ ಮಳೆಯ ಹನಿಗಳನ್ನು ಎಣಿಸು.. ನಾ ನಿನ್ನನ್ನು ಅಷ್ಟು ಪ್ರೀತಿಸುತ್ತೇನೆ” ಎಂದು. ನನ್ನ ಅದೆಷ್ಟೋ ಸಂದರ್ಭಗಳ ಪ್ರೇಮದ ಉತ್ಕಟತೆಗೆ ಮಾತಾಗಿ ನಿಂತಿತ್ತು ಈ ಕಥೆ. ಏನೊಂದು ಹೇಳದೆಯೂ “ನನ್ನ ಪ್ರೀತಿ ಇದು” ಎಂದು ಹೇಳಿದ ಮೌನ ಮಾತಾಗಿತ್ತು ಈ ಕಥೆ. ಅರೆ… ಆ ಹೆದ್ದಾರಿಯ ಮಗ್ಗುಲ ಕಾಲುದಾರಿಯ ಪೊದೆಗೆ ಎಲ್ಲ ಗೊತ್ತಿದೆ. ನಾವು ಹೃದಯವನ್ನು ಹಂಚಿಕೊಳ್ಳುತ್ತಾ ನಮ್ಮ ಆತ್ಮಗಳನ್ನು ಒಂದಾಗಿಸಿದ್ದನ್ನು ಕಂಡಿದೆ ಅದು. ನೋಯಿಸುವಷ್ಟು ತೀವ್ರ ಮಳೆಯಲ್ಲಿ ಕಂಗಾಲಾಗಿ ಅಳುತ್ತಾ ನಮ್ಮ ತೆಕ್ಕೆಗಳನ್ನು ಬಿಡಿಸಿಕೊಂಡು ಮನೆದಾರಿ ಹಿಡಿದಿದ್ದಕ್ಕೆ ಸಾಕ್ಷಿಯಾಗಿದೆ ಅದು. ಮತ್ತೆ ಒಂದಾಗುವ ತೀವ್ರ ಭಾವದಲ್ಲಿದ್ದೂ ಇನ್ನೊಂದೇ ಒಂದು ಹೆಜ್ಜೆಯನ್ನು ಬೇಕಂತಲೇ ಮರೆತು ನಡೆದದ್ದು ಅದರ ಮುಂದೆಯೇ. ನನ್ನ ಸಿಂಧೂರ ಹಣೆಯ ಮೇಲಿಂದ ಅತ್ತು ಇಳಿದದ್ದು ಇಂಥದೇ ಒಂದು ಹುಚ್ಚು ಮಳೆಯಲ್ಲಿ. ಹೇಳಲು ಮರೆತ ಮಾತೊಂದನ್ನು ಉಸುರಲು ನಿಂತ ಕಣ್ಣಂಚಿನ ಹನಿಯೊಂದನ್ನು ತೊಳೆದು ಅಳಿಸಿಬಿಟ್ಟಿದೆ ಈ ಮಳೆ. ಮತ್ತೆ ನಮ್ಮ ಕಣ್ಣುಗಳು ಆಡಿಕೊಳ್ಳುತ್ತಿದ್ದ ಮಾತುಗಳೆಷ್ಟೋ ಕೊಚ್ಚಿ ಹೋದದ್ದೂ ಇದೇ ಮಳೆಯಲ್ಲಿ… ಹಾಗಾಗಿ ಸುಮ್ಮನೇ ಮಳೆಯೊಂದರ ಮುಂದೆ ಕೂತು ಬಿಟ್ಟರೂ ಸಾಕು ನಿನ್ನ ಮಿಸುಗಾಟವೂ ನೆನಪಾಗತೊಡಗುತ್ತದೆ ನನಗೆ. ಮತ್ತೆ ಮಳೆಯೆನ್ನುವ ಮಾಯಾವಿಯ ಮುಂದೆ ಮಂಡಿಯೂರಿ ಸೆರಗೊಡ್ಡಿ ನಿನ್ನ ಪ್ರೇಮದ ತುಣುಕೊಂದನ್ನು ಬೇಡಿದ ಘಳಿಗೆ ಮತ್ತೆ ಮತ್ತೆ ನೆನಪ ಮೂಟೆ ಹೊತ್ತು ತರುವ ಮಹಾನ್ ಮಳೆರಾಯನ ಆಗಮನದಿಂದ ಮತ್ತೆ ಮತ್ತೆ ನವೀಕರಣಗೊಳ್ಳುತ್ತಾ ಬಂದಿದೆ…
ಆದರೆ ನಮ್ಮ ನಿಲುವುಗಳು ಯಾವ ಗಟ್ಟಿ ಬುನಾದಿಯ ಮೇಲೆ ನಿಂತಿರುತ್ತವೋ, ಅವೇ ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುತ್ತವೆ. ಅಂತಹ ಒಂದು ಗಟ್ಟಿ ನಿಲುವೇ ನಮ್ಮ ಆಯ್ಕೆಗಳ ವಿಷಯದಲ್ಲೂ ಕೆಲಸ ಮಾಡಿರುವುದು. ಪ್ರೀತಿಯೂ ತನ್ನ ನಿಲುವಿನ ಮೇಲೆ ತಾನು ನಿಲ್ಲುತ್ತದೆ. ಹೃದಯದ ಬುನಾದಿಯ ಮೇಲೆ ಸೌಧ ಕಟ್ಟುತ್ತದೆ. ಕೆಸರಿನಲ್ಲಿ ನಾಟಿದ ಭತ್ತದ ಸಸಿಯ ತಪಸ್ಸಿನಷ್ಟೇ ಘೋರ ತಪಸ್ಸೊಂದು ಪ್ರೇಮವನ್ನು ಇನ್ನಿಲ್ಲದಂತೆ ಪೊರೆಯುತ್ತಿರುತ್ತದೆ. ದೈಹಿಕ ಆಸೆಯೊಂದೇ ಇಷ್ಟು ದೂರ ಪೊರೆದು ನಡೆಸಲಿಕ್ಕೆ ಹೇಗಾದರೂ ಸಾಧ್ಯ! ಜಗತ್ತನ್ನು ಎತ್ತಿ ನಿಲ್ಲಿಸಿರುವ, ಜೀವಿ ಜೀವಿಗಳ ಬೆಸೆವ ಪ್ರೇಮ, ಭೂಮಿಯನ್ನು ತಲುಪದೇ ಪೈರು ಪಚ್ಚೆಯಾಗುವುದಾದರೂ ಹೇಗೆ?! ಜೀವದ ಹಂಗು ತೊರೆದು ಹೆಣೆದ ಹೆಜ್ಜೆಗಳ ಸಾಲು, ಅವನ ಮನೆಯ ಕದ ತಟ್ಟಬೇಕಿದೆ. ಮನೆಯ ಕದದಷ್ಟೇ ಅವನ ಎದೆ ಕದವೂ ಕದಲುವುದನ್ನು ಕಂಡು ಹುಚ್ಚೆದ್ದು ಕುಣಿಯಬೇಕಿದೆ. ಕಾರ್ಮೋಡ ಕಂಡು ಗರಿ ಬಿಚ್ಚಿ ಕುಣಿವ ನವಿಲಿನಂತೆ. ಪ್ರತಿ ಗಂಡೂ ಭೂಮಿಯಂತೆ ಎದೆಸೆಟೆಸಿ ನಿಲ್ಲುತ್ತಾನೆ, ಕಣ್ಣೀರ ನುಂಗಿ ನಸು ನಗುತ್ತಾನೆ. ಪ್ರತಿ ಹೆಣ್ಣೂ ಮಳೆಯಂತೆ ನವಿರಾಗಿ, ಕೋಮಲವಾಗಿ ಸ್ಪರ್ಷಿಸುತ್ತಾಳೆ, ನೋವನ್ನು ಮರೆಸುತ್ತಾಳೆ, ಭೂಮಿಯುದರದಲ್ಲಿ ಜೀವದ ಫಲವಾಗಿ ಫಲಿಸುತ್ತಾಳೆ. ಇಳೆ ಮಳೆಯ ನಂಟು ತನ್ನ ಮಜಲುಗಳನ್ನು ಹಾಯುತ್ತಾ ಸಾಗುತ್ತಲೇ ಹೋಗುತ್ತದೆ. ಬಹುಶಃ ಇದರಿಂದಲೇ ಪ್ರೇಮವೆನ್ನುವುದು ಹುಟ್ಟಿದ್ದಿರಬೇಕು. ಬತ್ತದ ಪ್ರೇಮದ ತಿಳಿಕೊಳವೊಂದು ಪ್ರೇಮಿಗಳ ಉಡಿ ತುಂಬಿ ಕಳಿಸುತ್ತಿರಬೇಕು. ನಾವು ನಮ್ಮ ಕೈಗಳ ಮೇಲೆ ಅಚ್ಚೆ ಹೊಯ್ಸಿಕೊಳ್ಳುವಾಗಲೂ ಹೃದಕ್ಕಿಳಿಯುವ ಬಣ್ಣಕ್ಕಾಗಿ ಹುಚ್ಚು ಮಳೆಯಲ್ಲಿ ಹುಡುಕಾಡಿದ್ದೆವು. ಹುಡುಕಾಟದ ಕೊನೆಯಲ್ಲಿ ಬರಿಗೈ! ಕೊನೆಗೆ ಅರ್ಥವಾದ ಸತ್ಯವೆಂದರೆ ಅವು ಅಗೋಚರ ಬಣ್ಣಗಳು ಎಂದು.
ಆದರೆ ಕಾಣುವ ಕಾಮನ ಬಿಲ್ಲಿನ ಚೂರುಗಳು ನಿನ್ನ ಕಾಮನೆಗಳ ಫಲ ಎನಿಸುವಾಗೆಲ್ಲ ನೀನು ನಡುರಸ್ತೆಯಲ್ಲಿ ಕೊಟ್ಟ ಮುತ್ತುಗಳ ಲೆಕ್ಕ ತಪ್ಪುತ್ತಲೇ ಇದೆ. ಮತ್ತೆ ಅವನ್ನೆಲ್ಲ ಈ ಹಸಿ ಮಣ್ಣಿನ ವಾಸನೆಯಲ್ಲಿ ಜೋಪಾನವಾಗಿ ಬಚ್ಚಿಟ್ಟಿದ್ದೇನೆ. ಮತ್ತೆ ನಿನಗೆ ಗೊತ್ತಾ… ಮಳೆಗಾಲದ ಹಸಿ ನೆಲದಲ್ಲಿ ಇದ್ದಕ್ಕಿದ್ದಂತೆ ಎನ್ನುವ ಹಾಗೆ ಕಾಣಿಸಿಕೊಳ್ಳುವ ನಂಜುಳಗಳು ಆ ಮುತ್ತುಗಳ ಮೇಲೆಲ್ಲಾ ಪುಳುಪುಳು ಓಡಾಡುತ್ತಾ ಕಚಗುಳಿ ಇಡುತ್ತಿವೆಯಂತೆ. ನನಗೆ ಸುಮ್ಮಸುಮ್ಮನೇ ನಗು ಬರುತ್ತದೆ. ಯಾರನ್ನೂ ಕಣ್ಣಿಟ್ಟು ನೋಡಲಾಗದು. ದೃಷ್ಟಿ ನೆಲ ನೋಡುತ್ತದೆ. ಕಾಲ ಹೆಬ್ಬೆರಳ ರಂಗೋಲಿಯಲೂ ನಿನ್ನದೇ ಹೆಸರು. ಚಡಪಡಿಸುವ ಕೈಬೆರಳ ತುದಿಯಲ್ಲಿ ನನ್ನ ಕೂದಲೆಳೆ. ಹಗಲುಗನಸಿಗೆಳೆಸುವ ಕೆಂಪು ನಾಚಿಕೆ. ಹೇಳು ನೀನ್ಯಾರು? ಪ್ರೇಮವೆನ್ನುವುದು ಪ್ರಕೃತಿಗೆಷ್ಟು ಸಹಜವೋ ಅದರದೇ ಭಾಗವಾದ ನಮ್ಮಂತಹ ಹುಲು ಮಾನವರಿಗೂ ಸಹ. ಅದು ನೆನ್ನೆ ಇತ್ತು, ಇಂದು ಇದೆ, ಮತ್ತೆ ನಾಳೆ ಇರುತ್ತದೆ. ಆದರೆ ಅದನ್ನು ಮೀರಿದವನು ನೀನು. ಹೇಳು ನೀನ್ಯಾರು? ಭಾಷೆಯೊಂದು ನಿನ್ನ ಮುಂದೆ ಸೋತು ಶರಣಾಗುತ್ತಿದೆ. ಅದಕ್ಕೆ ನಿಲುಕುತ್ತಿಲ್ಲ ನೀನು. ಹೇಳೋ ಪ್ಲೀಸ್ ನೀನ್ಯಾರೋ??? ನಿನ್ನ ಅನಾಮಿಕತನವೂ ಆಪ್ಯಾಮಾನವಾಗಿದೆ. ಮತ್ತು ಸೋಲುವುದರ ರುಚಿ ಉಣಿಸುತ್ತಿದೆ.
ಆದರೆ ನನಗೆ ಅಂದು ನೀನು ಬಯಲ ಏಕಾಂತದಲಿ ಮಳೆಯ ಹೊಡೆತಕ್ಕೆ ಎದೆಯೊಡ್ಡಿ ನಿಂತು, ನೀನು ನೀನಾಗಲ್ಲದೆ, ನಿನ್ನನ್ನು ಇಂಚಿಂಚೇ ಕಳೆದುಕೊಳ್ಳುತ್ತಾ ಅತ್ತದ್ದು ನೆನಪಾಗುತ್ತದೆ. ಖಾಲಿ ಇರುವ ನಿನ್ನ ಎದೆಯ ತೋರಿಸುತ್ತಾ ಅಲ್ಲಿ ನನ್ನನ್ನು ಆ ಕ್ಷಣವೇ ಪ್ರತಿಷ್ಟಾಪಿಸಿ ಆವಾಹಿಸಿಕೊಳ್ಳುವ ನಿನ್ನ ಉಳಿವಿನ ತುರ್ತನ್ನು ಅಳುವಿನ ಭಾಷೆಯಲ್ಲಿ ಹೇಳುತ್ತಿದ್ದುದ್ದನ್ನು ಕಂಡೂ ಅಸಹಾಕಳಾಗಿ ನಿಂತ ನನಗೆ, ಭೂಮಿ ಬಾಯ್ಬಿಡುವುದೇ ಸೂಕ್ತ ಎನಿಸಿತ್ತು. ಅವತ್ತು ನಾವಿಬ್ಬರೂ ಆಡಿದ್ದ ಮಾತುಗಳಷ್ಟೂ ಸತ್ತು ಹೋಗಿದ್ದವು. ಕಡು ವಿಷಾದ ಮಾತ್ರ ಹೆಪ್ಪುಗಟ್ಟಿತ್ತು. ಆದರೆ ಒಂದಾಗುವ ಸಮಯಕ್ಕೆ ಕಾಯುತ್ತಿದ್ದ ನಮ್ಮ ದಾರಿಗಳು, ಸಧ್ಯ ನಾವು ಮರಳಬೇಕಿರುವ ನಮ್ಮ ನಮ್ಮ ಪ್ರತ್ಯೇಕ ದಿಕ್ಕು ದಿಸೆಗಳನ್ನು ನೆನಪಿಸುತ್ತಿದ್ದವು. ನಾವಿಬ್ಬರೂ ಕ್ಷಣಗಳನ್ನು ಮುಂಗಾರಿನ ಹನಿಗಳಂತೆ ನಮ್ಮ ನಮ್ಮ ಬೊಗಸೆಯಲ್ಲಿ ತುಂಬಿಕೊಂಡು ವಿರುದ್ಧ ದಿಕ್ಕಿನಲ್ಲಿ ಹೊರಟುಹೋಗಿದ್ದೆವು. ಒಮ್ಮೆಯೂ ಹಿಂತಿರುಗಿ ನೋಡದೆ. ಆದರೆ ಬೆನ್ನುಗಳಲ್ಲಿ ಕಣ್ಣು ಮೂಡಿದ್ದು ಇಬ್ಬರಿಗೂ ತಿಳಿದಿದ್ದ ಆದರೆ ಒಬ್ಬರಿಂದೊಬ್ಬರು ಮುಚ್ಚಿಟ್ಟ ವಿಚಾರವಷ್ಟೇ…
ಇದೆಲ್ಲವನ್ನೂ ನೆನೆಯುತ್ತ ಕೂತಿರುವ ನನ್ನ ಮುಂದೆ ಏನೊಂದೂ ಕಾಣಿಸದಷ್ಟು ಜೋರು ಸುರಿಯುತ್ತಿದೆ ಮಳೆ. ಮಳೆಯ ನೀಳ ಸಮತಲದ ಮೇಲೆ ನಿನ್ನ ಚಹರೆಯನ್ನೊಮ್ಮೆ ಹುಡುಕುತ್ತೇನೆ. ಕಾಣಿಸದಾಗ ಮಳೆಯ ಬಿರುಸಿನ ನಡುವೆ ನಿನ್ನ ಮುಖವನ್ನು ಕಾಣಲೇ ಬೇಕೆಂದು ರಚ್ಚೆ ಹಿಡಿಯಬೇಕೆನಿಸುತ್ತದೆ. ಹುಚ್ಚಿಯಂತೆ ಅಲೆಯುತ್ತಾ ಹೊರಟುಬಿಡಬೇಕು ಎನಿಸುತ್ತದೆ. ನೀನು ಸಿಕ್ಕಲ್ಲದೇ ಮರಳಲೇ ಬಾರದು ಎನಿಸುತ್ತದೆ. ಮಳೆಯ ಈ ದಿನಗಳು ಮುಗಿಯುವುದರೊಳಗಾಗಿ ನಾವಿಬ್ಬರೂ ಮತ್ತೆ ಯಾಕೆ ಎದುರು ಬದರಾಗಬಾರದು?! ತಬ್ಬಿ ನಿಲ್ಲಬಾರದು?! ಮತ್ತೆ ನಮ್ಮ ಹಾದಿಗಳನ್ನು ದಿಕ್ಕುಗಳನ್ನು ಏಕೆ ಒಂದಾಗಿಸಬಾರದು?! ನಮ್ಮನ್ನು ಸದಾ ಹಿಡಿದಿಡುವ ಸಾಂಗತ್ಯ, ಸಹಚರ್ಯವೊಂದನ್ನು ಮಳೆಯ ಹನಿಗಳಲ್ಲಿ ಏಕೆ ಹರಳುಗಟ್ಟಿಸಬಾರದು?!
ಪರಿಣಾಮ ನಿನ್ನ ನಗು ಸಹಜವಾಗುತ್ತದೆ. ನನ್ನ ಒಂದೊಂದು ಸೆಕೆಂಡುಗಳ ಅರ್ಥ ಮರಳುತ್ತದೆ. ನಿನ್ನ ಎದೆ ಸಮಾಧಾನದ ಸಾಗರವಾಗುತ್ತದೆ. ನನ್ನ ಅಂತಃಕರಣ ಹಸಿಯಾಗುತ್ತದೆ. ಮುಂಗಾರು ಕಳೆಯುವುದರೊಳಗಾಗಿ ಅಲ್ಲೊಂದು ಪುಟ್ಟ ಹಾಲು ಗಲ್ಲದ ಸಸಿ ತಂದು ನೆಟ್ಟು ಅದರ ಬೆಳವಣಿಗೆಯಲ್ಲಿ ನಮ್ಮ ಪ್ರೇಮದ ಯಶೋಗಾಥೆ ಬರೆಯೋಣ. ಏನಂತಿ?
ಅಲ್ಲ ಕಣೋ ಮಾರಾಯ್ನೇ… ಯಾವ ಬೇಲಿಯೂ ಶಾಶ್ವತವಲ್ಲ. ಬೇಲಿಯನ್ನು ದಾಟುವುದು ಸುಲಭವೂ ಅಲ್ಲ. ಆದರೆ ಪ್ರೇಮಕ್ಕೆ ಬೇಲಿ ಕಟ್ಟಲು ಹೊರಟವರು ಸೋಲಬೇಕಲ್ಲದೆ ಪ್ರೇಮವೆಂದಾದರೂ ಸೋಲುತ್ತದಾ? ಮತ್ತೆ ನಮ್ಮ ಪ್ರೇಮದ ಮುಂದೆ ಬೇಲಿಯೆನ್ನುವ ತೃಣಮಾತ್ರದ ಅಡೆತಡೆಗೆ ನಮ್ಮ ಓಟವನ್ನು ಕಟ್ಟಿಹಾಕುವ ಶಕ್ತಿ ಎಲ್ಲಿಂದಾದರೂ ಬರಬೇಕು?! ದೈಹಿಕ ನೋವಿಗೆ ನಮ್ಮನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಇಲ್ಲ. ನಾವು ಸಾಯುವ ಕೊನೆ ದಿನದವರೆಗೂ ಪ್ರತಿದಿನ ನನ್ನ ಪ್ರೀತಿಯಲ್ಲಿ ನೀನು, ನಿನ್ನ ಪ್ರೀತಿಯಲ್ಲಿ ನಾನು ಬೀಳುವಂಥವರು ಎನ್ನುವುದನ್ನು ಯಾರಿಗಾದಗೂ ಋಜುವಾತು ಮಾಡಿ ತೋರಿಸಬೇಕಿಲ್ಲ. ಜಗತ್ತಿನ ಮುಂದೆ ಅದು ಬಂದು ನಿಂತಾಗ ಯಾರಿಗೇ ಆಗಲಿ ನಂಬದೆ ವಿಧಿ ಇರುವುದಿಲ್ಲ. ಇಂದು… ಈಗ… ಈಗಲೇ… ನಾ ನಿನ್ನ ಮುಂದೆ ಬಂದು ನಿಲ್ಲುತ್ತೇನೆ. ನಿನ್ನ ಬೊಗಸೆಯಲ್ಲಿ ನನ್ನನ್ನು ತೆಗೆದುಕೋ. ಒಂದು ಕ್ಷಣ ತುಂಬಿದ ಕಂಗಳಿಂದ ದಿಟ್ಟಿಸುತ್ತಾ ಮೆಲ್ಲಗೆ ಬೊಗಸೆಯನ್ನು ಮೇಲೆತ್ತಿ, ತುಟಿಗೆ ಸೋಕಿಸಿ, ಒಮ್ಮೆ ಮೆಲುವಾಗಿ ಚುಂಬಿಸಿ, ಬಿಗಿಯಾಗಿ ಕಣ್ಮುಚ್ಚಿ, ಕುಡಿದುಬಿಡು. ಕಪೋಲಗಳ ದಾಟಿ ಕತ್ತಿನ ಗುಂಟ ಹರಿದು ಹೃದಯದ ಮಡುವಿಗೆ ಜಾರಿದ ಕಣ್ಣೀರ ಹನಿಯೊಂದು ನಿನ್ನ ಎದೆಬಡಿತವಾಗಲಿ. ಮತ್ತದರ ಶಬ್ಧ ನನ್ನ ಹೆಸರಾಗಲಿ…
ಇದೋ ಬಂದೆ…
ನಿನ್ನವಳು
ನಿನ್ನವಳು ಮಾತ್ರ…
*********