ಕಾವ್ಯ ಸಂಗಾತಿ
ಸುಧಾ ಪಾಟೀಲ ( ಸುತೇಜ )
ಕವನ ಬರೆಯ ಬೇಕಿದೆ

ಸ್ನೇಹಿತರೆ
ಕವನ ಬರೆಯ ಬೇಕಿದೆ
ನಾಲ್ಕು ದಶಕದ ಭಾವ
ಅಲ್ಲಲ್ಲಿ ಹರಿದು ಹಂಚಿತ್ತು
ಮದುವೆ ಮಕ್ಕಳು
ಯಜಮಾನರ ಚಾಕರಿ
ಮನೆಗೆಲಸದ ಒತ್ತಡ
ಬರೆಯುವ ಪೆನ್ನು
ಕಳೆದು ಹೋದವು
ಅಕ್ಕ ಪಕ್ಕದವರ
ಟೀಕೆ ಟಿಪ್ಪಣಿ
ಒಳಗೊಳಗೇ
ಉಕ್ಕಿ ಹರಿವ ಭಾವ
ಕನಸು ಜೀವ
ಒತ್ತಿ ಹಿಡಿದ ನಾನು
ಈಗಿಗ ಬರೆಯ ಬೇಕಿದೆ
ಗಾಳಿಯ ವಿರುದ್ಧವೆ
ಪಟ ಹಾರುವ ಹಾಗೆ
ನದಿಯ ಪ್ರವಾಹದ ಎದುರು
ನನ್ನ ಪುಟ್ಟ ಹಾಯಿ
ದಡ ಮುಟ್ಟುವ ಭರವಸೆ
ಒಬ್ಬಳೇ ಯಾತ್ರಿಕಳು
ಅವರಿವರ ಟೀಕೆ ಟಿಪ್ಪಣಿ
ಹೆಮ್ಮೆ ಹೊಗಳಿಕೆ ಬಿಟ್ಟು
ಕವನ ಬರೆಯ ಬೇಕಿದೆ
ಎನ್ನ ಎದೆಯಾಳದ
ಅಮೂಹೂರ್ತ ಕನವರಿಕೆಗಳಿಗೆ
ಅಕ್ಷರಗಳ ಮುಹೂರ್ತ ರೂಪ
ಕಾವ್ಯವಾದವು
ನನ್ನ ಭಾವ ಭ್ರೂಣಗಳು
ಸುಧಾ ಪಾಟೀಲ ( ಸುತೇಜ )

Good poem
Beautiful poem right out of heart
Very nice poem
ಸುಂದರವಾದ ಕವನ…. ಅಭಿನಂದನೆ ತಮಗೆ…!
Dr B T Lawani