ಜೀಪು ಕಾರ್ ಶೆಡ್ ನಲ್ಲಿ ನಿಲ್ಲುತ್ತಿದ್ದಂತೆ ಅಲ್ಲಿನ ಭವ್ಯ ಬಂಗಲೆ ಹಾಗೂ ಅದರ ಸುತ್ತಲಿನ ಹೂದೋಟ ಮತ್ತು ಹಣ್ಣುಗಳ ತೋಟಗಳನ್ನು ನೋಡಿಕೊಳ್ಳುತ್ತಿದ್ದ ಮಾಲಿ ಆತನ ಪತ್ನಿ ಮತ್ತು ಅವರ ಒಬ್ಬಳೇ ಪುಟ್ಟ ಮಗಳು ಓಡೋಡಿ ಬಂದು ಮ್ಯಾನೇಜರ್ ಗಳಿಗೆ ವಿನಯಪೂರ್ವಕವಾಗಿ ವಂದನೆಗಳನ್ನು ಸಲ್ಲಿಸಿ  ಅನತಿ ದೂರದಲ್ಲಿ ನಿಂತರು. ಮ್ಯಾನೇಜರ್ ಆತನನ್ನು ಹತ್ತಿರ ಕರೆದು…” ಇವರು ನಮ್ಮ ಈ ತೋಟದ ಮಕ್ಕಳಿಗಾಗಿ ಹೊಸದಾಗಿ ಪ್ರಾರಂಭವಾಗುತ್ತಿರುವ ಶಾಲೆಗೆ ಟೀಚರ್…ಇವರ ಹೆಸರು ಸುಮತಿ…ಜೊತೆಗೆ ಇರುವ ಇವರಿಬ್ಬರೂ ಅವರ ಮಕ್ಕಳು… ಮಾಲಿಕರು  ಹೇಳಿದಂತೆ ಇವರಿಗೆ ವಾಸಕ್ಕೆ ಯೋಗ್ಯವಾದ ಮನೆ ಹಾಗೂ ಬೇಕಾದ ಎಲ್ಲಾ ಸೌಲಭ್ಯಗಳನ್ನು ಮಾಡಿರುವೆ ಅಲ್ಲವೇ?”…ಎಂದು ಮಾಲಿಯನ್ನು ಪ್ರಶ್ನಿಸಿದಾಗ,….”ಹೌದು ಬುದ್ದಿ… ನಿನ್ನೆಯೇ ನಾನು ಹಾಗೂ  ಪತ್ನಿ ಮನೆಯನ್ನು ಸ್ವಚ್ಛಗೊಳಿಸಿದ್ದೇವೇ…ಟೀಚರಮ್ಮನವರು ಹಾಗೂ ಅವರ ಮಕ್ಕಳು ಯಾವ ತೊಂದರೆಯೂ ಇಲ್ಲದೇ ಇಲ್ಲಿ ವಾಸ ಮಾಡಬಹುದು”…ಎಂದು ಹೇಳುತ್ತಾ ಹೊಸ ಟೀಚರಮ್ಮನಿಗೆ ಭಕ್ತಿ ಪೂರ್ವಕವಾಗಿ ಕೈ ಮುಗಿದರು. ಸುಮತಿ ನಸು ನಗುತ್ತಾ ಅವರಿಗೆ ಮರುವಂದಿಸಿದಳು. ಟೀಚರ್ ಹಾಗೂ ಮಕ್ಕಳಿಬ್ಬರೂ ಜೀಪಿನಿಂದ  ಇಳಿಯಲು ಸಹಾಯ ಮಾಡಿದರು. ಟೀಚರಮ್ಮ ಜೊತೆಗೆ ತಂದಿದ್ದ ಹಳೆಯ ಟ್ರಂಕ್ ಪೆಟ್ಟಿಗೆಯನ್ನು ಕೆಳಗೆ ಇಳಿಸಿದರು. ಹಿರಿಯ ಮ್ಯಾನೇಜರ್ ರವರು….”ಸುಮತಿಯವರೇ ನಿಮಗೆ ಏನೇ ಅಗತ್ಯವಿದ್ದರೂ ಈ ತೋಟದ ಮೇಲ್ವಿಚಾರಣೆಯಲ್ಲಿ ಇರುವ ನಮ್ಮ ಕಿರಿಯ ಮೇಲುಸ್ತುವಾರಿ ಕಾರ್ಯಕಾರಿ ಮ್ಯಾನೇಜರ್ ರವರನ್ನು ಸಮೀಪಿಸಬಹುದು…ಎಂದು ತಮ್ಮ ಜೊತೆ ಬಂದಿದ್ದ ತೋಟದ ಮುಖ್ಯ ರೈಟರ್ ರವರ ಕಡೆಗೆ ನೋಡಿದರು. ಸರಿ ಎಂಬಂತೆ ತಲೆಯಾಡಿಸುತ್ತಾ ಸ್ವಲ್ಪ ಭಯದಿಂದಲೇ ರೈಟರ್ ರವರನ್ನು ನೋಡಿ ಸುಮತಿ ವಂದಿಸಿದಳು. ಆತ ತುಸು ಗಂಭೀರವಾಗಿಯೇ..”ಹೂಂ”..ಎಂದರು. 

( ಬಂಗಲೆಯನ್ನು ನೋಡಿಕೊಳ್ಳುತ್ತಿದ್ದ ಮಾಲಿಯ ಕುಟುಂಬವು ಕೇರಳದ ಪಾಲ್ಘಾಟ್ ನ ಮಲಯಾಳಂ ಭಾಷಿಗರು. ಇಲ್ಲಿ ಮ್ಯಾನೇಜರ್ ಹಾಗೂ ಅವರ ನಡುವಿನ ಮಲಯಾಳಂ ಸಂಭಾಷಣೆಯನ್ನು ಕನ್ನಡದಲ್ಲಿ ಬರೆದಿದ್ದೇನೆ.) 

ಜೀಪಿನ ಡ್ರೈವರ್ ಕೂಡಾ ಮಲಯಾಳಿಯೇ ಆಗಿದ್ದರು. ಅವರೂ ಕೂಡ…”ಬರುತ್ತೇವೆ ಟೀಚರಮ್ಮ”….ಎಂದು ಭಕ್ತಿ ಪೂರ್ವಕವಾಗಿ ವಂದಿಸಿ ಜೀಪನ್ನು ಸ್ಟಾರ್ಟ ಮಾಡಿದರು. ಹಿರಿಯ ಮ್ಯಾನೇಜರ್ ಸುಮತಿಗೆ ವಂದಿಸುತ್ತಾ ಜೀಪನ್ನು ಏರಿ, ಮಕ್ಕಳಿಗೆ ಕೈ ಬೀಸಿದರು. ಸುಮತಿ ಅವರಿಗೆ ಮರುವಂದಿಸಿ, ಮಾಲೀಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲು ಕೋರಿಕೊಂಡಳು. ಜೀಪು ಅಷ್ಟು ದೂರ ಸಾಗಿ ತಿರುವಿನಲ್ಲಿ ಮರೆಯಾಗುವವರೆಗೂ ಅಲ್ಲಿಯೇ ನಿಂತಿದ್ದ ರೈಟರ್….”ಬನ್ನಿ ಟೀಚರ್… ನೀವು ವಾಸ ಮಾಡಬೇಕಿರುವ ಮನೆಯನ್ನು ತೋರಿಸುತ್ತೇನೆ”…ಎಂದು ಹೇಳಿ ಮಾಲಿಗೆ ಪೆಟ್ಟಿಗೆಯನ್ನು ಹೊತ್ತು ತರಲು ಕೈ ಸನ್ನೆ ಮಾಡಿದರು. ಮಾಲಿ ಪೆಟ್ಟಿಗೆಯನ್ನು ಎತ್ತಿಕೊಂಡು ತನ್ನ ಪತ್ನಿಯ ಜೊತೆ ಮುನ್ನಡೆದಾಗ ಉಳಿದವರು ಆತನನ್ನು ಹಿಂಬಾಲಿಸಿದರು. 

ಬಂಗಲೆಯ ಎಡ ಬದಿಯಲ್ಲಿ ಇದ್ದ ಮೆಟ್ಟಿಲುಗಳನ್ನು ಇಳಿದು ಕೆಳಗೆ ಹೋಗುವಾಗ…” ಅಂಬಾ” ಎನ್ನುತ್ತಿದ್ದ ಸಿಂಧಿ ಹಸುಗಳ ಕೂಗು ಕೇಳಿಸಿತು. ಮಾಲಿ ಮತ್ತು ಆತನ ಪತ್ನಿಯ ಹೆಜ್ಜೆ ಸದ್ದು ಕೇಳಿ ಹುಲ್ಲು ಹಾಗೂ ಕಡಲೆ ಹಿಂಡಿಯನ್ನು ಹಾಕಲು ಮಾಲಿ ಬರುತ್ತಿರಬಹುದು ಎಂದು ತಿಳಿದು ಅವುಗಳು ಒಕ್ಕೊರಲಿನಿಂದ ಕೂಗಿದ್ದವು… “ಏಯ್ ಸುಮ್ಮನಿರಿ”… ಎಂದು ಹಸುಗಳನ್ನು ಗದರುತ್ತಾ ಮಾಲಿಯು ಒಂದು ಮನೆಯ ಮುಂದೆ ಬಂದು ನಿಂತು ಪೆಟ್ಟಿಗೆಯನ್ನು ಕೆಳಗಿಳಿಸಿ, ಜೇಬಿನಿಂದ ಕೀಲಿಯನ್ನು ತೆಗೆದು ಬೀಗ ತೆಗೆದ…. “ಟೀಚರಮ್ಮಾ ಬಲಗಾಲಿಟ್ಟು ಒಳಗೆ ಬನ್ನಿ”… ಎಂದು ಕೈ ಮುಗಿದು ನಿಂತು ಸುಮತಿಗೆ ಹೇಳಿದ. ಬಾಗಿಲ ಮುಂದೆ ನಿಂತು ಸುಮತಿ…. “ಶ್ರೀ ಕೃಷ್ಣಾ ನಮ್ಮನ್ನು ಕಾಪಾಡು”…ಎಂದು ಹೇಳುತ್ತಾ ಮನೆಯ ಒಳಗೆ ಬಲಗಾಲನ್ನು ಇಟ್ಟು ಒಳ ನಡೆದಳು. ಜೊತೆಗೆ ಎಲ್ಲರೂ ಅವರ ಹಿಂದೆ ಹೋದರು. …”ನೋಡಿ ಸುಮತಿಯವರೆ ನಿಮಗೆ ವಾಸ ಮಾಡಲು ಬೇಕಾದ ಸೌಕರ್ಯಗಳು ಇವೆಯೇ?”… ಎಂದು ಕೇಳುತ್ತಾ ರೈಟರ್ ಒಂದೊಂದೇ ಕೋಣೆಯನ್ನು ತೋರಿಸಿದರು.  ಸಣ್ಣ ಪಡಸಾಲೆ ಅದಕ್ಕೆ ಹೊಂದಿಕೊಂಡಂತೆ ಅಡುಗೆ ಮನೆ ಇರುವ ಒಂದು ಪುಟ್ಟ ಮನೆ ಇತ್ತು.  ಸ್ನಾನ ಮಾಡಲು ಬಚ್ಚಲು ಹಾಗೂ ಲ್ಯಾಟರಿನ್ ( ಟಾಯ್ಲೆಟ್) ಮನೆಗೆ ಹೊಂದಿಕೊಂಡಂತೆ ಹೊರಗೆ ಇತ್ತು. 

ಅವಳು ಸಂತೋಷದಿಂದ… _ಇಷ್ಟು ಸಾಕು ಸರ್…ಅಗತ್ಯ ಸೌಕರ್ಯವಿದೆ”…ಎಂದಳು. ಅವಳು ಹೇಳಿದ್ದಕ್ಕೆ ಹೂಂಗುಟ್ಟಿದ ರೈಟರ್….”ಇಲ್ಲಿ ನಿಮಗೆ ಬೇರೆ ಏನಾದರೂ ಹೆಚ್ಚಿನ ಅಗತ್ಯವಿದ್ದರೆ ಮಾಲಿಗೆ ತಿಳಿಸಿ”…. ಎಂದು ಹೇಳಿ ಅವರು ಅಲ್ಲಿಂದ ಹೊರಟು ಹೋದರು. ರೈಟರ್ ಹೊರಡುವ ಮೊದಲು ಧನ್ಯವಾದಗಳನ್ನು ಸಲ್ಲಿಸಲು ಅವಳು ಮರೆಯಲಿಲ್ಲ. ಮಾಲಿ ಆತನ ಪತ್ನಿ ಹಾಗೂ ಮಗಳು ಅಲ್ಲಿಯೇ ಇದ್ದು ಸ್ವಲ್ಪ ಸಮಯ ಸುಮತಿಯ ಜೊತೆ ಮಾತನಾಡುತ್ತಾ ನಿಂತರು. ಅವರ ಮಗಳು ಸುಮತಿಯ ಮಕ್ಕಳೊಂದಿಗೆ ಆಗಲೇ ಬೆರೆತು ನಗುತ್ತಾ ಹರಟುತ್ತ ಹೊರಗೆ ವೆರಾಂಡದಲ್ಲಿ ಕುಳಿತಿದ್ದಳು.  ಅಡುಗೆಗೆ ಬೇಕಾದ ಸಣ್ಣ ಪುಟ್ಟ ಪಾತ್ರೆಗಳನ್ನು ಮಾಲಿಯ ಮನೆಯಿಂದಲೇ ಸುಮತಿ ತರಿಸಿಕೊಂಡಳು. ಗುರುವಾರ ಸಂತೆಗೆ ಹೋಗಿ ಬೇಕಾದ ಪಾತ್ರೆಗಳನ್ನು ಕೊಂಡುಕೊಂಡ ಮೇಲೆ ಮಾಲಿಯ ಪಾತ್ರೆಗಳನ್ನು ಹಿಂದಿರುಗಿಸುವುದಾಗಿ ಸುಮತಿ ತಿಳಿಸಿದಳು. ಅಲ್ಲಿಂದ ದಿನಸಿ ಅಂಗಡಿ ಬಹಳ ದೂರವಿತ್ತು. ತೋಟದ ಮಾಲೀಕರು ಸುಮತಿ ಜೀಪಿಗೆ ಹತ್ತುವ ಮೊದಲೇ ಒಂದು ತಿಂಗಳ ಮಟ್ಟಿಗೆ ಅವರ ಖರ್ಚಿಗೆ ಆಗುವಷ್ಟು ಹಣವನ್ನು ಕೊಟ್ಟು ಕಳುಹಿಸಿದ್ದರು. ಜೀಪಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ದಿನಸಿ ಅಂಗಡಿಯನ್ನು ನೋಡಿದ್ದಳು. ಹಾಗಾಗಿ ಸಂಜೆ ಹಿರಿಯ ಮಗಳನ್ನು ಮಾಲಿಯ ಮಗಳ ಜೊತೆ ಅವರ ಮನೆಯಲ್ಲಿ  ಬಿಟ್ಟು, ಕೊನೆಯ ಮಗಳನ್ನು ಎತ್ತಿಕೊಂಡು ಅಂಗಡಿಗೆ ಹೋಗಿ ಅಗತ್ಯಕ್ಕೆ ಬೇಕಾದ ದಿನಸಿಯನ್ನು ತಂದಳು. ಊರಿಗೆ ಹೊಸಬಳಾದ ಸುಮತಿಯನ್ನು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು. ಸುಮತಿ ಮೈ ತುಂಬಾ ಸೆರಗು ಹೊದ್ದು ತಲೆ ಬಗ್ಗಿಸಿ ಯಾರನ್ನೂ ಗಮನಿಸದೇ ರಸ್ತೆಯಲ್ಲಿ ನಡೆದಳು. ಅವಳ ಮೌನವನ್ನು ಕಂಡ ಯಾರೂ ಅವಳನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಅವರವರೇ ಗುಸುಗುಸು ಮಾತನಾಡಿಕೊಂಡು ಸುಮ್ಮನಾದರು.

ಮನೆಗೆ ಬಂದ ಸುಮತಿ ಸಂಧ್ಯಾದೀಪವನ್ನು ಬೆಳಗಿಸಿ ಕೃಷ್ಣನ್ನು ಭಜಿಸುತ್ತಾ ತನಗೆ ಹೀಗೊಂದು ಸುರಕ್ಷಿತವಾದ ಸ್ಥಳವನ್ನು ಕೊಟ್ಟಿದ್ದಕ್ಕಾಗಿ ಮನತುಂಬಿ ಧನ್ಯವಾದಗಳನ್ನು ಹೇಳಿದಳು. ಮನದಲ್ಲೇ ಇನ್ನಿಬ್ಬರು ಮಕ್ಕಳು ತನ್ನ ಜೊತೆ ಇಲ್ಲದಿರುವ ಬಗ್ಗೆ ಚಿಂತಿಸಿ ಸಂಕಟ ಪಟ್ಟಳು. ಆದರೆ ಅವರ ಸುರಕ್ಷಿತ ಜೀವನ ಅವಳಿಗೆ ಮುಖ್ಯವಾಗಿತ್ತು. ರಾತ್ರಿಯ ಊಟದ ನಂತರ ಅಮ್ಮ ಮಕ್ಕಳು ಅಲ್ಲಿದ್ದ ಚಾಪೆಯ ಮೇಲೆ ಮಲಗಿದರು. ಚಾಪೆ ದಿಂಬು  ಹೊದಿಕೆ ಹಾಗೂ ಉಳಿದ ವ್ಯವಸ್ಥೆಯನ್ನು ಮಾಲಿಯು ತೋಟದ ಮಾಲಿಕರ ಅಣತಿಯಂತೆ ಮಾಡಿದ್ದನು. ರಾತ್ರಿ ಹಸುಗಳ ಅಂಬಾ ಎನ್ನುವ ಲಾಲಿಯೊಂದಿಗೆ ನಿದ್ರಿಸಬೇಕಾಯಿತು. ಮಕ್ಕಳಿಗೆ ಈ ಅಭ್ಯಾಸವು ಇರದಿದ್ದ ಕಾರಣ ಹೆದರಿ ಅಮ್ಮನನ್ನು ಅಪ್ಪಿ  ಮಲಗಿದರು. ಸುಮತಿಗೆ ತನ್ನ ತವರಿನ ನೆನಪಾಯಿತು. ತಮ್ಮ ಮನೆಯ ಕೊಟ್ಟಿಗೆ ತುಂಬಾ ಹಸುಗಳು ಇದ್ದವು. ಅವುಗಳ ಕೂಗಿನ ಸದ್ದು ಈಗಲೂ ತನ್ನ ಕಿವಿಗಳಿಗೆ ಕೇಳಿಸುತ್ತಿವೆ ಎಂದು ಅನಿಸಿತು ಅವಳಿಗೆ. ಸಮ್ಮಿಶ್ರ ನೆನಪುಗಳೊಂದಿಗೆ ನಿದ್ರೆ ಬಾರದೇ ಗತಕಾಲವನ್ನು ನೆನೆಯುತ್ತಾ ಮಲಗಿದಳು. ಬೆಳಗಿನ ಜಾವಕ್ಕೆ ನಿದ್ರೆ ಹತ್ತಿತು. ಮಾಲಿಯ ಮನೆಯ ಕೋಳಿಯ ಕೂಗಿಗೆ ಎಚ್ಚರವಾಯಿತು. ಮಕ್ಕಳನ್ನು ಎಬ್ಬಿಸದೇ ತಾನು ಒಬ್ಬಳೇ ಎದ್ದಳು. ಮನೆಯ ಹಿಂದೆ ತಮಗಾಗಿ ಜೋಡಿಸಿಟ್ಟ ಉರುವಲು ಇತ್ತು. ಅದನ್ನು ತಂದು ಒಲೆ ಹೊತ್ತಿಸಿ ನೀರು ಕಾಯಿಸಿ ಸ್ನಾನ ಮಾಡಿದಳು. ದೇವರಿಗೆ ದೀಪ ಹಚ್ಚಿ…”ಕೃಷ್ಣಾ ಇಂದು ತೋಟದ ಕೂಲಿ ಕಾರ್ಮಿಕರ ಮಕ್ಕಳಿಗೆ ಟೀಚರ್ ಆಗಿ ನಾನು ಕೆಲಸ ಮಾಡುವ ಮೊದಲ ದಿನ…. ನನ್ನ ಜೊತೆ ಸದಾ ನೀನು ಇದ್ದು ಜೀವನದ ಏಳು ಬೀಳುಗಳಲ್ಲಿ ನನ್ನ ಕೈ ಹಿಡಿದು ಕಾಪಾಡಿದ್ದೀಯ…. ನೀನು ಕರುಣಿಸಿದ ಈ ಜೀವನವನ್ನು ಸಂತೋಷದಿಂದ ಸ್ವೀಕರಿಸುವೆ”… ಎಂದು ಹೇಳುತ್ತಾ ಕೈ ಮುಗಿದು ನಿದ್ರೆಯಿಂದ ಎದ್ದ ಹಿರಿಯ ಮಗಳನ್ನು ಹಲ್ಲುಜ್ಜಿ ಸ್ನಾನ ಮಾಡಲು ಹೇಳಿ ಅಡುಗೆ ಮನೆಯ ಕಡೆಗೆ ನಡೆದಳು.


Leave a Reply

Back To Top