ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
ಬುದ್ಧ ಧರ್ಮ

ಅವನೊಬ್ಬನಿದ್ದಲ್ಲ ಅಂಗುಲಿ ಮಾಲ.
ಮನುಷ್ಯತ್ವದ ತಲೆಕಡಿದು ಬುರುಡೆ,
ಕೈ ಮೂಳೆಗಳನ್ನು ಕೊರಳಿಗೆ ಹಾಕಿಕೊಂಡು.
ಕೈಯಲ್ಲಿ
ಗಂಡುಗೊಡಲಿ ಹಿಡಿದುಕೊಂಡು.
ಕೇಕೆ ಹಾಕುತ್ತಿದ್ದಾನಲ್ಲ ಕಾಡಿನ ತುಂಬಾ.!
ಆತ..
ರಾಮನೆದುರು ನಿಂತಿದ್ದರೆ,
ಬಿಲ್ಲು ಬಾಣಗಳ ಹೂಡಿ
ಆತನ ರುಂಡವ ಮುಂಡವ ಚೆಂಡಾಡುತ್ತಿದ್ದ.!
ಭೀಮನಿಗೆದುರಾಗಿದ್ದಾರೆ,
ಆತನುದರವ ಬಗೆದು
ದೇಹವ ಸೀಳು ಸೀಳಾಗಿ ಸಿಗಿದು
ಊರ ಅಗಸೆಗೆ ತೋರಣ ಕಟ್ಟುತ್ತಿದ್ದ.!
ನಾವಿಂದು ಮತ್ತೊಂದು ಅಸುರ ಮರ್ಧನವೋ, ಧರ್ಮ ಸಂಸ್ಥಾಪನೆಯ ಮಹಾಕಾರ್ಯವೆಂದೋ ಬಣ್ಣಿಸಿ ಓದುತ್ತಿದ್ದೆವು!
ಆತನ ಅದೃಷ್ಟವೇ ಇರಬೇಕು.
ನಿಂತ ಬುದ್ದನೆದುರು.
ಕರುಣೆಯ ಮಹಾಮೂರ್ತಿಯೆದುರು!
ಕಣ್ಣ ಮೊನಚಿನಲ್ಲೇ ಅಂಗುಲಿಯ ರಾಕ್ಷಸತ್ವವ ಸುಟ್ಟ.
ಕೊಲ್ಲಲು ಎತ್ತಿದ ಕೊಡಲಿಯ ಎಲ್ಲೋ ಎಸೆದು ಬಿಟ್ಟ.!
ಕೊಲ್ಲಲೆಂದೆ ಹಿಂಬಾಲಿಸಿದವನು
ಶರಣನಾದ.
ಹಿಂಬಾಲಕನಾದ.!
ಹೇಳಿ. ಬುದ್ಧ ಕಾರುಣ್ಯದ ಬೆಳಕಿಗಿದೆಯಲ್ಲವೇ?
ಕೊಲ್ಲದೇ ಬದುಕು ಬದಲಿಸುವ ಮರ್ಮ.
ಇಹುದೇನು ಇದಕ್ಕಿಂತ ಪರಮ ಮಾನವ ಧರ್ಮ!!
ಇಂದು ಶ್ರೀನಿವಾಸ್.

Super sir
Pramod joshi
ಧನ್ಯವಾದಗಳು ಸರ್