ಮತ್ತೆ ಮಳೆ ಬಂದಿದೆ..
ಹರಿವ ನೀರಲ್ಲಿ ತನ್ನ ಪುಟ್ಟ ಕೈಗಳಿಂದ
ದೋಣಿಗಳ ಬಿಟ್ಟು
ಅವು ಚಲಿಸುವ ಚಂದಕ್ಕೆ
ಬೆರಗಾಗಿ ನಕ್ಕು ಹಗುರಾಗಿದೆ
ಅರಳಿದ ನೆಲಸಂಪಿಗೆಯ ಕೇಸರಗಳ
ಮುಟ್ಟಿ ನೋಡುತ್ತ
ಹನಿ ಮುತ್ತಿಕೊಂಡ ದಳಗಳ
ಸವರಿ ಇನ್ನಷ್ಟು ನಯವಾಗಿಸುತ್ತದೆ
ಬೀಸುವ ತಂಗಾಳಿ ಅಲೆಯುವ
ಎಲೆಗಳ ಜೊತೆ ಗುಟ್ಟುಗಳನಿಟ್ಟು
ಹೂವಿಂದ ಹೂವಿಗೆ ಅಲೆದು
ಪರಿಮಳವ ಹೊತ್ತೊಯ್ಯುತ್ತದೆ
ಸಂಜೆ ಬಂದ ಮಳೆಗೆ ಖಾಸಾ
ನೆಂಟರ ಕರೆದು
ತಾಜಾ ಮೀನುಗಳ ಹಿಡಿದು
ಊಟ ಬಡಿಸುವ ಭೂಮಿ
ರಾತ್ರಿ ಪಟ್ಟಾಂಗ ಹೊಡೆದು
ಬದುಕಿನ ಖುಷಿಯ ದ್ವಿಗುಣಗೊಳಿಸುತ್ತದೆ
ರಾಶಿ ರಾಶಿ ರಾಶಿ ಮೋಡಗಳು ಜಗದ ತುಂಬೆಲ್ಲಾ ಕವಿಯುವಾಗ
ನವಿಲಿನ ಹಜ್ಜೆಗೆ ಗೆಜ್ಜೆದನಿ
ಮೂಡಿ ಮುಸ್ಸಂಜೆಯ ಆಲಾಪಕ್ಕೆ
ಶೃತಿ ಕೊಡುತ್ತದೆ
ಕತ್ತಲಾಗಲಿ,
ಜೀರುಂಡೆಗಳ ಸಂಗೀತ ಕಚೇರಿ
ಕಪ್ಪೆಗಳ ಕರತಾಡನ
ಹೊಯ್ಯುವ ಮಳೆ ಸದ್ದಿಗೆ
ಭೂರಮೆಗೆ ಖುಷಿಯೋ ಖುಷಿ!
ಹದಗೊಂಡ ಹಸೆಗೆ
ಬೆದೆಗೊಂಡ ಭೂಮಿ
ಹಸಿರುಕ್ಕಿಸಿ ಹಸನಾಗಿದೆ
ಯಾಕೆಂದರೆ,
ಕಾದು ಕಾದು ಕಾದು ಹೋಗಿದ್ದ
ಈ ಧರೆಗೆ ಮತ್ತೆ ಮಳೆ ಬಂದಿದೆ.!
******
ಫಾಲ್ಗುಣ ಗೌಡ ಅಚವೆ
ಆಹಾ…! ಮುದ ತಂದ ಚೆಂದದ ಕಾವ್ಯ ಮಳೆ. ..
Thank you dear
ಭಾವ ಪೂರ್ಣ ಸುಂದರ ಕವನ.
ಮಳೆಯ ಮೈಯ ನೇವರಿಸಿದಂತ ಕವಿತೆ..
ಮಳೆ ಕಾವ್ಯ ಚೆನ್ನಿದೆ
ಹದಗೊಂಡ ಹಸೆಗೆ
ಬೆದೆಗೊಂಡ ಭೂಮಿ
…ಲೌಲಿ….
ಇದು ಕಾವ್ಯ….ಸೋತೆ ಕಣ್ರಿ ಗೌಡ್ರೇ
ಥ್ಯಾಂಕ್ ಯು ಸರ್…
ಎಲ್ಲರಿಗೂ ಧನ್ಯವಾದಗಳು
ಮಳೆಗಾಲದಲ್ಲಿ ಮನವ ತೋಯಿಸುವ ಕವನ ಪಾಲ್ಗುಣ