ಹಿಂದು ಪಂಚಾಂಗದ ನಾಲ್ಕನೇ ತಿಂಗಳಾದ ಆಷಾಢ ಮಾಸವು ಮಹಾರಾಷ್ಟ್ರ ರಾಜ್ಯದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ.ಜೂನ್ ಜುಲೈ ತಿಂಗಳುಗಳಲ್ಲಿ ಬರುವ ಈ ಆಷಾಢ ಮಾಸವು, ವೈಶಾಖದ ಶಾಖವನ್ನು ಕ್ರಮೇಣ ಕಡಿಮೆ ಮಾಡುತ್ತ ಮುಂಗಾರು ಮಳೆಯನ್ನು ಹೊತ್ತು ತರುವ ಆಶಾಕಿರಣವಾಗಿದೆ. ಮಳೆಯ ಮೊದಲ ಹನಿ ಭೂಮಿಗೆ ತಾಕಿದಾಗ,ಹೊರ ಸೂಸುವ ಮನಮೋಹಕ ಸುಗಂಧ ಜೀವಸಂಕುಲದಲಿ ನವ ಚೈತನ್ಯ ಮತ್ತು ಆಶಾವಾದವನ್ನು ಮೂಡಿಸುತ್ತದೆ..

ಭಾರತ ದೇಶದ ಹಲವಾರು ಭಾಗಗಳಲ್ಲಿ ಆಷಾಢ ತಿಂಗಳು ಅಶುಭ, ಈ ಮಾಸದಲ್ಲಿ ಶುಭಕಾರ್ಯಗಳನ್ನು ಮಾಡಬಾರದೆಂಬ ನಂಬಿಕೆ ಇದೆ..ಆದರೆ ಮಹಾರಾಷ್ಟ್ರದಲ್ಲಿ ಆಷಾಢ ಮಾಸದಿಂದ ಹಬ್ಬದ ಆಚರಣೆಗಳ ಹೆಬ್ಬಾಗಿಲು ತೆರೆಯುತ್ತದೆ ಎನ್ನಬಹುದು.ಆಷಾಢ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಿ ಇಲ್ಲಿ ಹತ್ತು ಹಲವು ಅಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ,ಸಾಂಪ್ರದಾಯಿಕ ಹಬ್ಬಗಳನ್ನು,ಸಾಮೂಹಿಕ ಕಾರ್ಯಕ್ರಮಗಳನ್ನು ಅತ್ಯಂತ ಉತ್ಸಾಹದಿಂದ ಮಾಸದಾದ್ಯಂತ ಆಚರಿಸಲಾಗುತ್ತದೆ..ಅವುಗಳಲ್ಲಿ ಪ್ರಮುಖವಾದ ಹಬ್ಬವೆಂದರೆ “ಆಷಾಢಿ ಏಕಾದಶಿ”..ದೇವಶಯನಿ ಏಕಾದಶಿ,ಹರಿಶಯನ ಏಕಾದಶಿ,ಮಹಾ ಏಕಾದಶಿ ಎಂದೆಲ್ಲ ‌ಕರೆಯಲ್ಪಡುವ ಈ ವಿಶೇಷ ದಿನದಿಂದ ವಿಷ್ಣು ಭಗವಂತನು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಮಲಗಿ ಯೋಗನಿದ್ರೆಗೆ ಜಾರುತ್ತಾನೆ ಎಂಬ ನಂಬಿಕೆಯಿದೆ..ಈ ದಿನದಿಂದ ಚಾತುರ್ಮಾಸ ಆರಂಭವಾಗುತ್ತದೆ..


ಶ್ರದ್ಧೆಯುಳ್ಳ ಭಕ್ತಾದಿಗಳು ಮುಂದಿನ ನಾಲ್ಕು ತಿಂಗಳ ಕಾಲ ಸತತ ಉಪವಾಸ ವ್ರತ, ಜಪ ತಪಗಳನ್ನು ಮಾಡುತ್ತಾರೆ.
ಆಷಾಢಿ ಏಕಾದಶಿಯಂದು ಮರಾಠಿಗರ ಆರಾಧ್ಯದೈವ ಪಂಢರಪುರದ ಪಾಂಡುರಂಗ ವಿಠ್ಠಲ ಮತ್ತು ರಖುಮಾಯಿಯರಿಗೆ ವಿಶೇಷ ಅಭಿಷೇಕ,ಪೂಜೆ, ಆರಾಧನೆಗಳು ಜರುಗುತ್ತವೆ..ಅಂದು ಪಂಢರಪುರದಲ್ಲಿ ಲಕ್ಷಾಂತರ ಭಕ್ತಾದಿಗಳು ಸೇರಿ ಭಾರೀ ವಿಜೃಂಭಣೆಯಿಂದ ಏಕಾದಶಿ ಮಹೋತ್ಸವವನ್ನು ಆಚರಿಸುತ್ತಾರೆ.. ೨೧ ದಿನಗಳಿಂದ ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಪಾದಯಾತ್ರೆ ಮಾಡಿ ಬಂದು ಈ ದಿನದಂದು ವಿಠ್ಠಲನ ದರ್ಶನ ಪಡೆದು ಧನ್ಯರಾಗುತ್ತಾರೆ..ಈ ಯಾತ್ರೆ “ಪಂಢರಿಚಿ ವಾರಿ” ಎಂಬ ಹೆಸರಿನಿಂದ ಪ್ರಸಿದ್ದವಾಗಿದೆ..
ಭಕ್ತಿರಸ ಪ್ರವಾಹವೇ ತುಂಬಿ ಹರಿಯುವ ಈ ವಾರಿ ಅಥವಾ ದಿಂಡಿಯಾತ್ರೆಯ ಬಗ್ಗೆ ಸ್ವಲ್ಪ ವಿವರಗಳನ್ನು ತಿಳಿಯೋಣ ಬನ್ನಿ.

ಪಂಢರಪುರ ವಾರಿ

ಮಹಾರಾಷ್ಟ್ರದ ದಿಂಡಿ ಯಾತ್ರೆ

ವಾರಿ ಎಂಬುದು ಮಹಾರಾಷ್ಟ್ರ
ರಾಜ್ಯದ ಪ್ರಮುಖ ಧಾರ್ಮಿಕ

ಮತ್ತು ಸಾಂಸ್ಕೃತಿಕ ಸಂಪ್ರದಾಯವಾಗಿದ್ದು  ಸುಮಾರು ೮೦೦ ವರ್ಷಗಳಿಗಿಂತಲೂ ಹೆಚ್ಚು ಪ್ರಾಚೀನವಾದ ದಿವ್ಯ ಭವ್ಯ ಇತಿಹಾಸವನ್ನು ಹೊಂದಿದೆ.ಭಕ್ತಿ, ಸ್ನೇಹ, ಸಹಕಾರ ಸೌಹಾರ್ದತೆ, ಮತ್ತು ಮಾನವೀಯತೆಗಳಿಂದ ತುಂಬಿದ ಮಹಾ ವಿಶ್ವವಿದ್ಯಾಲಯದಂತಿದೆ..

ಹದಿಮೂರನೇ ಶತಮಾನದಲ್ಲಿನ ಹಲವು ಮರಾಠಿ ಸಂತರು ತಮ್ಮ ಉದಾತ್ತ ಉತ್ತಮ ಮೌಲ್ಯಗಳಿಂದ ಭಕ್ತಿಪಂಥದ
ನೆಲೆಗಟ್ಟನ್ನು ಕಟ್ಟಿದರು
ಲೌಕಿಕ ಜೀವನವನ್ನು ನಡೆಸುತ್ತಿರುವಾಗಲೂ
ಸಹ ಮಾನವನಲ್ಲಿ ನಿರ್ಲಿಪ್ತತೆ ಇರಬೇಕು ಮತ್ತು ಎಂತಹ ಕಷ್ಟ ಬಂದರೂ ತಾನು ನಂಬಿದ ಸತ್ಯವನ್ನು ಬಿಡದೆ ನಡೆಯಬೇಕು ಎಂಬ ಸತ್ಯದ ಅರಿವನ್ನು ಮೂಡಿಸಿದರು.ಸಂತ ಜ್ಞಾನೇಶ್ವರ, ಸಂತ ನಾಮದೇವ, ಸಂತ ಏಕನಾಥ, ಸಂತ ತುಕಾರಾಮರಂಥ ಅನೇಕ ಮಹಾನ್ ಸಂತರು ತಮ್ಮ ಸರಳ ಸುಂದರ ಬರಹಗಳು,
ಮಧುರವಾದ ಅಭಂಗಗಳು ಮತ್ತು ಕೀರ್ತನೆಗಳಿಂದ ಜನಮಾನಸದಲ್ಲಿ
ಶ್ರದ್ಧೆ ಭಕ್ತಿ‌ ಮತ್ತು ಜಾಗೃತಿಯನ್ನು
ಬೆಳೆಸಿದರು..ಈ ಸಂತರು ದೈವ ಸಾಕ್ಷಾತ್ಕಾರಕ್ಕೆ, ಮೋಕ್ಷ ಸಾಧನೆಗೆ
ಸುಲಭದ ಮಾರ್ಗವನ್ನು ಜನರಿಗೆಲ್ಲ ತೋರಿಸಿದರು..ಪ್ರತಿಯೊಬ್ಬ
ಸಂತನೂ ತನ್ನದೇ ಆದಂತಹ ವಿಶಿಷ್ಟ ಗ್ರಾಮೀಣ, ಸುಮಧುರ ಶೈಲಿಯಲ್ಲಿ ವಿಠಲ ನಾಮ ಜಪಿಸುತ್ತ ಮನದಲ್ಲಿ ದೇವರೊಂದಿಗೆ ಐಕ್ಯರಾದಂತೆ ಭಾವಿಸುವ ಪ್ರಕ್ರಿಯೆಯ ಫಲವನ್ನು ಕುರಿತು ರಚಿಸಿದರು.ಅಂತಹ ಸ್ಥಿತಿಯಲ್ಲಿ ಮನಸ್ಸು ಎಲ್ಲಾ ಆಸೆ ದುರಾಸೆಗಳನ್ನೂ ಕೆಟ್ಟ ಆಲೋಚನೆಗಳನ್ನೂ ಮೆಟ್ಟಿ ನಿಲ್ಲುತ್ತದೆ ಎಂದು‌ ಮನದಟ್ಟು ಮಾಡಿಸಿದರು.ಭವಸಾಗರವನು ದಾಟಿಸಿ
ಜನನ ಮರಣಗಳಿಂದ ಮೋಕ್ಷ ಕೊಡಿಸಿ
ನಾರಾಯಣನಲ್ಲಿ ನೆಲೆಯಾಗಿ ನಿಲ್ಲಲು ಬೇಕಾದ ಮಾರ್ಗವನ್ನು ತೋರಿಸಬಲ್ಲ ಶಕ್ತಿ ಭಜನೆಗಳಲ್ಲಿದೆ ಎಂಬ ಅರ್ಥವನ್ನು ‌ಜನರಿಗೆ ನೀಡಿದವರೇ ಈ ಸಂತರು..
ಭಕ್ತಿ ಆಂದೋಲನದ ಮೂಲಕ ಲೋಕಕಲ್ಯಾಣಗೈವ ಆಶಯದಿಂದ ಸಂತ ಜ್ಞಾನೇಶ್ವರರು ವಾರಿಯನ್ನು ಮಾನವಿಯತೆಯ ಯಾತ್ರೆಯನ್ನಾಗಿಸಿದರು.


ಮುಂದೆ ಸಂತ ತುಕಾರಾಮರು ಸೇರಿದಂತೆ ಹತ್ತು ಹಲವು ಸಂತರು ಈ ಪರಂಪರೆಯನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಬಂದರು..ನಂತರದ ವರ್ಷಗಳಲ್ಲಿ ವಾರಕರಿ ಪಂಥ ಉತ್ತಮ ಬೆಳವಣಿಗೆಯನ್ನೂ ಹೆಚ್ಚೆಚ್ಚು ಪ್ರಸಿದ್ದಿಯನ್ನೂ ಪಡೆಯಿತು. ಜನಸಾಮಾನ್ಯರ ಜೀವನದಲ್ಲಿ ಶಾಂತಿ ಸಮಾಧಾನಗಳನ್ನು ತಂದಿತ್ತ ಈ ಮಹಾನ್ ಸಂತ ಗುರುಗಳ ಗೌರವಾರ್ಥವಾಗಿ ಅವರ ಪಾದುಕೆಗಳನ್ನು ಪೂಜಿಸಿ ತಲೆಯ ಮೇಲೆ ಹೊತ್ತು ಪಂಢರಪುರದ ವಿಠ್ಠಲ ಪಾಂಡುರಂಗ ದರ್ಶನ ‌ಪಡೆವ ಪರಂಪರೆ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯತೆಯನ್ನು ಗಳಿಸಿತು.. ಹತ್ತು ಶತಮಾನಗಳ ಬಳಿಕವೂ ಸಹ ತನ್ನ ಮೂಲ ಅಂತಃಸತ್ವವನ್ನು ಕಳೆದುಕೊಳ್ಳದೆ ಇಂದಿಗೂ ಈ ವಾರಿ ಇನ್ನಷ್ಟು ದೇದಿಪ್ಯಮಾನವಾಗಿ ಹೊಳೆಯುತ್ತ ಸಮಾಜದ ಕತ್ತಲೆಯನ್ನು ಕಳೆಯುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಿತರಾಗಿ ತಮ್ಮ ಮೂಲ ಸಂಸ್ಕೃತಿಗಳನ್ನು ಮರೆಯುತ್ತಿರುವ ಯುವಜನಾಂಗಕ್ಕೆ ಉತ್ತಮ ಮಾರ್ಗವನ್ನು ತೋರಬಲ್ಲ ಮಹಾ ಉತ್ಸವ ಈ ಪಂಢರಪುರದ ವಾರಿ ಎನ್ನಬಹುದು..

ಪ್ರತಿ ವರ್ಷದ ನಿರ್ದಿಷ್ಟ ದಿನದಂದು ನಾಡಿನ ವಿವಿಧ ಮೂಲೆಗಳಿಂದ ಒಂದೆಡೆ ಸೇರಿ ಭಜನೆ, ಕೀರ್ತನೆಗಳನ್ನು ‌ಮಾಡುತ್ತ ಪಾದಯಾತ್ರೆಗೈದು ತಮ್ಮ ಆರಾಧ್ಯದೇವರ ದರ್ಶನ‌ ಪಡೆದು ಧನ್ಯತೆ ಹೊಂದುವ ಭಕ್ತ ಜನರ ಗುಂಪಿಗೆ ದಿಂಡಿ ಎಂಬ ಹೆಸರಿರುವ ಕಾರಣ ಇದಕ್ಕೆ ದಿಂಡಿ ಯಾತ್ರೆ ಎನ್ನುತ್ತಾರೆ..ಪ್ರತಿ ವರ್ಷವೂ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಹೊರಟು ಎಲ್ಲಾ ಗುಂಪುಗಳೂ ಒಂದೆಡೆ ಸೇರಿ ನಿಗದಿತ ಸಮಯಕ್ಕೆ ಪಾದಯಾತ್ರೆ ಆರಂಭಿಸಿ ಸರಿಯಾಗಿ ಆಷಾಢ ಏಕಾದಶಿಯಂದು ಪಂಢರಪುರ ಮುಟ್ಟುವಂತೆ ನಿಯೋಜಿಸುವ ಈ ಜನರ ಸಮಯ ಪ್ರಜ್ಞೆ, ಶಿಸ್ತು, ಕೌಶಲ್ಯ ಮೆಚ್ಚುವಂತಹದು..ವೈಯಕ್ತಿಕ ನೆಲೆಯಲ್ಲಿ ತ್ಯಾಗ, ಕ್ಷಮೆ,ಸರಳತೆ‌
ಇಂದ್ರಿಯಾಸಕ್ತಿಗಳನ್ನು
ಗೆಲ್ಲುವುದು,ಶಾಂತಿಯುತ ಸಹಬಾಳ್ವೆ,ಅನುಕಂಪ,ಅಹಿಂಸೆ, ಪ್ರೇಮ,ವಿನಯ ಈ ವಿಷಯಗಳಿಗೆ ವಾರಕರಿ ಪಂಥವು ಬಹಳ ಒತ್ತು ಕೊಡುತ್ತದೆ..ಪಾಂಡುರಂಗ ವಿಠಲನ‌ ಬಗ್ಗೆ ಅತ್ಯಂತ ಭಕ್ತಿ ಭಾವವನ್ನು ಹೊಂದಿರುವ ವಾರಕರಿಯರ ಪಾಲಿಗೆ ಅವನೇ ತಾಯಿ, ತಂದೆ, ಗುರು, ಸಖ ಸೋದರ ಸರ್ವಸ್ವವೂ ಆಗಿರುತ್ತಾನೆ.. ಇವರು ಪರಸ್ಪರರನ್ನು ವಿಠಲನೆಂದೇ ಭಾವಿಸಿ ನಮಸ್ಕರಿಸುವುದು, ಒಬ್ಬರಿಗೊಬ್ಬರು ಮಾವುಲಿ( ತಾಯಿ) ಎಂದೇ ಸಂಭೋಧಿಸುವುದು ಇವರ ಸಂಸ್ಕಾರ, ಸರಳತೆ, ಆತ್ಮೀಯತೆ
ವಿನಯಶೀಲತೆಗೊಂದು ಉತ್ತಮ ಉದಾಹರಣೆಯಾಗಿದೆ..

ತಮ್ಮ ಆರಾಧ್ಯದೈವ ಪಂಢರಪುರದ
ಪಾಂಡುರಂಗನ ದರ್ಶನಕ್ಕಾಗಿ ೨೧ ದಿನಗಳ ಕಾಲ ಬರಿಗಾಲಲ್ಲಿ ಸಾಗುವ ಈ ತೀರ್ಥಯಾತ್ರೆಯಲ್ಲಿ ಪ್ರಾಚೀನ ಸಂತರ ಪಾದುಕೆಗಳನ್ನು ಪೂಜಿಸಿ ಅವುಗಳನ್ನು ಸಾಲಂಕೃತ ಪಾಲಖಿ (ಪಲ್ಲಕ್ಕಿ) ಅಥವಾ ಕುದುರೆಯ ಮೇಲೆ ಇರಿಸಿ ಪಂಢರಪುರಕ್ಕೆ ಒಯ್ಯುತ್ತಾರೆ..ಸಂತ ಜ್ಞಾನೇಶ್ವರರ ಪಾಲಖಿ ಪುಣೆ ಸಮೀಪದ ಆಳಂದಿಯಿಂದ ಹೊರಡುತ್ತದೆ, ಸಂತ ತುಕಾರಾಮರ ಪಾಲಖಿ ದೇಹು ಗ್ರಾಮದಿಂದ ಹೊರಡುತ್ತದೆ. ಹೀಗೇ ಸುಮಾರು ೪೦ಕ್ಕಿಂತಲೂ ಹೆಚ್ಚು ಸಂತರ ಪಾಲಖಿಗಳು ರಾಜ್ಯದ ವಿವಿಧ ಭಾಗಗಳಿಂದ ಹೊರಡುತ್ತವೆ. ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಜನರು ಬಂದು ಇಲ್ಲಿ ಸೇರುತ್ತಾರೆ.. ಮುಂಬಯಿ ‌ಮಹಾನಗರದಿಂದ ಸಹಸ್ರಾರು ಭಕ್ತರು ದಿಂಡಿ ಯಾತ್ರೆಗೆ ಹೋಗುತ್ತಾರೆ.
ಇಲ್ಲಿಂದ ಆರಂಭವಾಗುವ ದಿಂಡಿ ಯಾತ್ರೆ ೨೧ ನೇ ದಿನಕ್ಕೆ ಪಂಢರಪುರವನ್ನು ಮುಟ್ಟುತ್ತದೆ..
ಈ ಇಪ್ಪತ್ತೊಂದು ದಿನಗಳ ಪಯಣದ ಹಾದಿಯಲ್ಲಿ ಈ ವಾರಕರಿಯರು ವಿವಿಧ ರೀತಿಯ ಆಟಗಳನ್ನು ಆಡಿಸುತ್ತ, ಮನರಂಜಿಸುತ್ತ, ಭಜನೆ, ಅಭಂಗ, ಕೀರ್ತನೆಗಳನ್ನು ಹಾಡುತ್ತಾ,ತಮ್ಮ ವಿವಿಧ ಪಾರಂಪರಿಕ ಕಲೆಗಳನ್ನು ಪ್ರದರ್ಶಿಸುತ್ತಾ ಆನಂದಿಸುತ್ತ, ಇತರರಿಗೂ ಆನಂದ ನೀಡುತ್ತ ಮುಂದೆ ಸಾಗುತ್ತಾರೆ..

ಭಕ್ತಿರಸದ ಉದ್ಘೋಶದಲಿ ಮುಳುಗಿದ ಈ ಜನರ ಮುಗ್ಧ ಭಕ್ತಿ, ಉತ್ಸಾಹ, ಸಂಭ್ರಮಗಳು ನೋಡುಗರಲ್ಲಿ ನಿಜಕ್ಕೂ ಅತ್ಯಂತ ಅಚ್ಚರಿಯನ್ನು ಉಂಟು‌ಮಾಡುತ್ತವೆ..ಜಾತಿ, ಮತ, ಧರ್ಮಪಂಥ,ಗಂಡು, ಹೆಣ್ಣು, ಬಡವ, ಬಲ್ಲಿದ ಈ ಎಲ್ಲಾ ರೀತಿಯ ಭೇದಗಳನ್ನು ಮೀರಿ ಭಕ್ತಿ ಭಾವದಲ್ಲಿ ಬೆರೆತು ಮಾನವೀಯ ಅಂತಃಕರಣಗಳಲ್ಲಿ ಒಂದಾಗುವ ಅಪರೂಪದ ಅದ್ಭುತ ಅಪೂರ್ವ ಮಹೋತ್ಸವವಿದು.ಈ ವಾರಿಗಾಗಿ  ಮಹಾರಾಷ್ಟ್ರದ ಜನತೆ ವರ್ಷವಿಡೀ ಉತ್ಸಾಹದಿಂದ ಕಾಯುತ್ತಿರುತ್ತದೆ.
ಜನರು ತಮ್ಮ ದೈನಂದಿನ ಜೀವನದ ಒತ್ತಡಗಳು ಏನೇ ಇದ್ದರೂ ಅವನ್ನು ಬದಿಗೊತ್ತಿ ವಿಠಲನ ದರ್ಶನಕ್ಕಾಗಿ ಧಾವಿಸಿ ಬರುತ್ತಾರೆ..ಬಿಸಿಲು ಮಳೆಗಳಿಗೆ ಅಂಜದೆ ಶ್ರದ್ಧೆ ಭಕ್ತಿಗಳಿಂದ ವಿಠಲನ ನಾಮಸ್ಮರಣೆ ಮಾಡುತ್ತ ಬರಿಗಾಲಲ್ಲಿ ನಡೆಯುತ್ತ ಪಂಢರಪುರದೆಡೆಗೆ ಸಾಗುತ್ತಾರೆ. ಹತ್ತಾರು ನಿರ್ಧರಿತ ಗುಂಪುಗಳು ವಾರಕರಿಯರಿಗಿಂತ ಮೊದಲೇ ಮುಂದೆ ಹೋಗಿ ಎಲ್ಲರಿಗಾಗಿ‌ ಊಟ ವಸತಿ ಸೌಲಭ್ಯಗಳನ್ನು ವ್ಯವಸ್ಥೆ ಮಾಡುತ್ತವೆ…

ವಾರಕರಿಯರು ದಿಂಡಿ ಯಾತ್ರೆ ಮಾಡುವಾಗ ಮಾರ್ಗದುದ್ದಕ್ಕೂ ಅವರಿಗೆ ಸಹಾಯ ಮಾಡಲು‌ ಸ್ವಾಗತ ಕೋರಲು ಪ್ರತಿಯೊಂದು ಊರಿನ ಜನರು ಮತ್ತು ವಿವಿಧ ಸ್ವಯಂಸೇವಕ ಸಂಘಟನೆಗಳು, ಸ್ಥಳೀಯ ಧಾರ್ಮಿಕ ಸಂಸ್ಥೆಗಳ ಯುವ ಸದಸ್ಯರು ಅತ್ಯಂತ ಉತ್ಸಾಹದಿಂದ ಕಾಯುತ್ತಿರುತ್ತಾರೆ..
ಸುಗಂಧ ದ್ರವ್ಯಗಳನ್ನು ಸಿಂಪಡಿಸಿ,
ಜಯಘೋಷ ಮಾಡುತ್ತ
ಅರಿಶಿನ, ಕುಂಕುಮ,ಅಕ್ಷತೆ,
ಹೂಗಳನ್ನು ಪಾಲಖಿಯ ಮೇಲೆ ಭಕ್ತಿಯಿಂದ ಎರಚಿ,ಆದರದ ಸ್ವಾಗತವನ್ನು ಕೋರುತ್ತಾರೆ..ನಂತರ ಅವರಿಗಾಗಿ ತಾತ್ಕಾಲಿಕ ಆರಾಮ ಗೃಹಗಳನ್ನು, ಟೆಂಟ್ ಗಳನ್ನು ಹೊಂದಿಸಿ ಕೊಡುತ್ತಾರೆ..ವಿಶ್ರಾಂತಿ ಕ್ಯಾಂಪುಗಳ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ.
ಅವರಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಾರೆ..
ವೈದ್ಯಕೀಯ ಸಹಾಯ,ಇನ್ನಿತರ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.. ನೀರು, ಹಾಲು, ಚಹಾ, ಶೀತಲ ಪಾನೀಯಗಳು,ತಿಂಡಿ ತಿನಿಸು ಹಣ್ಣು ಹಂಪಲು, ಔಷಧಿ, ಮಾತ್ರೆಗಳು, ಬಟ್ಟೆ ಬರೆ,ಉಡುಗೊರೆಗಳನ್ನು ನೀಡಿ ಗೌರವಿಸುತ್ತಾರೆ..ಇವರ ಸೇವೆಗಾಗಿ,
ಆದರಾತಿಥ್ಯಕ್ಕಾಗಿ ಹತ್ತು ಹಲವಾರು ಗುಂಪುಗಳು ಸಜ್ಜಾಗಿ ನಿಲ್ಲುತ್ತವೆ. ನಡೆದು ನಡೆದು ದಣಿವೆಂದವರ ಕಾಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುತ್ತಾರೆ..
ಅವರ ಆರೈಕೆಯೆಂದರೆ ಪಾಂಡುರಂಗನ ಸೇವೆಯೆಂದೇ ಭಾವಿಸುವ ಇವರ ಮನೋಭಾವ ಅತ್ಯಮೂಲ್ಯ..
ವಾರಕರಿಯರಲ್ಲಿ ವಯಸ್ಸಾದ ಹಿರಿಯರಿದ್ದರೆ ಯುವಕರು ಅವರನ್ನು ಭುಜದ ಮೇಲೆ ಕೂರಿಸಿಕೊಂಡು ನಡೆಯುವುದುಂಟು..
ಪ್ರತಿ ವಾರಕರಿಯಲ್ಲೂ ಸಾಕ್ಷಾತ್ ವಿಠ್ಠಲನ ರೂಪವನ್ನೇ ಕಾಣುವ ಈ ಸ್ಥಳೀಯ ಜನರ ಆಸ್ಥೆ ನಿಜಕ್ಕೂ ಅತ್ಯಂತ ಶ್ಲಾಘನೀಯವಾಗಿದೆ..ವಾರಕರಿಯರಿಗೆ ಈ ಸ್ಥಾನಿಕರು ತೋರುವ ಆದರಾತಿಥ್ಯಗಳು ಮಾನವೀಯತೆ, ಆತ್ಮೀಯತೆ, ಶ್ರದ್ಧೆ, ಭಕ್ತಿ, ಸ್ನೇಹ ಸೌಹಾರ್ದತೆಗಳ ಉತ್ತಮ
ಸಂಕೇತವಾಗಿವೆ..

ಈ ಆಷಾಢಿ ಏಕಾದಶಿಮಹೋತ್ಸವದಲ್ಲಿ
ರಾಜ್ಯದ ರಾಜಕೀಯ ಮುಖಂಡರು, ಮಂತ್ರಿ ಮಹೋದಯರು, ಚಲನಚಿತ್ರ ನಟ ನಟಿಯರು, ವಿವಿಧ ಕ್ಷೇತ್ರಗಳ ಹೆಸರಾಂತ ಕಲಾವಿದರು ಸಹ ಭಾಗವಹಿಸುತ್ತಾರೆ.
.

ಮನದಲಿ ಅಷ್ಟ ಸಾತ್ವಿಕ ಭಾವಗಳನ್ನು ಹೊಂದಿ ವಿಠ್ಠಲ ನಾಮಸ್ಮರಣೆ ಮಾಡುತ್ತ ಭಕ್ತಿ ರಸಗಂಗೆಯಲ್ಲಿ ಈಜುತ್ತಾ ತನ್ನೆಡೆಗೆ‌ ಬರುವ ಭಕ್ತಾದಿಗಳನ್ನು ಪ್ರೀತಿಯಿಂದ ಸ್ವಾಗತಿಸಲೋ ಎಂಬಂತೆ ಸಾಲಂಕೃತನಾಗಿ ಇಟ್ಟಿಗೆಯ ಮೇಲೆ ನಿಂತ ಬೃಹತ್ ಆಕಾರದ ಫಂಢರಿಯ ರಾಜ ವಿಠ್ಠಲ ಕಣ್ಮನ ಸೆಳೆಯುತ್ತಾನೆ..
ಅರ್ಧಚಂದ್ರಾಕೃತಿಯಲ್ಲಿ ಪಂಢರಿಪುರವನ್ನು ಆವರಿಸಿ ಚಂದ್ರಭಾಗೆಯೆಂಬ ಹೆಸರಿನಲಿ ಹರಿಯುತಿರುವ ಭೀಮಾ ನದಿಯ ತಟದಲಿ ಸ್ಥಿತವಾಗಿರುವ ದಿವ್ಯ ಭವ್ಯ ವಿಠಲ ಮಂದಿರ ದೀಪಾಲಂಕಾರ ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತ ವಾರಕರಿಯರನ್ನು ಸ್ವಾಗತಿಸುತ್ತದೆ..ಸುಂದರ ಶಿಲ್ಪಗಳಿಂದ ಕೂಡಿದ ಅಲಂಕೃತಗೊಂಡ ಗೋಪುರದ ಮೇಲಿನ ಕೇಸರಿ ಧ್ವಜ ಭಕ್ತರನ್ನು ಪ್ರೀತಿಯಿಂದ ತನ್ನೆಡೆಗೆ ಕೈ ಬೀಸಿ ಕರೆಯುತ್ತದೆ..೨೧ ದಿನಗಳ ಪಾದಯಾತ್ರೆ ಮುಗಿಸಿ ಪಂಢರಪುರವನ್ನು ತಲುಪಿದ ಭಕ್ತಾದಿಗಳು ಇಲ್ಲಿಯ ಪವಿತ್ರ ಚಂದ್ರಭಾಗಾ ನದಿಯಲ್ಲಿ ಮಿಂದೆದ್ದು ಹೊಸ ಸ್ಪೂರ್ತಿ,ಉಲ್ಲಾಸಗಳನ್ನು ಪಡೆಯುತ್ತಾರೆ..  ಬ್ರಾಹ್ಮಿಮುಹೂರ್ತದಿಂದ ಹಿಡಿದು ನಡುರಾತ್ರಿಯವರೆಗೆ ಜರುಗುವ ಭಜನೆ,ಪೂಜೆ,ಮಹಾ ಆರತಿಗಳಲ್ಲಿ ಭಾಗವಹಿಸಿ ಕೃತಾರ್ಥರಾಗುತ್ತಾರೆ..
ರಖುಮಾಯಿ ಮಂದಿರ ಮತ್ತು ಇತರ ಮಂದಿರಗಳಲ್ಲೂ ಸಹ ದಿನವಿಡೀ, ಹೋಮ,ಹವನ,ಅಭಿಷೇಕ,ಆರತಿಗಳು,ವಿಶೇಷ ಪೂಜೆಗಳು‌ ನಡೆಯುತ್ತವೆ..ಭೂ ವೈಕುಂಠ ಎಂದೇ ಹೆಸರು ಪಡೆದ ಪಂಢರಾಪುರದ ಪಾಡುರಂಗ ವಿಠ್ಠಲನ‌ ದರ್ಶನ, ಆಶೀರ್ವಾದಗಳನ್ನು ಪಡೆದ ವಾರಕರಿಯರು ಕೃತಾರ್ಥರಾಗುತ್ತಾರೆ..

ಈ ವಾರಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಾಳಜಿ ವಹಿಸುವ‌ ಮತ್ತು ವಾರಕರಿಯರ ಭದ್ರತೆಗಾಗಿ ಎಲ್ಲಾ ರೀತಿಯ ಸಮರ್ಪಕ ಮತ್ತು ಸೂಕ್ತ ಕ್ರಮಗಳನ್ನು ಮಹಾರಾಷ್ಟ್ರ ಸರ್ಕಾರ ಕೈಗೊಳ್ಳುತ್ತದೆ..

ವಾರಿಯ ಅವಧಿಯಲ್ಲಿ ಬಿಸಿಲು ಮಳೆಯೆನ್ನದೆ ಹಗಲಿರುಳು ಕರ್ತವ್ಯಗೈಯುವ ,ಲಕ್ಷಗಟ್ಟಲೆ ‌ಜನರ ಗದ್ದಲವನ್ನು ಉತ್ತಮವಾಗಿ ನಿಯಂತ್ರಿಸುವ, ತೆರೆಮರೆಯಲ್ಲಿ ಅತ್ಯಂತ ಮಹತ್ವದ ಕಾರ್ಯಗಳನ್ನು ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿ, ಮತ್ತು ಮಹಾರಾಷ್ಟ್ರ ಪೋಲಿಸ್ ಸಿಬ್ಬಂದಿಗೆ ಎಲ್ಲರೂ ಕೃತಜ್ಞತಾ ಭಾವದ ಶತ ಶತ ನಮನಗಳನ್ನು ಅರ್ಪಿಸಲೇಬೇಕು..

“ವಿಠ್ಠಲ ವಿಠ್ಠಲ ಪಾಂಡುರಂಗ”
“ಜಯಹರಿ ವಿಠ್ಠಲ ಪಾಂಡುರಂಗ”


Leave a Reply

Back To Top