ಕಾವ್ಯಯಾನ

ಮೂಲ ಬಿಂದು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ಅದ್ಯಾವ ರೂಪದಲ್ಲಿ ಬಂದು ಸೇರಿತ್ತೋ?
ಸಣ್ಣ ಸುಳಿವೂ ಇರಲಿಲ್ಲ ನೋಡು
ಹೆಡೆಯೆತ್ತಿ ಬುಸುಗುಟ್ಟದ ಹೊರತು
ಇರುವು ತಿಳಿಯುವುದಾದರೂ ಹೇಗೆ?
ಮತ್ತೆ ಹಾಗೆ ಗೊತ್ತಾಗುವುದಕ್ಕೂ
ಅದ್ಯಾವತ್ತೂ ಪ್ರಕಟವಾಗಲೂ ಇಲ್ಲ ಬಿಡು.

ಅದೂ ಅಲ್ಲದೇ,
ಇನ್ಯಾವತ್ತೋ ಹಠತ್ತನೇ ಎದುರಿಗೆ ಬಂದು
ಹಲ್ಲುಕಿಸಿದು, ನೋಡು ನಾನಿದ್ದೇನೆ; ಅದೂ ನಿನ್ನಲ್ಲೇ!
ಅಂತ ಹೆದರಿಸುತ್ತದೆ ಅನ್ನುವ ಕಲ್ಪನೆಯಾದರೂ
ಆವತ್ತು ಯಾರಿಗಿತ್ತು ಹೇಳು?

ಯಾವುದೂ ಸುದ್ದಿಯಾಗಲಿಲ್ಲ,
ಹಗಲು ರಾತ್ರಿ ಕತ್ತಲು ಬೆಳಕು
ಮೊಗ್ಗರಳಿದ್ದು ಹೂವಾದದ್ದು
ಉತ್ತು ಬಿತ್ತ ಮಣ್ಣಲ್ಲಿ ತೆನೆ ತೂಗಿದ್ದು
ಹಕ್ಕಿ ಹಾರಿದ್ದು ಕಪ್ಪೆ ಕೂಗಿದ್ದು
ಯಾವುದು ಕೂಡಾ,
“ಅವನ ಆಣತಿ ಇಲ್ಲದೇ ಹುಲ್ಲುಕಡ್ಡಿಯೂ
ಅಲ್ಲಾಡುವುದಿಲ್ಲ ಇಲ್ಲಿ…”
ಎಲ್ಲದಕ್ಕೂ ಲೆಕ್ಕಾಚಾರವಿದೆ!

ಆದರೆ,
ಹಗುರವಾಗಿ ತೇಲುತ್ತಾ ಸಾಗುತ್ತಾ ಇದ್ದ ಬೆಳ್ಳಿ ಮೋಡ
ಯಾವತ್ತೋ ಒಮ್ಮೆ ಕಪ್ಪಡರಿ ಘನೀಭೂತವಾಗಿ,
ಸುರಿಸುರಿದು ಖಾಲಿಯಾಗುತ್ತದೆ;
ಅಂತ ಯಾರಿಗೆ ತಾನೇ ಗೊತ್ತಿತ್ತು?
ಎಲ್ಲ ತಡೆಗಳನ್ನು ದಾಟಿ ನಿಂತ ಅದರ
ಆ ಮೂಲ ಬಿಂದು
ಅಸಲಿಗೆ ಇದ್ದುದಾದರೂ ಎಲ್ಲಿ?

ಕಾಳಜಿಯ ಪರದೆಗಳಿಗೆ ಇದ್ದ
ತೂತುಗಳು ಯಾರಿಗೂ ಕಾಣುವುದಿಲ್ಲ;
ಅಷ್ಟೂ ಮೈಮರೆಯುತ್ತದೆ ಈ ಲೋಕ
ಎಲ್ಲವೂ ತನ್ನದೇ ಅಧೀನ;
ಅನ್ನುವ ಸಂಭ್ರಮದ ಭ್ರಮೆಯಲ್ಲಿ
ಕುಳಿತುಬಿಡುತ್ತದೆ ಮೂಕ!

ಎಲ್ಲೂ ನಿಲ್ಲದೇ ಸದಾ
ಹರಿಯುತ್ತಿರುವುದೇ ನಾಕ;
ಎಲ್ಲಾ ಗೊತ್ತಿದ್ದೂ,
ಸುಮ್ಮನೆ ತಡೆದು ನಿಲ್ಲಿಸುತ್ತದೆ
ಈ ಲೋಕ!

ಯಾವುದನ್ನು ಕಟ್ಟಿಹಾಕಬಹುದಿಲ್ಲಿ?
ಅದುಮಿಟ್ಟಷ್ಟೂ ಪುಟಿಯುವುದು
ಕತ್ತರಿಸಿದಷ್ಟೂ ಚಿಗುರುವುದು
ಬಂಧಿಸಿದಷ್ಟೂ ನೆಗೆಯುವುದು.

ದಾಟುವುದೇ ಮನಸ್ಸಿನ ಹುಟ್ಟುಗುಣ;
ಬೇಕಾಗಿರುವುದು ಒಂದು ನೆಪ ಮಾತ್ರ.

*********

One thought on “ಕಾವ್ಯಯಾನ

Leave a Reply

Back To Top