ಎ.ಎನ್.ರಮೇಶ್.ಗುಬ್ಬಿ. ಅವರ ಹನಿಗವನಗಳು

  1. ಮರುಳು.!

ಕೆಲವರದು ಅದೆಂತಹಾ ಬರಗೆಟ್ಟ ಬಾಳು
ತಮ್ಮದೇ ಫೇಕಕೌಂಟಿಗೆ ತಾವೇ ಪ್ರೇಮದ
ಪ್ರಪೋಸಲ್ಲು ಕಳಿಸಿಕೊಂಡು ಬೀಗುವ ಗೀಳು.!

  1. ಬೇ(ಡ)ಡಿಕೆ.!

ಅಬ್ಬಾ ಬಂದೈತೆ ನಿನ್ನೆ ಅವಳಿಗೆ
ಸಿಕ್ಕಾಪಟ್ಟೆ ಇನ್ಬಾಕ್ಸ್ ಪ್ರಪೋಸಲ್ಲು
ಇನ್ನೊಂದು ವರ್ಷವಾದರು ಬೇಕು
ಅವನ್ನು ಮಾಡಲು ಡಿಸ್ಸುಪೋಸಲ್ಲು.!

  1. ವ್ಯಾಲೆಂಟೇನು ಮಹಿಮೆ.!

ಅಬ್ಬಬ್ಬಾ ಓ ವ್ಯಾಲೆಂಟೇನು ತಾಯೆ
ನಿನ್ನದು ಅದೆಂತ ಪ್ರೇಮದ ಛಾಯೆ
ನಿನ್ನೆದಿನ ವಾಟ್ಸಾಪು ಮುಖಪುಸ್ತಕದಿ
ಮುದುಕರು ತರುಣರಾಗುವ ಮಾಯೆ.!

  1. ಗೋಡೆ ಮ್ಯಾಟ್ರು.!

ನಿನ್ನೆ ಮುಖಪುಸ್ತಕದ ಬಹಳಷ್ಟು
ಗೋಡೆಗಳಲಿ ಕಂಡ ಬರಹ..
“ನಮಗ್ಯಾರು ಮಾಡ್ತಾರೆ ಪ್ರಪೋಸಲ್ಲು”
ಇದು ವಿರಹವೋ? ಭಿನ್ನಹವೋ?
ಆಗ್ರಹವೋ.? ಆಮಂತಣವೋ.?

  1. ಅಯೋಮಯ.!

ಈಪರಿ ಪ್ರೇಮಸಂದೇಶ, ಒಲವಕಾವ್ಯ ಕಂಡು
ಮೇಘಸಂದೇಶದ ಕಾಳಿದಾಸನಿಗೂ ಉಬ್ಬಸ
ಅಂತರ್ಜಾಲದ ಅಮರ(?) ಅನುರಾಗ ಕಂಡು
ದುಶ್ಯಂತ ಶಾಕುಂತಲೆಯರಿಗೂ ಬೆರಗು ಬೆಕ್ಕಸ.

  1. ಜೋಕೆ..!

ಚೆಂದದ ಕಾಲೇಜು ಲಲನೆಯರೆ
ಅಂದದ ಯಂಗೇಜು ಆಂಟಿಯರೆ
ಎಲ್ಲು ಬೀಳಿಸಬೇಡಿ ಮೊಬೈಲು
ಪತಪತನೆ ಹೊರಕ್ಕೆ ಉದುರ್‍ಯಾವು
ನಿನ್ನೆಯ ರಾಶಿ ರಾಶಿ ಪ್ರಪೋಸಲ್ಲು.!

  1. ವೈಚಿತ್ರ್ಯ.!

ವ್ಯಾಲೇಂಟೇನು ದಿನವಷ್ಟೇ ಕೆಲವರ
ಮುಖಪುಸ್ತಕದಿ ಬರಹಗಳ ಫೌಂಟೇನು
ಉಳಿದ ವರ್ಷಪೂರ್ತಿ ಕ್ವಾರಂಟೇನು.!

  1. ಫೇಕು-ಶೇಕು.!

ಚೆಂದುಳ್ಳಿ ಚೆಲುವೆಯ ಪಟ ಹಾಕಿ
ಮಾಡಿಕೊಂಡಿದ್ದ ಫೇಕು ಅಕೌಂಟು
ನಿನ್ನೆಯಿಂದ ಈತನಕ ಮಾಡಲಾಗುತ್ತಿಲ್ಲ
ಬಂದಿರುವ ಪ್ರಪೋಸಲ್ಲುಗಳ ಕೌಂಟು.!

9.ಪ್ರೇಮ ಸುನಾಮಿ.!

ನಿನ್ನೆಯ ಸಹಸ್ರ ಸಹಸ್ರಾರು
ಪ್ರೀತಿಪ್ರೇಮ ಕಾವ್ಯದಲೆಗಳಿಂದ
ಮುಖಪುಸ್ತಕ ಏದುಸಿರಿಡುತ್ತಿದೆ
ಅನುರಾಗದ ಅಜೀರ್ಣತೆಯಿಂದ
ಇಂದು ಮೆಲ್ಲ ಸುಧಾರಿಸಿಕೊಳ್ಳುತ್ತಿದೆ.!


Leave a Reply

Back To Top