ಸುಕನಸು ಅವರ ಗಜಲ್

ನರಕವನು ಅಪ್ಪಿರುವೆ ನೀ ಜೊತೆ ಇರುವ ಕಾರಣ
ಅಪರೂಪದ ನಿನ್ನೊಲವೆ ನನ್ನ ಬಾಳಿಗೆ ತೋರಣ

ನಿನ್ನ ಬಿಡುವಿಲ್ಲದ ಕೆಲಸದಲ್ಲಿ ನನ್ನ ನೆನಪು ಬಾರದು
ನಿನ್ನ ಮಾತಿಗೆ ಹರ್ಷಿಸಲು ಕಾಯುವುದು ನನ್ನ ಕರಣ

ನಿನ್ನ ಮುಗ್ಧ ಮೊಗದ ಮಗುವಿನಂತಹ ನಗು ಚಂದ
ನಿನ್ನ ಪೇಚಾಟ ಹಿಡಿಸುವುದು ನನ್ನ ಮಾತಿಗೆ ಗ್ರಹಣ

ಅನುದಿನವು ಬೇಕಿಲ್ಲ ಪ್ರೀತಿ ಪ್ರೇಮದ ಸಲ್ಲಾಪ ರಾಯ
ಅಕ್ಕರೆಯ ನಿನ್ನ ಭಾವ ಮಿಡಿತವೇ ನನಗೆ ಸಿಹಿ ಹೂರಣ

ಯಾರೇನೇ ಹೇಳಲಿ ನೀ ನನ್ನ ಸರ್ವಸ್ವ ಎಂದೆಂದಿಗೂ
ನಿನ್ನಲ್ಲಿರುವ ನಂಬಿಕೆ ಭರವಸೆ ಆಗದೆಂದೂ ಹರಣ

ವಸ್ತ್ರ ಒಡವೆಗಳ ಆಸೆ ನನಗಿಲ್ಲ ನಿನ್ನೊಲುಮೆ ಸಾಕಲ್ಲ
ನಿನ್ನೊಂದಿಗಿನ ಕ್ಷಣಗಳು ನನ್ನ ಜೀವಕೆ ಆಶಾ ಕಿರಣ

ಮಲ್ಲಿಗೆ ಸುಮದ ಪರಿಮಳ ಭಗವಂತನಿಗೆ ಮೀಸಲು
ದೇವರಲಿ ಮೊರೆಯಿಷ್ಟೇ ನಿನ್ನ ಮಡಿಲಲ್ಲಿರಲಿ ಮರಣ


Leave a Reply

Back To Top