ಕಾವ್ಯ ಸಂಗಾತಿ
ನಿರಂಜನ ಕೆ ನಾಯಕ
ಸೌಂದರ್ಯ ಎಂದರೇನು?

ಸೌಂದರ್ಯ ಎಂದರೇನು?
ಸಾವಿರ ಕಣ್ಣ ಹೊತ್ತ
ನವಿಲ ಗರಿಗಳಲಿ ಇಹುದೇನು?
ಅದರಂದಕೆ ಮರುಳಾಗಿ
ಬೇಟೆಗೆ ಸಿದ್ಧನಾದೆಯೇನು?
ಸೌಂದರ್ಯ ಎಂದರೇನು?
ಕೆಂಪು ಮೂತಿಯ ಗಿಳಿಯಲಿ
ಅದರ ಮಾತಲಿ ಇಹುದೇನು?
ಮರುಳಾದ ನೀನು ಪಂಜರದಿ
ಕಟ್ಟಿ ಬಿಗಿದೆಯೇನು?
ಸೌಂದರ್ಯ ಎಂದರೇನು?
ಪತಂಗದ ರೆಕ್ಕೆಯಲಿ ಇಹುದೇನು?
ಬಣ್ಣ ಬಣ್ಣದ ಚಿತ್ತಾರಕೆ ಸೋತು
ಹಿಂಬಾಲಿಸಿ ಹುಡುಗಾಟದಿ
ಜೀವಕೆ ಕುತ್ತು ತಂದೆಯೇನು?
ಸೌಂದರ್ಯ ಎಂದರೇನು?
ಅರಳಿದ ಹೂವಿನಲಿ ಇಹುದೇನು?
ಅನುರಾಗ ನಗುವಿಗೆ ಬೆರಗಾಗಿ
ಬಲವಂತದಿ ಬೇರ್ಪಡಿಸಿ
ಶೃಂಗಾರಕೆ ನೀ ಬಳಸಿದೆಯೇನು?
ಸೌಂದರ್ಯ ಎಂದರೇನು?
ಹೆಣ್ಣಿನ ಅಂದದ ಅನುರೂಪವೇನು?
ಚೆಲುವ ಆರಾಧಿಸದೆ
ವಿಷ ವರ್ತುಲದಿ ಬಂಧಿಸಿ
ಮೌಢ್ಯತೆ ಮೆರೆದೆಯೇನು?

ನಿರಂಜನ ಕೆ ನಾಯಕ
ಸುಂದರವಾದ ಕವಿತೆ
………ಶುಭಲಕ್ಷ್ಮಿ ನಾಯಕ್